• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಡನ ದೇಹ ಬೇಡ, ಅಸ್ಥಿ ಮಾತ್ರ ಕಳಿಸಿ : ನೈಜ ಘಟನೆಯಾದಾರಿತ ಕಥೆ

By ಪಿ.ಎಸ್. ರಂಗನಾಥ
|

ಆಗ ಮಸ್ಕತ್ ನಲ್ಲಿ ರಮದಾನ್ ಮಾಸದ ಈದ್ ರಜೆಯ ಸಮಯ, ಸುಮಾರು ಎಂಟು ದಿನಗಳ ರಜೆ. ಕಂಪನಿಗಳಲ್ಲಿ ಕೆಲಸ ಜಾಸ್ತಿ ಇರುವ ಸಮಯದಲ್ಲಿ, ಆಫೀಸ್ ನ ಕೆಲವರಿಗೆ ವಾರ ಪೂರ್ತಿ ರಜೆ ಕೊಟ್ಟರೆ, ಕಾರ್ಮಿಕರಿಗೆ, ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಒಂದು ಅಥವ ಎರಡು ದಿನ ಮಾತ್ರ ರಜೆ, ಉಳಿದ ದಿನಗಳಲ್ಲಿ ಕೆಲಸ.

ಅಂತಹ ಒಂದು ಕಂಪನಿಯಲ್ಲಿ, ರಮೇಶ್ ಎನ್ನುವ ಕೆಲಸಗಾರರೊಬ್ಬರು, ಈದ್ ಹಬ್ಬದ ಎರಡು ದಿನ ರಜೆಯ ನಂತರ ಕೆಲಸಕ್ಕೆ ಮರಳಿದ್ದರು. ಆದರೆ ಸಂಜೆ ಕ್ಯಾಂಪ್ ಗೆ ವಾಪಸ್ ಬಂದಿರಲಿಲ್ಲ. ವಾರ ಪೂರ್ತಿ ರಜೆ ಇದೆ, ಹಾಗಾಗಿ ಎಲ್ಲೋ ಹೊರಗಡೆ ಹೋಗಿರಬಹುದೆಂದು ಕ್ಯಾಂಪ್ ನಲ್ಲಿರುವ ಇತರೆ ಕೆಲಸಗಾರರು ನಂಬಿದ್ದರು. ಎರಡು ದಿನವಾದರು ಮರಳಿರಲಿಲ್ಲ.....

ಕಂಪನಿಯ ಸ್ಟೋರ್ ಪಕ್ಕದಲ್ಲಿ, ಒಂದು ರೂಮ್ ಖಾಲಿ ಇತ್ತು. ಕೆಲವರು ಮಧ್ಯಾಹ್ನದ ವೇಳೆ ನಿದ್ರೆ ಮಾಡುವುದಕ್ಕೆ ಆ ಸ್ಥಳವನ್ನು ಉಪಯೋಗಿಸುತಿದ್ದರು. ಸ್ಟೋರ್ ನಲ್ಲಿ ಕೆಲಸ ಮಾಡುವವರೊಬ್ಬರು, ಆದಿನ ಸ್ಟೋರ್ ಬಾಗಿಲು ತೆಗೆದು ತಮ್ಮ ಕೆಲಸ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ, ಇಲ್ಲಿ ಏನೋ ಸಮಸ್ಯೆ ಆಗಿದೆ ಅಂತ ಅವರ ಮನಸ್ಸಿಗೆ ಅನ್ನಿಸಿತು.

ಸ್ಟೋರ್ ಎಲ್ಲ ಚೆಕ್ ಮಾಡಿದರು, ಅಂತದ್ದೇನೂ ಕಾಣಲಿಲ್ಲ. ಪಕ್ಕದ ರೂಮ್ಗೆ ಹೋಗಿ ನೋಡಿದರು. ರಮೇಶಣ್ಣ ಅಲ್ಲಿ ಮಲಗಿದ್ದರು. ಯಾಕೆ ಇನ್ನೂ ಎದ್ದಿಲ್ಲ, ಎಂದು ಅವರನ್ನು ಏಳಿಸಲು ಪ್ರಯತ್ನಿಸಿದ. "ಅಣ್ಣಾ, ಯಾಕೆ ಏನಾಯ್ತು ಇನ್ನೂ ಮಲಗಿದ್ದೀರಾ? ಹುಷಾರಿಲ್ವ ಏನಾಯ್ತು? ಏನೂ ಉತ್ತರ ಬರಲಿಲ್ಲ.

ಹತ್ತಿರ ಹೋಗಿ, ಅಣ್ಣಾ ಏಳೂ ಏನಾಯ್ತು? ಯಾಕೆ ಇನ್ನೂ ಮಲಗಿದ್ದೀಯಾ, ಅಂತ ಅವರನ್ನು ಮುಟ್ಟಿ ಅಲ್ಲಾಡಿಸಿದ. ಮೈ ತಣ್ಣಗಿತ್ತು. ಅನುಮಾನ ಬಂದು, ಅವರ ಉಸಿರಾಟ ಗಮನಿಸಿದ, ಉಸಿರು ನಿಂತಿತ್ತು, ಎದೆ ಬಡಿತ ಇರಲಿಲ್ಲ, ನಾಡಿ ಹಿಡಿದ, ಪ್ರತಿಕ್ರಿಯೆ ಸಿಗಲಿಲ್ಲ. ರಮೇಶಣ್ಣ ಇನ್ನಿಲ್ಲ ಅಂತ ಮನದಟ್ಟಾಯಿತು.

ತಕ್ಷಣವೇ ಅವರ ಮ್ಯಾನೇಜರ್ ಮತ್ತು ಕಂಪನಿಯ ಇನ್ನುಳಿದವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಎಲ್ಲ ಕೆಲಸಗಾರರಿಗೆ ರಮೇಶಣ್ಣ ಹೋಗಿಬಿಟ್ಟಿದ್ದಾರೆ, ಅವರು ಇನ್ನಿಲ್ಲ.... ಎಂದು ಹೇಳಿದ. ಎಲ್ಲರೂ ರೂಮ್ ಒಳಗೆ ಹೋಗಿ ನೋಡಿದರು. ಅವರ ದೇಹ ನೋಡಿ ಎಲ್ಲರೂ ಮರುಗಿದರು, ದುಃಖ ಮಡುಗಟ್ಟಿತು.

ರಮೇಶಣ್ಣ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಾಪುವಿನ ಸಮೀಪ ಹೊಸಕಟ್ಟೆ ಗ್ರಾಮದವರು. ಸುಮಾರು 7-8 ವರ್ಷಗಳಿಂದ ಮಸ್ಕತ್ ನ ಆ ಕನ್ಸ್ ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಬಿಲ್ಡಿಂಗ್ ಕನ್ಸ್ ಟ್ರಕ್ಷನ್ ಕೆಲಸಕ್ಕೆ ಅಂತ ಸೇರಿ, ಸರಿಯಾದ ವಿದ್ಯಾಭ್ಯಾಸ ಇಲ್ಲದಿದ್ದರು ಸಹ ಆ ಕಂಪನಿಯ ಫೋರ್ ಮ್ಯಾನ್ ಆಗಿ ದುಡಿಯುವ ಮಟ್ಟಕ್ಕೆ ಬಂದಿದ್ದರು.

ಕಂಪನಿಯ ಎಲ್ಲ ಸಹೋದ್ಯೋಗಿಗಳೊಂದಿಗೆ ಆತ್ಮೀಯತೆಯಿಂದ ಬೆರೆತು ತಮ್ಮ ಜವಾಬ್ದಾರಿಯನ್ನರಿತು ಉತ್ತಮ ರೀತಿ ನಿರ್ವಹಿಸುತಿದ್ದರು. ತಮ್ಮ ಈ ಉತ್ತಮ ನಡವಳಿಕೆಯಿಂದ, ಸಹೋದ್ಯೋಗಿಗಳ ಪ್ರೀತಿ ವಿಶ್ವಾಸ ಸಂಪಾದಿಸಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ ರಮೇಶಣ್ಣ ಎಂದು ಗೌರವ ಕೊಟ್ಟು ಕರೆಯುತಿದ್ದರು. ಅವರ ಈ ಅಕಾಲಿಕ ಮರಣ ಆ ಒಂದು ಕ್ಷಣ ಎಲ್ಲರನ್ನು ದಂಗು ಬಡಿಸಿತ್ತು. ಕೆಲಸಗಾರರ ಕ್ಯಾಂಪ್ ನಲ್ಲಿ ಸ್ಮಶಾನ ಮೌನ ಆವರಿಸಿ, ಅಲ್ಲಿ ಸೇರಿದ್ದ ಜನರೆಲ್ಲರಲ್ಲಿ ದುಃಖ ಮಡುಗಟ್ಟಿತ್ತು. ಕೆಲ ಆತ್ಮೀಯರ ರೋದನೆ ಮುಗಿಲು ಮುಟ್ಟಿತ್ತು.

ಅಷ್ಟರಲ್ಲಿ ಕಂಪನಿಯ ಅಧಿಕಾರಿಗಳು ಅಲ್ಲಿಗೆ ಧಾವಿಸಿದರು. ಮುಂದೆ ಆಗಬೇಕಾದ ಕೆಲಸಗಳ ಕುರಿತು ಚರ್ಚಿಸಿ, ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಿದರು. ಊರಿಗೆ ವಿಷಯ ತಿಳಿಸುವ ಮುನ್ನ, ಅವರ ಕುಟುಂಬದಲ್ಲಿ ಯಾರ್ಯಾರಿದ್ದಾರೆ ಎಂದು ಮಾಹಿತಿ ಕಲೆ ಹಾಕಿ ನಂತರ ವಿಷಯ ತಿಳಿಸುವ ಯೋಚನೆ ಮಾಡಿದರು. ಕಂಪನಿಯಲ್ಲಿ ಕೆಲಸ ಮಾಡುತಿದ್ದ ಕೆಲ ಉಡುಪಿ ಮತ್ತು ಮಂಗಳೂರಿನ ಉದ್ಯೋಗಿಗಳಿಗೆ ಕುಟುಂಬದ ಕುರಿತು ಸಂಪೂರ್ಣ ಮಾಹಿತಿಯಿತ್ತು.

ಅವರಲ್ಲಿ ಪ್ರಭಾಕರ್ ಶೆಟ್ಟಿ ಎನ್ನುವವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರಮೇಶಣ್ಣನಿಗೆ ವಯಸ್ಸಾದ ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಒಬ್ಬ ತಂಗಿ ಮತ್ತು ಅವರ ಕುಟುಂಬ ಕಾರ್ಕಳ ಸಮೀಪ ವಾಸಿಸುತಿದ್ದರು. ಹತ್ತಿರದ ಬಂಧು ಬಳಗ ಕಾಪು, ಸೂರತ್ಕಲ್ ಸಮೀಪ ಇದ್ದರು. ತಾಯಿ, ಮಡದಿ ಮತ್ತು ಮಕ್ಕಳ ಜವಾಬ್ದಾರಿಯಿದ್ದಿದ್ದರಿಂದ, ಮನೆ ಕಡೆ ಸಹಜವಾಗಿ ಯಾವಾಗಲೂ ಯೋಚಿಸುತಿದ್ದರು. ಇದನ್ನೆಲ್ಲ ಅಧಿಕಾರಿಗಳಿಗೆ ಪ್ರಭಾಕರ್ ಶೆಟ್ಟಿಯವರು ವಿವರಿಸುತ್ತಿರುವಾಗ, ಪೊಲೀಸರ ಆಗಮನವಾಯಿತು.

ಪೊಲೀಸರು ಸ್ಥಳದ ಮಹಜರ್ ನಡೆಸಿ, ರಮೇಶಣ್ಣರವರ ದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಪೋಸ್ಟ್ ಮಾರ್ಟಮ್ ಗೆ ತೆಗೆದು ಕೊಂಡು ಹೋಗಲು ವ್ಯವಸ್ಥೆ ಮಾಡಿ, ತನಿಖೆಯನ್ನು ಪ್ರಾರಂಭಿಸಿದರು. ಕಡೆಯ ಬಾರಿ ಯಾರ ಜತೆ ಮಾತನಾಡಿದರು, ಊರಿನಲ್ಲಿ ಏನಾದರು ಸಮಸ್ಯೆಯಿತ್ತಾ ಅಥವಾ ಇಲ್ಲಿ ಏನಾದರು ತೊಂದರೆಯಿತ್ತಾ... ಹೀಗೆ ವಿವಿಧ ಕೋನಗಳಲ್ಲಿ ತಮ್ಮ ತನಿಖೆ ನಡೆಸಿದರು.

ಊರಿನಲ್ಲಿರುವ ಮಡದಿ ಮೀನಾಕ್ಷಿಗೆ ವಿಷಯ ತಿಳಿಸಲು ಕಂಪನಿಯ ಅಧಿಕಾರಿಗಳು ಮುಂದಾದರು, ಪ್ರಭಾಕರ್ ಶೆಟ್ಟಿಯವರಿಗೆ ಈ ಜವಾಬ್ದಾರಿಯನ್ನು ಕೊಡಲಾಯಿತು. ಮೊಬೈಲ್ ನಿಂದ ಕಾಲ್ ಮಾಡಿ, "ಹಲೋ, ನಾನು ಪ್ರಭಾಕರ್, ರಮೇಶಣ್ಣ ನವರ ಕಂಪನಿಯಿಂದ ಫೋನ್ ಮಾಡ್ತಾಯಿದ್ದೇನೆ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಆ ಕಡೆಯಿಂದ "ಹಾಂ! ಹೇಳಿ ಅಣ್ಣ, ಹೇಗಿದ್ದೀರಾ, ಏನ್ ಇಷ್ಟೊತ್ತಿನಲ್ಲಿ ಫೋನ್ ಮಾಡಿದ್ದೀರಾ" ಎಂದು ಕೇಳಿದರು. ಆದರೆ ಗದ್ಗದಿತರಾಗಿದ್ದ ಅವರಿಗೆ ಮಾತನಾಡಲು ಆಗಲಿಲ್ಲ. ಇನ್ನೊಬ್ಬ ಹಿರಿಯರಾದ ಗಣೇಶ್ ಪೂಜಾರಿಯವರನ್ನು ಕೇಳಲಾಯಿತು.

ಅದಕ್ಕೆ ಅವರು ಒಪ್ಪಿಗೆ ಸೂಚಿಸಿ, ಮಾತನಾಡಲು ಮುಂದಾದರು. "ಅಮ್ಮ ನಾನು ಗಣೇಶ್ ಪೂಜಾರಿ, ಒಂದು ವಿಷಯ ಹೇಳ್ತೀನಿ. ಸ್ವಲ್ಪ ಧೈರ್ಯ ಮಾಡಿಕೊಳ್ಳಿ."

ಯಾಕೆ ಅಣ್ಣ ಏನಾಯ್ತು?

ರಮೇಶಣ್ಣನಿಗೆ ರಾತ್ರಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ. ನಮ್ಮನ್ನೆಲ್ಲ ಬಿಟ್ಟು ಮತ್ತೆ ಇನ್ನೆಂದೂ ಮರಳಿ ಬಾರದಂತ ದೂರದ ಲೋಕಕ್ಕೆ ಹೊರಟು ಹೋಗಿದ್ದಾರೆ...

ವಿಷಯ ಕೇಳಿ ಮೀನಾಕ್ಷಿ ಕುಸಿದು ಹೋದಳು. ಕಣ್ಣಿಂದ ನೀರು ಬಳಬಳನೆ ಸುರಿಯುತಿತ್ತು. ಅಮ್ಮನ ಅವಸ್ಥೆ ಕಂಡು, ಮಕ್ಕಳು ಓಡಿ ಬಂದು ಅಮ್ಮಾ ಏನಾಯ್ತು, ಯಾಕೆ ಅಳ್ತಾಯಿದ್ದೀಯ? ಅಪ್ಪ ಫೋನ್ ಮಾಡಿದ್ದಾರಾ? ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ. ಅಮ್ಮ ಮಾತನಾಡದೆ ಇದ್ದದ್ದನ್ನು ಕಂಡು ಕೈಯಲ್ಲಿದ್ದ ಫೋನ್ ಅನ್ನು ಹಿಡಿದು "ಅಪ್ಪಾ ಹೇಗಿದ್ದೀರಾ?"

ಆ ಕಡೆಯಿಂದ, ಮಗು, ನಾನು ನಿಮ್ಮ ಅಪ್ಪನ ಕಂಪನಿಯಿಂದ ಮಾತನಾಡುತಿದ್ದೇನೆ. ನಿಮ್ಮ ಅಪ್ಪ ಇಲ್ಲ, ತೀರಿಕೊಂಡು ಬಿಟ್ಟಿದ್ದಾರೆ.

ಮಗಳು ವಿಷಯ ತಿಳಿದು ಜೋರಾಗಿ ಅಳಲು ಶುರು ಮಾಡಿದಳು. ಅಮ್ಮ ಮಕ್ಕಳು ಅಳುವುದನ್ನು ಕೇಳಿ, ಅತ್ತೆ ರಾಜಮ್ಮ ಗಾಬರಿಗೊಂಡು ಓಡಿ ಬಂದು ಸುದ್ದಿ ತಿಳಿದುಕೊಂಡರು. ಹೀಗೆ ಮನೆಯವರೆಲ್ಲ ಅಳುವ ಶಬ್ದ ಜೋರಾಗಿ, ಸುತ್ತ ಮುತ್ತಲಿನವರೆಲ್ಲ ಓಡೋಡಿ ಬಂದರು. ಸುದ್ದಿ ಎಲ್ಲರಿಗೂ ತಿಳಿದು ಹೋಯಿತು.

ಫೋನ್ ನಲ್ಲಿ ಬರೀ ಅಳುವ ಶಬ್ದ ಕೇಳಿ, ಭಾವುಕರಾದ ಗಣೇಶ್ ಪೂಜಾರಿ ಫೋನ್ ಕಟ್ ಮಾಡಿದರು... ಮುಂದೆ ಏನು ಮಾಡುವುದು, ಮನೆಯವರನ್ನು ಹೇಗೆ ಸಂಭಾಳಿಸಬೇಕು ಎಂದು ಅಧಿಕಾರಿಗಳು ಚರ್ಚೆ ನಡೆಸಿದರು.

ಇತ್ತ ಊರಿನಲ್ಲಿ, ಊರಿನ ಜನ, ಮನೆಗೆ ಬಂದ ನೆಂಟರು, ಹೀಗೆ ಪ್ರತಿಯೊಬ್ಬರು ಸಾಂತ್ವನ ಹೇಳಲಿಕ್ಕೆ ಮನೆಗೆ ಭೇಟಿ ನೀಡುವುದಕ್ಕೆ ಶುರು ಮಾಡಿದರು. ಎಂತ ಕೆಲಸ ಆಗಿ ಹೋಯ್ತಲ್ಲ ನೋಡಿ, ಇಬ್ಬರು ಹೆಣ್ಣುಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆ ಇನ್ನು ಏನೆಲ್ಲ ಇದೆ, ಇಷ್ಟು ಬೇಗ ಇವರನ್ನೆಲ್ಲ ಅನಾಥ ಮಾಡಿ ಹೋಗಿಬಿಟ್ಟನಲ್ಲ. ಈ ಮನೆಯಲ್ಲಿ ದುಡಿಯುವ ಗಂಡಸು ಅಂತ ಇದ್ದವನೊಬ್ಬನೆ. ಅವನೇ ಇಲ್ಲ ಅಂದರೆ, ಇವರ ಸಂಸಾರಕ್ಕೆ ಯಾರು ದಿಕ್ಕು? ಎಂಥ ದುರ್ವಿಧಿ ಅಂತ ಜನರೆಲ್ಲ ಮಾತನಾಡುತಿದ್ದರು.

ಇನ್ನುಮುಂದೆ ಹೆಂಗೆ, ಏನು ಮಾಡೋದು, ಮಕ್ಕಳ ಭವಿಷ್ಯ ಏನು, ಎಂದು ಮೀನಾಕ್ಷಿ ಯೋಚಿಸುವುದಕ್ಕೆ ಶುರು ಮಾಡಿದಳು. ಮನೆ ಪರಿಸ್ಥಿತಿ ಈಗ ತಾನೆ ಬದಲಾಗುವ ಸ್ಥಿತಿಯಲ್ಲಿತ್ತು, ಅಂತಹುದರಲ್ಲಿ, ಬರಸಿಡಿಲಿನಂತೆ ಈ ಸುದ್ದಿ ಬಂದೆರಗಿತ್ತು.

ಅತ್ತ ಮಸ್ಕತ್ ನಲ್ಲಿ,

ಪೋಸ್ಟ್ ಮಾರ್ಟಮ್, ರಾಯಭಾರಿ ಕಛೇರಿಯ ಕೆಲಸ, ಪೊಲೀಸ್ ಕ್ಲಿಯರೆನ್ಸ್ ಮತ್ತಿತರ ಕೆಲಸಗಳಿಗಾಗಿ ಇನ್ನೂ ಎರಡು ಮೂರು ದಿನ ಕಾಯಬೇಕಾಗಿತ್ತು. ಹೀಗಾಗಿ, ದೇಹವನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಕನಿಷ್ಠ ಏನೆಂದರೂ ಒಂದು ವಾರದ ನಂತರ ದೇಹ ಊರಿಗೆ ತಲುಪುವ ಅಂದಾಜಿತ್ತು.

ಇಲ್ಲಿನ ಪ್ರಕ್ರಿಯೆಗಳ ಕುರಿತು ಮನೆಯವರಿಗೆ ತಿಳಿಸಿಬಿಡೋಣ ಅಂತ ಊರಿಗೆ ಫೋನ್ ಮಾಡಿದರು. ಮಡದಿ ಮೀನಾಕ್ಷಿಗೆ ಇದೆಲ್ಲವನ್ನು ವಿವರಿಸಿದರು.....

ಸಾರ್ ಒಂದು ವಿಷಯ...

ಏನಮ್ಮ?

ನಾನು ಒಬ್ಬ ಅಸಹಾಯಕಿ, ನನಗಿಬ್ಬರು ಹೆಣ್ಣು ಮಕ್ಕಳು ಮತ್ತು ಅತ್ತೆ.... ನಮ್ಮ ಜೀವನಕ್ಕೆ ದಾರಿ ಅಂತ ಇದ್ದವರೊಬ್ಬರೆ, ಅವರೇ ಇಲ್ಲ ಅಂದ ಮೇಲೆ, ನಮಗೆ ಬದುಕು ಯಾಕೆ ಅಂತ ಅನಿಸುತ್ತದೆ.

ಅಯ್ಯೋ ಯಾಕಮ್ಮ ಯೋಚನೆ ಮಾಡ್ತೀಯ, ನಿನ್ನ ಮಕ್ಕಳ ಭವಿಷ್ಯಕ್ಕೆ ನಾವೆಲ್ಲ ಹಣ ಹೊಂದಿಸಿ ಕಳುಹಿಸ್ತೀವಿ. ಇಂತಹ ಸಮಯದಲ್ಲಿ, ಧೈರ್ಯ ಕಳೆದುಕೊಳ್ಳಬೇಡಿ, ದೇವರು ಇದ್ದಾನೆ ಎಲ್ಲ ಸರಿಹೋಗುತ್ತೆ.

ಎಲ್ಲಿಂದ ಧೈರ್ಯ ಬರುತ್ತೆ ಸಾರ್? ಮುಂದಿನ ಜೀವನವನ್ನ ಊಹಿಸಿಕೊಳ್ಳುವುದಕ್ಕೆ ಕಷ್ಟ ಆಗ್ತಿದೆ. ನಾವಿರುವ ಹಳ್ಳಿಯಲ್ಲಿ, ಏನು ಸಂಪಾದನೆ ಮಾಡಬಹುದು ನಾನು? ಮಕ್ಕಳನ್ನ ಹೇಗೆ ಓದಿಸಲಿ, ಅವರಿಗೆ ಮದುವೆ ಹೇಗೆ ಮಾಡಲಿ? ಸಾರ್ ಒಂದು ಪ್ರಶ್ನೆ, ನಮ್ಮವರು ಊರಿಗೆ ಬರೋದಿಕ್ಕೆ ಟಿಕೆಟ್ ಅಂತ ಸಾವಿರಾರು ರೂಪಾಯಿಯನ್ನ ಖರ್ಚು ಮಾಡುತಿದ್ದರು. ಈಗ ಅವರ ದೇಹ ತರುವುದಕ್ಕೆ, ಎಷ್ಟು ಖರ್ಚಾಗಬಹುದು?

ಲಕ್ಷಗಳ ಮೇಲೆ ಖರ್ಚಾಗುತ್ತದೆ, ಅದಕ್ಕೆ ನೀವೇನು ಯೋಚನೆ ಮಾಡಬೇಡಿ, ಅದನ್ನು ನಾವೆ ವ್ಯವಸ್ಥೆ ಮಾಡಿ ಕಳುಹಿಸ್ತೀವಿ...... ಸರಿ ಮತ್ತೆ ಫೋನ್ ಮಾಡ್ತೀವಿ ಅಂತ ಫೋನ್ ಕಟ್ ಮಾಡಿದರು.

ಮೀನಾಕ್ಷೀಗೆ, ತನ್ನ ಮಕ್ಕಳ ಭವಿಷ್ಯದ ಬಗ್ಗೆ, ಚಿಂತೆ ಹತ್ತಿತು. ಗಂಡು ದಿಕ್ಕಿಲ್ಲದ ಮನೆ, ಅವರದು ಸರ್ಕಾರಿ ಕೆಲಸ ಅಲ್ಲ. ಪೆನ್ಶನ್, ಪಿಂಚಣಿ ಅಂತ ಏನು ಸಿಗಲ್ಲ. ನನಗೂ ಸಹ ಅಂತಹ ದೊಡ್ಡ ವಿದ್ಯೆ ಏನು ಇಲ್ಲ, ಮುಂದೆ ಹೇಗೆ? ಸಂಜೆಯವರೆಗೂ ಇದೇ ಯೋಚನೆಯಲ್ಲಿ ಕಾಲ ಕಳೆದಿದ್ದಳು.

ಮತ್ತೆ ಮಸ್ಕತ್ ನಿಂದ ಫೋನ್ ಬಂತು. ಇಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ದೇಹವನ್ನು ಕಳುಹಿಸುವುದಕ್ಕೆ, ಇನ್ನು ನಾಲ್ಕೈದು ದಿನ ಬೇಕಾಗಬಹುದು. ಅಂತ ಹೇಳಿದರು.

ಸಾರ್, ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೊಂದು ನಿರ್ಧಾರಕ್ಕೆ ಬಂದಿದ್ದೀನಿ. ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಿ, ಅವರ ಅಸ್ಥಿಯನ್ನ ಮಾತ್ರ ಕಳುಹಿಸಿಕೊಡಿ. ದೇಹ ತರುವುದಕ್ಕೆ, ಎಷ್ಟು ಹಣ ಖರ್ಚಾಗುತ್ತೋ ಆ ಹಣವನ್ನು ನನ್ನ ಮಕ್ಕಳ ಹೆಸರಿನಲ್ಲಿ ಫಿಕ್ಸ್ ಡ್ ಡಿಪಾಸಿಟ್ ಮಾಡಿಬಿಡಿ ಸಾರ್. ಎಂದು ಹೇಳೀ ಜೋರಾಗಿ ಅಳುವುದಕ್ಕೆ ಶುರುಮಾಡಿದಳು.

ಆ ನಿರ್ಧಾರವನ್ನು ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾದರು, ಯಾರ ಬಾಯಿಯಿಂದಲೂ ಮಾತು ಬರಲಿಲ್ಲ....

ಮುಂದುವರಿಯುವುದು......

English summary
Ash : Short story based on real incident by P S Ranganath, Muscat. Wife of the person asks the people in Muscut not to send the body and send only his ashes. Why did she say like that?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X