ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತ

By * ದಿನೇಶ್ ಉಡುಪಿ, ಮೆಂಫಿಸ್
|
Google Oneindia Kannada News

Dinesh Udupi, Memphis
ಸಂಜೀವ ಜೀವನದಲ್ಲಿ ದೊಡ್ಡ ಪ್ರಮಾದ ಮಾಡಿಬಿಟ್ಟಿದ್ದ. ಮೊದಲಿನಿಂದಲೂ ಬ್ರಾಂಬ್ರ ಹೆಸರು ಕೇಳಿದರೆ ಸಾಕು ಮೈಮೇಲೆ ಕೀಳರಿಮೆಯ ಪೊರೆ ಅಂಟಿಕೊಂಡುಬಿಡುತಿತ್ತು. ಅವಾಗ ಇನ್ನೂ ಹೈಸ್ಕೂಲ್-ನಲ್ಲಿ ಓದುತ್ತ ಇದ್ದ ಅಷ್ಟೆ. ಕೃಷ್ಣ ಮಠದ ಬಡಗು ಮಳಿಗೆಯಲ್ಲಿ ಪ್ರೊ. ಶಂಕರ್ ಧರ್ಮಾರ್ಥ ಜಾದೂ ಪ್ರದರ್ಶನ ನೋಡಲು ನೂಕು ನುಗ್ಗಲಿನಲ್ಲಿ ನಿಂತಿದ್ದ. ಎರಡೂ ಕಾಲಿನ ಹಿಮ್ಮಡಿ ಎತ್ತಿ ಬರಿ ಹೆಬ್ಬೆರಳುಗಳ ಮೇಲೆ ನಿಂತು, ಕತ್ತನ್ನು ಏರಿಸಿ, ಕಾಂಪಾರು ಬಾಯಿ ಬಿಟ್ಟುಕೊಂಡು ನಿಂತು 5 ನಿಮಿಷ ಆಗಿರಬಹುದು, ಹಿಂದಿನಿಂದ ಜನರು ತಳ್ಳಿದ ರಭಸಕ್ಕೆ ಮುಗ್ಗರಿಸಿ ಎದುರಿನಲ್ಲಿ ಅಡ್ಡ ಕಟ್ಟಿದ ಹಗ್ಗದ ಮೇಲೆ ಬಿದ್ದು, ಉರುಳಿ ಮಾತೆಯರು ಕುಳಿತುಕೊಳ್ಳುವ ಜಾಗದಲ್ಲಿ ಬಿದ್ದು ಬಿಟ್ಟಿದ್ದ. ಗಾಬರಿಯಂದ ಕಣ್ಣು ಬಿಡುವಷ್ಟರಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡ ಹೆಂಗಸರು ಬೆದೆ ಬಂದ ದನಗಳ ಹಾಗೆ ಕುಮ್ಚಟ್ಟು ಹಾರಿ "..ಶೂದ್ರೊಂಕುಳು......ಶೂದ್ರೊಂಕುಳು" ಅಂತ ಕೂಗಿಕೊಂಡಿದ್ದರು. ಕಾಲರ್ ಪಟ್ಟಿ ಹಿಡಿದೆತ್ತಿ ಯಾರೊ ಆಚೆ ಬಿಸಾಕಿದಾಗ, ಅವಮಾನದಲ್ಲಿ ಹೂತು ಹೋಗಿದ್ದ. ಈಗಲೂ ಒಮ್ಮೊಮ್ಮೆ ಸಂಡಾಸಿಗೆ ಕೂತಾಗ ಹಾಗು ಇನ್ನಿತರ ಅಪರ ಹೊತ್ತಿನಲ್ಲಿ ಇಂತಹ ಘಟನೆಗಳು ಜ್ಞಾಪಕ ಆಗಿ ಮಣ್ಣಿನೊಳಗೆ ಸೇರಿ ಹೋಗುವಷ್ಟು ಕುಬ್ಜನಾಗುತ್ತಾನೆ. ಹೀಗಿರುವಾಗ ಪೈಸೆಗೆ ಪೈಸೆ ಜೋಡಿಸಿ ಒಂದು ಸಣ್ಣ ಗೂಡಿನಂತಹ ಮನೆಯ ಯಜಮಾನ ಆಗುವ ಕನಸು ಕಂಡರೆ, ಬೆಂಕಿಯೊಳಗೆ ಬಂದು ಬಿದ್ದಂತೆ ಆಗಿತ್ತು.

"ಈ ಬಿರಾಮ ಮೊದ್ಲೆ ಕಣ್ಣಿಗೆ ಬೀಳುದಲ್ದ ಹಂಗಾರೆ?" ಅಂತ ಈಗ ಹಣೆ ಬಡಿದುಕೊಂಡರೆ ಏನು ಪ್ರಯೋಜನ. ಎದೆಯೇರಿಸಿ ಎರಡು ಕೈಗಳನ್ನು ತಲೆಯ ಹಿಂಭಾಗಕ್ಕೆ ಕೊಟ್ಟು ಮನೆಯ ಯಜಮಾನನ ಹಮ್ಮಿನಲ್ಲಿ ಹಿಂಬಾಗಿಲಲ್ಲಿ ನಿಂತಿದ್ದಾಗ ಪಕ್ಕದ ಮನೆ ಹಿತ್ತಲಲ್ಲಿ ಜುಟ್ಟಿನ ಕೂದಲು ಹರಡಿ ಬಿಟ್ಟುಕೊಂಡು ಪಾಣಿ ಪಂಚೆಯಲ್ಲಿ ಇದ್ದ ಅಯ್ಯನನ್ನು ಕಂಡು ಸಂಜೀವ ಹೌಹಾರಿದ್ದ. ತನ್ನ ಜೀವನ ಕ್ರಮದಲ್ಲಿ ಆಗಬಹುದಾದ ಏರಿಳಿತಗಳು ಕ್ಷಣದಲ್ಲಿ ಕಣ್ಣ ಮುಂದೆ ಹಾದು ಹೋಗಿದ್ದವು.

ಸಂಜೆಯ ಹೊತ್ತಿಗೆ ಮಾಮೂಲಿನಂತೆ ಪ್ಯಾಟೆಗೆ ಹೋಗಿ ಹುಡಿ ಮೀನು ತರಲೊ ಬೇಡವೊ ಎಂಬ ಜಿಜ್ಞಾಸೆಯಲ್ಲಿ ಸಂಜೀವ ಇದ್ದ. ಸ್ವಲ್ಪ ಹೊತ್ತು ಕಾದು ನೋಡಿದ ಹೆಂಡತಿ ಕೇಳಿಯೆ ಬಿಟ್ಟಿದ್ದಳು - "ಎಂತ ಮೀನ್ ತತ್ತಿಲ್ಯ ಇವತ್ತು".
"ಹ್ಯಾಂಗೆ ತಪ್ಪುದು ಮಾರಾಯ್ತಿ...ಆ ಬದಿಲಿ ಬಿರಾಂಬ್ರ ಮನೆ ಇಪ್ಪತ್ತಿಗೆ" - ಅಂತ ತನ್ನ ತುಮುಲ ತೋಡಿಕೊಂಡಿದ್ದ.
"ನಮ್ಮನಿಲ್ ನಾವು ತಿಂದ್ರೆ ಅವ್ರಿಗೆಂತ ಆತ್ತಂಬ್ರು" ಅಂತ ಘರ್ಷಣೆಯ ದನಿಯೆತ್ತಿದ್ದಳು ಹೆಂಡತಿ.
"ಎಂತ ಆತ್ತಾ?! ಆ ಬೆಣ್ತಕ್ಕಿ ಬೇಯು ವಾಸ್ನೆ ಇಲ್ಲಿವರೆಗು ಬಪ್ಪತಿಗೆ, ನಮ್ಮನಿ ಮೀನು ವಾಸ್ನೆ ಅವ್ರಿಗೆ ಬತ್ತಿಲ್ಯ? ಆ ಗೋಪಾಲ ಸೆಟ್ಟಿ ಕೋಣಕದಷ್ಟು (ಲಂಗೋಟಿಯಷ್ಟು) ಜಾಗದಗೆ ಏಳು ಮನೆ ಕಟ್ಟಿ ಹಾಕಿ ಒಬ್ರು ಮನಿ ಒಳ್ಗೆ ಇನ್ನೊಬ್ರು ಇದ್ದ್ ಹಾಂಗ್ ಆಯಿತು".

ಇದೇ ಪೀಕಲಾಟದಲ್ಲಿ ಎರಡು ದಿನ ಮೀನ್ ಪದಾರ್ಥ ಇಲ್ಲದೆ ಕಳೆದದ್ದೆ ದೊಡ್ಡ ಸಾಹಸ ಆಗಿಬಿಟ್ಟಿತ್ತು. "ಎಂತದೆ ಆಯ್ಲಿ, ಇವತ್ತು ತಕಂಡು ಬಂದೆ ಬಿಡ್ತೆ" ಅಂತ ಅಲ್ಲಲ್ಲಿ ತೂತು ಬಿದ್ದ ಬೀಣೆ ಚೀಲ ಹಿಡಿದು ಹೊರಟೆ ಬಿಟ್ಟಿದ್ದ. ಹೆಂಡತಿ ಒಳಗೊಳಗೆ ಖುಷಿ ಪಟ್ಟಿದ್ದಳು, ಯಾವುದೊ ಕಷ್ಟದ ವ್ರತ ಮುಗಿಸಿದವಳ ಹಾಗೆ.

ಸಂಜೀವ ತಂದ ಹುಡಿ ಮೀನು ಕೊಚ್ಚಲು ಹಿತ್ತಲಿನಲ್ಲಿ ಇದ್ದ ಒಂದೆ ಒಂದು ತೆಂಗಿನ ಸಸಿಯ ಕಟ್ಟೆಯಲ್ಲಿ ಮೆಟ್ಟುಕತ್ತಿಯ ಮೇಲೆ ಕುಳಿತು ಎರಡು ನಿಮಿಷ ಆಗಿತ್ತಷ್ಟೆ. "ಥೂ... ಥೂ... ಥೂ ಈ ಮುಂಡಿ ಮಕ್ಕಳ್ ಬಂದ್ ಇಲ್ಲೆ ಸಾಯಿಕ" ಅಂತ ಒಳಗಿನಿಂದಲೆ ಅಯ್ಯ ಕೂಗುವುದು ಕೇಳಿಸಿತು. ಎರಡೇ ಕ್ಷಣದಲ್ಲಿ ಹೊರ ಬಂದ ಅಯ್ಯ ಕೋಪ ತಡೆದುಕೊಂಡು ಹೇಳಿದ್ರು - "ಇಗಾ... ನಾವು ಮಡಿ ಜನ...ನೀವು ಇದೆಲ್ಲ ಇಲ್ಲ್ ಇಟ್ಟುಕಂಡ್ರೆ ನಾವು ಉಸಿರಾಡು ಯಾಪಾರ ಅಲ್ಲ...ಗೊತ್ತಾಯ್ತಲ್ಲ..ಇದೆಲ್ಲ ಇವತ್ತಿಗೆ ಕೈದ್ ಆಯ್ಕು". ಅಷ್ಟು ಹೇಳಿ ಉಸಿರಾಡಲು ಕಷ್ಟ ಆಗಿ ಮನೆಯೊಳಗೆ ಹೋದರು.

ಮನೆಯೊಳಗಿಂದ ಇನ್ನೂ ಪ್ರಲಾಪ ನಡೆದೆ ಇತ್ತು - "ಇವುಗಳಿಗೆ ಹೇಳಿ ಏನ್ ಪ್ರಯೋಜನ...ಈ ಹುಳ ಹುಪ್ಪಟೆ ತಿಂಬು ಜಾತಿಯವುಕ್ಕೆ ಮನೆ ಮಾರಿನಲ್ಲ... ಆ ಅಡಿಗನ ಮುಕುಳಿ ಮೆಲೆ ಬರೆ ಎಳಿಕು...". ಸಂಜೀವನ ಹೆಂಡತಿ ಪಾತ್ರೆ, ಕತ್ತಿ ಎಲ್ಲ ಹಿಡಿದುಕೊಂಡು ಲಗು ಬಗೆಯಿಂದ ಮನೆಯೊಳಗೆ ಓಡಿದಳು. ಸಂಜೀವ ಜರ್ಝರಿತನಾಗಿ ಮಡಲಿನ ತಟ್ಟಿಯ ಅಡ್ಡದಲ್ಲಿ ನಿಂತಿದ್ದ.

ತಿಕ್ಕಾಟದ ಮಧ್ಯೆಯೆ ಅವಾಗ ಇವಾಗ ಮೀನು ತಂದು ತಿನ್ನುವುದು ನಡೆದೆ ಇತ್ತು. ಆಯ್ಯ ಹೊರಗೆ ಹೊರಟರೆ ಸಂಜೀವನ ಹೆಂಡತಿಯ ಸಂಭ್ರಮಕ್ಕೆ ಕೊನೆಯೆ ಇಲ್ಲ. ಆಮೇಲಿನ ಅಯ್ಯನವರ ರಂಪ ಬೈಗುಳಗಳೆಲ್ಲ ಮೀನು ಪದಾರ್ಥದ ಪರಿಮಳದಲ್ಲಿ ಸೇರಿ ಹೋಗುತಿತ್ತು.

ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿವಸ ಅಯ್ಯನವರು ತೀರಿಕೊಂಡಾಗ, ಹಿರಿಯರು ದೈವಿಕರು ಇಲ್ಲವಾಗಿದ್ದಕ್ಕೆ ಒಂಥರ ಬೇಸರ ಅನಿಸಿದರೂ ಮನದ ಮೂಲೆಯಲ್ಲಿ ಸಣ್ಣಕ್ಕೆ ನಿರಾಳತೆಯೊಂದು ಮೂಡಿದಂತೆ ಅನಿಸಿತ್ತು. "ಛೆ ಛೆ ಸಾವಂಗೂ ಖುಶಿ ಕಾಂತ್ರ" ಅಂತ ಸಂಜೀವ ತಲೆ ಕೊಡವಿಕೊಂಡಿದ್ದ. ಕಾರ್ಯ ಮುಗಿಯುವವರೆಗೂ ಸಂಜೀವನ ಕುಟುಂಬ ಒಂದು ತರಹ ವನವಾಸವನ್ನೇ ಅನುಭವಿಸಿತು.

ಎಲ್ಲ ಮುಗಿದ ಮೇಲೆ ಒಂದು ದಿವಸ ಮುಸ್ಸಂಜೆ ಸಂಜೀವ ಮಡಲು ತಟ್ಟಿಯ ಸಂದಿಯಿಂದ ಬೀಣೆಯ ಚೀಲ ಹೊರಗೆಳೆದು ಅಂದಿದ್ದ - "ಪ್ಯಾಟಿಗ್ ಹೋಯಿ ಬತ್ನೆ". ಸಂಜೀವನ ಹೆಂಡತಿ ಧಿಗ್ಗನೆ ಎದ್ದು ಮನೆಯೊಳಗೆಲ್ಲ ಸರ ಸರನೆ ಓಡಾಡಿದಳು. ಬರಿ ಚೀಲದ ವಾಸನೆಗೆ ಬೆಕ್ಕುಗಳು ತಮ್ಮ ಮ್ಯಾಂವ್ ರಾಗಕ್ಕೆ ದೈನ್ಯತೆ ತಂದುಕೊಂಡು ಬಾಲ ನೆಟ್ಟಗಾಗಿಸಿ ಸಂಜೀವನ ಕಾಲಿಗೆ ದೇಹವನ್ನು ಒತ್ತಿ ಒತ್ತಿ ಒರೆಸಿದವು. ಸಂಜೀವ ಮರಳಿ ಪಡೆದ ಯಜಮಾನಿಕೆಯ ಗತ್ತಿನಲ್ಲಿ ಮೀನು ಪ್ಯಾಟೆಗೆ ಹೊರಟಿದ್ದ.

ಪಾತ್ರೆ, ಮೆಟ್ಟುಗತ್ತಿ, ಮೀನುಗಳನ್ನು ಹಿಡಿದುಕೊಂಡು ತೆಂಗಿನ ಕಟ್ಟೆಗೆ ಸಂಜೀವನ ಹೆಂಡತಿ ಹೊರಟಾಗ ಆಕಾಶ ಪೂರ್ಣ ಕೆಂಪಡರಿಕೊಂಡಿತ್ತು. ಅಯ್ಯನವರ ಮನೆ ಕಡೆ ಒಮ್ಮೆ ದೃಷ್ಟಿ ಹಾಯಿಸಿದಳು. ಮೌನ ಸಹ್ಯವೆನಿಸಲಿಲ್ಲ ಅವಳಿಗೆ. ಮೌನ ಕೂಡ ಸಂಕಟದಿಂದ ಭಾರವಾಗಿದೆಯೇನೊ ಅನಿಸಿತು. ಮೆಟ್ಟು ಕತ್ತಿಯ ಮೇಲೆ ಕುಳಿತವಳಿಗೆ ಮೌನ ತಡೆಯಲಾಗದೆ ಯಾರಾದರು ಕೆಟ್ಟದಾಗಿ ಬೈದು ಬಿಡಲಿ ಅನಿಸಿತು. ತಲೆಯೆತ್ತಿ ನೋಡಿದಳು. ಅಯ್ಯನವರ ಅಂಗಳವೊಂದು ಒಂಟಿ ಪಾದದಂತೆ, ಅದು ಮೇಲ ಮೇಲಕ್ಕೆ ವಿಸ್ತರಿಸುತ್ತ ಅಗಲವಾದಂತೆ, ರಕ್ತ ವರ್ಣದ ಆಕಾಶವು ಕೈಗಳನ್ನು ಚಾಚಿ ತಲೆಯೆತ್ತಿ ಗೋಳಿಡುವ ಅಯ್ಯನವರಂತೆ ಕಂಡು ಬಂತು. ಝಿಲ್ಲನೆ ಮೈಯೆಲ್ಲ ಬೆವರಿ ಎಲ್ಲವನ್ನು ಅಲ್ಲಲ್ಲೆ ಬಿಟ್ಟು ಯಾರೊ ಓಡಿಸಿಕೊಂಡು ಬಂದವರಂತೆ ಮನೆಯೊಳಗೆ ಧಾವಿಸಿದಳು. ಸಂಜೀವ ಇದೆಲ್ಲವನ್ನು ಮೊದಲೆ ಕಂಡವನಂತೆ ಹೊಸ್ತಿಲ ಮೇಲೆ ಬೆನ್ನು ಬಗ್ಗಿಸಿ ಮಡಚಿದ ಮೊಣಕಾಲಿಗೆ ಗದ್ದವೂರಿ ಕುಳಿತಿದ್ದ. ಸಂಜೀವನ ಕರಿ ಮುಖದಲ್ಲಿ ಎರಡು ಕಾಂತಿಹೀನ ಬೋಳೆ ಕಣ್ಣುಗಳು ಮಾತ್ರ ಹೊಳೆಯುತ್ತಿದ್ದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X