• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಭ್ರಾಂತಿ

By ಕಥೆಗಾರ್ತಿ : ಅಪರ್ಣ ರಾವ್
|

Aparna H Rao"ಸರಿ ಹೊರಡು, ಇನ್ನು ಹೊತ್ತಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ಪಾರ್ಟಿ ತಲುಪಬೇಕು. ಮಗುವನ್ನು ಬೇಗ ಕಾರ್‌ಸೀಟಿನಲ್ಲಿ ಕೂಡಿಸು. ಅಪೂರ್ವ, ನಡಿ ಪುಟ್ಟ ನೀನು ಕೂಡ ಕಾರಲ್ಲಿ ಕುಳಿತುಕೊ" ಎಂದು ವಿಕ್ರಂ ಒಂದೇ ಸಮನೆ ಆತುರಿಸುತ್ತಿದ್ದ. ರಾಧ ಮಕ್ಕಳ ಸಾಮಾನುಗಳನ್ನು ತೆಗೆದಿಡುವುದರಲ್ಲಿ ಮಗ್ನಳಾಗಿದ್ದಳು, ಏನಾದರೂ ಮರೆತುಬಿಟ್ಟರೆ ಸಣ್ಣ ಮಗುವಿಗೆ ಕಷ್ಟವಾಗುವುದೆಂದು! ಇದು ಅವರ ಗೆಳೆಯನ ಮಗನ ಹುಟ್ಟು ಹಬ್ಬಕ್ಕೆ ಹೊರಟಿರುವವರ ಸಂಭ್ರಮ. ಅಂತೂ ಮಕ್ಕಳನ್ನು ಕಾರಿನಲ್ಲಿ ಅವರವರ ಜಾಗದಲ್ಲಿ ಕೂಡಿಸಿಕೊಂಡು, ಮನೆಯ ರಸ್ತೆಯಿಂದ ಹೊರಬಂದರು. ಅಪೇಕ್ಷ ತನ್ನ ಆಟಿಕೆಗಳೊಂದಿಗೆ ಆಡಿಕೊಳ್ಳುತಿತ್ತು. ಅಪೂರ್ವ ತನ್ನ ಕತೆ ಪುಸ್ತಕ ಓದುವುದರಲ್ಲಿ ಮಗ್ನಳಾಗಿದ್ದಳು.

ಸ್ವಲ್ಪ ದೂರ ಹೋಗುವಷ್ಟರಲ್ಲಿ ಆತ, "ನೋಡು ಅದು ಯಾವುದೊ ಒಂದು ಗಾಡಿ, ಸುಮಾರು ಸಮಯದಿಂದಲೂ ನಮ್ಮ ಹಿಂದೆಯೇ ಬರುತ್ತಿದೆ". "ಹಾ, ಹೌದಲ್ಲಾ, ಅವನೆ ಯಾರನ್ನಾದರೂ ಕಳುಹಿಸಿರಬಹುದೆ ನಮ್ಮನ್ನು ಹಿಂಬಾಲಿಸಲು? ಅವನಾಗಲೇ ತನ್ನ ಕುತಂತ್ರವನ್ನು ಪ್ರಾರಂಭಿಸಿಬಿಟ್ಟನೇ?" ಎಂದು ಆಕೆ ಚಿಂತಿಸಲಾರಂಭಿಸಿದಳು. "ಈಗ ಜೈಲಿನಿಂದ ಬಂದಮೇಲೆ ಆತ ಏನು ಹೊಂಚುಹಾಕುತ್ತಿರಬಹುದು? ನಮಗೆ ಮತ್ತೆ ಇನ್ನೇನು ಕಾದಿದೆಯೋ. ನಮ್ಮ ಮಕ್ಕಳಿಗೆ ಬೇರೆ ಇವೆಲ್ಲ ತಿಳಿಯದಂತೆ ನೋಡಿಕೊಳ್ಳಬೇಕು. ಅಪೂರ್ವಳಿಗೆ ಈಗ ಸ್ವಲ್ಪ ತಿಳಿವಳಿಕೆ ಹೆಚ್ಚುತ್ತಿರುವ ವಯಸ್ಸು. ಅವಳಿಗೆ ಯಾವುದರ ಬಗ್ಗೆಯೂ ಹೆದರಿಕೆ ಮೂಡದಂತೆ ಕಾಪಾಡಬೇಕು.

ಅವನೇನಾದರೂ ಮತ್ತೆ ನಮ್ಮ ಮೇಲೆ ಹಾರಿಬಂದರೆ, ಪೊಲೀಸರನ್ನೇನೋ ಕರೆಯಬಹುದು. ಆದರೆ, ಅದು ನಮಗೇನಾದರೂ ಅಪಾಯ ಸಂಭವಿಸಿದಮೇಲೆ ತಾನೆ. ಈಗ ನಾವು ಬಹಳ ಎಚ್ಚರವಾಗಿರಬೇಕು" ಎಂದು ಯೋಚಿಸುತ್ತಿರುವಾಗಲೇ, "ಅದೋ ಅಲ್ಲಿ ಮುಂದಿರುವ ಕಟ್ಟಡದಲ್ಲೇ ಪಾರ್ಟಿ ಇರುವುದು" ಎಂದು ವಿಕ್ರಂ ಹೇಳಿದ.

"ಅಬ್ಬ! ಸದ್ಯಕ್ಕೆ ಇಲ್ಲಿ ತಲುಪಿದೆವಲ್ಲ, ಇನ್ನು ಜನರ ಮಧ್ಯೆ ಇರುವುದರಿಂದ ಸ್ವಲ್ಪ ನೆಮ್ಮದಿ" ಎಂದುಕೊಂಡು ಆಕೆ "ನಾವು ಕಾರಿನಿಂದಿಳಿಯುವಾಗ ಯಾರಾದರೂ ಜನರೊಟ್ಟಿಗೆ ಒಳಗೆ ಹೋಗುವುದೊಳ್ಳೆಯದು" ಎಂದು ಹೇಳಿದಳು.

"ನೀನು ಮಕ್ಕಳನ್ನು ಕರೆದುಕೊಂಡು ಒಳಗೆ ಹೋಗು. ಅಲ್ಲಿಯವರೆಗೂ ನಾನು ಇಲ್ಲಿಂದಲೇ ನಿಮ್ಮನ್ನು ಗಮನಿಸುತ್ತೇನೆ. ನಂತರ ನಾನು ಗಾಡಿ ನಿಲ್ಲಿಸಿ ಬರುತ್ತೇನೆ."

ರಾಧಳಿಗೆ ಈ ಮಾತು ಹಿಡಿಸಿದಂತೆ ಕಾಣಲಿಲ್ಲ. "ಇಲ್ಲ ಹಾಗೆ ಮಾಡುವುದು ಬೇಡ. ಏನಾದರಾಗಲಿ, ನಾನು ನಿಮ್ಮನ್ನು ಒಬ್ಬರನ್ನೇ ಬಿಟ್ಟು ಹೋಗುವುದಿಲ್ಲ" ಆಕೆ ಕಡಾಖಂಡಿತವಾಗಿ ಎಂದಳು.

ಕೊನೆಗೆ ಆದಷ್ಟೂ ಹತ್ತಿರದಲ್ಲಿ ಕಾರು ನಿಲ್ಲಿಸಿ, ಸುತ್ತಮುತ್ತಲೂ ಗಮನಿಸುತ್ತಾ ನಡೆಯತೊಡಗಿದರು. ಇಂತಹ ಒಂದು ದಿನವೇ ತಾನೆ ಆತ ನಮ್ಮೊಂದಿಗೆ ಹಾಗೆ ನಡೆದುಕೊಂಡುದು! ಅದೇಕೆ ಹಾಗೆ ಮಾಡಿದನೋ? ಅಂದಿನಿಂದ ನಮ್ಮ ಜೀವನದ ರೀತಿ ಬದಲಾಗಿದೆ. ನಮ್ಮದೇನೂ ತಪ್ಪಿರದಿದ್ದರೂ ಕೂಡ ಹೆದರುವಂತಾಗಿದೆ. ಎಂದು ಯೋಚಿಸುತ್ತಾ ಹುಟ್ಟುಹಬ್ಬ ನಡೆಯುತ್ತಿದ್ದ ಕೋಣೆಯೊಳಗೆ ನಡೆದರು.

ರಾಧ ವಿಕ್ರಂಗೆ ಧ್ಯೈರ್ಯ ಕೊಡಲು ಪ್ರಯತ್ನಿಸುತ್ತಿದ್ದರೂ ಕೂಡ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಅದೇ ವಿಷಯದ ಬಗ್ಗೆ ಕೊರೆಯುತ್ತಿತ್ತು. ಅಂತಹ ದಾರುಣವಾದ ದೃಶ್ಯವನ್ನು ತಾವೇ ಅನುಭವಿಸುವುದು, ಸುಶಿಕ್ಷಿತವಾದ, ಸಂಸ್ಕಾರವಂತರ ಮನೆಯಲ್ಲಿ ಬೆಳೆದುಬಂದ ಅವರುಗಳಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು.

ಅವನು ತಮ್ಮನ್ನು ಹಿಂಬಾಲಿಸುತ್ತಿರಬಹುದೆಂಬ ಸಂಶಯ ಬಂದ ಅವರುಗಳಿಗೆ, ಪಾರ್ಟಿಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು ಕುಗ್ಗಿತ್ತು. ಆದರೂ ಸ್ನೇಹಿತರಿಗೆ ತಿಳಿಯಗೊಡದಂತೆ ಮುಖದಮೇಲೆ ನಗುವಿನ ಮುಖವಾಡವನ್ನು ಧರಿಸಿಕೊಂಡರು. ಅಪೇಕ್ಷಳಂತು ಅಷ್ಟು ಜನರನ್ನು ಸಂತೋಷ, ಭಯ, ಆಶ್ಚರ್ಯಗಳಿಂದ ನೋಡುತ್ತಿತ್ತು. ಅಪೂರ್ವ ಆಗಲೇ ತನ್ನ ಗೆಳತಿಯರೊಂದಿಗೆ ಬೆರೆತುಹೋಗಿದ್ದಳು.

"ಕತ್ತಲಾಗುವ ಮುನ್ನ ಹೊರಟುಬಿಡುವ" ಎಂದು ವಿಕ್ರಂ ಜ್ಞಾಪಿಸಿದ ಕೂಡಲೆ, ಮರುಮಾತಿಲ್ಲದೆ ರಾಧ ಮಕ್ಕಳನ್ನು ಹೊರಡಿಸಿದಳು. ದಾರಿಯಲ್ಲಿ ದಣಿದಿದ್ದ ಮಕ್ಕಳು ನಿದ್ದೆಮಾಡತೊಡಗಿದವು.

ರಾಧ ಯೋಚನಾಲಹರಿಯಲ್ಲಿ ತೇಲಿಹೋದಳು. "ಇನ್ನೆಂದೂ ನಮ್ಮ ಜೀವನ ಮೊದಲಿನಂತಿರಲು ಸಾಧ್ಯವಿಲ್ಲವೇ? ಈ ಪೊಳ್ಳು ಹೆದರಿಕೆಗೆ ಕೊನೆಯಿಲ್ಲವೇ? ಎಲ್ಲರಂತೆ ನಾವು ಆರಾಮವಾಗಿವುದು ಇನ್ನೇಕೆ ಸಾಧ್ಯವಿಲ್ಲ? ಅವನು ಆ ರೀತಿ ನಮ್ಮೊಂದಿಗೆ ನಡೆದುಕೊಳ್ಳಲು ಕಾರಣವೇನಿರಬಹುದು? ಇನ್ನು ಮುಂದೆ ಅದೇ ರೀತಿ ನಡೆದುಕೊಳ್ಳುವುದಿಲ್ಲವೆಂದು ಹೇಗೆ ತಿಳಿಯುವುದು? ಎಂದುಕೊಳ್ಳುತ್ತಾ ಆ ದುರ್ದಿನವನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದಳು.

ಅಂದು ಕೆಲವೇ ಕ್ಷಣಗಳಲ್ಲಿ ಏನೆಲ್ಲಾ ನಡೆದು ಹೋಯಿತು! ಆ ದಿನ ಆಗ ತಾನೆ ಅಪೂರ್ವಳನ್ನು ಅವಳ ಗೆಳತಿಯ ಮನೆಯಲ್ಲಿ ಬಿಟ್ಟು ಅಂಗಡಿಗೆ ಹೊರಟಾಗಲೇ ಆತ ನಮ್ಮ ಮೇಲೆ ಬುದ್ಧಿಭ್ರಮಣನಂತೆ ಹಾರಿಬಂದಿದ್ದ. ಏನೇನೋ ಮಾತನಾಡಲು ಪ್ರಾರಂಭಿಸಿದ. ವಿಕ್ರಂ ತಾಳ್ಮೆಯಿಂದ, ನಿನ್ನೊಂದಿಗೆ ಮಾತಾಡಲು ನಮಗೇನೂ ಇಲ್ಲ ಎಂದು ಮಗುವನ್ನು ಎತ್ತಿಕೊಂಡು ಮುಂದೆ ಹೊರಟರು. ಹಾಗೂ ಆತ ಬಿಡಲಿಲ್ಲ. ನಮ್ಮ ದಾರಿಗೆ ಅಡ್ಡ ಹಾಕಿ ನೀವು ಅದು ಹೇಗೆ ಇಲ್ಲಿಂದ ಹೋಗುವಿರೋ ನೋಡುತ್ತೇನೆ. ನಿಮ್ಮ ಜೀವನವನ್ನು ಹಾಳು ಮಾಡದೆ ಬಿಡುವುದಿಲ್ಲ. ಬೇರೆ ಮನೆಗೆ ಹೋದ ಮಾತ್ರಕ್ಕೆ, ನೀವು ಎಲ್ಲಿರುವಿರೆಂದು ನನಗೆ ತಿಳಿದಿಲ್ಲ ಎಂದುಕೊಳ್ಳಬೇಡಿ. ನನಗೆಲ್ಲಾ ತಿಳಿದಿದೆ. ನಿಮ್ಮ ಮನೆಗೆ ಬಂದು ನಿಮ್ಮ ಸಂಸಾರವನ್ನು ಹಾಳು ಮಾಡುತ್ತೇನೆ ಎಂದು ಹೊಡೆಯಲು ಬರುವಂತೆ ಮೇಲೇರಿ ಬಂದುದನ್ನು ನೆನೆಸಿಕೊಂಡರೆ ಈಗಲೂ ಚಳಿಜ್ವರ ಬಂದಂತಾಗುತ್ತದೆ. ಆಗಲೂ ವಿಕ್ರಂ ತನ್ನ ಕೋಪವನ್ನು ನಿಯಂತ್ರಿಸಿಕೊಂಡು, "ನೀನಿಲ್ಲಿಂದ ಹೊರಡದ ಪಕ್ಷದಲ್ಲಿ, ಪೊಲೀಸರನ್ನು ಕರೆಯಿಸುತ್ತೇನೆ" ಎಂದರೂ ಕೂಡ ಆವನು ಜಗ್ಗದೆ, ಕಾರಿಗೆ ಅಡ್ಡಬಂದು ನಿಂತ. ಅಲ್ಲಿಂದ ಮೆಲ್ಲಗೆ ಕಾರನ್ನು ಹಿಂತೆಗುಕೊಂಡು, ಅವನಿಗೆ ತಿಳಿಯದಂತೆ ಒಂದೇ ಏಟಿಗೆ ಕಾರನ್ನು ಓಡಿಸಿಕೊಂದು ವಿಕ್ರಂ ಮುಂದೆ ಹೊರಟರು. ಆಗ ತಿಳಿಯಿತು, ಅವನು ಕಾರಿನ ಒಂದು ಚಕ್ರದ ಗಾಳಿಯನ್ನು ತೆಗೆದು ಪಂಕ್ಚರ್ ಮಾಡಿರುವನೆಂದು. ತಕ್ಷಣ ಗಾಡಿ ನಿಲ್ಲಿಸಿ ಮೊಬೈಲ್ ಫೋನಿನಿಂದ ಕರೆ ಮಾಡಿ ಪೊಲೀಸರಿಗೆ ದೂರು ಕೊಡಲಾಯಿತು. ಅಬ್ಬಾ ! ಇವನೆಂತಹ ನೀಚ ಮನುಷ್ಯನಿರಬೇಕು, ಅವನಿಗೆ ನಮ್ಮ ಕಾರಿನ ಲೈಸನ್ಸ್ ಪ್ಲೇಟ್ ಸಂಖ್ಯೆ ಕೂಡ ತಿಳಿದಿದೆ, ಎಂದು ಯೋಚಿಸುತ್ತಾ ಪೊಲೀಸರಿಗೆ ಕಾಯುತ್ತಿದ್ದರು. ಅವರು ಬಂದ ನಂತರ, ಅಪೂರ್ವಳ ಗೆಳತಿಯ ಮನೆಗೆ ಕರೆ ಮಾಡಿ, ಬರುವುದು ತಡವಾಗುತ್ತದೆಂದು ತಿಳಿಸಿದ ನಂತರ, ಕಾರಿನ ಚಕ್ರ ಬದಲಿಸಿಕೊಂಡು ಅಪೂರ್ವಳನ್ನು ಅವರ ಮನೆಯಿಂದ ಕರೆದುಕೊಂಡು ಹೊರಟು ಮನೆ ತಲುಪಿದರು. ಅಲ್ಲಿಗೆ ಅವರಿಗೆ ಸಾಕು ಸಾಕಾಗಿತ್ತು. ಒಂದೇ ಒಂದು ಸಮಾಧಾನದ ಸಂಗತಿಯೆಂದರೆ, ಆ ಸಮಯದಲ್ಲಿ ಅಪೂರ್ವ ಇಲ್ಲದಿದ್ದುದು.

ವಿಕ್ರಮ್ ಗಾಡಿ ಓಡಿಸುತ್ತಾ, ಹಳೆಯ ಚಿತ್ರದ ಹಾಡುಗಳನ್ನು ಕೇಳುತ್ತಾ ರಾಧ, ನಿನಗೂ ನಿದ್ದೆ ಹತ್ತಿತೆ? ಎಂದು ಕೇಳಿದ. ನಡೆದುದನ್ನೆಲ್ಲಾ ಮೆಲುಕು ಹಾಕುತ್ತಿದ್ದ ರಾಧಳಿಗೆ ಅವನ ಪ್ರಶ್ನೆ ಕೇಳಿಸಲಿಲ್ಲ. ಅವಳ ಯೋಚನಾಲಹರಿ ಮುಂದುವರಿದಿತ್ತು.

ಈ ಮುಂಚೆ ಆತನನ್ನು ಸುಮಾರು ಸಲ ನೋಡಿರಬಹುದು. ಅದೂ ಕೂಡ ಬಹಳ ವರ್ಷಗಳ ಕೆಳಗೆ. ಆಗ ಆತ ಬಹಳ ಸಭ್ಯನಂತೆ ನಡೆದುಕೊಡಿದ್ದ. ಈಗೇಕೆ ಈ ರೀತಿಯಾಗಿ ನಡೆದುಕೊಂಡ? ನೊಂದು ಬಂದ ತಾಯಿಯ ವಯಸ್ಸಿನ ಮಹಿಳೆಗೆ ಮಾನಸಿಕವಾಗಿ ಬೆಂಬಲ ನೀಡಿದ್ದೇ ತಪ್ಪೇ? ಮಗನ ಬೇಜವಾಬ್ದಾರಿತನದಿಂದ ಬೇಸತ್ತು ಅಳುತ್ತ ಮನೆಯ ಬಾಗಿಲಿಗೆ ಬಂದ ಅವನ ತಾಯಿಯ ದುಃಖ ಕಡಿಮೆ ಮಾಡಲು ಹೆಗಲು ಕೊಡಬಾರದಿತ್ತೆ? ಆಕೆಗೆ ಆಸರೆಯಾದ ಜನರಲ್ಲಿ ನಾವೂ ಒಬ್ಬರಾದ ಕಾರಣಕ್ಕೆ, ಹೆತ್ತ ತಾಯಿಯನ್ನು ಕಾಡಿಸಿದ ಆತ ನಮ್ಮ ಮೇಲೆ ಹಾರಿಬರುವುದು ಏನು ನ್ಯಾಯ? ಬರಿ ದುಶ್ಚಟಗಳನ್ನು ಮೈಗೂಡಿಸಿಕೊಂಡು, ಕಟ್ಟಿಕೊಂಡ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳದೆ, ಕೆಟ್ಟ ಗೆಳೆಯರೊಂದಿಗೆ ದಿಕ್ಕುತಪ್ಪಿ ತಿರುಗುತ್ತಿದ್ದ ಮಗನನ್ನು ಯಾವ ತಾಯಿ ತಾನೇ ಕ್ಷಮಿಸಲು ಸಾಧ್ಯ? ತಾಯಿ ಮತ್ತು ಪತ್ನಿಯ ಬುದ್ಧಿವಾದವನ್ನು ಕೇಳಿ, ತನ್ನನ್ನು ತಾನು ತಿದ್ದಿಕೊಳ್ಳಲು ಇಂತಿಷ್ಟೂ ಪ್ರಯತ್ನಪಡದ ಆತನಿಂದ ದೂರವಿರಲು ಅವರಿಬ್ಬರೂ ನಿರ್ಧರಿಸಿದ್ದರು. ಕೊನೆಗಾಲದಲ್ಲಿ ಮಗನನ್ನು ಬಿಟ್ಟು ಬೇರೆಯವರ ಸಹಾಯ ಪಡೆಯಲು ಆಕೆ ನಿರ್ಧರಿಸಿದುದಕ್ಕೆ ನಮ್ಮನ್ನು ದೂಡಿದರೆ ಏನು ಪ್ರಯೋಜನ. ಬದುಕಿರುವಾಗ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ, ಈಗ ಬೇರೆಯವರ ನೆರವಿದ್ದುದರಿಂದಲೇ ತನ್ನ ತಾಯಿ ತನ್ನನ್ನು ತೊರೆದು ಹೋದಳು ಎಂದು ತಿಳಿದುಕೊಳ್ಳುವುದು ಎಷ್ಟು ಸರಿ? ಹೀಗೆ ನಮ್ಮ ಮೇಲೆ ಆಕ್ರಮಣ ಮಾಡಿದರೆ ಏನು ಸಾಧಿಸಿದಂತಾಯ್ತು? ತಾಯಿಯನ್ನು ಕಳೆದುಕೊಂಡ ನಂತರವೂ ತನ್ನ ತಪ್ಪನ್ನು ಅರಿತುಕೊಳ್ಳದೆ, ಯಾರಿಗೂ ಉಪಯೋಗವಿಲ್ಲದ ಜೀವನ ನಡೆಸುವುದನ್ನು ಮೈಹತ್ತಿಸಿಕೊಂಡ ಅವನಿಗೆ ಬುದ್ಧಿಹೇಳುವವರಾರು?

ಅವನು ಮತ್ತೆ ನಮ್ಮೊಂದಿಗೆ ಈ ರೀತಿ ನಡೆದುಕೊಳ್ಳುವುದಿಲ್ಲವೆಂದು ಹೇಗೆ ನೆಮ್ಮದಿಯಿಂದಿರುವುದು? ಈ ಭಯ ನಮ್ಮಿಂದ ಎಂದಿಗೆ ದೂರವಾಗುವುದು. ಯಾವಾಗ ನಾವು ಮುಂಚಿನಂತೆ, ಯಾವ ಭಯವೂ ಇಲ್ಲದೆ ಹೊರಗೆ ಓಡಾಡುವುದು. ಇದಕ್ಕೆಲ್ಲಾ ಕೊನೆಯಿದೆಯೇ? ಎಂದು ರಾಧ ಯೋಚಿಸುತ್ತಿರುವಾಗಲೇ, ಮನೆ ಬಂದಿತ್ತು.

"ಸರಿ ಇನ್ನು ನಡೆಯಿರಿ, ಬೇಗ ಮನೆಯೊಳಗೆ ಸೇರಿಕೊಳ್ಳೋಣ" ಎಂದು ಮಕ್ಕಳನ್ನು ಕರದುಕೊಂಡು ಹೊರಟರು.

ಭಯಕ್ಕೆ ಕೊನೆಯೆಲ್ಲಿ. "ಧೈರ್ಯಂ ಸರ್ವತ್ರ ಸಾಧನಂ " ಎನ್ನುವ ಸಾಲನ್ನು ಪ್ರತಿದಿನ ಜ್ಞಾಪಿಸಿಕೊಂಡ ಮಾತ್ರಕ್ಕೆ, ಧೈರ್ಯದಿಂದ ಜೀವನ ಮಾಡಲು ಸಾಧವೆ" ಎಂದು ಯೋಚಿಸುತ್ತ ರಾಧ "ಇವೆಲ್ಲ ಒಂದು ಕೆಟ್ಟ ಕನಸಾಗಿದ್ದರೆ ಎಷ್ಟು ಚೆನ್ನ" ಎಂದು ನಿದ್ದೆಗೆ ಜಾರಿದಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more