ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಕ್ರ

By Staff
|
Google Oneindia Kannada News

Girish Jamadagni, Singaporeಕಾಲವನ್ನು ತಡೆಯೋರು ಯಾರೂ ಇಲ್ಲ! ಯಾರಿಗೂ ತಲೆಬಾಗದ ರಾಜ ಕ್ಷೌರಿಕನ ಮುಂದೆ ತಲೆಬಾಗಿಸುತ್ತಾನೆ ಅಂತಾರೆ. ಹಾಗೆಯೇ, ಕಾಲಚಕ್ರದ ಮುಂದೆ ಮನುಜನೂ ತಲೆಬಾಗಿಸಲೇಬೇಕು. ಬಾಲ್ಯ, ಯೌವನ, ಮುಪ್ಪು ಎಲ್ಲ ಕಾಲಘಟ್ಟದಲ್ಲಿ ಬರುವ ಒಂದೊಂದು ಹಂತಗಳು. ಕಾಲದ ಅಣತಿಯಂತೆ ನಮ್ಮ ಜೀವನವನ್ನೂ ರೂಪಿಸಿಕೊಳ್ಳುತ್ತಾ ಸಾಗಬೇಕು, ಅದೇ ಜಾಣತನ. ಇದು ನಮ್ಮ, ನಿಮ್ಮ ಎಲ್ಲರ ಕಥೆ.

* ಗಿರೀಶ್ ಜಮದಗ್ನಿ, ಸಿಂಗಪುರ

ಸಲೂನ್ ಶಾಪಿಗೆ ಬಂದು ಇಪ್ಪತ್ತು ನಿಮಿಷವಾಗಿತ್ತು. ಮೆತ್ತನೆಯ ಸೋಫಾದ ಮೇಲೆ ಕುಳಿತು, "ಫಿಲ್ಮ್ ಫೇರ್" ಓದುತ್ತಿದ್ದೆ. ಎಂದಿನ ಭಾನುವಾರದಂತೆ ಬಹಳ ಜನ. ಕನ್ನಡಿ ಮುಂದಿನ ಒಂದು ಜಾಗ ಖಾಲಿಯಾಗಿತ್ತು. ಕ್ಷೌರಿಕ, "ಸಾರ್" ಎಂದು ಕೂಗಿ ಕರೆದು ಮೆತ್ತನೆಯ ಕುರ್ಚಿಯನ್ನೊಮ್ಮೆ ತಟ್ಟಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದ. ನನ್ನ ಕನ್ನಡಕವನ್ನು ತೆಗೆದು, ಮಡಿಸಿ, ಮುಂದಿದ್ದ ಟೇಬಲ್ ಮೇಲಿಟ್ಟ. ಮುಂದಿನ ಕಪಾಟಿನಿಂದ ಮಡಿಸಿಟ್ಟಿದ್ದ ಹೊದಿಕೆಯನ್ನು ತೆಗೆದು, ಕೊಡವಿ, ನನ್ನ ಮೇಲೆ ಹೊದಿಸಿ, ಕತ್ತಿನ ಹಿಂಬಾಗದಲ್ಲಿ ಕ್ಲಿಪ್ ಹಾಕಿದ. ನನಗೆ ಮೊದಲು ಬಂದು ಹೋದವರಿಗೂ, ಅದನ್ನೆ ಹೊದಿಸಿ, ಕೆಲಸವಾದ ಮೇಲೆ ನೀಟಾಗಿ ಮಡಿಸಿಟ್ಟಿದ್ದನ್ನು ನಾನೇ ನೋಡಿದ್ದೆ!

"ಸಾ(ಶಾ)ರ್ಟ್ ಮಾಡ್ಬೇಕಾ ಸಾರ್?" ಎಂದ. "ಮೀಡಿಯಂ" ಅಂದೆ. ಅವನ ಮಾಮೂಲಿ ಪ್ರಶ್ನೆಗೆ, ನನ್ನ ಮಾಮೂಲಿ ಉತ್ತರ. ಕತ್ತರಿ, ಬಾಚಣಿಗೆ ಹಿಡಿದು ಅವನ ಕಾರ್ಯದಲ್ಲಿ ಮಗ್ನನಾದ, ಕ್ಷೌರಿಕ ರಾಮು. ಅವನು ತಿರುಗಿಸಿದಂತೆ ನನ್ನ ತಲೆಯನ್ನು, ಮೇಲೆ, ಕೆಳಗೆ, ಅತ್ತ, ಇತ್ತ ಆಡಿಸುತ್ತಿದ್ದೆ. ಮಧ್ಯದಲ್ಲಿ ಅವನ ಮಾಮೂಲಿ ಗೊಣಗಾಟ ಕೇಳುತ್ತಿತ್ತು. "ಸಾರ್, ನಿಮ್ಮದು ರಿಂಕಲ್ಸ್ ಜಾಸ್ತಿ. ಕಟ್ ಮಾಡೋದು ಕಷ್ಟ". "ಗುಂಗುರು" ಕೂದಲು ಎಂದು ಹೇಳಲು, ಅವನೇ ಕಂಡು ಹಿಡಿದುಕೊಂಡಿದ್ದ ಇಂಗ್ಲಿಷ್ ಪದ ಅದು! ಅವನಿಗೆ ಗೊತ್ತು, ಹೀಗೆ ಅವನು ಹೇಳುವುದರಿಂದಲೇ, ಅವನಿಗೆ ಎರಡು ರೂಪಾಯಿ ಭಕ್ಷೀಸು, ನನ್ನಿಂದ ಅವನಿಗೆ ಸಿಗುತ್ತಿತ್ತು!

ಗೋಣು ಕೆಳಗೆ ಹಾಕಿ ಕೂತ ನನ್ನ ದೃಷ್ಟಿ, ಅಕಸ್ಮಾತ್ತಾಗಿ ನನ್ನ ನೀಲಿ ಮೇಲು ಹೊದಿಕೆಯ ಮೇಲೆ ಬೀಳುತ್ತಿದ್ದ ಕೂದಲ ಗುಂಪಿನ ಮೇಲೆ ಬಿದ್ದಿತ್ತು. ಬರೀ ಕಪ್ಪು ಕೂದಲಲ್ಲ. ಅದರ ಜೊತೆಗೆ ಬಿಳಿ ಕೂದಲು! ಆಗಲೇ ನನಗೆ ಜ್ಞಾನೋದಯವಾಗಿದ್ದು. ನನ್ನ ಎಣಿಕೆಗಿಂತಲೂ ಹೆಚ್ಚಾಗಿ ಕೂದಲು ಬೆಳ್ಳಗಾಗಿತ್ತು. ಪ್ರತೀ ಸಾರಿ ಕ್ಷೌರಕ್ಕೆ ಬಂದಾಗಲೂ ಹೆಚ್ಚು ವಯಸ್ಸಾದಂತೆ ಭಾಸವಾಗುತ್ತಿತ್ತು. ಹೌದು, ನನಗೆ ವಯಸ್ಸಾಗುತ್ತಿದೆ! ಹಿಂದೆಲ್ಲ "ಅರವತ್ತು" ವರ್ಷಕ್ಕೆ ವಯಸ್ಸಾಯ್ತು ಅನ್ನುತ್ತಿದ್ದರು. ಈಗ ಮೂವತ್ತೈದು ದಾಟಿದರೆ ವಯಸ್ಸಾದಂತೆ ಕಾಣುವ ಪರಿಸ್ಥಿತಿ. ಅದರಲ್ಲೂ ನನ್ನ ವಯಸ್ಸು 38. ಇತ್ತ ಯುವಕನೂ ಅಲ್ಲ, ಅತ್ತ ಮುದುಕನೂ ಅಲ್ಲ! ಸಧ್ಯಕ್ಕೆ, ನೆರೆಮನೆ ಮಕ್ಕಳಿನ್ನೂ, "ಅಂಕಲ್" ಎಂದೇ ಕೂಗುತ್ತಿದ್ದಾರೆ. ಕಪ್ಪು ಕೂದಲು ಹೀಗೆ ಮಾಯವಾಗುತ್ತಾ ಬಂದರೆ, "ತಾತ" ಎಂದು ಕರೆಸಿಕೊಳ್ಳುವ ದಿನ ಬಹಳ ದೂರವೇನಿಲ್ಲ!

Reality in front of the mirrorನನಗಿನ್ನೂ ನೆನಪಿದೆ, ಚಿಕ್ಕವನಾಗಿದ್ದಾಗ ನಾನು ಹೋಗುತ್ತಿದ್ದ ಆ "ರೋಮಿಯೊ" ಹೇರ್ ಕಟಿಂಗ್ ಶಾಪ್. ಅಪ್ಪ ನನ್ನ ಒಳಗೆ ಕಳಿಸಿ, ಹೊರಗೆ ನಿಲ್ಲುತ್ತಿದ್ದರು. ನನಗೊ, ಕಟಿಂಗ್ ಶಾಪಿನಲ್ಲಿ, ಅವನು ನನಗೋಸ್ಕರ ಹಾಕುತ್ತಿದ್ದ ಆ ಎತ್ತರದ ಮಣೆ, ಬಹಳ ಆಕರ್ಷಣೆ. ಅದರ ಮೇಲೆ ಕುಳಿತಾಗಲೆಲ್ಲಾ ಏನೋ ರಾಜನ ಸಿಂಹಾಸನದ ಮೇಲೆ ಕುಳಿತಷ್ಟು ಆನಂದ. ಯಾವುದೋ ಗುಂಗಿನಲ್ಲಿರುತ್ತಿದ್ದೆ. ಕ್ಷೌರಿಕನ ಕಚಗುಳಿ ಇಡುವ ಆ ರೇಜರ್, ನನ್ನ ಆನಂದಕ್ಕೆ ಭಂಗ ತರುತ್ತಿತ್ತು. ಕಟಿಂಗ್ ಮುಗಿಯುತ್ತಿದ್ದಂತೇ, ಅಪ್ಪನ ಅಪ್ಪಣೆಯಾಗುತ್ತಿತ್ತು."ನೋಡು, ಮನೆಗೆ ಹೋಗಿ ಯಾರನ್ನೂ ಮುಟ್ಟದೆ, ಏನ್ನನ್ನು ಮುಟ್ಟದೆ ಸ್ನಾನ ಮಾಡ್ಬೇಕು ಗೊತ್ತಾ?" ಎಷ್ಟಾದರೂ ನಮ್ಮದು ಮಡಿವಂತರ ಮನೆ, ಕೇಳಬೇಕೇ? ನೂರೆಂಟು ನಿಯಮಗಳು. ಅದಕ್ಕೆಂದೇ, ನಮ್ಮನೇಲಿ, ಕಟಿಂಗ್‌ಗೆ ಹೋಗಿ ಬಂದವರಿಗೆ, ಹಿಂದಿನ ಬಾಗಿಲಿಂದಲೇ ಪ್ರವೇಶ. ಮನೆ ಒಳಗೆ ಹೋಗುವ ಮೊದಲು, ಅಲ್ಲೇ ಹಿತ್ತಲಲ್ಲಿ ಒಗೆಯುವ ಕಟ್ಟೆ ಹತ್ತಿರ ಅಮ್ಮ ರೆಡಿ ಮಾಡಿ ಇಟ್ಟಿರುತ್ತಿದ್ದ ಬಿಸಿ ನೀರಿನ ಸ್ನಾನ. ನಾನು ಎಷ್ಟೋ ಸಾರಿ, ಅಲ್ಲಿ ಇಲ್ಲಿ ಮುಟ್ಟಿ, ಅಮ್ಮನನ್ನು ಮುಟ್ಟಿ, ಉಗಿಸಿ ಕೊಂಡದ್ದಿದೆ. ಅಪ್ಪನಿಂದ ಒಂದೆರಡು ಬಾರಿ ಮಡಿ ಹಾಳು ಮಾಡಿದ್ದಕ್ಕಾಗಿ ಕಜ್ಜಾಯ ಕೂಡ ತಿಂದಿದ್ದೇನೆ!

ನಾನಾಗೇ ಮೊದಲ ಸಾರಿ, ಸ್ವತಂತ್ರವಾಗಿ, ಕಟಿಂಗ್‌ಗೆ ಹೋದ ದಿನ ನನಗಿನ್ನೂ ನೆನಪಿದೆ. ಅಪ್ಪ ಬೇರೆ ಊರಿಗೆ ಹೋಗಿದ್ದರಿಂದ, ಅಮ್ಮ ನನ್ನ ಕೈಯಲ್ಲಿ ಎರಡು ರೂಪಾಯಿಯ ಎರಡು ನೋಟಿತ್ತು, "ತಗೊ ನಾಲಕ್ಕು ರೂಪಾಯಿ. ಚಿಲ್ಲರೆ ಜೋಪಾನವಾಗಿ ತಗೊಂಬಾ, ತಿಳೀತಾ?" ಅಂದಿದ್ದಳು. ಅದೇ ಮೊದಲ ಬಾರಿ ನನ್ನ ಕೈಯಲ್ಲಿ ನಾಲಕ್ಕು ಭಾರೀ ರೂಪಾಯಿಗಳು! ಚೆಡ್ಡಿಯ ಕಿಸೆಯಲ್ಲಿಟ್ಟರೆ, ಎಲ್ಲಿ ಕಳೆದು ಹೋಗುತ್ತದೊ ಎಂದು, ಭದ್ರವಾಗಿ ಬಲಗೈ ಮುಷ್ಠಿಯಲ್ಲಿ, ಕಟಿಂಗ್ ಆಗುವರೆಗೂ ಮಡಿಸಿಟ್ಟುಕೊಂಡಿದ್ದೆ. ಅವನು ಕೊಟ್ಟ "ಎಂಟಾಣೆ" ಚಿಲ್ಲರೆಯನ್ನು ಅಮ್ಮನಿಗೆ ಒಪ್ಪಿಸುವ ತನಕ ನನಗೆ ಬಹಳ ಕಳವಳ. ಎಂದಿನಂತೆ ಅಲ್ಲಿ ಇಲ್ಲಿ ಹೋಗದೆ ಸೀದಾ ಮನೆಗೆ "ಬಸ್ಸು" ಬಿಡುತ್ತಾ ಓಡಿ ಬಂದಿದ್ದೆ. ನಾನು ನೆಲದ ಮೇಲೆ ಹಾಕಿದ ಎಂಟಾಣೆಯನ್ನು. ನೀರು ಚೆಲ್ಲಿ, ಶುದ್ಧಿಗೊಳಿಸಿ, ಅಮ್ಮ ತೆಗೆದುಕೊಂಡ ಮೇಲೇನೆ, ನಾನು ದೊಡ್ಡ ಜವಾಬ್ದಾರಿ ಕಳೆದಂತೆ ನಿಟ್ಟಿಸುರು ಬಿಟ್ಟಿದ್ದು!

ಆಮೇಲೆಲ್ಲಾ, ಕಟಿಂಗ್‌ಗೆ ಒಬ್ಬನೇ ಹೋಗುತ್ತಿದ್ದೆ. ನನಗೆ ತುಂಬಾ ಭಯ ಹುಟ್ಟಿಸುತ್ತಿದ್ದ ಆಸಾಮಿಯೊಬ್ಬನಿದ್ದ. ಅವನಿಗೆ ನಾನಿಟ್ಟ ಹೆಸರು "ಮೀಸೆ ಮಾಮ". ನನ್ನನ್ನು ಕಂಡರೆ, ಅವನಿಗೇನೋ ಮೋಜು. ಬಹಳ ಕೀಟಳೆ ಮಾಡುತ್ತಿದ್ದ. ನಾನು ಕ್ಷೌರಕ್ಕೆಂದು ಕೂತಾಗ, ಹಿಂದಿನಿಂದ ಬಂದು, ಕೈಯಲ್ಲಿದ್ದ ರೇಜರ್ ಝಳಪಿಸುತ್ತಾ, "ನಿನ್ನ ಕಿವಿ ಕುಯ್ದು ಬಿಡ್ತೀನಿ" ಎಂದು ಕರ್ಕಶವಾಗಿ ನಗುತ್ತಿದ್ದ. ಎಷ್ಟೊ ಸಾರಿ, ಕಟಿಂಗ್‌ಗೆ ಹೋಗಿ ಅವನಲ್ಲಿರುವುದ ಕಂಡು, ಒಳಗೆ ಹೋಗದೆ, ವಾಪಸ್ಸು ಮನೆಗೆ ಬಂದಿದ್ದಿದೆ. ಅಪ್ಪನಿಗೆ ಹೇಳಿದರೆ, ಕೇಳಿ ನಕ್ಕು ಬಿಡುತ್ತಿದ್ದರು. ಕೆಲವು ಸಾರಿ, ನನ್ನ ಕನಸಲ್ಲೂ ಅವನು ಬಂದು, ನಾನು ಹಾಸಿಗೆ ಒದ್ದೆ ಮಾಡಿದ್ದಿದೆ.

ನಾನು ಹೈಸ್ಕೂಲು ಓದುತ್ತಿದ್ದಾಗ, ಬಚ್ಚನ್‌ನ ಸ್ಟೆಪ್ ಕಟಿಂಗ್ ಸ್ಟೈಲು ಬಹಳ ಜನಪ್ರಿಯವಾಗಿತ್ತು. ನನಗೂ ಅದೇನೊ ಸ್ಟೆಪ್ ಕಟಿಂಗ್ ಮಾಡಿಸಿಕೊಳ್ಳಬೇಕೆಂಬ ಹುಚ್ಚು ಹಿಡಿದಿತ್ತು. ಅಪ್ಪನಿಗೆ ಹೇಳುವ ಧೈರ್ಯವಿರಲಿಲ್ಲ. ಅಮ್ಮನನ್ನು ಕಾಡಿದ್ದೆ, ಬೇಡಿದ್ದೆ. ಎಷ್ಟೇ ಗೋಳಿಟ್ಟರೂ ಮನೆಯಲ್ಲಿ ಯಾರೂ ಒಪ್ಪಲೇ ಇಲ್ಲ. ನನಗೋ ಆ ಹೈರ್ ಸ್ಟೈಲ್ ಮಾಡಿಸಿಕೊಳ್ಳಲೇ ಬೇಕೆಂಬ ಹುಚ್ಚು ಹಠ. ಕಡೆಗೊಂದು ದಿನ, ನನ್ನ ಫಜೀತಿ ನೋಡಲಾಗದೆ, ಅಮ್ಮನೇ ಅಪ್ಪನಲ್ಲಿ ಮಾತಾಡಿ, ಒಪ್ಪಿಸಿದ್ದಳು. "ಆ ಹಾಳು ಕಟಿಂಗ್ ಮಾಡಿಸಿಕೊಂಡು, ಅದೇನು ಉದ್ಧಾರ ಆಗ್ತಾನೋ ನಾನೂ ನೋಡ್ತಿನಿ" ಅಂತ ಅಪ್ಪ ಅಮ್ಮನಿಗೆ ಹೇಳಿದ್ದು ಕಿಟಕಿ ಹಿಂದೆ ನಿಂತು ಕೇಳಿಸಿಕೊಳ್ಳುತ್ತಿದ್ದ ನನ್ನ ಕಿವಿಗೆ ಬಿದ್ದಿತ್ತು. ಏನಾದರಾಗಲಿ, ಒಪ್ಪಿಗೆ ದೊರೆಯಿತಲ್ಲ ಎಂದು ಹಿರಿ ಹಿರಿ ಹಿಗ್ಗಿದ್ದೆ. ಮರು ದಿನವೇ ಕಟಿಂಗ್ ಶಾಪ್‌ಗೆ ಓಡಿದ್ದೆ. ಕುರ್ಚಿ ಮೇಲೆ ಕುಳಿತು "ಸ್ಟೆಪ್ ಕಟಿಂಗ್" ಎಂದು ಅಪ್ಪಣೆ ಇತ್ತಿದ್ದೆ. ಮನದಲ್ಲೇ ಏನೋ ಖುಶಿ. ಕಟಿಂಗ್ ಆದಮೇಲೆ, ನಾನು ಬಚ್ಚನ್‌ನಂತೆಯೇ ಕಾಣುತ್ತೇನೆ ಎನ್ನುವ ಭ್ರಮೆ! ಕಟಿಂಗ್ ಮುಗಿದಿತ್ತು. ನನಗೆ ನಿರಾಶೆ ಕಾದಿತ್ತು. ನನ್ನ ಮುಖ ಮೊದಲಿಗಿಂತಲೂ ವಿಚಿತ್ರವಾಗಿ ಕಾಣುತ್ತಿತ್ತು. ನನ್ನ ಆಶಾ ಗೋಪುರವೆಲ್ಲ ಕಳಚಿಬಿದ್ದಿತ್ತು. ಕಟಿಂಗ್ ಶಾಪ್‌ನಲ್ಲಿದ್ದವರೆಲ್ಲ "ಹಲೋ ಬಚ್ಚನ್" ಎಂದು ಗೇಲಿ ಮಾಡಿದ್ದರು. ಮನೆಯಲ್ಲೂ ಮುಖಕ್ಕೆ ಮಂಗಳಾರತಿಯಾಗಿತ್ತು. "ಏನೋ ಅವಸ್ಥೆ ನಿಂದು? ಕಿವಿ ಮೇಲೆ ಕೂದಲು ಹಾಗೆ ಇದೆ. ಕಟಿಂಗ್ ಮಾಡದಲೇ, ಆರು ರುಪಾಯಿ ಕಿತ್ಕೊಂಡು ಕಳ್ಸಿದ್ದಾನೆ" ಎಂದು ಮಾತಲ್ಲೇ ಕೊಂದರು ಅಪ್ಪ. ನನಗೆ ಮುಖಭಂಗವಾಗಿತ್ತು. ಅಂದಿನಿಂದ, ಕಟಿಂಗ್‌ಗೆ ಹೋದಾಗ "ಮೀಡಿಯಂ" ಎಂದು ಹೇಳಿ ತೆಪ್ಪಗೆ ಕೂರುತ್ತೇನೆ. ಬಹಳ ದಿನಗಳವರೆಗೆ ನಮ್ಮ ಏರಿಯದಲ್ಲಿ, "ಬಚ್ಚನ್" ಎಂದೇ ನನ್ನ ಕರೆದು ಗೇಲಿ ಮಾಡುತ್ತಿದ್ದರು ಜನ.

ಈ ಬಚ್ಚನ್ ವೃತ್ತಾಂತವಾದ ಮೇಲೆ, ಕಟಿಂಗ್ ಶಾಪ್‌ನಲ್ಲಿ, ನಾನು ತಮಾಷೆಯ ವಸ್ತುವಾಗಿದ್ದೆ. ಇನ್ನೂ ಮೀಸೆ, ಗಡ್ಡ ಬರದ ನನಗೆ, "ಸೇ(ಶೇ)ವ್ ಮಾಡಲಾ ಮಗಾ?" ಎಂದು ಕೇಳಿ ಅವರವರಲ್ಲೆ, ತೆಲುಗಿನಲ್ಲಿ ಮಾತಾಡಿಕೊಂಡು ನಗುತ್ತಿದ್ದರು, ಕ್ಷೌರಿಕರು. ಆಗೆಲ್ಲಾ ಬಹಳ ಸಿಟ್ಟು ಬರುತ್ತಿತ್ತು. ಈ ಗಡ್ಡ,ಮೀಸೆ ಯಾಕಿಷ್ಟು ತಡ ಬರುವುದು ಎಂದು ಹಲುಬಿದ್ದಿದೆ. ಗಡ್ಡ, ಮೀಸೆ ಇದ್ದವರನ್ನು ನೋಡಿದಾಗ ಏನೋ ಒಂದು ತರಹದ ದ್ವೇಷ. ಛೆ! ಈ ಹಾಳು ಯೌವ್ವನ, ಬೇಗಲಾದರೂ ಬರಬಾರದೇ ಎಂದು ಕೊರಗಿದ್ದಿದೆ. ಆಗ ಬೇಗ ವಯಸ್ಸಾಗಲಿ ಎಂಬ ಆತುರ. ಈಗ, ಅಯ್ಯೋ , ಏಕಿಷ್ಟು ಬೇಗ ವಯಸ್ಸಾಗುತ್ತಿದೆ ಎಂಬ ದುಃಖ! ಜೀವನವೇ ಹೀಗೆ. ಬೇಕು ಎಂಬುದು ನಮಗೆ ಬೇಕಾದಾಗ ಸಿಗುವುದಿಲ್ಲ. ಸಿಕ್ಕಾಗ, ಅದು ನಮಗೆ ಬೇಡವಾಗಿರುತ್ತೆ!

"ಸಾರ್, ಆಯ್ತು" ಎನ್ನುವ ಧ್ವನಿ, ನನ್ನನ್ನು ವಾಸ್ತವಕ್ಕೆ ಕರೆತಂದಿತ್ತು. ಕ್ಷೌರದ ರಾಮ, ಹೊದಿಕೆಯನ್ನು ಸರಿಸಿ, ಕೊಡವಿ, ಮತ್ತೆ ಯಥಾಸ್ಥಾನದಲ್ಲಿ ಮಡಿಸಿಟ್ಟ. ಇನ್ನೊಂದು ಕುರ್ಚಿಯಲ್ಲಿ, ನನ್ನ ಮಗನ ಕ್ಷೌರ ನಡೆದಿತ್ತು. ಯಾಕೋ ಮುಖ ಊದಿಸಿ ಕುಳಿತಿದ್ದ. "ಯಾಕೋ, ಏನಾಯ್ತು?" ಅಂದೆ.

"ಮತ್ತೆ, ಮತ್ತೆ, ಅಂಕಲ್ ನನ್ನ ಕಿವಿ ಕುಯ್ತೀನಿ ಅಂತ ಹೆದರಿಸ್ತಾರೆ" ಅಂದ.

ಮೀಸೆಯಡಿಯಲ್ಲೇ ನಕ್ಕಿದೆ. ಜೀವನದ ಚಕ್ರ ತಿರುಗುತ್ತಿತ್ತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X