ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಸಣ್ಣ ತಪ್ಪು ಸಣ್ಣಸಣ್ಣ ಕ್ಷಮೆಗಳ ಸಣ್ಣ ಕತೆ

By Staff
|
Google Oneindia Kannada News

ಸಣ್ಣದಾಗಿ ಮೋಸಮಾಡುವ ಕಲೆ ಎಳವೆಯಲ್ಲೆ ಆರಂಭವಾಗುತ್ತದಾ ? ಅಥವಾ ಬಹುತೇಕ ಮಂದಿ ಚಿಕ್ಕವರಿದ್ದಾಗ ಹೀಗೇ ವರ್ತಿಸುತ್ತಿದ್ದರಾ? ನಿಮ್ಮ ತಾಯಿ ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದುಬಿಟ್ಟಳಾ? ಹಳೆ ಕತೆ ಹೋಗಲಿ ಬಿಡಿ. ರಾಹುಲನ ತಾಯಿಗೆ 25 ಪೈಸೆ ಖೋತಾ ಆದ ಹಾಲುಖೋವಾದ ಕತೆ ಓದಿ.

* ಶ್ವೇತಾ, ಬೋಸ್ಟನ್

"ರಾಹುಲ್ ಇದರಲ್ಲಿ ಯಾಕೋ ಮೂರೇ ಟೊಮೇಟೋ ಹಣ್ಣು ಇದಾವೆ?" ಅಡುಗೆ ಮನೆಯಿಂದಲೇ ಕೂಗಿದಳು ರಾಹುಲನ ಅಮ್ಮ. ಅಂಗಡಿಗೆ ಹೋಗಿ ಬಂದು ಭಯದಿಂದಲೇ ಪುಸ್ತಕ ಹಿಡಿದು ಕೂತಿದ್ದ ರಾಹುಲ್, ಅಮ್ಮನ ಕೂಗು ಕೇಳಿಸಿಯೂ ಕೇಳಿಸದವನಂತೆ ಸುಮ್ಮನಿದ್ದ. "ಕಿವಿಗೇನು ಹತ್ತಿ ಇಟ್ಟುಕೊಂಡು ಕೂತಿದಿಯಾ? ಕರೆದಿದ್ದು ಕೇಳಿಸ್ಲಿಲ್ವಾ?" ಅಂತ ಕೂಗಿಕೊಂಡು ಅಮ್ಮ ಅವನು ಓದುತ್ತಿದ್ದ ಕೋಣೆಗೇ ಬಂದು ಬಿಟ್ಟಳು. ಉತ್ತರಿಸದೆ ಗತ್ಯಂತರವಿಲ್ಲದೆ ಮೆತ್ತಗೆ "ಏನಮ್ಮಾ ಅದು, ಓದಿಕೊಳ್ತಾ ಇದ್ದೀನಿ ಕಾಣೋಲ್ವಾ?" ಅಂದ. ಒಳಗಿದ್ದ ಭಯವನ್ನು ಅದುಮಿಟ್ಟುಕೊಂಡು, ಏನೂ ನಡೆದೇ ಇಲ್ಲ ಅನ್ನುವವನ ಹಾಗೆ ಉತ್ತರಿಸಲಿಕ್ಕೆ ಪ್ರಯತ್ನಿಸಿದ. "ನೀನು ಓದಿ ಕಡಿದು ಗುಡ್ಡ ಹಾಕೋದು ಅಷ್ಟರಲ್ಲೇ ಇದೆ, ಮೊದಲು ಕೇಳಿದ್ದಕ್ಕೆ ಉತ್ತರ ಕೊಡು" ರಾಹುಲನ ಮೇಲೆ ಹರಿಹಾಯ್ದಳು ಅವನಮ್ಮ.

ಆ ಕ್ಷಣಕ್ಕೆ ರಾಹುಲನಿಗೆ ಅಮ್ಮನ ಬದಲು ಅಲ್ಲಿ ಕಂಡದ್ದು ಕೈಯಲ್ಲಿ ಆಯುಧ ಹಿಡಿದು ನಿಂತ ಮಹಿಷಾಸುರ ಮರ್ಧಿನಿ ಚಾಮುಂಡಿಯೇ. ಒಳಗೆ ಗಡಗಡ ನಡುಗುತ್ತಿದ್ದರೂ ಹೇಗೋ ಸಾವಳಿಸಿಕೊಂಡು "ಏನಮ್ಮಾ ಅದು, ಏನು ಹೇಳು" ಎಂದ. ಹಿಂದೆ ಕೇಳಿದ್ದನ್ನೇ ಅಮ್ಮ ಮತ್ತೆ ಕೇಳಿದಳು. "ಅಂಗಡಿಯಿಂದ ಟೊಮೇಟೋ ಹಣ್ಣು ತಂದ್ಯಲ್ಲ, ಅದರಲ್ಲಿ ಮೂರೇ ಹಣ್ಣು ಇದೆ, ಬಾಕಿ ಇನ್ನೊಂದು ಏನಾಯ್ತು"?

"ಮೂರೇ ಅಮ್ಮ ಬಂದಿದ್ದು"

"ಅದೆಂಗೆ ಸಾಧ್ಯ? ನೆನ್ನೆ ಸಾಯಂಕಾಲ ನಾನೇ ತಗೊಂಡು ಬಂದಿದೀನಿ, 1 ರೂಪಾಯಿಗೆ 4 ಹಣ್ಣು ಬಂದಿತ್ತು. ಇವತ್ತು ಬೆಳಗ್ಗೆಗೇ ರೇಟು ಜಾಸ್ತಿ ಅಗೋಯ್ತಾ?"

"ಅದೇನೋ ಗೊತ್ತಿಲ್ಲ ಕಣಮ್ಮ, ಒಟ್ಟಲ್ಲಿ ಮೂರೇ ಬಂದಿದ್ದು"

"ಯಾರಿದ್ರು ಅಂಗಡೀಲಿ? ವನಜಮ್ಮನೋ ಅಥ್ವಾ ಅವ್ಳ ಮಗ ರಾಜನೋ?" ರಾಹುಲ್ ಮನೆಗೆ ಒಂದರ್ಧ ಕಿಲೋ ಮೀಟರ್ ದೂರದಲ್ಲಿತ್ತು ವನಜಮ್ಮಳ ತರಕಾರಿ ಅಂಗಡಿ. ಸುತ್ತ ಮುತ್ತೆಲ್ಲೂ ಬೇರೆ ಕಡೆ ತರಕಾರಿ ಸಿಗುತ್ತಿಲ್ಲವಾದ್ದರಿಂದ, ಅರ್ಜೆಂಟಿಗೆ ಏನಾದರು ತರಕಾರಿ ಬೇಕಿದ್ದಲ್ಲಿ ರಾಹುಲವನ್ನು ಅಲ್ಲಿಗೆ ಓಡಿಸುತ್ತಿದ್ದರು. ಮಿಕ್ಕಂತೆ ಅವನಮ್ಮ ಸೋಮವಾರದ ಸಂತೆಯಿಂದ ತರಕಾರಿ ಹಣ್ಣು ತರುತ್ತಿದ್ದರು. ಅಂಗಡಿಯ ವನಜಮ್ಮ ಸರಿಯಾದ ಬೆಲೆಯಲ್ಲೇ ಮಾರುತ್ತಿದ್ದರೂ, ಅವಳ ಮಗ ರಾಜ ಮಾತ್ರ ಜಾಸ್ತಿ ಬೆಲೆ ಹೇಳುವುದು, ಕಮ್ಮಿ ಪದಾರ್ಥ ಕೊಡುವುದು ಹೀಗೆ ಮಾಡಿ ಜಾಸ್ತಿ ದುಡ್ಡು ಲಪಟಾಯಿಸುತ್ತಿದ್ದ. ಆ ದುಡ್ಡನ್ನು ಅವನಮ್ಮನ ಕೈಗೆ ಕೊಡದೇ ತನ್ನ ಜೇಬಿಗಿಳಿಸುತ್ತಿದ್ದ ಎಂದು ಬೇರೆ ಪ್ರತ್ಯೇಕ ಹೇಳಬೇಕಿಲ್ಲ. ಮಗ ಸಣ್ಣವನು ಎಂದೇನಾದರು ಅವನು ಮೋಸ ಮಾಡಿರಬಹುದೆಂದೇ ಅಮ್ಮ ಕೇಳಿದ್ದು ಯಾರಿದ್ದರು ಅಂಗಡೀಲಿ ಅಂತ.

"ರಾಜನೇ ಇದ್ದ ಕಣಮ್ಮ"

"ಓಹೊ... ಈಗ ಗೊತ್ತಾಯಿತು, ಹುಡುಗ ಸಣ್ಣವನು ಏನೂ ತಿಳಿಯೋಲ್ಲ ಅಂತ ಕಮ್ಮಿ ಪದಾರ್ಥ ಕೊಟ್ಟು ಕಳಿಸಿದಾನೆ. ಇವನನ್ನ ಹೀಗೆ ಬಿಟ್ರೆ ಸರಿ ಇರಲ್ಲ, ಅವನಮ್ಮನಿಗೆ ಹೇಳಿ ಮಾಡಿಸ್ತೀನಿ ತಕ್ಕಶಾಸ್ತಿ" ಅಂತ ಹೇಳುತ್ತಾ, ಅಂಗಡಿಗೆ ಹೋಗಲು ಚೆನ್ನಾಗಿರುವ ಸೀರೆ ಸುತ್ತಿಕೊಳ್ಳಲು ಶುರು ಮಾಡೇ ಬಿಟ್ಟಳು.

ರಾಹುಲನಿಗೆ ಮೈಯೆಲ್ಲಾ ಬೆವರಲು ಶುರುವಾಯಿತು. ಕೈಕಾಲೆಲ್ಲ ನಡುಕ. ಇದನ್ನವನು ನೀರೀಕ್ಷಿಸಿರಲಿಲ್ಲ. ಅಂಗಡಿಯವನು ಮೋಸ ಮಾಡಿದ ಅಂತ ಸ್ವಲ್ಪ ಹೊತ್ತು ಬೈದು ಸುಮ್ಮನಾಗಬಹುದು ಎಂದುಕೊಂಡಿದ್ದ. ಆದರೆ ಅವನಿಗೆ ಹೋಗಿ ಬೈದೇ ಬಿಡ್ತೀನಿ ಅಂತ ಯಾವಾಗ ಸೀರೆ ಉಡಲು ಶುರು ಮಾಡಿದಳೋ ಇವನಿಗೆ ಪೇಚಾಟಕ್ಕಿಟ್ಟುಕೊಂಡಿತು. ಅಲ್ಲಿಗೆ ಹೋದರೆ ನಿಜ ತಿಳಿಯುತ್ತೆ, ತನ್ನ ಬಣ್ಣ ಬಯಲಾಗುತ್ತೆ ಅಂತ.

ಆದದ್ದಿಷ್ಟೆ. ಒಂದು ರೂಪಾಯಿಗೆ 4 ಟೊಮ್ಯಾಟೋ ಹಣ್ಣು ಬರುತ್ತೆ ಅಂತ ರಾಹುಲನಿಗೆ ಗೊತ್ತಿರಲಿಲ್ಲ. ಕುಣಿದುಕೊಂಡು ಅಂಗಡಿಗೆ ಹೊರಟ. ತರಕಾರಿ ಅಂಗಡಿಗೆ ಸ್ವಲ್ಪ ಮುಂಚೆ ಅದಕ್ಕೆ ಹೊಂದಿಕೊಂಡಂತೆ ಸಣ್ಣ ಪೆಟ್ಟಿಗೆ ಅಂಗಡಿ. ಪಾನ್ ಪರಾಗ್ ಚೀಟಿಗಳನ್ನು ಇಳಿಬಿಟ್ಟಿರುತ್ತಿದ್ದ ಆ ಅಂಗಡಿಯಲ್ಲಿ ಸಣ್ಣ ಪುಟ್ಟ ಪದಾರ್ಥಗಳಾದ ಬೀಡಿ, ಸಿಗರೇಟು, ವೀಳ್ಯದೆಲೆ, ಅಡಿಕೆ, ಸುಣ್ಣ, ಬಾಳೆಹಣ್ಣು ಇಟ್ಟುಕೊಂಡಿರುತ್ತಿದ್ದರು. ರಾಹುಲನಿಗೆ ಅಲ್ಲಿಯ ಆಕರ್ಷಣೆ ಗಾಜಿನ ಬಾಟಲಿಗಳಲ್ಲಿ ತುಂಬಿಸಿಟ್ಟಿರುತ್ತಿದ್ದ ತರಾವರಿ ಮಿಠಾಯಿಗಳು. ಹಾಲುಖೋವ, ಶೇಂಗಾ ಮಿಠಾಯಿ, ಅಜ್ಜಿ ಕೂದಲು, ಆರೆಂಜ್ ಪೆಪ್ಪರಮೆಂಟು ಇನ್ನು ಮುಂತಾದುವು.

ಬಾಯಲ್ಲಿಟ್ಟ ಕೂಡಲೇ ಕರಗುತ್ತಿದ್ದ ಹಾಲುಖೋವ ಎಂದರೆ ರಾಹುಲನಿಗೆ ಭಾರಿ ಇಷ್ಟ. 25 ಪೈಸೆಗೆ 3-4 ಖೋವ ಬರುತ್ತಿತ್ತು. ಸ್ವತಂತ್ರ ದಿನಾಚರಣೆಯಂದು ಶಾಲೆಯಲ್ಲಿ ಬಾವುಟ ಹಾರಿಸಿ, ಲಾಡು ತಿಂದು, ಪ್ರೊಸೆಶನ್ ಮುಗಿಸಿಕೊಂಡು ಗೆಳೆಯ ಚಂದ್ರು ಜೊತೆ ಬರುವಾಗ ಚಂದ್ರುನೇ ಇವನಿಗೆ ಹಾಲುಖೋವದ ರುಚಿ ತೋರಿಸಿದ್ದು. ಅದನ್ನು ತಿಂದು ಬಂದು ಮನೆಯಲ್ಲಿ ಬೈಸಿಕೊಂಡದ್ದೂ ಆಗಿತ್ತು. "ಊರಿನ ತುಂಬ ಕಾಲರ, ಟೈಫಾಯಡ್ ಇನ್ನು ಏನೇನೇನೋ ಇರುವಾಗ ಆಚೆ ಕಡೆ ತಿನ್ನಬೇಡ ಅಂತ ಹೇಳಿರಲಿಲ್ಲವ" ಅಂತ ಪಾಪ ಹೊಡೆದೇ ಬಿಟ್ಟಿದರು ಇವನಮ್ಮ. ಆದರು ರುಚಿಯಾದ ಹಾಲುಖೋವವನ್ನು ಮತ್ತೊಮ್ಮೆ ಯಾವಾಗಾದರು ತಿನ್ನಬೇಕೆಂದುಕೊಂಡಿದ್ದ.

ಇವತ್ತಂತು ಬಾಯಲ್ಲಿ ನೀರು ಬಂದೇ ಬಿಟ್ಟಿತ್ತು. ಏನಾದರಾಗಲಿ ತಿಂದೇ ಬಿಡೋಣ ಎಂದೆಣಿಸಿ ರಾಹುಲ್ 25 ಪೈಸೆ ಕೊಟ್ಟು ಖೋವ ಗುಳುಂ ಮಾಡಿ ಮಿಕ್ಕ 75 ಪೈಸೆಯಲ್ಲಿ 3 ಟೊಮೇಟೋ ಹಣ್ಣುಗಳನ್ನು ತಗೊಂಡು ಬಂದ. ಈಗ ನೋಡಿದರೆ ಅಮ್ಮ ಅಂಗಡಿಗೆ ಹೊರಟು ನಿಂತಿದ್ದಾಳೆ. ಅಲ್ಲಿಗೆ ಹೋದರೆ ತನ್ನ ಸಂಗತಿ ತಿಳಿದೇ ತಿಳಿಯುತ್ತದೆ. ನಿಮ್ಮ ಹುಡುಗನೇ 75 ಪೈಸೆ ಕೊಟ್ಟದ್ದು ಅದಕ್ಕೆ ನಾನು 3 ಹಣ್ಣು ಕೊಟ್ಟೆ ಎಂದು ರಾಜ ಹೇಳೇ ಹೇಳುತ್ತಾನೆ. ಅಲ್ಲಿಂದ ಅಮ್ಮ ವಾಪಸ್ ಬಂದ ಮೇಲೆ ನನ್ನ ಮೈಮೇಲೆ ಬಾಸುಂಡೆ ಗ್ಯಾರಂಟಿ. ಹಾಲುಖೋವ ತಿಂದಿದ್ದಕ್ಕೆ ಅಲ್ಲವಾದರು, ಅಂಗಡಿಯವನ ಮೇಲೆ ಸುಳ್ಳು ಆರೋಪ ಹೊರಿಸಿದ್ದಕ್ಕಾದರು ಅಮ್ಮ ಹೊಡೆದೇ ಹೊಡೆಯುತ್ತಾಳೆ. ಸದ್ಯಕ್ಕೆ ಅಮ್ಮ ಅಲ್ಲಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದೆಣಿಸಿ ನಿಧಾನಕ್ಕೆ ಬಾಯಿ ಬಿಟ್ಟ.

ಒಂದೊಂದೇ ಅಕ್ಷರಗಳನ್ನು ರಾಗವಾಗಿ ಹೇಳುತ್ತಾ "ಅಮ್ಮಾ, ನಾ ತಿಂದೆ ... ಅದು ... ಅದು ಹಣ್ಣು ತಗೊಳಕ್ಕೇಂತ" ಅವನ ಮಾತಿನ್ನು ಮುಗಿದೇ ಇರಲಿಲ್ಲ ಅಷ್ಟರಲ್ಲೆ ಅವನಮ್ಮ ತಾನೆ ಏನೇನೋ ಊಹಿಸಿಕೊಂಡು ಹೀಗೆ ಹೇಳಿದಳು.

"ಒಹ್! ಹೌದಾ ಮಗನೇ, ಮತ್ತೊಂದು ಹಣ್ಣನ್ನು ನೀನು ತಿಂದುಕೊಂಡು ಬಂದ್ಯಾ? ಮತ್ಯಾಕೆ ಮುಂಚೆನೆ ಹೇಳಲಿಲ್ಲ? ಸುಮ್ಮನೆ ಅಂಗಡಿಯವನಿಗೆ ಬೈಯಬೇಕಾಗ್ತಿತ್ತು. ಸದ್ಯ ಈಗ ಆದ್ರು ಹೇಳಿದ್ಯಲ್ಲ. ಅದಿರಲಿ, ಹಣ್ಣನ್ನು ತೊಳೀದೇ ತಿಂದ್ಯಾ? ಮನೆಗೆ ಬಂದು ತೊಳೆದು ತಿನ್ನಕ್ಕೆ ಏನು ಧಾಡಿ ನಿಂಗೆ. ಊರ ತುಂಬ ಕಾಲರ ಅದಕ್ಕೆ ಹೊರಗಡೇದು ಏನು ತಿನ್ಬೇಡಾಂತ ಹೇಳೋದು ನಾನು" ಇನ್ನು ಏನೇನೋ ಗೊಣಗಿಕೊಂಡು ಮನೆ ಸೀರೆಗೆ ಬದಲಿಸಿ ಅಡುಗೆ ಮನೆಗೆ ಹೊರಟೋದಳು ಅಮ್ಮ.

ಬದುಕಿದೆಯಾ ಬಡಜೀವವೇ ಅಂತ ರಾಹುಲ್ ಪುಸ್ತಕ ಹಿಡಿದು ಕೂತ. ಅಮ್ಮ ಪಾಪ ನನ್ನ ಒಳ್ಳೇದಕ್ಕೆ ಅಲ್ಲವ ಹೇಳೋದು. ಖಾಯಿಲೆ ಬರಬಾರ್ದು ಅಂತನೇ ಅಲ್ವ ಹೊರಗಡೆ ತಿನ್ನೋದು ಬೇಡಾನ್ನೋದು ಅಂತ ಅಂದುಕೊಳ್ಳುತ್ತ ಮಳ್ಳನಂತೆ ಕೂತ. ಕೊನೆಗೂ ರಾಹುಲ್ ತಿಂದದ್ದು ಟೊಮೇಟೋ ಅಲ್ಲ ಹಾಲುಖೋವ ಅಂತ ಅವನಮ್ಮನಿಗೆ ಗೊತ್ತೇ ಆಗಲಿಲ್ಲ. ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಾಗಿಬಿಟ್ಟಳಾ ? ಗೊತ್ತಿಲ್ಲ.

ಮೀನು ಸಾಕಣೆ : ಇದೇ ಲೇಖಕಿಯ ಒಂದು ಸ್ವಾನುಭವ ಕಥನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X