ಹೊಂಬೆಳಕ ಹೊನಲು ಸೂಸುವ ಏಪ್ರಿಲ್

* ಸವಿತಾ ರವಿಶಂಕರ್, ಉತ್ತರ ಕೆರೋಲಿನಾ
ಟ್ಯೂಲಿಪ್ ಹೂಗಳ ಬಣ್ಣದ ಗುಂಪು
ಸೊಗಸು ಉಲ್ಲಾಸ ಹರುಷದ ಕಂಪು
ಚಿಲಿಪಿಲಿ ಹಾಡು ಜಿಟಿಪಿಟಿ ಮಳೆಯು
ಹಾರುವ ಚಿಟ್ಟೆ ಗಾಳಿಯು ತಿಳಿಯು
ಬಾತಿನ ಮರಿಗಳು ಹಾಕುತ ಕೇಕೆ
ಪಟಪಟ ಬಡಿದವು ಖುಶಿಯಲಿ ರೆಕ್ಕೆ
ವಾರದ ಮಟ್ಟಿಗೆ ಶಾಲೆಗೆ ರಜೆಯು
ಮಕ್ಕಳ ಸಂಭ್ರಮ ಮೀರಿತು ಮಿತಿಯು
ಉಯ್ಯಾಲೆ ಜೋಕಾಲೆ ಜಾರುವ ಸ್ಲೈಡು
ಈಸ್ಟರ್ ಎಗ್ಗಿನ ಹಂಟಿಗೆ ದೌಡು
ಹರೆಯದ ಸಂಭ್ರಮ ಮುಟ್ಟಿತು ಮುಗಿಲು
ಎಳೆಬಿಸಿಲಲಿ ಮೈ ಕಾಯಿಸಿ ಒಡ್ಡಲು
ಪೆಟ್ಟಿಗೆ ಸೇರಿತು ಜಾಕೆಟ್ಟು ಬೂಟು
ಬೆಳಕನು ಕಂಡಿತು ಬಿಕಿನಿ ಸೂಟು
ಝಾಡಿಸಿ ಗುಡಿಸಿ ಸಾರಿಸಿ ಒರಸಿ
ಬೇಡದ ವಸ್ತುವ ಹೆಕ್ಕುತ ಆರಿಸಿ
ಗಂಟನು ಕಟ್ಟಲು ಉರುಳಿತು ಮೂಟೆ
ವರುಷದ ಧೂಳಿನ ಕ್ಲೀನಿಂಗ್ ಭರಾಟೆ
ಮೆತ್ತನೆ ಹಸಿರಿನ ಹಾಸಿನ ಹುಲ್ಲು
ವಸಂತ ಹಾಸಿದ ಆಹ್ ಮಕಮಲ್ಲು
ಮರದಲೂ ರಂಗಿನ ರಾಗದ ಗುಲ್ಲು
ಬಾನಲಿ ಮೂಡಿತು ಕಾಮನ ಬಿಲ್ಲು












Click it and Unblock the Notifications