ಸರಳ-ಸಹಜ-ಸುಂದರ
ಜಯರಾಮ ಕೆ. ಉಡುಪ, ಆಡುಬಾನ್, ಪೆನ್ಸಿಲ್ವೇನಿಯಾ
ಎಲ್ಲೊ ಇರುವೆ ಇಲ್ಲದಿರುವೆ ರಚಿಸಿ ಆಡಿಸಿರುವೆ,
ಇಲ್ಲಿ ಕರೆಯ ನೀಡಿ ನರನ ಮತಿಯ ಕೆಣಕುತಿರುವೆ.
ಅಲರ ಅಂದ ವರ್ಣ ಗಂಧ ಮನಕೆ ಕೊಡುವ ಮುದಕೆ;
ಮಲರ ಮೊಗ್ಗು ರೂಪು ತರುವ ಉತ್ಸವ ಸಡಗರಕೆ;
ಹಸಿರ ತೊಡಿಸಿ ಹೂವ ಮುಡಿಸಿ ಗಂಧಾಕ್ಷತೆ ಇರಿಸಿ,
ಮಧುರಮಾಸ ತೋರಿಸಿರುವ ಉತ್ಸವಿಸುವ ಕ್ರಮಕೆ;
ಯಾವ ನರ ಪ್ರಯತ್ನ ಸಾಟಿ ಪ್ರಕೃತಿ ತತ್ತ್ವ ರೀತಿಗೆ,
ಕಾವ ನೀನು ಕಾಣಿಸಿರುವ ಸರಳ ಸೊಗದ ಸೊಬಗಿಗೆ?
ಕಳಿತ ಹಣ್ಣು ಬಿತ್ತ ರಸವ ಪೌಷ್ಟಿಕತೆಯ ತುಳುಕಿಸೆ;
ಎಳೆಯ ಹಸುರುವಾಣಿ ರುಚಿರ ತಿನಸು ಸ್ವಾಸ್ಥ್ಯ ಒದಗಿಸೆ;
ಇಳೆಯು ಅನ್ನ ವಸ್ತ್ರ ಶುಚಿಯ ಉದಕ ಎಲರ ಭರಿಸಿ,
ಉಳಿಸಿ, ವಿಕಸಗೊಳಿಸಿ ಶಾಂತ ಜೀವಿತವನು ಕಲಿಸೆ;
ಆವ ಮನುಜ ಯತ್ನ ಎಣೆ ನಿಸರ್ಗದಾಟ ನಿಯಮಕೆ,
ಕಾವ ನೀನು ತೋರಿಸಿರುವ ವಿಜ್ಞಾನದ ಪಾಟಕೆ?
ಬೆಟ್ಟ ಶೃಂಗ ವನರಾಜಿಯ ಗಾಂಭೀರ್ಯಕೆ ಬೆಡಗಿಗೆ;
ವೃಷ್ಟಿ ಮಿಂಚು ಸಿಡಿಲು ಮಿಡಿವ ಸಮ್ಮೋದಕೆ ಸೊಗಡಿಗೆ;
ಮಲೆ ಮಾರುತ ವನಗಳಿರಿಸಿ ವಾಯುಗುಣ ನಿಯಂತ್ರಿಸಿ,
ಮಳೆ ಕಾವನು ಹೊಳೆ ಬೆಳಕನು ಭುವಿಯು ಈವ ರೀತಿಗೆ;
ಆವ ಮಾನವನ ಪ್ರಯತ್ನ ಈಡು ಪ್ರಕೃತಿ ರೂಢಿಗೆ,
ಪೊರೆವ ನೀನು ಯೋಜಿಸಿರುವ ಸಹಜ ಸೂತ್ರ ನೀತಿಗೆ?
ಜಲದ ಪಾತ ಓಘ ಜುಳುಳು ಜಲಖೇಲನದಾಟಕೆ;
ಜಲಧಿಯುಲಿತ ಅಲೆಗಳುರುಳು ಘನ ಶಾಂತತೆ ಮಾಟಕೆ;
ಮಲವ ತೊಳೆದು ಕೊಳೆಗಳಳಿಸಿ ಜೀವರಕ್ತವೆನಿಸಿ,
ಜಲದೇವತೆ ಮರುಬಳಕೆಯ ತೋರಿಸಿರುವ ಬಗೆಗೆ;
ಯಾವ ಮರ್ತ್ಯ ಸಾಧನೆಗಳು ಸದೃಶ ಪ್ರಕೃತಿ ಗತಿಗೆ,
ಕಾಯ್ವ ನೀನು ಯಂತ್ರಿಸಿರುವ ಪರಿಷ್ಕರಣ ಕ್ರಿಯೆಗೆ?
ತಾನು ಎದುರಿಸಿರುವ ತೊಡಕ ಬಿಡಿಸಿ ಬಹಳ ಸಾಧಿಸೆ,
ತನ್ನ ಯುಕ್ತಿ ಶಕ್ತಿ ಮನುಜ ಅಮಿತವೆಂದು ಭ್ರಮಿಸೆ;
ನೀನು ಎಸೆವ ಕರೆಗಳನ್ನು ಪರಿಹರಿಸಲು ಶ್ರಮಿಸೆ,
ನಿನ್ನ ಶಕ್ತಿ ಎದುರು ಮರ್ತ್ಯ ಸಮರ ವಿಫಲವೆನಿಸೆ;
ನರನು ಅರಿತು ಬಾಳಬೇಕು ಪ್ರಕೃತಿಭಾವ ಸಮತೆ,
ಸರಳ ಸಹಜ ಸೌಂದರ್ಯವ ರಚಿಸುವುದರ ಕಠಿನತೆ!












Click it and Unblock the Notifications