ಹಂ. ಕ. ರಾಮಪ್ರಿಯನ್, ಕ್ಲಾರ್ಕ್ಸ್‌ವಿಲ್, ಮೇರಿಲೆಂಡ್
ಕೋಣನ ಮುಂದೆ ಕಿಂದರಿ ಬಾರಿಸಿದಂತೆ

- ಹಂ. ಕ. ರಾಮಪ್ರಿಯನ್, ಕ್ಲಾರ್ಕ್ಸ್‌ವಿಲ್, ಮೇರಿಲೆಂಡ್
[email protected]
ಕೊಳಲನು ಗೋವಳ ನುಡಿಸುತಲಿರೆ ಹಸು ಕೇಳುತ ಮೇವನು ಮರೆಯುವುದು;
ಒಡೆಯನು ಪುಂಗಿಯನೂದಲು ಸರ್ಪವು ಹೆಡೆಯನ್ನೆತ್ತುತ ಕುಣಿಯುವುದು;
ಕೋಣದ ಮುಂಗಡೆ ಕಿಂದರಿ ಬಾರಿಸೆ ಜಾಣತನವನದು ತೋರುವುದೇ?
ಕಾಲಕಾಲದಲಿ ನೀರು ಬೀಳುತಿರೆ ಬಿತ್ತಿಹ ಬೀಜವು ಮೊಳೆಯುವುದು;
ನೀರಿಂ ಮಣ್ಣಿನ ಸಾರವ ಹೀರುತ ಗಿಡ ಮರವಾಗುತ ಬೆಳೆಯುವುದು;
ಶಿಶಿರದಿ ನಿದ್ರಿಪ ಮರದಲ್ಲೆಲೆಗಳು ವಸಂತ ಬಂದೊಡೆ ಚಿಗುರುವುವು;
ಪಾತಿಗೆ ದಿನದಿನ ನೀರನು ಸುರಿದರೆ ಸತ್ತಿಹ ಮರವದು ಚಿಗುರುವುದೇ?
ಸೈಕ್‌ಲ್ ಗಂಟೆಯ ಕೇಳಿ ಅಳಿಲುಗಳು ಮರವನ್ನೋಡುತ ಹತ್ತುವುವು;
ಕಾರನು ದೂರದಿ ನೋಡಿಯೆ ಮೇಕೆಯು ಭರದಲಿ ಪಕ್ಕಕ್ಕೋಡುವುದು;
ಬಸ್ಸು ಬರುತ್ತಿಹ ಸದ್ದಿಂ ಜಿಂಕೆಯು ಬೇಗ ಪಲಾಯನ ಮಾಡುವುದು;
ಲಾರಿಯ ಹಾರ್ನಿನ ಶಬ್ದಕ್ಕಂಜುತ ಎಮ್ಮೆಯು ಪಕ್ಕಕೆ ಜರುಗುವುದೇ?
ಅಜ್ಜಿಯ ಮೆಲುದನಿ ಕೇಳಿಯೆ ಅಜ್ಜನು ಮಜ್ಜನ ಮಾಡಲು ಏಳುವನು;
ಅಲಾರ್ಮು ಹೊಡೆದೊಡೆ ಕೇಳುತಲಪ್ಪನು ಕೆಲಸಕೆ ಹೋಗಲು ಏಳುವನು;
ಸದ್ದೇ ಇಲ್ಲದೆ ಹೋದರು ಎಳೆಮಗು ಹಸಿವಿಂದಲೆ ತಾನೇಳುವುದು;
ಕಿವಿಯಲಿ ಜಾಗಟೆ ಬಾರಿಸೆ ಜಡಮಗ ಶಾಲೆಗೆ ಹೋಗಲು ಏಳುವನೇ?
ಅರಿತಿಹ ಪಂಡಿತನೊಮ್ಮೆ ಹೇಳಿದುದ ವಿಮರ್ಶೆಮಾಡುತಲರಿಯುವನು;
ಅರಿತುದ ಮರೆತವ ಬಿಡಿಸಿ ಹೇಳಿದುದ ಕೇಳುತ ನೆನೆಪಿಗೆ ತರಿಸುವನು;
ಅರಿವಿಲ್ಲೆಂಬುದನರಿತವ ಪೇಳ್ದುದ ಗಮನವನೀಯುತ ಕಲಿಯುವನು;
ಬಾರಿ ಬಾರಿ ನೀ ಸಾರಿ ಹೇಳುತಿರೆ ಗರುವಿತ ಮೂರ್ಖನು ಕೇಳುವನೇ?











Click it and Unblock the Notifications