ಸೀರೆ-ಒಡವೆ ಬೇಡವೆಂದಳು ಭಾವಿ ಸೊಸೆ!
ವಿಮಾನ ಮುಂಜಾನೆಗಿಂತ ಮುಂಚೆಯೇ ಬೆಂಗಳೂರಿನಲ್ಲಿ ಬಂದಿಳಿಯಿತು. ಅನು ಮತ್ತು ದೀಪಕರನ್ನು ನೆಂಟರಿಷ್ಟರು ಮುತ್ತಿಬಿಟ್ಟರು. ಅನೂಳ ಪೋಷಕರು, ಅಕ್ಕ, ಭಾವ, ಚಿಕ್ಕಮ್ಮ-ದೊಡ್ಡಮ್ಮ, ಚಿಕ್ಕಪ್ಪ-ದೊಡ್ಡಪ್ಪ, ಅತ್ತೆ-ಮಾವಂದಿರು, ದಾಯಾದಿ ಸೋದರ ಸೋದರಿಯರು; ಎಲ್ಲರೂ ಅಲ್ಲಿದ್ದರು.
ಹಾಗೆಯೇ ದೀಪಕ್‌ನ ಪೋಷಕರು ಮತ್ತು ಆತನ ಅನೇಕ ನೆಂಟರು ಸಹ ಬಂದಿದ್ದರು. ಆ ನೆಂಟರಲ್ಲಿ ಬಹಳಷ್ಟು ಜನ ದೀಪಕ್ ಕೊನೆಗೂ ಆರಿಸಿರುವ ಹೆಣ್ಣು ಹೇಗಿದ್ದಾಳೋ ಎಂದು ನೋಡುವ ಕುತೂಹಲ ಮತ್ತು ಕಾತರದಿಂದಲೇ ಬಂದಿದ್ದರು. ಮುವ್ವತ್ತೆರಡರ ವಯಸ್ಸು ಮದುವೆಯ ವಯಸ್ಸನ್ನು ಸ್ವಲ್ಪ ಮೀರಿದ್ದುದರಿಂದ, ಅನೂಳ ಪೋಷಕರು ಸಹ ದೀಪಕ್‌ನನ್ನು ಭೇಟಿಯಾಗಲು ಅವರಷ್ಟೇ ಕಾತರರಾಗಿದ್ದರು.
ಒಬ್ಬರಿಗೊಬ್ಬರ ಔಪಚಾರಿಕ ಪರಿಚಯಗಳಾಗುವಷ್ಟರಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಮೀರಿಬಿಟ್ಟಿತ್ತು. ಎಲ್ಲರಿಗೂ ಸರಿಯಾಗಿ ನಿದ್ದೆಯಿಲ್ಲದೆ ಸುಸ್ತಾಗಿದ್ದರು. ಅನೂಳ ಕುಟುಂಬದವರನ್ನು ಬೆಳಗಿನ ಉಪಾಹಾರಕ್ಕೆ ನೇರವಾಗಿ ತಮ್ಮ ಮನೆಗೇ ಬರಲು ದೀಪಕ್‌ನ ಪೋಷಕರು ಒತ್ತಾಯಿಸಿದಾಗ ದೀಪಕ್ ಮಧ್ಯಪ್ರವೇಶಿಸಿ ಹೇಳಿದ, 'ಮಾಮ್, ನಾವೆಲ್ಲರು ಸುಸ್ತಾಗಿದ್ದೇವೆ. ಎಲ್ಲರಿಗೂ ನಿದ್ದೆ ಬೇಕು. ನಾಳೆ ಮಧ್ಯಾಹ್ನಕ್ಕೊ, ರಾತ್ರಿಗೊ ಊಟಕ್ಕೆ ಭೇಟಿಯಾದರೆ ಹೇಗೆ?""
ದೀಪಕ್ ಇಲ್ಲಿನ ಸ್ಥಿತಿಯನ್ನು ಮರೆತುಬಿಟ್ಟಿದ್ದಾನೆ. ಭಾರತದಲ್ಲಿ ಬೆಳಗ್ಗೆ 8 ಅಥವ 9 ಗಂಟೆಯ ತನಕ ಮಲಗುವ ಲಕ್ಷುರಿ ಯಾರಿಗೂ ಇಲ್ಲ. ಹಾಲಿನವನು, ಕೆಲಸದವರು, ತರಕಾರಿ ಮಾರುವವರು, ಹೀಗೆ ಎಲ್ಲರು ಬೆಳಗ್ಗೆ 6 ಗಂಟೆಗೇ ಮನೆಯ ಕರೆಗಂಟೆ ಬಾರಿಸಲು ಪ್ರಾರಂಭಿಸಿಬಿಡುತ್ತಾರೆ.
''ಹಾಗಾದರೆ ಸರಿ ಮತ್ತೆ,"" ಅವನಮ್ಮ ನುಡಿದರು. ''ದಯವಿಟ್ಟು ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಬಂದುಬಿಡಿ."" ಅಲ್ಲಿಗೆ ಅದು ತೀರ್ಮಾನವಾಯಿತು. ಎಲ್ಲರೂ ಅವರವರ ದಾರಿ ಹಿಡಿದುಕೊಂಡು ಹೊರಟರು.
ಅನೂಳ ಕುಟುಂಬದವರಂತೂ ದೀಪಕ್‌ನ ರೂಪ ಮತ್ತು ನಡತೆಯನ್ನು ನೋಡಿ ಬಹಳವೇ ಪ್ರಭಾವಿತರಾಗಿಬಿಟ್ಟಿದ್ದರು. ಅವಳ ಚಿಕ್ಕಮ್ಮನ ಮಗಳಾದ, 19ರ ಹರೆಯದ ಆರತಿಯಂತೂ ಆತನನ್ನು ನೋಡಿ ಗರಬಡಿದವಳಂತಾಗಿಬಿಟ್ಟಿದ್ದಳು. ''ಅನು, ಅವರು ಒಳ್ಳೆ ಮೂವಿ ಸ್ಟಾರ್ ತರಹ ಕಾಣಿಸುತ್ತಾರೆ ಎಂದು ನನಗೆ ಹೇಳಿರಲೇ ಇಲ್ಲ ನೀನು. ಅವರು ನಿನ್ನತ್ತ ನೋಡುವ ರೀತಿಯಿಂದಲೆ ಅವರು ನಿನ್ನನ್ನು ಬಹಳ ಪ್ರೀತಿಸುತ್ತಾರೆ ಎಂದು ನಾನು ಹೇಳಬಲ್ಲೆ.""
ಅನು ಸುಮ್ಮನೆ ಮುಗುಳ್ನಕ್ಕಳು. ಕೇವಲ ಹತ್ತೇ ನಿಮಿಷದಲ್ಲಿ ಅದು ಹೇಗೆ ದೀಪಕ್ ಎಲ್ಲರನ್ನೂ ಪ್ರಭಾವಿಸಿಬಿಟ್ಟಿದ್ದಾನೆ ಎನ್ನುವುದು ತುಂಬಾ ಅಸಕ್ತಿಕರ ವಿಷಯ ಎಂದುಕೊಂಡಳು. ''ಅರತಿ, ನಾನು 19 ವರ್ಷದವಳಿದ್ದಾಗ ನಿನ್ನ ತರಹವೆ ಯೋಚನೆ ಮಾಡುತ್ತಿದ್ದೆ. ಆದರೆ ವಯಸ್ಸಾಗುತ್ತಿದ್ದಂತೆ, ನಮ್ಮ ಕಾಲ ಮೇಲೆ ನಾವು ನಿಲ್ಲುತ್ತಿದ್ದಂತೆ, ನಾವು ಕಲ್ಪಿಸಿಕೊಳ್ಳುತ್ತಿದ್ದ ಭ್ರಮಾ ಪ್ರಪಂಚವೂ ಮಾಯವಾಗುತ್ತಾ ಹೋಗುತ್ತದೆ.""
''ನೀನು ಏನು ಹೇಳುತ್ತಿದ್ದೀಯೊ ಅದನ್ನು ನಾನು ಕೇರ್ ಮಾಡುವುದಿಲ್ಲ"", ಅನೂಳ ಅಮ್ಮ ಮಧ್ಯಪ್ರವೇಶಿಸಿ ನುಡಿದರು. ''ಅ ಹುಡುಗ ಬಹಳ ಸುಂದರವಾಗಿದ್ದಾನೆ, ಜೊತೆಗೆ ಒಳ್ಳೆಯವನ ತರಹ ಸಹ ಕಾಣಿಸುತ್ತಾನೆ. ಆತ ಎಲ್ಲಿಯ ತನಕ ನಿನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾನೊ ಅಲ್ಲಿಯ ತನಕ ಬೇರೇನೂ ಮುಖ್ಯವಲ್ಲ. ನೀನು ಸಂತೋಷವಾಗಿರುವುದರಿಂದ ನಮಗೆಲ್ಲ ಎಷ್ಟು ಖುಷಿಯಾಗಿದೆ, ಗೊತ್ತಾ?"".
''ಅವರು ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ನಾನು ಇಷ್ಟಪಡದ ಕೆಲವು ಗುಣಗಳು ಅವರಲ್ಲಿವೆ. ಆದರೆ ಈಗಾಗಲೆ ನಾನು ಕೆಲವೊಂದು ವಿಷಯಗಳಲ್ಲಿ ರಾಜಿ ಮಾಡಿಕೊಂಡಿದ್ದೇನೆ.""
''ಹ್ಞುಂ, ಯಾರೂ ಪರಿಪೂರ್ಣರಲ್ಲ,"" ಅವಳ ತಾಯಿ ಮುಂದುವರಿಸಿದರು. ''ಪ್ರತಿಯೊಬ್ಬರು ಕೆಲವು ಅಡ್ಜಸ್ಟ್‌ಮೆಂಟ್ಸ್ ಮಾಡಿಕೊಳ್ಳಬೇಕು. ಹಾಗೂ, ಆಗಿನ ಸಂದರ್ಭದಲ್ಲಿ ಏನು ಒಳ್ಳೆಯದೊ ಅದನ್ನು ಸಾಧಿಸಲು ಪ್ರಯತ್ನಿಸಬೇಕು.""
ಅವಳ ಅಪ್ಪ ಮತ್ತು ಅಕ್ಕ ಮೌನವಾಗಿದ್ದಂತೆ ಕಂಡಿತು. ''ನನಗೆ ಊರಿಗೆ ವಾಪಸು ಬಂದಿದ್ದಕ್ಕೆ ತುಂಬಾ ಸಂತೋಷವಾಗುತ್ತಿದ್ದೆ."" ಅನು ಅವರಿಗೆ ಹೇಳಿದಳು. ''ನಿಮ್ಮ ಜೊತೆ ಇರುವುದಕ್ಕೆ ಎಷ್ಟೊಂದು ಖುಷಿಯಾಗುತ್ತಿದೆ. ನಾನು ಅಮೇರಿಕದಲ್ಲಿ ಎಷ್ಟು ವರ್ಷಗಳ ಕಾಲ ಇದ್ದರೂ ಅದು ನನಗೆ ನನ್ನ ಮನೆಯಾಗುವುದಿಲ್ಲ ಎಂದು ನನಗೆ ಗೊತ್ತು. ನಾನು ನಿಮ್ಮೆಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ"".
''ನೀವಿಬ್ಬರೂ ಇಲ್ಲಿಗೇ ಬಂದುಬಿಡುವುದರ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?"" ಅವಳಕ್ಕ ವಿಚಾರಿಸಿದಳು. ''ಇಲ್ಲ. ನಾವಿಬ್ಬರೂ ಇನ್ನು ಮಾತನಾಡಿಲ್ಲದ ವಿಷಯಗಳು ಬಹಳ ಇವೆ. ಅದು ಏಕೊ, ನಾನು ದೀಪಕ್‌ನನ್ನು ಏನಾದರೂ ಕೇಳಬೇಕು ಎಂದುಕೊಂಡಾಗಲೆಲ್ಲ ಬಾಯಿ ಕಟ್ಟಿದಂತಾಗಿ ಬಿಡುತ್ತದೆ. ಈಗಲೂ ಸಹ ಆತನೇ ಪ್ರಭಾವಶಾಲಿ ಎನಿಸುತ್ತದೆ. ಅವನೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡುಬಿಡುತ್ತಾನೆ. ಎಲ್ಲವನ್ನು ತೀರ್ಮಾನಿಸಿಬಿಡುತ್ತಾನೆ. ನಾನು ಸುಮ್ಮನೆ ಹ್ಞೂಂಗುಟ್ಟುತ್ತೇನೆ ಎಂದು ಆಗಾಗ ನನಗೇ ಅನಿಸುತ್ತದೆ"".
''ಆದರೆ ಅದು ನಿನ್ನ ಸ್ವಭಾವ ಅಲ್ಲವೇ ಅಲ್ಲವಲ್ಲ, ಅನು?"" ನೀತು ನುಡಿದಳು.
""ಅವರು ಬಹಳ ಸುಂದರವಾಗಿದ್ದಾರೆ,"" ಆರತಿ ಮಧ್ಯೆ ಬಾಯಿ ಹಾಕಿದಳು. ''ಅವರನ್ನು ನೋಡಿದಾಕ್ಷಣ ಅವಳಿಗೆ ಎಲ್ಲ ಪ್ರಶ್ನೆಗಳು ಮರೆತುಹೋಗಿಬಿಡುತ್ತವೆ ಎನ್ನಿಸುತ್ತೆ ನನಗೆ."" ಎಲ್ಲರೂ ಆ ಮಾತಿಗೆ ನಕ್ಕರು. ಎಲ್ಲರಿಗೂ ಸುಸ್ತಾಗಿದ್ದಿದ್ದರಿಂದ ಅನು ಆ ಮಾತನ್ನು ಮುಂದುವರಿಸಲು ಹೋಗಲಿಲ್ಲ. ನಾನು ನೀತು ಮತ್ತು ಅಪ್ಪನ ಜೊತೆ ಮಾತನಾಡಬೇಕು. ನಾನು ಹೇಗೆ ದೀಪಕ್‌ನನ್ನು ಎಂದೂ ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರಿಗೆ ಹೇಳಬೇಕು. ಯಾವಾಗಲೂ ಆತನೇ ಎಲ್ಲದರ ಮೇಲೆ ಅಧಿಕಾರ ಹೊಂದಿರುತ್ತಾನೆ.
ಬೆಂಗಳೂರಿನ ಶ್ರೀಮಂತ ಬಡಾವಣೆಗಳಲ್ಲೊಂದಾದ ಇಂದಿರಾನಗರದಲ್ಲಿ ವಾಸವಿರುವ ದೀಪಕನ ಪೋಷಕರನ್ನು ಅನ್ನು ಕುಟುಂಬ ಸಂದರ್ಶಿಸಿತು. ರಾಜನ್‌ರ ಎರಡಂತಸ್ತಿನ ದೊಡ್ಡ ಮನೆಯಲ್ಲಿ ನೆಲಕ್ಕೆಲ್ಲ ಅಮೃತಶಿಲೆ ಹಾಸಿತ್ತು. ಅಡುಗೆ ಭಟ್ಟ ಮತ್ತು ಕೆಲಸದವರು ಪುಷ್ಕಳವಾದ ಔತಣವನ್ನೆ ಬಡಿಸಿದರು. ಶ್ರೀಮತಿ ರಂಜನ್‌ರವರು ಸತ್ಯನ್‌ರವರ ಕುಟುಂಬದವರಿಗೆ ಮನೆಯನ್ನೆಲ್ಲ ತೋರಿಸಿದರು. ಕೇವಲ ಇಬ್ಬರೇ ಇಬ್ಬರು ವಾಸಿಸುತ್ತಿದ್ದುದ್ದರಿಂದ ಈ ಬಂಗಲೆಯಲ್ಲಿ ಪ್ರತಿಯೊಂದೂ ಅಚ್ಚುಕಟ್ಟಾಗಿ, ಇರಬೇಕಾದ ಸ್ಥಳದಲ್ಲಿ ಒಪ್ಪವಾಗಿ ಇತ್ತು.
ಈ ಅಚ್ಚುಕಟ್ಟುತನ ಪರಿಚಿತವೆಂಬಂತೆ ಕಾಣಿಸುತ್ತಿದೆ ಎಂದುಕೊಂಡಳು ಅನು. ದೀಪಕ್‌ನ ಅಚ್ಚುಕಟ್ಟುತನ ಮತ್ತು ಜೀವನಶೈಲಿ ಎಲ್ಲಿಂದ ಬಂದಿದೆ ಎಂದು ಈಗ ಗೊತ್ತಾಯಿತು. ಅವಳ ಅಪ್ಪನ ಮನೆ ಅವಳ ಮನೆಯಂತೆಯೆ ಒಂದು ರೀತಿ ಗಜಿಬಿಜಿ; ಸ್ವಚ್ಚವಾಗೇನೋ ಇರುತ್ತದೆ, ಆದರೆ ಎಲ್ಲವೂ ಎಲ್ಲೆಂದರಲ್ಲಿ ಬಿದ್ದಿರುತ್ತವೆ.
ಮುಂದಿನ ಮೂರು ವಾರಗಳು ಮದುವೆಯ ಸಿದ್ದತೆಗಳಲ್ಲೆ ಕಳೆದುಹೋದವು. ಅನೂಳ ಕುಟುಂಬ 135 ಕಿ.ಮೀ ದೂರದ ಮೈಸೂರಿನಲ್ಲಿ ವಾಸಿಸುತ್ತಿದ್ದುದ್ದರಿಂದ, ಬೆಂಗಳೂರಿನಲ್ಲಿ ದೀಪಕ್‌ನೇ ಪ್ರತಿಯೊಂದನ್ನೂ ಸಂಭಾಳಿಸಿದ. ಅವನು ಅನೂಳಿಗೆ ಪೋನ್ ಮಾಡಿ ಹೇಳಿದ, ''ಇಲ್ಲಿ ಎಲ್ಲ ಸಿದ್ದತೆಗಳು ಸರಿಯಾಗಿ ನಡೆಯುತ್ತಿವೆ. ನೀನು ಸಾಕಷ್ಟು ವಿಶ್ರಾಂತಿ ತೆಗೆದುಕೊಂಡು, ಮದುವೆಯ ದಿನ ಸುಂದರವಾಗಿ ಕಾಣಬೇಕು, ಅಷ್ಟೇ.""
ಅನೂಳಿಗೆ ಇದು ಸ್ವಲ್ಪ ವಿಚಿತ್ರ ಎನ್ನಿಸಿತು. ಅಮೆರಿಕದಲ್ಲೂ ಅಷ್ಟೇ, ಇಲ್ಲಿಯೂ ಅಷ್ಟೇ, ಸಾಮಾನ್ಯವಾಗಿ ಮದುವೆಯ ವ್ಯವಸ್ಥೆಗಳನ್ನೆಲ್ಲ ವಧುವಿನ ಕಡೆಯವರೇ ಮಾಡುತ್ತಾರೆ ಹಾಗೂ ಅವರೇ ಖರ್ಚುವೆಚ್ಚಗಳನ್ನು ಭರಿಸುತ್ತಾರೆ. ವರ ಮಾಡುವುದು ಏನಿದ್ದರೂ ಮದುವೆಯ ದಿನ ಹಾಜರಾಗುವುದಷ್ಟೆ.
ಇನ್ನೊಂದು ದಿನ ದೀಪಕನ್ ತಾಯಿ ಕರೆ ಮಾಡಿದ್ದರು. ''ನಾಳೆ ನಿನಗೆ ಬೆಂಗಳೂರಿಗೆ ಬರಲು ಸಾಧ್ಯವೆ, ಅನು? ನೀನು ನಿನಗೆ ಬೇಕಾದ ಸೀರೆ ಹಾಗೂ ಆಭರಣಗಳನ್ನು ಅರಿಸಬೇಕಿದೆ.""
ಆದರೆ ಅನು ವಿನಯದಿಂದ ರಂಜನ್ ಮನೆಯವರ ಉಡುಗೊರೆಗಳನ್ನು ನಿರಾಕರಿಸಿದಳು. ''ಆಂಟಿ, ನಮ್ಮ ಮನೆಯವರು ನನಗೆ ಬಹಳ ಸೀರೆಗಳನ್ನು ತಂದುಬಿಟ್ಟಿದ್ದಾರೆ, ಜೊತೆಗೆ ನಾನು ಒಡವೆಗಳನು ಹೆಚ್ಚಾಗಿ ತೊಡುವುದೇ ಇಲ್ಲ. ದೀಪಕ್ ನಿಶ್ಚಿತಾರ್ಥಕ್ಕೆಂದು ನನಗೆ ಅತಿ ಸುಂದರವಾದ ಉಂಗುರವನ್ನು ನೀಡಿದ್ದಾನೆ. ಹಾಗೂ ಇವೆಲ್ಲವನ್ನು ಸುರಕ್ಷಿತವಾದ ಸ್ಥಳದಲ್ಲಿ ಇಡಲು ಅಮೇರಿಕದಲ್ಲಿ ನನಗೆ ಜಾಗವಿಲ್ಲ. ನನಗೆ ನಿಜವಾಗಲೂ ಏನೂ ಬೇಕಾಗಿಲ್ಲ."" ಪಾಪ, ಆ ಪಾಪದ ಹೆಂಗಸು ನನ್ನ ಬಗ್ಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರೆ ನಾನು ಒರಟಾಗಿ ನಡೆದುಕೊಳ್ಳುತ್ತಿದ್ದೇನೆ.
''ನೀನು ಹಾಗೆಲ್ಲ ಹೇಳುವ ಹಾಗಿಲ್ಲ, ಅನು. ನಾವು ನಿನಗೆ ಸೀರೆ ಮತ್ತು ಒಡವೆಗಳನ್ನು ಕೊಡಲೇಬೇಕು. ಅವನ್ನು ಅರಿಸಲು ನೀನು ನಮ್ಮ ಜೊತೆ ಬಂದರೆ ನನಗೆ ತುಂಬಾ ನೆಮ್ಮದಿ ಇರುತ್ತದೆ.""
''ಆಂಟಿ, ನೀವು ಕೊಡಬೇಕು ಎಂದು ಹೇಳುತ್ತಿರುವುದಕ್ಕೆ ನಾನು ನಿಜವಾಗಲು ನಿಮ್ಮನ್ನು ಪ್ರಶಂಸಿಸುತ್ತೇನೆ. ಆದರೆ ನಾನು ಅಮೇರಿಕಾಗೆ ಹೋದ ಮೇಲೆ ಸೀರೆ ಯಾವಾಗ ಉಟ್ಟುಕೊಳ್ಳಲಿ? ನನಗೆ ನಿಜವಾಗಲೂ ಏನೂ ಬೇಕಾಗಿಲ್ಲ, ಆಂಟಿ.""
''ನೀನು ಅವನ್ನು ಭಾರತೀಯ ಪಾರ್ಟಿಗಳಿಗೆ ಹೋದಾಗ ತೊಡಬಹುದಲ್ಲ?""
''ನಾನು ಭಾರತೀಯ ಪಾರ್ಟಿಗಳಿಗೆ ಹೋಗುವುದು ತುಂಬಾ ಅಪರೂಪ. ನಾನು ಅವನ್ನು ಬಹುಶಃ ಎಂದೂ ಉಪಯೋಗಿಸುವುದಿಲ್ಲ. ಹಾಗಾಗಿ ನನಗೆ ಅವು ಬೇಕಾಗಿಲ್ಲ."" ಅವಳು ಆ ವಿಷಯವನ್ನು ದೀಪಕ್‌ನ ಜೊತೆ ಮಾತನಾಡುತ್ತೇನೆಂದು ಹೇಳಿದಳು. ''ನಾನು ಶಾಪಿಂಗ್‌ಗೆ ಹೋಗುವುದಕ್ಕೆ ಬೆಂಗಳೂರಿಗೆ ಬರುತ್ತಿಲ್ಲ, ದೀಪಕ್. ಇಲ್ಲಿಯ ತನಕದ ನನ್ನ ಜೀವನದಲ್ಲಿ ನನ್ನ ವೈಯಕ್ತಿಕ ಬಳಕೆಗಾಗಿ ಬೇರೆಯವರು ಕೊಡಿಸಿದ ಏನನ್ನೂ ನಾನು ತೆಗೆದುಕೊಂಡಿಲ್ಲ. ನಾನು ನನಗೆ ಆಯ್ಕೆ ಮಾಡುವ ಒಡವೆ-ಬಟ್ಟೆಗಳಿಗೆ ಬೇರೆಯವರು ದುಡ್ಡು ಕೊಡುವಂತಹ ಸ್ಥಿತಿಯಲ್ಲಿ ಇರಲು ನಾನು ಬಯಸುವುದಿಲ್ಲ."" ಅವನು ಸುಮ್ಮನೆ ನಕ್ಕುಬಿಟ್ಟ. ''ಸರಿ, ಅನು. ನಾನು ಅಮ್ಮನ ಜೊತೆ ಮಾತನಾಡುತ್ತೇನೆ.""
ಮದುವೆಯ ಸಮಯದಲ್ಲಾಗುವ ಈ ಕೊಡು-ತೆಗೆದುಕೊಳುವುದನ್ನು ಅನು ಬಹಳ ದ್ವೇಷಿಸುತ್ತಿದ್ದಳು. ಅದೆಲ್ಲ ಅವಳಿಗೆ ಹಿಡಿಸುತ್ತಿರಲಿಲ್ಲ.
(ಸಶೇಷ)
| ಅಧ್ಯಾಯ - 22 | ಅಧ್ಯಾಯ - 24 |












Click it and Unblock the Notifications