ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ಯಾನ್‌ ತೆಕ್ಕೆಯಲ್ಲಿ ಕರಗಿದ ಅನುಗೆ ಗಂಡ ನೆನಪಾದ!

By Staff
|
Google Oneindia Kannada News


ಡ್ಯಾನ್‌ನೊಡನೆ ನಿಜವಾಗಲೂ ಕೂಡಿದ ಅನುಭವವಾದ ಈಗಿನ ಬೆಚ್ಚನೆಯ, ಬಾಂಧವ್ಯಾನುಭವದ ಸಂದರ್ಭದಲ್ಲಿ ಆ ಹಳೆಯ ನೆನಪುಗಳು ಅಡ್ಡ ಬರುವುದು ಅವಳಿಗೆ ಬೇಕಿರಲಿಲ್ಲ. ದೀಪಕ್‌ನ ಜೊತೆ ಏನಾಯಿತೊ ಅದನ್ನೆಲ್ಲ ನಾನು ಮರೆಯಬೇಕು. ಅವನು ನನ್ನ ಜೀವನವನ್ನು ಹಾಳು ಮಾಡುವುದಕ್ಕೆ ಬಿಡಬಾರದು. ತನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಳ್ಳುತ್ತಿರುವುದು ಅವಳಿಗೆ ಗೊತ್ತಾಯಿತು. ಡ್ಯಾನ್‌ ಅದನ್ನು ನೋಡಿದ. ಅದಕ್ಕೆ ಕಾರಣ ತಾನಲ್ಲ ಎಂದು ಅವನಿಗೆ ಗೊತ್ತಿತ್ತು. ಅವನು ಅವಳತ್ತ ಪ್ರೀತಿಯಿಂದ ನೋಡಿದನು. ಆ ಕಣ್ಣುಗಳಲ್ಲಿ ಅವಳಿಗೆ ದೀಪಕ್‌ನ ಕಣ್ಣುಗಳಲ್ಲಿ ಕಂಡಿದ್ದ ಅಸಹ್ಯ ಕಾಣಲಿಲ್ಲ.

‘‘ಅನು, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನನ್ನು ಮೊದಲ ಸಲ ಭೇಟಿಯಾದ ದಿನದಿಂದ ಪ್ರೀತಿಸುತ್ತಿದ್ದೇನೆ.’’

‘‘ಓ, ಅದನ್ನು ಹೇಳಿದ್ದಕ್ಕೆ ಧನ್ಯವಾದಗಳು, ಡ್ಯಾನ್‌.’’ ಅವಳು ಭಾವಪರವಶಳಾದಳು. ನಾಲಿಗೆ ಕಟ್ಟಿದಂತಾಯಿತು. ಇನ್ನೇನು ಹೇಳಬೇಕೆಂದೆ ಅವಳಿಗೆ ತಿಳಿಯಲಿಲ್ಲ. ಈಗ ಅವಳು, ನಾನೂ ನಿನ್ನನ್ನು ಪ್ರೀತಿಸುತ್ತೇನೆ, ಡ್ಯಾನ್‌ ಎಂದು ಹೇಳಬಹುದೆ? ಇಂದು, ಅವಳಿಗೆ ಆ ಶಕ್ತಿ ಇರಲಿಲ್ಲ. ಒಂದು ದಿನ ದೀಪಕ್‌ನ ಎಲ್ಲಾ ಕ್ರೂರ ಹಾಗು ಕರಾಳ ನೆನಪುಗಳನ್ನು ಡ್ಯಾನ್‌ ಒರೆಸಿ ಹಾಕುತ್ತಾನೆ. ಆಗ.

‘‘ಡ್ಯಾನ್‌, ನೀನೀಗ ಬಿಸಿನೀರಿನ ಟಬ್ಬಿನಲ್ಲಿ ಕುಳಿತುಕೊಳ್ಳಬಯಸುತ್ತೀಯ?’’

‘‘ಖಂಡಿತ, ನನ್ನ ಮುದ್ದು ರಾಜಕುಮಾರಿ. ನಿನಗೆ ಬೇಕಾಗಿರುವುದು ಅದೇ ಏನು ಈಗ?’’

‘‘ಹೌದು...’’ ಅವನು ಇಷ್ಟೊಂದು ಸ್ನೇಹಮಯವಾಗಿ ಇರಲು ಹೇಗೆ ಸಾಧ್ಯ? ತಮ್ಮ ಹೆಂಡತಿಯರಿಗೆ ಏನು ಬೇಕೆಂದು ಭಾರತೀಯ ಗಂಡಸರು ಕೇಳುವುದೆ ಅಪರೂಪ. ಅಥವ ಅವರೂ ಕೇಳುತ್ತಾರಾ? ಡ್ಯಾನ್‌ನೊಡನೆ ಇರುವಾಗಲೆಲ್ಲ ಅವಳಿಗೆ ಏನು ಬೇಕು ಎನ್ನುವುದೆ ಹೊರತು ಅವನಿಗೆ ಏನು ಬೇಕು ಎನ್ನುವುದಲ್ಲ. ಅವನಿಗೆ ನಾನು ಸಂತೋಷವಾಗಿ ಇರುವುದು ಬೇಕು.

ಅನು ತನಗಾಗಿ ಒಂದು ನಿಲುವಂಗಿಯನ್ನು ಹಾಗು ಡ್ಯಾನ್‌ಗೆ ಟವೆಲ್‌ ಒಂದನ್ನು ತೆಗೆದುಕೊಂಡು, ಹಿತ್ತಲಿಗೆ ಹೋಗುವ ಫ್ರೆಂಚ್‌ ಬಾಗಿಲುಗಳನ್ನು ತೆರೆದಳು.

ಬಿಸಿಯಾದ, ಬುಗ್ಗೆ ಏಳುತ್ತಿದ್ದ ನೀರಿನಲ್ಲಿ ನೆನೆಯುತ್ತ ಅವರು ಕುಳಿತುಕೊಂಡರು. ಹೆಚ್ಚಿಗೆ ಏನೂ ಮಾತನಾಡಲಿಲ್ಲ. ನೀರಿನ ಜೆಟ್‌ಗಳು ಹಿಸ್‌ ಎನ್ನುವ ಶಬ್ದವನ್ನು ಆಲಿಸುತ್ತ, ಇಬ್ಬರೂ ಜೊತೆಯಾಗಿರುವುದರ ಸುಖ ಅನುಭವಿಸುತ್ತ ಕುಳಿತರು. ಡ್ಯಾನ್‌ ಆಗಾಗ ಅವಳ ಕೈಯನ್ನು ಚುಂಬಿಸುತ್ತಿದ್ದ, ಇಲ್ಲವೆ ಅವಳ ಕೆನ್ನೆಯನ್ನು ನೇವರಿಸುತ್ತಿದ್ದ. ರಾತ್ರಿಯ ಆಕಾಶ ಸ್ಪಷ್ಟವಾಗಿತ್ತು. ಬಿದಿಗೆಯ ಚಂದ್ರನ ಮಂದಬೆಳಕಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು.

‘‘ಬಾ ಇಲ್ಲಿ,’’ ಡ್ಯಾನ್‌ ಅವಳು ತನ್ನ ಬೆನ್ನನ್ನು ತನ್ನ ಕಡೆ ಹಾಕುವಂತೆ ಹತ್ತಿರಕ್ಕೆ ಎಳೆದುಕೊಂಡು, ಅವಳ ಭುಜಗಳನ್ನು ತೀಡಿ ನೇವರಿಸಿದನು. ಅವಳ ಕತ್ತಿನ ಮೇಲೆ ಮೃದುವಾಗಿ ಚುಂಬಿಸಿದನು. ‘‘ನೀನು ಸಂತೋಷವಾಗಿದ್ದೀಯ, ಅನು? ನನಗೆ ನೀನು ಸಂತೋಷವಾಗಿರುವುದು ಬೇಕು.’’

‘‘ಹೌದು, ಡ್ಯಾನ್‌, ನಾನೀಗ ಸಂತೋಷವಾಗಿದ್ದೇನೆ. ನನಗೆ ಕೆಲಸದಲ್ಲಿ ಪ್ರಮೋಷನ್‌ ಸಿಕ್ಕಿತು; ನಿನ್ನಂತಹ ಸಭ್ಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ. ಇಷ್ಟೊಂದು ಸಂತೋಷವಾಗಿ ನಾನು ಬಹಳ ದಿನಗಳಿಂದ ಇರಲಿಲ್ಲ.’’ ಅವನ ಮುಖ ನೋಡಲು ಅವಳು ಕತ್ತನ್ನು ಹಿಂದಕ್ಕೆ ತಿರುಗಿಸಿದಳು. ಇಗೋ! ನಾನು ಅದನ್ನು ಆಲ್ಮೋಸ್ಟ್‌ ಹೇಳಿಯೆಬಿಟ್ಟೆ!

‘‘ಕೆಲವೊಂದು ವರ್ಷಗಳಿಂದ ನನಗೆ ಬಹಳಷ್ಟು ಸಮಸ್ಯೆಗಳಿದ್ದವು. ಭಾರತದಂತಹ ಸಂಪ್ರದಾಯವಾದಿ ದೇಶದಿಂದ ಬಂದು ಇಂತಹ ಉದಾರವಾದಿ ಸಮಾಜಕ್ಕೆ ಹೊಂದಿಕೊಳ್ಳುವುದು ಬಹಳ ಕಷ್ಟ. ಆ ಸವಾಲುಗಳು ಎಂದಾದರು ಇಲ್ಲವಾಗಿ ಬಿಡುತ್ತವೆ ಎಂದೇನೂ ನಾನು ಭಾವಿಸುತ್ತಿಲ್ಲ. ಆದರೆ ನಾನು ಅವನ್ನು ನಿಧಾನವಾಗಿ ಪರಿಹರಿಸಿಕೊಳ್ಳುತ್ತಿದ್ದೇನೆ ಎಂದು ನನಗೆ ಗೊತ್ತು. ಈಗಾಗಲೆ ಒಂದಷ್ಟು ಹೊಂದಿಕೊಂಡುಬಿಟ್ಟಿದ್ದೇನೆ. ಹಾಗಾಗಿ ನಾನು ಈಗ ಭಾರತಕ್ಕೆ ಹಿಂದಿರುಗಿದರೂ ಅಲ್ಲಿ ಸಂಪೂರ್ಣ ಸಂತೋಷವಾಗಿ ಇರುತ್ತೇನೆ ಎಂದು ಹೇಳಲಾಗುವುದಿಲ್ಲ.’’

‘‘ಅಲ್ಲಿ ವಾಸಿಸಲು ನೀನು ಎಂದಿಗೂ ಹಿಂದಿರುಗುವುದಿಲ್ಲವೆ?’’

‘‘ಅದರ ಬಗ್ಗೆ ಯಾರಿಗೂ ಗೊತ್ತಿಲ್ಲ. ನಾನು ಆಗಾಗ ಅದರ ಕುರಿತು ಯೋಚಿಸುತ್ತಿರುತ್ತೇನೆ. ನನ್ನ ತಂದೆತಾಯಿಯರ ಬಗ್ಗೆ ಚಿಂತೆಯಾಗುತ್ತದೆ. ವಯಸ್ಸಾಗುತ್ತಿದ್ದಂತೆ ಅವರಿಗೆ ನಮ್ಮ ಅವಶ್ಯಕತೆ ಹೆಚ್ಚಾಗುತ್ತ ಹೋಗುತ್ತದೆ. ನನ್ನ ಅಕ್ಕ ಹಾಗು ಭಾವ ನಮ್ಮ ಅಪ್ಪಅಮ್ಮ ಇರುವ ಊರಿನಲ್ಲೆ ವಾಸಿಸುತ್ತಿದ್ದಾರೆ. ಅವರು ನನ್ನ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪ್ರತಿದಿನ ಅವರ ಮನೆಗೆ ಭೇಟಿ ಕೊಡುತ್ತಾರೆ. ಇಲ್ಲದಿದ್ದರೆ, ನಾನು ಈ ದೇಶದಲ್ಲಿ ಇಷ್ಟು ದಿನ ಇರುತ್ತಿರಲಿಲ್ಲ. ಇಲ್ಲಿ ನನ್ನ ಓದು ಮುಗಿದ ತಕ್ಷಣ ವಾಪಸು ಹೋಗಿಬಿಡುತ್ತಿದ್ದೆ. ಭಾರತದಲ್ಲಿ, ಪೋಷಕರಿಗೆ ವಯಸ್ಸಾದ ಮೇಲೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದು.’’ ಭಾರತೀಯ ಕುಟುಂಬಗಳಲ್ಲಿನ ಸಂಕೀರ್ಣತೆಯನ್ನು ವಿವರಿಸಲು ಅನು ಪ್ರಯತ್ನಿಸಿದಳು.

‘‘ಏಷ್ಯನ್ನರು ತಮ್ಮ ಕುಟುಂಬದವರ ಜೊತೆ ಬಹಳ ನಿಕಟವಾಗಿರುತ್ತಾರೆ. ನಾನು ಒಟ್ಟಿಗೆ ವಾಸಿಸುತ್ತಿದ್ದ ಆ ಚೈನೀಸ್‌ ಹುಡುಗಿ ಗೊತ್ತಲ್ಲ? ಅದೇ ನಾನು ನಿನ್ನನ್ನು ಮೊದಲನೆಯ ಸಲ ಭೇಟಿಯಾದಾಗ ನಿಮ್ಮ ಆಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ಗೆ ಆಕೆ ಮೂವ್‌ ಆಗಲು ನಾನು ಸಹಾಯ ಮಾಡುತ್ತಿದ್ದ ಹುಡುಗಿ?’’

‘‘ಹೌದು,’’ ತಕ್ಷಣ ಹುಟ್ಟಿಕೊಂಡ ಅಸೂಯೆಯಿಂದ ಹೇಳಿದಳು. ‘‘ನನಗೆ ನೆನಪಿದೆ.’’

‘‘ಅವಳು ಮೊದಲು ನನ್ನೊಂದಿಗೆ ವಾಸ ಮಾಡುತ್ತಿದ್ದಳು. ಆಮೇಲೆ ಅವಳ ಮನೆಯವರು ಚೀನಾದಿಂದ ಅಮೇರಿಕಕ್ಕೆ ಬಂದರು. ಆದರೆ ಅವರು ನನ್ನನ್ನು ಭೇಟಿಯಾಗುವುದಕ್ಕೆ ಸಹ ಸಂಪೂರ್ಣವಾಗಿ ನಿರಾಕರಿಸಿದರು. ಅವರ ಪ್ರಭಾವ ಅವಳ ಮೇಲೆ ಎಷ್ಟಿತ್ತೆಂದರೆ, ಕೊನೆಗೆ ಅವಳು ನನ್ನೊಂದಿಗಿನ ಸಂಬಂಧವನ್ನೂ ಕಡಿದುಕೊಂಡಳು. ತನ್ನ ಪೋಷಕರ ಮನಸ್ಸನ್ನು ನೋಯಿಸಲು ತನ್ನಿಂದ ಆಗುವುದಿಲ್ಲ ಎಂದು ಹೇಳಿದಳು.’’

‘‘ಭಾರತದಲ್ಲಿ ನಡೆಯುವುದೂ ಹಾಗೆಯೆ. ತಂದೆತಾಯಿಯರು ತಮ್ಮ ಮಕ್ಕಳ ಮೇಲೆ ಭಾವನಾತ್ಮಕವಾಗಿ, ಆರ್ಥಿಕವಾಗಿ ಬಹಳ ತೊಡಗಿಸಿರುತ್ತಾರೆ. ಮಕ್ಕಳಿಗೆ ಮದುವೆಯಾಗಿ, ಅವರಿಗೆ ಮಕ್ಕಳಾದ ಮೇಲೂ, ಇವರು ಅವರ ಜೀವನದಲ್ಲಿ ಪ್ರಮುಖವಾದ ಭಾಗವಾಗಿಯೆ ಮುಂದುವರಿಯುತ್ತಾರೆ. ಅವರು ದೊಡ್ದವರಾಗಿ ಕೆಲಸಕ್ಕೆ ಸೇರಿದ ಮೇಲೂ ಅವರಿಗೆ ಮನೆ ಬಿಟ್ಟು ಹೋಗಲು ಹೇಳುವುದಿಲ್ಲ. ಅವರು ಒಂದೇ ಊರಿನಲ್ಲೇ ಕೆಲಸ ಮಾಡುತ್ತ ಇದ್ದು, ತಮಗೆ ಸ್ವಂತಕ್ಕೆ ಬೇರೆ ಮನೆ ಬೇಕೆಂದು ಹೇಳಿದರೆ ತಂದೆತಾಯಿ ತಮಗೆ ಅವಮಾನವಾಯಿತೆಂದು ಭಾವಿಸುತ್ತಾರೆ. ಅಪ್ಪಅಮ್ಮನಿಗೆ ತಮ್ಮ ಸೊಸೆಯೊಂದಿಗೆ ಏನಾದರೂ ಸಮಸ್ಯೆಯೇನಾದರೂ ಬಂದು ಮಗ ಮನೆ ಬಿಡುವುದಕ್ಕೆ ತೀರ್ಮಾನಿಸಿದರೆ ಆಗ ದೊಡ್ಡ ಹಗರಣವಾಗಿಬಿಡುತ್ತದೆ. ಹೆಣ್ಣುಮಕ್ಕಳು ಮದುವೆ ಆದ ಮೇಲೆ ಗಂಡನ ಮನೆಗೆ ಹೊಗುತ್ತಾರೆ ಎನ್ನುವುದೇನೊ ನಿಜ. ಹೇಳಬೇಕೆಂದರೆ, ನನ್ನ ಅಪ್ಪಅಮ್ಮ ಹಾಗು ನನ್ನ ಅಕ್ಕ ಮಾತ್ರ ಈಗ ನನ್ನ ಬೆಸ್ಟ್‌ ಫ್ರೆಂಡ್ಸ್‌...’’

ಹೇಳುತ್ತಿದ್ದನ್ನು ಮಧ್ಯದಲ್ಲಿಯೇ ನಿಲ್ಲಿಸಿದ ಅನು ಹಿಮದಂತೆ ಮರಗಟ್ಟಿ ಹೋದಳು. ಕತ್ತಲಿಂದ ಒಂದು ಆಕೃತಿ ಉದ್ಭವಿಸಿ ಬಂದು ನೇರ ಅವರ ಎದುರೇ ನಿಂತಿತ್ತು.

ಉಕ್ಕಿ ಬರುತ್ತಿದ್ದ ಭೀತಿಯಿಂದ, ‘‘ಪವನ್‌?’’ ಎಂದಳು.

‘‘ನಾ-ನಾನು ಈಗ ತಾನೆ ಇಲ್ಲಿಗೆ ಬಂದೆ...,’’ ಕಣ್ಣೋಟವನ್ನು ತಪ್ಪಿಸುತ್ತ, ತೊದಲಿದ.

ಬುಗ್ಗೆಯೇಳುತ್ತಿದ್ದ ನೀರಿನಲ್ಲಿ ಅನು ಮುಳುಗಿದಳು. ನಾನು ಈ ಕ್ಷಣದಲ್ಲೆ ಇಲ್ಲೇ ಮುಳುಗಿ ಸತ್ತರೆ ಸಾಕು ಎಂದು ಬಯಸುತ್ತೇನೆ.

‘‘ನಾನು ಬಾಗಿಲಿನ ಕರೆಗಂಟೆಯನ್ನು ಬಾ-ಬಾರಿಸಿದೆ. ಯಾರೂ ಉತ್ತರಿಸಲಿಲ್ಲ. ಹಾಗಾಗಿ ವಾಪಸು ಹೋಗಲು ಹೊರಡುತ್ತಿದ್ದೆ. ಆಗ ನನಗೆ ಹಿತ್ತಲಿನಿಂದ ಶಬ್ದ ಕೇಳಿಸಿತು...’’ ಅಲ್ಲೇ ನಿಂತು, ಅವನು ಎಳೆದೆಳೆದು ಮಾತನಾಡಿದ. ಹಬೆಯೇಳುತ್ತಿದ್ದ ನೀರಿನಲ್ಲಿದ್ದ ಅವರಿಬ್ಬರ ಮೇಲೆ ಅವನ ಕಣ್ಣು ನೆಟ್ಟಿತ್ತು.

ಪವನ್‌ ಹಾಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದನ್ನು ಅವಳ ಕೈಲಿ ನಂಬಲಾಗಲೆ ಇಲ್ಲ. ಆದರೆ ಅದು ಭಾರತೀಯರ ರೀತಿಯೆ ಆಗಿತ್ತು: ಮುಂಬಾಗಿಲನ್ನು ತಟ್ಟು, ಏನೂ ಉತ್ತರ ಬರದಿದ್ದರೆ ಹಿಂದಿನ ಬಾಗಿಲಿಗೆ ಹೋಗು. ಮನೆಯವರು ಹಿತ್ತಲಿನಲ್ಲಿರುತ್ತಾರೆ, ಇಲ್ಲ ಅಡಿಗೆ ಮನೆಯಲ್ಲಿ ಇರುತ್ತಾರೆ.

‘‘ಹಾಯ್‌ು, ಪವನ್‌.’’ ಸೊಂಟದ ಸುತ್ತ ಟವೆಲ್‌ ಅನ್ನು ಸುತ್ತಿಕೊಳ್ಳುತ್ತ ಡ್ಯಾನ್‌ ಟಬ್ಬಿನಿಂದ ಮೇಲೇರಿ ಬಂದು ತನ್ನ ಒದ್ದೆಯಾದ ಕೈಯನ್ನು ಮುಂದಕ್ಕೆ ಚಾಚಿದ. ‘‘ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ.’’

ಸಂಪೂರ್ಣ ಅಪನಂಬಿಕೆಯಿಂದ ಪವನ್‌ ವಿಲಕ್ಷಣವಾಗಿ ನಿಂತೇ ಇದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X