ರೂಪಳಿಗೋಸ್ಕರ ಪವನ್‌ನಿಂದ ದೀಪಕ್‌ನ ಕೊಲೆ
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
ಫ್ರ್ಯಾಂಕ್‌ಫರ್ಟ್‌ನಿಂದ ಹೊರಟ ವಿಮಾನ ದೆಹಲಿಯಲ್ಲಿ ಬಂದಿಳಿಯಿತು. ತನ್ನ ಮನೆಯವರಿಗೂ ಸಹ ತಿಳಿಸದೆ ತಾನು ಒಂಟಿಯಾಗಿ ಭಾರತದಲ್ಲಿ ಬಂದಿಳಿದ ತನ್ನ ಧೈರ್ಯ ಮತ್ತು ಸ್ವತಂತ್ರ ಮನೋಭಾವದ ಬಗ್ಗೆ ಸ್ವತಃ ಅನೂಗೆ ಆಶ್ಚರ್ಯವಾಯಿತು. ನಾನು ದೆಹಲಿಗೆ ಒಬ್ಬಳೇ ಬರುತ್ತಿದ್ದೇನೆ ಎಂದು ಮನೆಯವರಿಗೆ ಹೇಳಿದ್ದರೆ ಅವರು ನನ್ನನ್ನು ಬಿಡುತ್ತಿರಲಿಲ್ಲ; ಈ ದೇಶದಲ್ಲಿ ಹುಡುಗಿಯರು ಏಕಾಂಗಿಯಾಗಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲವೆಂದು ಹೇಳಿ ತಡೆಯುತ್ತಿದ್ದರು... ಮನೆಯಿಂದ ಬಹುದೂರದ ನಾಡಿನಲ್ಲಿ ಅವಳು ಒಬ್ಬಳೆ ವಾಸ ಮಾಡಿದ್ದಾಳೆ ಎನ್ನುವುದನ್ನು ಅವರು ಆಗಾಗ ಮರೆತು ಬಿಡುತ್ತಿದ್ದರು.
ಸಣ್ಣ ವಿಮಾನವೊಂದು ಅವಳನ್ನು ನವದೆಹಲಿಯಿಂದ ಬನಾರಸ್‌ಗೆ ಕರೆದೊಯ್ದಾಗ ಸಂಜೆ 3 ಗಂಟೆಯಾಗಿತ್ತು. ವಾತಾವರಣ ಬಹಳ ಬಿಸಿಯಾಗಿತ್ತು.
‘‘ಹಾಯ್, ಅನು.’’ ಪವನ್ ತನ್ನ ತೋಳುಗಳನ್ನು ತೆರೆದಾಗ ಅವಳು ಒಂದು ಕ್ಷಿಪ್ರ ಆಲಿಂಗನವನ್ನು ನೀಡಿದಳು. ಆದರೆ ಅವನ ಆ ಬದಲಾದ ಚರ್ಯೆ ಅವಳಲ್ಲಿ ಆಶ್ಚರ್ಯ ಉಂಟುಮಾಡಿತು. ಪವನ್ ಬಹಳ ಸುಧಾರಿಸಿದ್ದಾನೆ, ಆದರೆ ಭಾರತದಲ್ಲಿ ಅಪ್ಪಿಕೊಳ್ಳಲು ಯಾಕೊ ನನಗೆ ಮುಜಗರವಾಗುತ್ತಿದೆ. ಅಥವ ಪವನ್‌ನನ್ನು ತಬ್ಬಿಕೊಳ್ಳುವುದು ಅವಳಿಗೆ ವಿಚಿತ್ರವೆನ್ನಿಸಿತೆ?
ಅವನ ತಂದೆ ಅಲ್ಲಿ ಬನಾರಸ್‌ನಲ್ಲಿಯೆ ವಾಸ ಮಾಡುತ್ತಿದ್ದರು. ಪವನ್ ಅವರ ಜೊತೆ ಮಾತನಾಡುತ್ತಿಲ್ಲ ಎನ್ನುವುದನ್ನು ಅವಳು ಖಂಡಿತವಾಗಿ ಹೇಳಬಲ್ಲವಳಾಗಿದ್ದಳು. ‘‘ನೀನು ಬೆಂಗಳೂರಿನಿಂದ ಯಾವಾಗ ಬಂದೆ, ಪವನ್?’’
‘‘ಇವತ್ತು ಬೆಳಿಗ್ಗೆ. ಬಾ, ಹೋಗೋಣ.’’
‘‘ನಾವು ಎಲ್ಲಿ ಇಳಿದುಕೊಂಡಿದ್ದೇವೆ?’’
‘‘ಕ್ಲಾರ್ಕ್ಸ್ ಹೋಟೆಲ್‌ನಲ್ಲಿ. ನಮ್ಮನ್ನು ಪಿಕ್‌ಅಪ್ ಮಾಡಲು ಹೋಟೆಲ್‌ನವರು ಕಾರು ಕಳಿಸಿದ್ದಾರೆ.’’
ಕಾರಿನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತ, ‘‘ಬನಾರಸ್! ಎಷ್ಟೊಂದು ವರ್ಷಗಳಾದ ಮೇಲೆ ನೋಡುತ್ತಿದ್ದೇನೆ,’’ ಎಂದು ಉದ್ಗರಿಸಿದಳು. ‘‘ಜನ ಹೆಚ್ಚಾಗಿದ್ದಾರೆ ಎನ್ನುವುದನ್ನು ಬಿಟ್ಟರೆ ಎಲ್ಲಾ ಮೊದಲಿನಂತೆಯೆ ಕಾಣಿಸುತ್ತಿದೆ.’’
ಬನಾರಸ್‌ನಲ್ಲಿರುವ ಏಕೈಕ ಪಂಚತಾರಾ ಹೋಟೆಲ್ ಕ್ಲಾರ್ಕ್ಸ್‌ನಲ್ಲಿ ಇಬ್ಬರೂ ಚೆಕ್‌ಇನ್ ಮಾಡಿಕೊಂಡರು.
‘‘ಒಂದೆರಡು ಗಂಟೆಗಳಾದ ಮೇಲೆ ನಾನು ನಿನ್ನನ್ನು ಲಾಬ್ಬಿಯಲ್ಲಿ ಭೇಟಿಯಾಗುತ್ತೇನೆ, ಅನು. ನೀನು ಸಿದ್ಧವಾದ ಮೇಲೆ ನನಗೆ ಫೋನ್ ಮಾಡು. 5 ಗಂಟೆ ಸುಮಾರಿಗೆ ವಾತಾವರಣ ಸ್ವಲ್ಪ ತಣ್ಣಗಾಗಿರುತ್ತದೆ. ಆಗ ನಾವು ನದಿಯ ಹತ್ತಿರ ಹೋಗಬಹುದು.’’
‘‘ಸರಿ, ಪವನ್. ನಾನು ಸ್ನಾನ ಮಾಡಿಕೊಂಡು ಆದರೆ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೇನೆ. ಸಮಯಕ್ಕೆ ಸರಿಯಾಗಿ ನಾನು ನಿನಗೆ ಕರೆ ಮಾಡದಿದ್ದರೆ ನೀನೆ ನನಗೆ ಕರೆ ಮಾಡು.’’ ಅವರು ತಮ್ಮ ತಮ್ಮ ಕೋಣೆಯತ್ತ ಹೋಗುತ್ತಿದ್ದಾಗ ಅವಳೆಂದಳು.
ಅವನು ಏನು ಹೇಳಲಿದ್ದಾನೆ ಎನ್ನುವುದನ್ನು ಕೇಳಲು ಅವಳು ಕ್ಯಾಲಿಫೋರ್ನಿಯದಿಂದ ಬಹಳ ದೂರ ಬಂದಿದ್ದಳು. ಅವನು ನನಗೆ ಏನನ್ನು ಹೇಳ ಬಯಸುತ್ತಾನೆ? ನಾನು ನಿಜವಾಗಲು ಅದನ್ನು ತಿಳಿದುಕೊಳ್ಳಬೇಕೆ? ಅವಳು ತನ್ನ ಕೋಣೆಯ ಬಾಗಿಲನ್ನು ತೆರೆದಳು. ಕೋಣೆ ಐಷಾರಾಮಿ ಎನ್ನುವಂತಿಲ್ಲದಿದ್ದರೂ ಚೊಕ್ಕಟವಾಗಿತ್ತು. ಲಗೇಜನ್ನು ಚಿಕ್ಕದೊಂದು ಮೇಜಿನ ಮೇಲೆ ಇಟ್ಟಳು. ತಣ್ಣೀರೆಲ್ಲ ಹೋಗಿ ಬಿಸಿನೀರು ಬರುವವರೆಗೆ ಷವರಿನ ನಲ್ಲಿಯನ್ನು ಬಿಟ್ಟಳು.
ಸ್ನಾನದ ನಂತರ ಹಾಸಿಗೆಯ ಮೇಲೆ ಕುಳಿತು ಟಿವಿ ಹಾಕಿದಳು. ಅದರಲ್ಲಿ ಬರುತ್ತಿದ್ದ ಹಿಂದಿ ಚಿತ್ರವೊಂದರ ಬಾಲಿವುಡ್ ಹಾಡು ಹಾಗು ನರ್ತನ ಅವಳಿಗೆ ನಗು ತರಿಸಿತು. ವಿಚಿತ್ರ! ಹೀರೊ ಹೀರೋಯಿನ್ ಮರಸುತ್ತುತ್ತ ಹಾಡುವ ಅದೇ ಹಾಡು ಹಾಗು ನೃತ್ಯವನ್ನು ಜನ ಇನ್ನೂ ನೋಡುತ್ತಾ ಇದ್ದಾರೆ!
ಅವಳು ಇಲ್ಲಿಗೆ ಯಾಕೆ ಬಂದಳು? ಈಗ ಅವಳಿಗೆ ಪವನ್ ಮೊದಲಿನಂತೆ ಇಷ್ಟವೂ ಆಗುತ್ತಿಲ್ಲ. ಜೊತೆಗೆ ಈಗ ಅವನು ಅವಳ ಬೆಸ್ಟ್‌ಫ್ರೆಂಡ್ ಆಗಿದ್ದ ಚಿಕ್ಕ ಹುಡುಗನಾಗಿಯೂ ಉಳಿದಿಲ್ಲ. ಆದರೆ ಅವನಿಗೆ ಅವಳ ಮೇಲೆ ಏನೋ ಹಿಡಿತವಿತ್ತು-10,000 ಮೈಲುಗಳ ದೂರದಿಂದ ಅವಳು ಬನಾರಸ್‌ಗೆ ಬರುವಂತೆ ಮಾಡಿದ್ದ! ಅದು ಏನೇ ಇರಲಿ, ಇಲ್ಲಿಗೆ ಬಂದದ್ದಕ್ಕೆ ಸಾರ್ಥಕವಾಗಲಿ ಎಂದು ಆಶಿಸುತ್ತೇನೆ.












Click it and Unblock the Notifications