• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತದ ಭಾವರಸದಲ್ಲಿ ಮಿಂದ ‘ವಚನಾಂಜಲಿ’ 2015

By ವಸಂತ ಕುಲಕರ್ಣಿ
|

ಹನ್ನೆರಡನೆಯ ಶತಮಾನದಲ್ಲಿ ಇಡೀ ಭಾರತ ದೇಶದಲ್ಲಿಯೇ ಮಹತ್ತರ ಎನಿಸಿದ ಒಂದು ಕ್ರಾಂತಿ ಕನ್ನಡ ನೆಲದಲ್ಲಿ ಉಂಟಾಯಿತು. ಶತಮಾನಗಳಿಂದ ಸಮಾಜದಲ್ಲಿ ಬೇರು ಬಿಟ್ಟು ಮೇಲು ಕೀಳೆಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದ ಅನೇಕ ಅಂಧಾನುಚರಣೆಗಳು ಮತ್ತು ಮೂಢ ನಂಬಿಕೆಗಳನ್ನು ಬಸವಣ್ಣ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭು ಮತ್ತು ಇತರ ಶರಣರು ಪ್ರಶ್ನಿಸಿದರು. ಅಂತಹ ಮೂಢನಂಬಿಕೆಗಳನ್ನು ಮತ್ತು ಅಂಧಾನುಚರಣೆಗಳನ್ನು ತೊರೆಯಲು ಅಂದಿನ ಸಮಾಜವನ್ನು ಆಗ್ರಹಿಸಿದರು.

ಜನ ಸಾಮಾನ್ಯರಿಗೆ ನಿರ್ಮಲವಾದ ಭಕ್ತಿ ಮತ್ತು ಪ್ರಾಮಾಣಿಕ ಜೀವನ ಧರ್ಮವನ್ನು ಬೋಧಿಸಲು ಶರಣರು ಸರಳ, ಸುಲಲಿತವಾದ ಮತ್ತು ಎಲ್ಲರಿಗೂ ಅರ್ಥವಾಗುವಂತಹ ಕನ್ನಡ ಭಾಷೆಯಲ್ಲಿ ವಚನಗಳನ್ನು ಸೃಷ್ಟಿಸಿ ಕನ್ನಡ ಜನತೆಗೆ ಎಂದೆಂದಿಗೂ ಉಪಯೋಗವಾಗುವಂತಹ ಬೋಧನಾಪ್ರದ ಮಾರ್ಗದರ್ಶಿ ಸಾಹಿತ್ಯವನ್ನು ನೀಡಿದ್ದಲ್ಲದೇ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಹೊಸ ಆಯಾಮವನ್ನು ಕಲ್ಪಿಸಿದರು.

ಇಂತಹ ಭವ್ಯ ಪರಂಪರೆಯ ವಚನಗಳ ವೈಭವವನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಸಂಘ (ಸಿಂಗಪುರ)ವು ಇದೇ ಆಗಸ್ಟ 18ರಂದು ಬೆಳಗ್ಗೆ ‘ವಚನಾಂಜಲಿ' ಕಾರ್ಯಕ್ರಮವನ್ನು ಟ್ಯಾಂಪನೀಸ್ ಈಸ್ಟ್ ಕಮ್ಯುನಿಟಿ ಕ್ಲಬ್‍ನ ಸಭಾಂಗಣದಲ್ಲಿ ಟ್ಯಾಂಪನೀಸ್ ಈಸ್ಟ್ ಕಮ್ಯುನಿಟಿ ಕ್ಲಬ್‍(IAEC)ನ ಸಹಯೋಗದೊಂದಿಗೆ ಏರ್ಪಡಿಸಿತ್ತು.


ಕುಮಾರಿ ಶೀತಲ್ ಭಾರದ್ವಾಜ್ ಅವರ ಭಾವಭರಿತ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ವಿಜಯರಂಗ ಪ್ರಸಾದ್, ಸಿಂಗಪುರದ ಖ್ಯಾತ ಗಾಯಕಿ ಡಾ.ಭಾಗ್ಯಾಮೂರ್ತಿ ಮತ್ತು ಟ್ಯಾಂಪನೀಸ್ ಈಸ್ಟ್ ಸಿಸಿ IAECಯ ಚೇರ್ ಪರ್ಸನ್ ತಂಗಮ್ ಹಾಗೂ ಅದರ ಕಾರ್ಯದರ್ಶಿ ಬಿ. ಮುರಲಿ ಅವರು ಜ್ಯೋತಿಯನ್ನು ಬೆಳಗಿಸಿದರು. ಸ್ವಾಗತ ಭಾಷಣ ಮಾಡಿದ ಕನ್ನಡ ಸಂಘದ ಅಧ್ಯಕ್ಷ ವಿಜಯರಂಗ ಪ್ರಸಾದ್ ಅವರು ಸಿಂಗಪುರದ ಕನ್ನಡಿಗರೆಲ್ಲರೂ ತಮ್ಮ ಸಂಸ್ಕೃತಿಯ ಬೇರುಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಲು ವಚನಾಂಜಲಿಯಂತಹ ಮಹತ್ವದ ಕಾರ್ಯಕ್ರಮಗಳನ್ನ ಪ್ರತೀವರ್ಷ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಡಾ. ಭಾಗ್ಯಾ ಮೂರ್ತಿ ಅವರ ನೇತೃತ್ವದಲ್ಲಿ ಅವರ ಗಾಯನ ವೃಂದ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಚೆನ್ನ ಬಸವಣ್ಣ, ಅಲ್ಲಮಪ್ರಭು ಮುಂತಾದವರ ವಚನಗಳನ್ನು ಪ್ರಸ್ತುತ ಪಡಿಸಿದರಲ್ಲದೇ, ಇತ್ತೀಚಿನ ವಚನಕಾರರಾದ ಷಣ್ಮುಖ ಸ್ವಾಮಿ ಮತ್ತು ರೇಣುಕಾ ಗುಬ್ಬಿ ಅವರ ವಚನಗಳ ಗಾಯನ ಮಾಡಿದರು. "ಸೂರ್ಯನ ಉದಯ ತಾರೆಗೆ ಜೀವಾಳ", "ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ", "ಇಳೆ ನಿಮ್ಮ ದಾನ", "ಅಂತರಂಗದಲ್ಲಿ ಅರಿವಾದಡೇನಯ್ಯಾ", "ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ", "ಸ್ವಾಸ್ಥ್ಯ ಉಂಟಾಗದಯ್ಯ, ತನು ಶುದ್ಧವಾದಲ್ಲದೆ" ಮುಂತಾದ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದ ಈ ಗಾಯನ ವೃಂದ ಸಭಿಕರ ಮನ ಗೆದ್ದಿತು. ಕೆಲವು ವಚನಗಳಿಗೆ ಸಿಂಗಪುರದ ಸಂಗೀತ ವಿದುಷಿಯರಾದ ಡಾ. ಭಾಗ್ಯಾ ಮೂರ್ತಿ, ಅಶ್ವಿನಿ ಸತೀಶ್, ಶೃತಿ ಆನಂದ್ ಮತ್ತು ಪ್ರತಿಮಾ ಬೆಳ್ಳಾವೆ ಅವರು ರಾಗ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು. ಬಾಂಬೆ ಆನಂದ್ ಅವರು ಪಿಟೀಲು ಮತ್ತು ಮಿಹಿರ್ ಕುಂಡು ಅವರು ತಬಲಾದ ಸಹ ವಾದಕರಾಗಿದ್ದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮೆಂಬರ್ ಆಫ್ ಪಾರ್ಲಿಮೆಂಟ್ ಫಾರ್ ಟ್ಯಾಂಪನೀಸ್ ಜಿ ಆರ್ ಸಿ ಮಾಹ್ ಬೋ ತಾನ್ ಅವರು ಕಲಾವಿದರಿಗೆ ಶಾಲು ಹೊದಿಸಿ ಮತ್ತು ಪುಷ್ಪ ಗುಚ್ಛ ನೀಡಿ ಸನ್ಮಾನಿದರು. ಇದಾದ ನಂತರ ವಚನ ಪಠಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರ ಮಾಡಲು ಕರೆ ನೀಡಿದರು. ಕನ್ನಡ ಸಂಘದ ಅಧ್ಯಕ್ಷ ವಿಜಯರಂಗ ಪ್ರಸಾದ್ ಅವರು ಮಾಹ್ ಬೋ ತಾನ್ ಅವರಿಗೆ ಮೈಸೂರ ಪೇಟ ತೊಡಿಸಿ, ಪುಷ್ಪ ಗುಚ್ಛ ನೀಡಿ ಸನ್ಮಾನಿದರು.

ಭಾರ್ಗವಿ ಆನಂದ್ ಅವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಾದ, ನೆಲದ ಮರೆಯ ನಿಧಾನದಂತೆ (ಅಕ್ಕ ಮಹಾದೇವಿ), ಚಿಲಿಮಿಲಿ ಎಂದೋಡುವ (ಅಕ್ಕ ಮಹಾದೇವಿ) ಮತ್ತು ತಂದೆ ನೀನು ತಾಯಿ ನೀನು (ಬಸವಣ್ಣ) ಎಂಬ ವಚನಗಳಿಗೆ ಸಮೂಹ ನೃತ್ಯ ಕಾರ್ಯಕ್ರಮ ಸಭಿಕರ ಮನಗೆದ್ದಿತು. ನಂತರ ವಚನ ಪಠಣ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳು ಸಭಿಕರ ಮುಂದೆ ಮತ್ತೊಮ್ಮೆ ವಚನ ಪಠಣ ಮಾಡಿ ಅವರ ಮನಸೂರೆಗೊಂಡರು.

ಆಹ್ವಾನಿತ ಅತಿಥಿಗಳಾಗಿ ಬಂದಂತಹ ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಕೈವಲ್ಯಕುಮಾರ್ ಅವರು ಅನೇಕ ವಚನಗಳನ್ನು ತುಂಬಾ ಭಾವಪೂರ್ಣವಾಗಿ ಪ್ರಸ್ತುತಪಡಿಸಿದರು. ಧಾರವಾಡದ ಭವ್ಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಉಳಿಸಿ ಬೆಳೆಸಿಕೊಂಡುಬರುತ್ತಿರುವ ಕೈವಲ್ಯಕುಮಾರ್ ಹಿಂದುಸ್ತಾನಿ ಸಂಗೀತದ ಪ್ರಖ್ಯಾತ ಘರಾಣೆಯಾದ ಕಿರಾಣಾ ಘರಾಣೆಯ ಯುವ ಪಥ ಪ್ರದರ್ಶಕರು. ಸುಲಲಿತವಾಗಿ ಅನೇಕ ತಾನ್‍ಗಳನ್ನು ಪ್ರಸ್ತುತಪಡಿಸಿದ ರೀತಿಗೆ ಬೆರಗಾಗಿ ಅನೇಕ ಬಾರಿ ಸಭಿಕರು ಚಪ್ಪಾಳೆ ತಟ್ಟಿ ಪ್ರಶಂಸಿಸಿದರು.


ತಮ್ಮ ರಸವತ್ತಾದ ಗಾಯನದಿಂದ ಶ್ರೋತೃವರ್ಗದ ಮನವನ್ನು ರಂಜಿಸಿದ ಪಂಡಿತ್ ಕೈವಲ್ಯಕುಮಾರ್ ಅವರ ಗಾಯನ ವಚನಾಂಜಲಿ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಪಂಡಿತ್ ಕೈವಲ್ಯಕುಮಾರ್ ಅವರಿಗೆ ಹಾರ್ಮೋನಿಯಂ ಮೇಲೆ ರೋಹಿತ್ ಮರಾಠೆ ಮತ್ತು ತಬಲಾದ ಮೇಲೆ ಮಿಹಿರ್ ಕುಂಡು ಅವರು ಸಮರ್ಥವಾಗಿ ಸಾಥ್ ನೀಡಿದರು.

ಇದಾದ ಮೇಲೆ ಕನ್ನಡ ಸಂಘದ ಅಧ್ಯಕ್ಷ ವಿಜಯರಂಗ ಪ್ರಸಾದ್, ಟ್ಯಾಂಪನೀಸ್ ಈಸ್ಟ್ ಸಿಸಿ IAECಯ ಚೇರ್ ಪರ್ಸನ್ ತಂಗಮ್ ಹಾಗೂ ಅದರ ಕಾರ್ಯದರ್ಶಿ ಬಿ. ಮುರಲಿ ಅವರು ಕಲಾವಿದರಿಗೆ ಸನ್ಮಾನ ಮಾಡಿದರು. ಮುರಲಿ ಮತ್ತು ಕನ್ನಡ ಸಂಘದ ರಶ್ಮಿ ಉದಯಕುಮಾರ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದವರು ಜಯಶ್ರೀ ಭಟ್ ಮತ್ತು ವಸಂತ ಕುಲಕರ್ಣಿ.

ವಚನ ಪಠನ ಹಾಗೂ ಪ್ರಬಂಧ ಸ್ಪರ್ಧೆಗಳು : ವಚನಾಂಜಲಿ ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ಈ ಬಾರಿ ಹಿರಿಯರಿಗೆಂದು ಪ್ರಬಂಧ ಸ್ಪರ್ಧೆಗಳನ್ನು ವಿಶೇಷವಾಗಿ ಏರ್ಪಡಿಸಲಾಗಿತ್ತು. ಕಿರಿಯರಿಗೆಂದು ನಡೆಸಿದ ವಚನ ಸ್ಪರ್ಧೆಗಳಲ್ಲಿ ಸಬ್-ಜೂನಿಯರ್ ವಿಭಾಗದಲ್ಲಿ ಅದೈತ್ ಕೆ.ಆತ್ರೇಯ (ಪ್ರಥಮ), ಚಾರ್ವಿ (ದ್ವಿತೀಯ), ಶ್ರೀಸ್ತುತಿ (ತೃತೀಯ), ಜೂನಿಯರ್ ವಿಭಾಗದಲ್ಲಿ ಅಮೋಘ್ ಕೆ.ಆತ್ರೇಯ (ಪ್ರಥಮ), ಧನ್ಯಾ ಅಯ್ಯರ್ (ದ್ವಿತೀಯ), ವೇದ ಭಟ್ (ತೃತೀಯ) ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಲೋಕೇಶ್ವರಿ ನಾಯಕರ್ (ಪ್ರಥಮ), ಸುನೀತಾ ಕಾರ್ತಿಕ್ (ದ್ವಿತೀಯ) ಬಹುಮಾನವನ್ನು ಗಳಿಸಿದರು. ಎಲ್ಲಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಗಿರೀಶ್ ಜಮದಗ್ನಿ, ಶಂಕರ್ ಮರೋಳ್ ಮತ್ತು ಶೋಭ ಮಲಿಕಾರ್ಜುನ ತಮ್ಮ ಸೇವೆಯನ್ನು ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು singapore ಸುದ್ದಿಗಳುView All

English summary
Vachana sahitya is a form of rhythmic writing in Kannada, that evolved in the 11th century and flourished in the 12th century, as a part of the Sharna movement. Kannada Koota Singapore had organized Vachananjali 2015 on 18th August to celebrate this unique kind of Kannada literature.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more