ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕನಸು ಕಾಣುತ್ತಿರುವವರಿಗೆ ಬಿಗ್ ಶಾಕ್, ಇಲ್ಲಿ ಸ್ಟೇಷನ್ ಆಗಲ್ಲ
ಬೆಂಗಳೂರು: ನಗರದ ಜನ ಹಲವು ವರ್ಷಗಳಿಂದ ಕಾಯುತ್ತಿರುವ ಬಹುನಿರೀಕ್ಷಿತ ನಮ್ಮ ಮೆಟ್ರೋದ 3A ಹಂತದ (Red Line) ಹೆಬ್ಬಾಳ ಮತ್ತು ಸರ್ಜಾಪುರ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರದ ಅಂತಿಮ ಮಂಜೂರಾತಿ ಪಡೆಯಲು ಬಿಎಂಆರ್‌ಸಿಎಲ್ (BMRCL) ಭರ್ಜರಿ ಕಸರತ್ತು ನಡೆಸಿದೆ. ಯೋಜನಾ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಮೆಟ್ರೋ ಸಂಸ್ಥೆಯು ಈ ಮಾರ್ಗದಲ್ಲಿ ಉದ್ದೇಶಿಸಲಾಗಿದ್ದ ಒಂದು ಪ್ರಮುಖ ಮೆಟ್ರೋ ನಿಲ್ದಾಣವನ್ನು ಕೈಬಿಟ್ಟಿದೆ. ಪರಿಷ್ಕೃತ ಯೋಜನಾ ವರದಿಯಲ್ಲಿ (DPR) ಈ ಬದಲಾವಣೆ ಮಾಡಲಾಗಿದ್ದು, ಇದರಿಂದ ಕೇಂದ್ರದಿಂದ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆಯಿದೆ.
ಯೋಜನಾ ವೆಚ್ಚದಲ್ಲಿ ಕಡಿತ
ಮೊದಲಿನ ಅಂದಾಜು ವೆಚ್ಚ 28,405 ಕೋಟಿ. ಭೂಗತ ಮಾರ್ಗದ ವೆಚ್ಚವನ್ನು ಸಮರ್ಥಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಸೂಚಿಸಿದ ಹಿನ್ನೆಲೆಯಲ್ಲಿ, ಫ್ರೆಂಚ್ ಸಂಸ್ಥೆ 'SYSTRA' ಮೂಲಕ ಬಿಎಂಆರ್‌ಸಿಎಲ್ ವೆಚ್ಚದ ಮರುಪರಿಶೀಲನೆ ನಡೆಸಿತು. ಸುರಂಗ ನಿಲ್ದಾಣಗಳ ಉದ್ದವನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಸೀಮಿತಗೊಳಿಸಲಾಯಿತು. ನಿಲ್ದಾಣವನ್ನು ಕೈಬಿಟ್ಟ ನಂತರದ ಇತ್ತೀಚಿನ ವಿನ್ಯಾಸ ಬದಲಾವಣೆಗಳೊಂದಿಗೆ ಇತ್ತೀಚೆಗೆ ಸಲ್ಲಿಸಲಾದ ಹೊಸ ವರದಿಯಲ್ಲಿ ಯೋಜನೆಯ ಒಟ್ಟು ವೆಚ್ಚವನ್ನು 25,999 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ಕೈಬಿಟ್ಟ ಮೆಟ್ರೋ ನಿಲ್ದಾಣ ಯಾವುದು?
ಮೆಟ್ರೋ ಮೂಲಗಳ ಪ್ರಕಾರ, ಮೇಖ್ರಿ ಸರ್ಕಲ್ ಮತ್ತು ಗಂಗಾನಗರದ ನಡುವೆ ನಿರ್ಮಿಸಲು ಯೋಜಿಸಲಾಗಿದ್ದ 'ವೆಟರಿನರಿ ಕಾಲೇಜ್' (Veterinary College) ಅಂಡರ್‌ಗ್ರೌಂಡ್ ಸ್ಟೇಷನ್ ಅನ್ನು ಈಗ ಯೋಜನೆಯಿಂದ ಕೈಬಿಡಲಾಗಿದೆ. ಈ ನಿಲ್ದಾಣದಲ್ಲಿ ಭವಿಷ್ಯದಲ್ಲಿ ಪ್ರಯಾಣಿಕರ ಸಂಚಾರ (Ridership) ಅತ್ಯಂತ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡಬಲ್ ಡೆಕ್ಕರ್ ಮೆಟ್ರೋ ವಿನ್ಯಾಸಕ್ಕೆ ಐಐಟಿ ಎಂಟ್ರಿ
ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಇಡೀ ಕಾರಿಡಾರ್ ಉದ್ದಕ್ಕೂ 'ಡಬಲ್ ಡೆಕ್ಕರ್' (ಕೆಳಗೆ ಫ್ಲೈಓವರ್, ಮೇಲೆ ಮೆಟ್ರೋ ಮಾರ್ಗ) ನಿರ್ಮಿಸುವ ಕರ್ನಾಟಕ ಸರ್ಕಾರದ ನೀತಿಗೆ ಕೇಂದ್ರ ಸಚಿವಾಲಯವು ಕೆಲವು ಆಕ್ಷೇಪ ವ್ಯಕ್ತಪಡಿಸಿತ್ತು. ಡಬಲ್ ಡೆಕ್ಕರ್ ಫ್ಲೈಓವರ್‌ಗಳಿಂದಾಗಿ ಖಾಸಗಿ ವಾಹನಗಳ ಬಳಕೆ ಹೆಚ್ಚಿ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿಯಬಹುದು ಎಂಬುದು ಕೇಂದ್ರದ ಆತಂಕವಾಗಿತ್ತು. ಈ ಸಮಸ್ಯೆಯ ಇತ್ಯರ್ಥಕ್ಕಾಗಿ ಬಿಎಂಆರ್‌ಸಿಎಲ್ ಈಗ ಐಐಟಿ ರೂರ್ಕಿ (IIT Roorkee) ಸಂಸ್ಥೆಯನ್ನು ಕಣಕ್ಕಿಳಿಸಿದೆ. ಈ ಡಬಲ್ ಡೆಕ್ಕರ್ ವಿನ್ಯಾಸದ ಸೌಕರ್ಯ, ವೆಚ್ಚ ಮತ್ತು ದೀರ್ಘಕಾಲೀನ ನಗರ ಸಾರಿಗೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಐಐಟಿಗೆ ಜವಾಬ್ದಾರಿ ನೀಡಲಾಗಿದೆ. ಈ ವರದಿ ಬಂದ ತಕ್ಷಣ ಕೇಂದ್ರದ ಅನುಮೋದನೆ ಸಿಗಲಿದೆ.
2ನೇ ಹಂತದ ಮೆಟ್ರೋ ವೆಚ್ಚದಲ್ಲೂ ಭಾರಿ ಏರಿಕೆ
ಇದೇ ವೇಳೆ ನಮ್ಮ ಮೆಟ್ರೋ ಹಂತ 2ರ ಯೋಜನಾ ವೆಚ್ಚದ ಪರಿಷ್ಕೃತ ವರದಿಯನ್ನೂ ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿದೆ. 2014ರಲ್ಲಿ ಕೇಂದ್ರ ಸರ್ಕಾರವು 72 ಕಿಲೋಮೀಟರ್ ಉದ್ದದ ಈ ಯೋಜನೆಗೆ 26,405.14 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ಪ್ರಸ್ತುತ ಇದರ ಮುಕ್ತಾಯದ ವೆಚ್ಚ ಬರೋಬ್ಬರಿ 40,425 ಕೋಟಿ ರೂ. ಗೆ ಏರಿಕೆಯಾಗಿದೆ. ಅಂದರೆ ಸುಮಾರು 14,019.8 ಕೋಟಿ ರೂ. ವೆಚ್ಚ ಹೆಚ್ಚಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಭರಿಸಿರುವ ಭೂಸ್ವಾಧೀನ ವೆಚ್ಚವನ್ನು ಹೊರತುಪಡಿಸಿ, ಹೆಚ್ಚುವರಿ ವೆಚ್ಚ 9,729.90 ಕೋಟಿ ರೂ.ಗಳ ಮಂಜೂರಾತಿಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಮಾರ್ಗ ನಿರ್ಮಾಣವಾದರೆ ಟ್ರಾಫಿಕ್ ಜಾಮ್‌ಗೆ ತುಸು ಮುಕ್ತಿ ಸಿಗುವ ನಿರೀಕ್ಷೆ ಇದೆ.













Click it and Unblock the Notifications