Get Updates
Get notified of breaking news, exclusive insights, and must-see stories!

ಮಸ್ಕತ್ ಕನ್ನಡಿಗರ ಮನಸೂರೆಗೊಂಡ ನವಸಂಜೆ - 2014

ಭಾರತೀಯ ಸಾಮಾಜಿಕ ವೇದಿಕೆ - ಕರ್ನಾಟಕ ವಿಭಾಗ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನವಸಂಜೆ ಕಾರ್ಯಕ್ರಮ ದಿನಾಂಕ ಸೆ.27ರಂದು ಅತ್ಯಂತ ಯಶಸ್ವಿಯಾಗಿ ಮಸ್ಕತ್ ನ ISC-MP Hallನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಂತ್ಯಾಕ್ಷರಿ ಮತ್ತು ಕನ್ನಡ ಚಿತ್ರಗೀತೆಗಳ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ಕಲಿಕೆಯ ಮಹತ್ವ ಕುರಿತು ಹಿತನುಡಿ, ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕನ್ನಡ ಸಂಘದ ಕಾರ್ಯಕಾರಿ ಪ್ರಧಾನ ಸಂಚಾಲಕರಾದ ಪ್ರಸಾದ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ನವಸಂಜೆ ಕಾರ್ಯಕ್ರಮದ ಕುರಿತು ವಿವರಗಳು ಹಾಗೂ ಹೊಸದಾಗಿ ರೂಪುಗೊಂಡ ಸಮಿತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿದ್ಯಾರಾಣಿಯವರು ಕಾರ್ಯಕ್ರಮವನ್ನು ಮುಂದುವರೆಸಿದರು.

ಅಂತ್ಯಾಕ್ಷರಿ ಸ್ಪರ್ಧೆಗೆ ಸುಮಾರು 42 ಜನರು ತಮ್ಮ ಹೆಸರನ್ನು ನೊಂದಾಯಿಸಿದ್ದರು, 45 ನಿಮಿಷಗಳ ಕಾಲ ನಡೆದ ನಿರ್ಗಮನ ಸುತ್ತಿನಲ್ಲಿ ಪಾಲ್ಗೊಂಡಿದ್ದ ಎಲ್ಲ ಸ್ಪರ್ಧಿಗಳಲ್ಲಿ 3 ಜನರನ್ನೊಳಗೊಂಡ 6 ತಂಡಗಳ 18 ಜನ ಅಂತಿಮ ಸುತ್ತಿಗೆ ಆಯ್ಕೆಯಾದರು. [ಕಾರ್ಯಕ್ರಮದ ಚಿತ್ರಪಟ]


ಅವರಲ್ಲಿ ಹಿರಿಯಣ್ಣ, ಶ್ರೀಮಾತ, ಮತ್ತು ಸುಮ ಶಶಿ ಪ್ರಕಾಶ್ ರವರ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನವನ್ನು ರಮೇಶ್, ನಿರ್ಮಲ ಶಿವಣ್ಣ ಮತ್ತು ರಾಧ ರಾಮಚಂದ್ರಪ್ಪರವರು ಪಡೆದರು. ನಂತರದ ಸ್ಥಾನವನ್ನು ಶ್ರೀನಿವಾಸ್, ರೇಶ್ಮಾ ಹಿತೇಶ್ ಮತ್ತು ಜಯಲಕ್ಷ್ಮಿ ಶೆಣೈ ರವರ ತಂಡ ಪಡೆಯಿತು.

ಅಂತ್ಯಾಕ್ಷರಿ ಕಾರ್ಯಕ್ರಮದ ಮಧ್ಯೆ ಸಭಿಕರಿಗೂ ಸಹ ಸ್ಪರ್ಧೆಯಲ್ಲಿ ರಸಪ್ರಶ್ನೆ ಗಳಿಗೆ ಉತ್ತರ ನೀಡಲು ಅವಕಾಶವಿತ್ತು, ಸುಮಾರು 10 ಜನ ಅದೃಷ್ಟ ಸಭಿಕರು ಸರಿ ಉತ್ತರ ನೀಡಿ ಬಹುಮಾನ ಗಳಿಸಿದರು. ಅಂತ್ಯಾಕ್ಷರಿ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಜಾನಕೀನಾಥ್ ರವರು ಸುಪ್ರಿತಾರಾವ್, ಪ್ರೇಮಾ ಮತ್ತು ದೀಪಕ್ ರಾವ್ ರವರ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟರು.

ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಮತ್ತು ಹಚ್ಚೇವು ಕನ್ನಡದ ದೀಪ ಗೀತೆಗಳನ್ನು ಸಂಘದ ಸದಸ್ಯರ ಸುಮನ ಶಶಿಧರ್, ಅನುಪಮ ಪ್ರಸಾದ್, ರಾಜು, ಡಾ.ಸಂತೋಷ್, ಗೀತಾ ಭಟ್ ಮತ್ತು ರವಿಪ್ರಕಾಶ್ ರವರ ಅತ್ಯಂತ ಸೊಗಸಾಗಿ ಹಾಡಿ ಮಸ್ಕತ್ ಕನ್ನಡಿಗರ ಕನ್ನಡಭಿಮಾನವನ್ನು ಜಾಗೃತಿ ಗೊಳಿಸುವಲ್ಲಿ ಯಶಸ್ವಿಯಾದರು. ಸಂಘದ ಕೆಲ ಸದಸ್ಯರು ನವರಾತ್ರಿ ಹಬ್ಬದ ಪ್ರಯುಕ್ತ ಕೆಲ ಪೋಸ್ಟರ್ ಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದು ವಿಶೇಷವಾಗಿತ್ತು. ಹಬ್ಬದ ಕುರಿತು ಹಲವಾರು ಮಾಹಿತಿಗಳನ್ನು ಚಾರ್ಟ್ ಗಳಲ್ಲಿ ವರ್ಣರಂಜಿತ ಚಿತ್ರಗಳ ಸಮೇತ ನೀಡಿದ್ದರು.


ಮಸ್ಕತ್ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆಯ ಮಹತ್ವ ಕುರಿತು ಹಿತ ವಚನವನ್ನು ಯೋಗಾನಂದ್ ರವರು ನೀಡಿದರು, ಶ್ರೀಯುತರು ಹಲವಾರು ವರ್ಷಗಳ ಕಾಲ ಕನ್ನಡ ಸಂಘದಲ್ಲಿ ಸೇವೆಸಲ್ಲಿದ್ದು, ಮಸ್ಕತ್ ನಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಸುಮಾರು 10 ವರ್ಷಗಳ ಕಾಲ ಕನ್ನಡ ತರಗತಿಗಳನ್ನು ನಡೆಸಿದ್ದಾರೆ. ಮಸ್ಕತ್ ನ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಕರ್ನಾಟಕ ರಾಜ್ಯದಲ್ಲಿ ವೃತ್ತಿ ಶಿಕ್ಷಣ ತರಗತಿಗಳಿಗೆ CETಗೆ ರಾಜ್ಯದಿಂದ ಪ್ರವೇಶ ಪಡೆಯಲು ಹಾಗು ದಿನನಿತ್ಯದ ವ್ಯವಹಾರಗಳಿಗೆ ಕನ್ನಡ ಕಲಿಯುವುದರಿಂದ ಆಗುವ ಉಪಯೋಗಗಳ ಕುರಿತು ಹಲವಾರು ಮಾಹಿತಿಗಳನ್ನು ನೀಡಿದರು ಹಾಗು ಅದರ ಪ್ರಯೋಜನ ಪಡೆದ ಪೋಷಕರ ಬಗ್ಗೆ ವಿವರ ಸಹ ನೀಡಿದರು.

ಮಾ. ಅನುಪ್ ಸಾರಂಗ್, ಕನ್ನಡ ಸಂಘದ ಮುಂದಿನ ಕಾರ್ಯಕ್ರಮವಾದ ಕರ್ನಾಟಕ ಉತ್ಸವದ ಕುರಿತು ಕಿರು ಪರಿಚಯ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅತಿಥಿಗಳಾದ ಭಾರತೀಯ ಸಾಮಾಜಿಕ ವೇದಿಕೆಯ ಅಧ್ಯಕ್ಷ ಸತೀಶ್ ನಂಬಿಯಾರ್ ಮತ್ತು ಬ್ಯಾಂಕ್ ಮಸ್ಕತ್ ನ ರಾಮಕೃಷ್ಣ ರವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಭಾರತೀಯ ಸಾಮಾಜಿಕ ವೇದಿಕೆಯ ಅಧ್ಯಕ್ಷರಾದ ಸತೀಶ್ ನಂಬಿಯಾರ್ ರವರು ಕಾರ್ಯಕ್ರಮದ ಕುರಿತು ಕನ್ನಡದಲ್ಲಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸದಾಗಿ ರೂಪುಗೊಂಡ ಸಮಿತಿಯು ಅತಿ ಕಡಿಮೆ ಕಾಲಾವಧಿಯಲ್ಲಿ ನವಸಂಜೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಸಭಿಕರಿಗೆ ಮನರಂಜನೆ ನೀಡುವುದರಲ್ಲಿ ಯಶಸ್ಸು ಕಂಡಿದೆ. ಈ ಸಮಿತಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳು ಸತತವಾಗಿ ಬರಲಿ ಜನರ ಮೆಚ್ಚುಗೆಯನ್ನು ಗಳಿಸಲಿ ಎಂದು ಹಾರೈಸಿದರು.

Navaratri celebration in Muscat by Kannadigas

ಮುಖ್ಯ ಪ್ರಾಯೋಜಕರಾದ ಬ್ಯಾಂಕ್ ಮಸ್ಕತ್ ನ ರಾಮಕೃಷ್ಣ ರವರು ಮಾತನಾಡಿ, ಕಾರ್ಯಕ್ರಮ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಇನ್ನು ವಿವಿಧ ರೀತಿಯ ಸದಭಿರುಚಿ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸಿ ಕನ್ನಡ ಸಂಘದ ಹೆಸರನ್ನು ರಾರಾಜಿಸುವಂತೆ ಮಾಡುವ ಜವಾಬ್ದಾರಿ ಸಂಘದ ಮೇಲಿದೆ. ಜನ ನಿಮ್ಮ ಮೇಲೆ ಇನ್ನು ತುಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ, ನಮ್ಮ ಪ್ರೋತ್ಸಾಹ ಎಂದಿನಂತೆ ಮುಂದುವರೆಯುತ್ತೆ. ನಿಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಾಣಲಿ ಎಂದು ಹಾರೈಸಿದರು.

ಸಂಘದ ಖಜಾಂಚಿ ಸುಧೀರ್ ಶೆಟ್ಟಿಯವರು ಡಿಜೆ ಜೆಸನ್ ರವರ ಪರಿಚಯ ನೀಡಿದರು. ಜೆಸನ್ ರವರು ಚಿಕ್ಕವಯಸ್ಸಿನಲ್ಲಿಯೆ ಡಿಜೆ ಸಂಗೀತ ಸಂಯೋಜನೆಯಲ್ಲಿ ಹಲವಾರು ಆಲ್ಬಮ್ ಗಳನ್ನು ತಂದಿದ್ದು ಕರಾವಳಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆಯಲ್ಲಿ ನವಸಂಜೆ ಕಾರ್ಯಕ್ರಮದಲ್ಲಿ ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮ ನಡೆಯಿತು. ಕಿರಿ ಮತ್ತು ಹಿರಿಯರೆನ್ನದೆ ಎಲ್ಲವಯೋಮಾನದವರು ಕನ್ನಡ ಚಿತ್ರಗೀತೆಗಳಿಗೆ ಒಂದು ಘಂಟೆಗೂ ಹೆಚ್ಚು ಹೊತ್ತು ಕುಣಿದು ಕುಪ್ಪಳಿಸಿದರು. ಸಂಘದ ವತಿಯಿಂದ ಡಿಜೆ ಜೆಸನ್ ರವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಕಾರ್ಯಕ್ರಮದ ಕೊನೆಗೆ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಪ್ರಿತಾರಾವ್ ರವರು ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ತದನಂತರ ಸ್ವಾಗತ್ ಗ್ರೂಪ್ ಆಫ್ ಹೋಟೆಲ್ಸ್ ನ ಬಲ್ಲಾಳ್ ರವರ ತಂಡ ತಯಾರಿಸಿದ ರುಚಿಕರವಾದ ಭೋಜನವನ್ನು ಸಂಘದ ಸದಸ್ಯರು ಸವಿದರು. ಅತಿ ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಏರ್ಪಡಿಸಿ ಕನ್ನಡ ಸಂಘದ ಹೊಸ ಸಮಿತಿ ತಮ್ಮ ಚೊಚ್ಚಲ ಕಾರ್ಯಕ್ರಮದಲ್ಲಿ ಯಶಸ್ಸು ಗಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+