ಮೈನವಿರೇಳಿಸುವ ಮಾವಿ ದ್ವೀಪದ ಪ್ರವಾಸ ಕಥನ

By: ಅಚಲಾ ಸೇತು, ಲಾಸ್ ವೇಗಾಸ್, ಯುಎಸ್ಎ
Subscribe to Oneindia Kannada

ಚಿಕ್ಕ ಚಿಕ್ಕ ಚಿಕ್ಕ ರೆಕ್ಕೆ ಪುಕ್ಕ ರೆಕ್ಕೆ
ಬಿಚ್ಚಿ ಬಿಚ್ಚಿ ಬಿಚ್ಚಿ ಎತ್ತರೆತ್ತರಕ್ಕೆ
ಹಾರಾಡೋ ಹಕ್ಕಿ ಹಕ್ಕಿಯೋ.. ತೇಲಾಡೋ ಹಕ್ಕಿ ಹಕ್ಕಿಯೋ..
ಅಲ್ಲಿ ಗಿರಿ ಗಿರಿಯೋ ಇಲ್ಲಿ ಝರಿ ಝರಿಯೋ
ಓ ಮೆಘಾ ಓ ಗಾಳಿ..

ಹೆಲಿಕಾಪ್ಟರ್ ಹಕ್ಕಿ ಹಗುರವಾಗಿ ತೇಲಾಡುತ್ತ ಪಚ್ಚೆ ಮಣಿಗಳಂತಹ ಮಳೆಕಾಡಿನ ಗಿರಿ ಝರಿಗಳ, ಹವಳದೊಡಲ ನೀಲ ನೀಲ ತೀರಗಳ ಸೊಬಗನ್ನು ನನ್ನ ಕಣ್ಣ ತುಂಬ ತುಂಬಿಸುತ್ತಿತ್ತು.

"ಅಮ್ಮ ಜುರಾಸಿಕ್ ಪಾರ್ಕಿನ ಓಪನಿಂಗ್ ಸೀನು ಹೇಗೆ ತೋರಿಸಿದಾರೋ ಡಿಟ್ಟೊ ಹಾಗೆ ಇದೆ."
"ಇಲ್ನೋಡು, ಪೈರೆಟ್ಸ್ ಆಫ್ ದ ಕರೀಬಿಯನ್ ಪಾರ್ಟ್ 3 ಎಂಡಿಂಗ್ ಸೀನು ಡಿಟ್ಟೋ ಇಲ್ಲೆ ತೆಗೆದಿದ್ದು" ಮಾವಿ ದ್ವೀಪದಲ್ಲಿ ಮಗನ ಮೂವಿ ಕಾಮೆಂಟರಿ ಅವ್ಯಾಹತವಾಗಿ ನಡೆದಿತ್ತು.

ಒಂದಾದಮೇಲೊಂದರಂತೆ ತನ್ನ ಕಂಪ್ಯೂಟರ್ ಮೆಮೊರಿಯ ಸ್ಯಾಂಪಲ್ ಕೊಡುತ್ತಿದ್ದ ಮಗರಾಯ, ಕಳೆದ ತಿಂಗಳ ಟೆಸ್ಟಿನಲ್ಲಿ ಉತ್ತರ ಮರೆತು ಬಿ ಗ್ರೇಡ್ ತೆಗೆದಿದ್ದು ಹೇಗೆ ಅಂತ ಯೋಚಿಸುತ್ತಿರುವಾಗ, ಪುಟ್ಟ ಮಗಳು "ನಿಜವಾಗ್ಲೂ ಪೈರೆಟ್ಸ್ ಆಫ್ ದ ಕೇರಟ್ ಬೀನ್ ಇಲ್ಲೇ ತೆಗೆದದ್ದಾ?" ಎಂದಾಗ ಪೈಲೆಟ್ ಸಮೇತ ಎಲ್ಲರಿಗೂ ನಗು ಬಂದಿತ್ತು. [ಹಿಮಾಚಲದ ಹೆವೆನ್ ಕುಲು ಮನಾಲಿ ಪ್ರವಾಸಕಥನ]

Maui island travelogue by Achala Sethu

***

ಬಾಗಿಲು ಜಡಿದು ಕುಳಿತ ಅಂಕಲ್ ಸ್ಯಾಮ್ ಮುನಿಸಿಗೊಂದಿಷ್ಟು ಕೇರ್ ಮಾಡದೆ ನಿರುಮ್ಮಳವಾಗಿ ಹವಾಯಿಗೆ ಹೊರಡುವ ತಯ್ಯಾರಿ ನಡೆಸಿದ್ದೆ. ಸದ್ಯಕ್ಕೆ ಐ.ಆರ್.ಎಸ್ ಜೊತೆ ಯಾವುಗೇ ಲೇನಾ ದೇನಾದ ಝಂಝಾಟವಿಲ್ಲ. ಸರಕಾರಿ ನೌಕರಿಯಲ್ಲಿಲ್ಲ. ದೇವರ ದಯೆಯಿಂದ ಫುಡ್ ಸ್ಟಾಂಪ್ಗಳಿಗೆ ಅರ್ಜಿ ಗುರಾಯಿಸುವ ಪ್ರಮೇಯವೂ ಇಲ್ಲ. ಅಂದ ಮೇಲೆ 'ವಿ ದ ಪೀಪಲ್' ಸುಖಾ ಸುಮ್ಮನೆ ತಲೆ ಬಿಸಿ ಯಾಕೆ ತಾನೆ ಮಾಡ್ಕೊಬೇಕು? ಆದರೆ, ಸಕ್ರಿಯ ಅಗ್ನಿ ಪರ್ವತ, ಕ್ರೇಟರ್ ಒಳಗೊಂಡ ಮಾವಿಯ ಹಲೇಕಲ ರಾಷ್ಟ್ರೀಯ ಉದ್ಯಾನವನ ತನ್ನೆಡೆ ಕಣ್ಣೂ ಕೂಡ ಹಾಯಿಸಲು ಬಿಡದೆ ಸರ್ಕಾರದ ಸಾಥ್ ಕೊಟ್ಟಾಗ ತಲೆ ಸ್ವಲ್ಪ ಬಿಸಿಯಾಯಿತು. ಹಾಳಾದ್ದು! ನಾವು ಹವಾಯಿಗೆ ಹೊರಟಾಗಲೇ ಸರ್ಕಾರ ಹೀಗೆ ರಚ್ಚೆ ಹಿಡಿದು ಕೂರಬೇಕಿತ್ತೇ! [ಒಮಾನ್ ಜನಪ್ರಿಯ ಪ್ರವಾಸಿ ತಾಣ ಬಿಮ್ಮ ಸಿಂಕ್ ಹೋಲ್]

***
ಕಡಲಾಮೆಗಳ ಜೊತೆ ಜೊತೆಯಲಿ

Maui island travelogue by Achala Sethu

ಮಾವಿಯ ದಕ್ಷಿಣ ಸಮುದ್ರ ತೀರದ ಬಳಿ 'ಟರ್ಟಲ್ ಟೌನ್' ಹೆಸರಿನ ಸ್ನಾರ್ಕಲಿಂಗ್ ತಾಣವಿದೆ. ಮೈಲುಗಟ್ಟಲೆ ಉರುಟು ಉರುಟಾದ ಹವಳ ಹಬ್ಬುಗಳ ಹಾಸಿನ ಮೇಲೆ, ಕೊರಕಲುಗಳ ಸಂದಿ ಗೊಂದಿಗಳಲ್ಲಿ ಸುಳಿದಾಡುವ ಬಣ್ಣ ಬಣ್ಣದ ಮೀನು, ಕಡಲಾಮೆಗಳನ್ನು ನೀರ ಮೇಲೆ ತೇಲುತ್ತಾ ಈಜುತ್ತಾ ನೋಡಬಹುದು.

ಇದು ನನ್ನ ಮೊದಲ ಸ್ನಾರ್ಕಲಿಂಗ್ ಅನುಭವ. ನೀರಿಗೆ ಬಿದ್ದೆ. ಕಡಲಿನ 'ಆಳ'ದ ಅರಿವಿನ ಜೊತೆ ಕೆಲ ತಿಂಗಳುಗಳ ಹಿಂದೆ ಮಾವಿ ಬೀಚಿನ ಬಳಿ ಆಗಿದ್ದ 'ಶಾರ್ಕ್ ಅಟಾಕ್' ನೆನಪಿಗೆ ಬರಬೇಕೆ! ನನ್ನವ ಬೇರೆ ಸರ ಸರ ಈಜುತ್ತಾ ಮುಂದೆ ಮುಂದೆ. ತುಂಬ ಹೆದರಿಕೆಯಾದಾಗ ನನ್ನ ಮೇಲೆ ರೌಡಿ ರಂಗಿಯ ಆತ್ಮವೊಂದು ಅಮರಿಕೊಳ್ತಿರತ್ತೆ. ವಿಚಿತ್ರವಾದ ಡಿಫೆನ್ಸ್ ಮೆಕಾನಿಸಮ್ಮು.

"ಲೋ ಮಗನೇ ಬಾರೊ ಇಲ್ಲಿ! ಎಲ್ಲೋಡೋಯ್ತಾ ಇದ್ಯಾ!" ಕಿರುಚಿದೆ. ಹಿಂದೆ ಬಂದ. "ಲೈಫ್ ಜಾಕೆಟ್ ಹಾಕ್ಕೊಂಡಿದೀಯಲ್ಲೇ, ಗುಗ್ಗು" ಅರೆ ಹೌದಲ್ಲ! ಮುಳಗಬೇಕು ಅಂದರೂ ಆಗಲ್ಲ. ಅದೂ ಅಲ್ಲದೆ ನಾನು ಬ್ಯಾಕ್ ಸ್ಟ್ರೋಕು ಹೊಡೆಯೋದರಲ್ಲಿ ಪಂಟರ್ರು! ಮರೆತೇ ಹೋಗಿತ್ತು! ಹುಳ್ಳಗೆ ಸುತ್ತಲೂ ನೋಡಿದೆ. ಯಾರೂ ಗಮನಿಸಿದಂತೆ ಕಾಣಲಿಲ್ಲ. ಜೊತೆಯಲ್ಲಿದ್ದ ಸ್ನೇಹಿತರಿಗಾರು ಕನ್ನಡ ಬಾರದಿರುವುದು ಒಂಥರ ಸಮಾಧಾನವಾಯಿತು. [ಪೆಸಿಫಿಕ್ ಸಾಗರ ದ್ವೀಪಗಳ ರಾಜ ಹವಾಯಿ!]

Maui island travelogue by Achala Sethu

ಅಕ್ಟೋಬರ್ ತಿಂಗಳಿನಲ್ಲೂ ಮೈ ನಡುಗಿಸದ ಬೆಚ್ಚನೆ ನೀರಲ್ಲಿ ನೋಡಲು ಸಿಗುವ ಬಣ್ಣ ಬಣ್ಣದ ಮೀನುಗಳ ಗುಂಪು, ಹಾವಿನಂತೆ ಸರಿಯುವ ಈಲ್, ತಳದಲ್ಲಿ ಸತ್ತಂತೆ ಮಲಗಿರುವ ಸ್ಟಾರ್ ಫಿಶ್, ಕಂದು ಕೋರಲ್ ದಿಬ್ಬಗಳ ಮೇಲೆ ಜೀವಂತ ಕೋರಲ್ಗಳು! ನನ್ನಿಂದ ಹತ್ತಾರು ಅಡಿಗಳ ಅಂತರದಲ್ಲಿ ಕೆಳಗಿನ ಕೊರಕಲ ಗವಿಯಿಂದ ದೊದ್ದ ನೀರಾಮೆಯೊಂದು ನಿಧಾನವಾಗಿ ನೀರಿನ ಮೇಲ್ಮೈಗೆ ಉಸಿರೆಳೆಯಲು ಬಂತು. ತನ್ನ ಸುತ್ತ ಮುತ್ತಲ ಹುಲು ಮಾನವರ ಉದ್ವೇಗ ಉನ್ಮೇಷಗಳಿಗೆ ಸ್ವಲ್ಪವೂ ಅಳುಕದೆ, ಪೋಸ್ ಕೊಟ್ಟು ಫೋಟೊ ತೆಗೆಸಿಕೊಂಡು ವಾಪಸ್ ನಿಧಾನವಾಗಿ ತನ್ನ ಗವಿಯೊಳಗೆ ಸರಿಯಿತು.

ರೋಡ್ ಟು ಹ್ಯಾನ

ರಸ್ತೆಗಳಿಗು ಸೆಲಬ್ರಿಟಿ ಸ್ಟೇಟಸ್ ಕೊಡಬಹುದಾದರೆ 'ರೋಡ್ ಟು ಹ್ಯಾನ' ಖಂಡಿತವಾಗಿ ಅಮೆರಿಕೆಯ ಟಾಪ್ 10 ರಸ್ತೆಗಳಲ್ಲಿ ಒಂದಾಗಿ ಮಿಂಚುತ್ತದೆ. ಕಹುಲಾಯಿ ಪ್ರದೇಶದಿಂದ ಹೊರಟು 50 ಮೈಲು ದೂರದ ಪುಟ್ಟ ಹಳ್ಳಿ ಹ್ಯಾನ ತಲುಪುವ ಈ ನೀಳ ಕಾಯದ ವೈಯ್ಯಾರಿಯ ಮೈ ತುಂಬ ಆರುನೂರಕ್ಕೂ ಹೆಚ್ಚಿನ ಹೇರ್ಪಿನ್ ಡೊಂಕುಗಳು. ಟ್ರಾವೆಲ್ ಸಿಕ್ನೆಸ್ನಿಂದ ಬಳಲುವ ನನ್ನಂತವರಂತೂ ದಾರಿಯಲ್ಲಿ 'ವಯಕ್' ಅನ್ನದಿರಲು ಊಟ ತಿಂಡಿಗಳ ವಿಷಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿರಬೇಕು. ಹಾಗಿದ್ದಲ್ಲಿ ಮಾತ್ರ ಹಸಿರು ಮಳೆಕಾಡಿನ ಎಗ್ಜಾಟಿಕ್ ಮರಗಿಡಗಳ, ಅಡಿಗಡಿಗೂ ಸಿಗುವ ಸಣ್ಣ ಪುಟ್ಟ ಜಲಪಾತಗಳ, ಹೊಳೆ ಹೊಳೆವ ನುಣುಪು ಲಾವ ಕಲ್ಲುಗಳು ತುಂಬಿರುವ ಸಮುದ್ರ ತೀರಗಳ ಸೌಂದರ್ಯವನ್ನು ಮನಃಪೂರ್ತಿ ಅನುಭವಿಸಬಹುದು.

ಭಾರತದ ಆಲದ ಮರಿ

Maui island travelogue by Achala Sethu

ಲಹೈನ ಮಾರ್ಕೆಟ್ ಮಧ್ಯದಲ್ಲಿ, ಮುನಿಸಿಪಲ್ ಕೋರ್ಟ್ ಹೌಸಿನ ಎದುರು ಬೃಹತ್ತಾದ ಆಲದ ಮರವೊಂದಿದೆ. ಅರವತ್ತು ಅಡಿ ಎತ್ತರವಿದ್ದು ವಿಶಾಲವಾಗಿ ಹರಡಿರುವ ಈ ಮರ ಭಾರತದಿಂದ 1873ರಲ್ಲಿ ಮಾವಿಗೆ ಬಂದಾಗ 8 ಅಡಿ ಎತ್ತರದ ಪುಟ್ಟ ಆಲದ ಮರಿಯಂತೆ. ಲೋಕಲ್ ಬನಿಯಾಗಳಿಗೆ ತನ್ನ ತಂಪು ನೆರಳಡಿಯಲ್ಲಿ ಆಶ್ರಯ ಕೊಟ್ಟು, ಬೆಂಗಳೂರಿನ ಬಳಿಯಿರುವ ದೊಡ್ಡಾಲದ ಮರದಂತೆ ಧೀಮಂತವಾಗಿ ತಲೆ ಎತ್ತಿ ನಿಂತ ನನ್ನ ಭಾರತದ ರಾಷ್ಟ್ರವೃಕ್ಷದ ಬಗ್ಗೆ ಭಾವುಕವಾಗಿ ಏನೇನೋ ಅನ್ನಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The island of Maui is the second-largest of the Hawaiian Islands at 727.2 square miles (1,883 km2) and is the 17th largest island in the United States. Snorkeling is one of the most popular activities on Maui. Travelogue by Achala Sethu, Las Vegas, USA.
Please Wait while comments are loading...