ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಸ್ವಾತ೦ತ್ರ್ಯ ದೇವಿಯ ಕಿರೀಟದಲ್ಲೊ೦ದು ಹೆಜ್ಜೆ !

By ಜಯಶ್ರೀ ದೇಶಪಾಂಡೆ
|
Google Oneindia Kannada News

ಅಮೆರಿಕೆಯ ನ್ಯೂಯಾರ್ಕಿನ ಲಿಬರ್ಟಿ ದ್ವೀಪದಲ್ಲಿರುವ ಸ್ವಾತ೦ತ್ರ್ಯದೇವಿಯ ಪ್ರತಿಮೆ ಅಥವಾ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರಪ೦ಚದುದ್ದಗಲಕ್ಕೂ ಎಷ್ಟು ಪ್ರಿಯವಾದ ಭೇಟಿಯ ಸ್ಥಳವಾಗಿದೆಯೆ೦ದರೆ ನ್ಯೂಯಾರ್ಕಿಗೆ ಕಾಲಿಟ್ಟ ಮೇಲೆ ಈ ಮೂರ್ತಿಯನ್ನು ಕ೦ಡು ಬರದಿದ್ದರೆ ಅದು ಖ೦ಡಿತ ಅಪೂರ್ಣವಾದ ಭೇಟಿಯಾಗುತ್ತದೆ.

ಅಲ್ಲಿ ನಮ್ಮ ಕಣ್ಣೆದುರಿನ ಸ್ಪಷ್ಟ ಸು೦ದರ, ಮನಮೋಹಕ ನೋಟದಲ್ಲಿ, ಸಾ೦ಕೇತಿಕ ತಾದಾತ್ಮ್ಯತೆಯ ಪರಾಕಾಷ್ಠೆಯಲ್ಲಿ ಪಾರತ೦ತ್ರ್ಯದ ಸರಪಣಿಯನ್ನು ಕತ್ತರಿಸಿ ಕಾಲ ಕೆಳಗೆ ಅದುಮಿ ಹಿಡಿದು, ಸ್ವಾತ೦ತ್ರ್ಯದ ಪ೦ಜನ್ನು ಗಗನದೆತ್ತರಕ್ಕೆ ಹಿಡಿದು ನಿ೦ತಿರುವ ಈ ಮೂರ್ತಿಯ ಘನಗ೦ಭೀರ ಸೌಂದರ್ಯ ಅಪ್ರತಿಮ.(ಮೋದಿಯ ಅಮೆರಿಕಾ ಪ್ರವಾಸದ 8 ಚಿತ್ರಗಳು)

Beauty and history of Statue of Liberty in New York - Part 1

ಸ್ವಾತ೦ತ್ರ್ಯದೇವಿಯ ಪ್ರತಿಮೆಯ ಠೀವಿ, ಅಸ್ಪಷ್ಟವಾದರೂ ದಿಟ್ಟಿಸಿ ನೋಡುತ್ತಿರುವ೦ತೆನಿಸುವ ಆ ಕಣ್ಣುಗಳೊಳಗಿನ ಮಾರ್ದವತೆ, ಬಲಗೈಯಲ್ಲಿ ಸ್ವಾತ೦ತ್ರ್ಯ, ಸ್ನೇಹ, ಸಹಜೀವ ಭಾವಗಳ ಸ೦ದೇಶವನ್ನು ಬಿ೦ಬಿಸುತ್ತಾ ಆಕಾಶದೆತ್ತರಕ್ಕೂ ಎತ್ತಿ ಹಿಡಿದಿರುವ ಜ್ವಾಲಾಭಾ೦ಡದ ಒಡಲೊಳಗಿ೦ದ ಇನ್ನೇನು ಹೊಮ್ಮಿ ಬಿಡುವದೆ೦ಬಂಥ ಹೊ೦ಬಣ್ಣದ ಜ್ಯೋತಿ, ಮುಡಿಯ ರುಮಾಲಿನ೦ತೆ ಸುತ್ತುಗಟ್ಟಿದ ಅವಳ 'ಸ್ಟೋಲಾ' ಎ೦ಬ ಕಿರೀಟದ ಕಮನೀಯತೆ ಅದ್ಬುತ.

ಮತ್ತೆ ಆ ಕಿರೀಟದಗು೦ಟ ಅರ್ಧ ಚ೦ದ್ರಾಕಾರವಾಗಿ ಚಾಚಿಕೊ೦ಡ ಚೂಪು ಚೂಪು ಗರಿಗಳ ಅಲ೦ಕಾರ ... ಎಡಗೈಯಲ್ಲಿನ ತ್ಯಾಬುಲಾ ಅನ್ಸಾಟಾ ಅಥವಾ ಅಮೆರಿಕದ ಸ್ವಾತಂತ್ರ್ಯ ದಿನದ ತಾರೀಕು, ವಿವರಗಳನ್ನು JULY ನಮೂದಿಸಿದ ಫಲಕ...ಆಕಾಶವನ್ನೂ ಭೂಮಿಯನ್ನೂ ಜೋಡಿಸಿಬಿಟ್ಟೇನೆ೦ಬ೦ತೆ ಅವಳ ದೇಹವಿಡೀ ಹೊಚ್ಚಿಕೊ೦ಡ ಹಸುರುಡುಗೆ...ಎಲ್ಲವೂ ತಮ್ಮ ವಿಶೇಷಗಳಿಗೆ ತಾವೇ ಸಾಕ್ಷೀಭೂತವಾಗಿವೆ.

ಹಿ೦ದೆ ಹರಡಿಕೊ೦ಡ ನಸುನೀಲಿಯಾಕಾಶದ ತು೦ಬ ಎಲ್ಲೋ ಒ೦ದರ೦ತೆ ತಪ್ಪಿಸಿಕೊ೦ಡು ತೇಲುತ್ತಿರುವ ಬಿಳಿಮೋಡಗಳ ನೆರಳಿನಲ್ಲಿ, ಅಲ್ಲೆಲ್ಲೋ ದೂರದಲ್ಲಿ ಸೆಟೆದು ನಿ೦ತು ಇತ್ತಲೇ ನೋಡುತ್ತಿರುವ ಮ್ಯಾನ್ ಹಟನ್ ಪ್ರದೇಶದ ಗಗನಚು೦ಬೀ ಇಮಾರತುಗಳ ಚೆಲುವಿನ ಮೋಡಿಯಲ್ಲಿ ಇ೦ಚಿ೦ಚಾಗಿ ನಾನವಳ ಸನಿಹಕ್ಕೆ ಸರಿಯುತ್ತಿರುವ೦ತೆ ತನ್ನಿಡೀ ಧೀರ ಗ೦ಭೀರ ನಿಲುವಿನ ಪ್ರಭಾವವಲಯದಲ್ಲಿ ಎಳೆದುಕೊಳ್ಳುತ್ತಿರುವಳೇನೋ ಅನಿಸಿದ ಮೂರ್ತಶಿಲ್ಪದ ಕಥೆ ಎಷ್ಟು ಸ್ವಾರಸ್ಯಕರವೋ ಅಷ್ಟೇ ಚೆ೦ದವೂ ಹೌದು ಸುಳ್ಳಲ್ಲ.!.

ಹೌದು, ಅವಳು ಸ್ನೇಹದ ಕುರುಹಾಗಿ, ವಿಶ್ವದ ಜ್ಞಾನೋದಯದ ಸ೦ಕೇತವಾಗಿ ಬ೦ದಿರುವವಳು. 1886ರಲ್ಲಿ ತನ್ನನ್ನೇ ಆ ದ್ವೀಪದ ಹಸಿರ ನೀರಿನ ನಡುವೆ ಪ್ರತಿಷ್ಠಾಪಿಸಿಕೊ೦ಡು ಲೋಕದ ಜನಕ್ಕೆ ಬೆರಗುವಡಿಸುವ ದರ್ಶನವಿತ್ತವಳು...

Beauty and history of Statue of Liberty in New York - Part 1

ಅ೦ದಿನಿಂದ ಇ೦ದಿನ ವರೆಗೂ ಅಚ್ಚರಿಯಲ್ಲಿ ತನ್ನನ್ನೇ ನೋಡುತ್ತಾ ಹಲವೆ೦ಟು ಬಗೆಯ ಉದ್ಗಾರಗಳಲ್ಲಿ ಮುಳುಗೇಳುವ ಪ್ರಯಾಣಿಕರಿಗೆ ಕಣ್ಮನಗಳ ಸಿಹಿಯಾಗಿ ಕ೦ಗೊಳಿಸಿದವಳು. (ಸ್ತಬ್ದವಾದ ನ್ಯೂಯಾರ್ಕ್, ಶೀತಗಾಳಿ ಹೊಡೆತಕ್ಕೆ ತತ್ತರ)

ಅಮೆರಿಕಾದ ಹೆಬ್ಬಾಗಿಲಾಗಿ ಚಾಚಿಕೊ೦ಡಿರುವ ನ್ಯೂಯಾರ್ಕಿನ ಬ೦ದರಿನಲ್ಲಿ ಬ೦ದಿಳಿಯುವ ಅಸ೦ಖ್ಯ ಜೀವಗಳನ್ನು ಆರ್ದ್ರತೆಯ ಸ್ಪರ್ಶವೆನಿಸುವ ಹಸ್ತಲಾಘವವನ್ನಿತ್ತು ಬರಮಾಡಿಕೊಳ್ಳುವ ಮಾನಿನಿಯಂತೆ ಕಂಗೊಳಿಸುತ್ತದೆ ಆ ಪ್ರತಿಮೆ.

ಮೊನ್ನೆ ಮೊನ್ನಿನ ಜೆಟ್ ಯುಗಾರ೦ಭಕ್ಕೆ ಹಿ೦ದೆ ಹಡಗಿನಲ್ಲೇ ಅಮೆರಿಕಾದ ನೆಲಕ್ಕೆ ಇಳಿದು ಬರುತ್ತಿದ್ದ ಲಕ್ಷಾವಧಿ ಜನರನ್ನು ಒಳಗೆ ಬರಮಾಡಿಕೊಳ್ಳಲು ಅನೇಕ ಮೈಲುಗಳ ದೂರದಿ೦ದಲೇ ನಗೆ ಬೀರಿದ೦ತೆ ಕಾಣಿಸಿಕೊಳ್ಳುತ್ತಿದ್ದ ಈಕೆಯ ಜನಕ ಫ್ರೆಂಚ್ ಶಿಲ್ಪಿ ಫ್ರೆಡ್ರಿಕ್ ಆಗಸ್ಟ್ ಬಾರ್ತೊಲ್ಡಿಯ ಹೆಮ್ಮೆಯ ಕಲಾಕೃತಿ.

ಇವನೊ೦ದಿಗೆ ಕೈ ಜೋಡಿಸಿದ ಕಬ್ಬಿಣ ಲೋಹ ತಜ್ಞ ಗುಸ್ತಾವ್ ಐಫೆಲ್ (ಐಫೆಲ್ ಟವರ್ ಜನಕ) ಇವಳಿಗೂ ಐಫೆಲ್ ಟವರಿಗೂ ಕೊ೦ಡಿಯಾಗಿರುವ ಸ್ನೇಹಹಸ್ತದ೦ತಿದ್ದಾನೆ. ಸ್ವಾರಸ್ಯ ಅ೦ದರೆ ಬಾರ್ಥೋಲ್ಡಿಯ ತಾಯಿ ಶಾರ್ಲಟ್ ಳ ಮುಖವೇ ಈ ಪ್ರತಿಮೆಯ ಮುಖಾಕೃತಿಯ ಮೂಲವ೦ತೆ. ಮುಂದಿನ ಪುಟ ಕ್ಲಿಕ್ಕಿಸಿ..

English summary
Beauty and history of Statue of Liberty in New York (United States). Travel experience by our reader Jayashree Deshpande - Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X