ಕೆರೆಮನೆ ಶಿವಾನಂದ ಹೆಗಡೆ ಸಂದರ್ಶನ (ಭಾಗ 2)
ಪ್ರಶ್ನೆ: ಹೊರದೇಶಕ್ಕೆ ನೀವು ಕಲಾಪ್ರದರ್ಶನಕ್ಕೆ ಬಂದಾಗ ವಿವಿಧ ಕಾರಣಗಳಿಂದಾಗಿ ನೀವು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬರುತ್ತದೆ. ಆ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?
ಹೆಗಡೆ: ಹೊರದೇಶಗಳಲ್ಲಿ ಪ್ರದರ್ಶನ ನೀಡುವಾಗ ಸಮಯಾಭಾವವಿರುತ್ತದೆ. ನಮಗೆ ನೀಡಲಾದ ಕಾಲಾವಧಿಯನ್ನು ನಾವು ಸರಿಯಾಗಿ ಪಾಲಿಸಬೇಕಾಗುತ್ತದೆ. ಇದು ನಮಗೆ ದೊಡ್ಡ ಸವಾಲು. ಅಲ್ಲದೇ ಹೊರದೇಶಗಳಲ್ಲಿ ಯಕ್ಷಗಾನ ಬಹುಜನರಿಗೆ ಪರಿಚಿತವಲ್ಲದ ಕಲಾಪ್ರಕಾರ. ಉದಾಹರಣೆಗೆ ಈ ತೆರೆದ ಸಭಾಂಗಣದಲ್ಲಿ ತೆರೆ ಎಳೆಯುವ ವ್ಯವಸ್ಥೆ ಇಲ್ಲ, ಅಕ್ಕ ಪಕ್ಕದಿಂದ ಬರುವ ಶಬ್ದಗಳು ಪ್ರದರ್ಶನಕ್ಕೆ ಅಡ್ಡಿ ಮೂಡಿಸಬಹುದು. ಇಂತಹ ಸನ್ನಿವೇಶಗಳಿಗೆ ತಕ್ಕಂತೆ ನಾವು ತಯಾರಿ ನಡೆಸಬೇಕು.
ನಮಗೆ ದೊರೆತ ಮಿತ ಕಾಲಾವಧಿಯಲ್ಲಿ ಜನರಿಗೆ ಈ ಕಲಾಪ್ರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಕೂಡ ಒಂದು ಸವಾಲು. ಇದಕ್ಕಾಗಿ ನಾವು ಸಮಾಲೋಚನೆ, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಕಳೆದ ಮೂರು ದಿನಗಳಲ್ಲಿ ಒಂದೇ ಸ್ಥಳದಲ್ಲಿ ಎಂಟು ಯಕ್ಷಗಾನಗಳನ್ನು ನೀಡಿದ ನಮಗೆ ಇಲ್ಲಿಗೆ ಬಂದ ಪ್ರೇಕ್ಷಕರಿಗೆ ಆಸಕ್ತಿ ಮೂಡಿಸಿದ ತೃಪ್ತಿ, ಸಮಾಧಾನ ನಮಗಿದೆ. ಕನ್ನಡಿಗರಲ್ಲಿ ಎಲ್ಲರೂ ಯಕ್ಷಗಾನ ನೋಡಿಲ್ಲ. ಇನ್ನೂ ಕೆಲವರು 3 ಘಂಟೆಗಳ ಅವಧಿಯ ಯಕ್ಷಗಾನ ನೋಡಿದ್ದಾರೆ. ಅವರೆಲ್ಲರಿಗೂ 45 ನಿಮಿಷಗಳ ಅವಧಿಯ ಈ ಕಾರ್ಯಕ್ರಮ ಒಂದು ಹೊಸ ಅನುಭವ.

ಪ್ರಶ್ನೆ: ನೀವು ಯಕ್ಷಗಾನವನ್ನು ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲಿ ಎಲ್ಲಾದರೂ ಮಾಡಿದ್ದೀರಾ?
ಹೆಗಡೆ: ಬೇರೆ ಮೇಳದವರು ಈ ತರಹದ ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ನಮ್ಮ ಮೇಳ ಇದುವರೆಗೆ ಬೇರೆ ಭಾಷೆಗಳಲ್ಲಿ ಮಾಡಿಲ್ಲ, ಮಾಡಬೇಕಾಗಿಲ್ಲವೆಂಬುದು ನಮ್ಮ ಅನಿಸಿಕೆ. ಅಭಿನಯದ ಮೂಲಕ ನಾವು ಕಥೆಯ ಸಾರವನ್ನು ಹೇಳಲು ಸಾಧ್ಯವಿದೆ. ಅಲ್ಲದೇ ನಮ್ಮ ದೇಶದಲ್ಲಿ 16 ಭಾಷೆಗಳಲ್ಲಿ ಯಕ್ಷಗಾನ ಮಾಡಬೇಕಾಗುತ್ತದೆ, ಇದು ಅಸಾಧ್ಯ ಕೆಲಸ!
ಪ್ರಶ್ನೆ: ಕಳೆದ ಮೂರು ತಲೆಮಾರುಗಳಿಂದ ನಿಮ್ಮ ತಂಡ ಯಕ್ಷಗಾನ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ. ನೀವು ಕಂಡಂತೆ, ಕೇಳಿದಂತೆ ಈ ಕಲೆಯಲ್ಲಾದ ಪ್ರಮುಖ ಬದಲಾವಣೆಗಳೇನು?
ಹೆಗಡೆ: ನಮ್ಮ ಊರಿನಲ್ಲೇ ಇರಲಿ, ಹೊರದೇಶದಲ್ಲೇ ಇರಲಿ - ಯಕ್ಷಗಾನವನ್ನು ಹೆಚ್ಚು ಸರಳವಾಗಿ, ಮುಕ್ತವಾಗಿ (communicative) ವ್ಯಕ್ತಪಡಿಸುವ ಗುರಿ, ಪ್ರಯತ್ನ ಅಂದಿನಿಂದ ಇಂದಿನವರೆಗೆ ನಡೆದಿದೆ. ಯಾವುದೇ ವಿಷಯವೇ ಇರಲಿ - ಯಕ್ಷಗಾನದ ಸಂಪ್ರದಾಯದ ಚೌಕಟ್ಟಿನೊಳಗೆ, ಇಂದಿನ ಪೀಳಿಗೆ-ಸಮಾಜಕ್ಕೆ ಎಷ್ಟು ಪ್ರಸ್ತುತವಾಗುವಂತೆ ಪ್ರದರ್ಶಿಸುವ ಪ್ರಯತ್ನ ಮಾಡುತ್ತಿದ್ದೇವೆ. ತಂತ್ರಜ್ಞಾನವನ್ನು ಬಳಸಿ ನಾವು ಸಂಪ್ರದಾಯವನ್ನು ಉಳಿಸಿ-ಬೆಳೆಸಬೇಕೇ ಹೊರತು ಯಾವುದೇ ಕಾರಣಕ್ಕೂ ಸಂಪ್ರದಾಯಕ್ಕೆ ಹಾನಿ ಮಾಡಬಾರದು.












Click it and Unblock the Notifications