ಕೆರೆಮನೆ ಶಿವಾನಂದ ಹೆಗಡೆ ಸಂದರ್ಶನ (ಭಾಗ 3)
ಪ್ರಶ್ನೆ: ಯಕ್ಷಗಾನ, ಚಲನಚಿತ್ರ, ನೃತ್ಯ, ನಾಟಕ ಹೀಗೆ ಯಾವುದೇ ಕಲಾಪ್ರಕಾರವಿರಲಿ - ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳು, commercialization ಆಗುತ್ತದೆ. ಕಮರ್ಷಿಯಲೈಸೇಶನ್ ಮಾಡದಿದ್ದರೆ ಜನಗಳನ್ನು ಆಕರ್ಷಿಸುವುದು ಕಷ್ಟ, ಮಾಡಿದರೆ ಕಲೆಯ ಸೊಗಡು ಹೊರಟು ಹೋಗುತ್ತದೆ. ಇವೆರಡರ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ?
ಹೆಗಡೆ: ಒಮ್ಮೆ ಕಮರ್ಷಿಯಲೈಸೇಶನ್‌ಗೆ ಕೈಹಾಕಿದರೆ ಅದಕ್ಕೆ ಒಂದು ಇತಿ-ಮಿತಿಯಿರುವುದಿಲ್ಲ. ನನ್ನ ಅಭಿಪ್ರಾಯ - ಕಮರ್ಷಿಯಲೈಸೇಶನ್‌ನತ್ತ ಹೋಗದೇ ಸಂಪ್ರದಾಯವನ್ನು ಉಳಿಸಲು ಸಾಧ್ಯವಿದೆ. ಇದಕ್ಕೆ ನಾವು ಸಂಪ್ರದಾಯದ ಮೂಲ ಬೇರುಗಳನ್ನು ಹುಡುಕಿ, ಅಲ್ಲಿರುವ ಧನಾತ್ಮಕ ಅಂಶಗಳನ್ನು ಪ್ರಚುರ ಪಡಿಸಬೇಕಿದೆ. ಸಂಪ್ರದಾಯವೆಂದರೆ ನೀರಸವೆಂಬುದು ತಪ್ಪು ಕಲ್ಪನೆ. ನಮ್ಮ ತಂಡಕ್ಕೆ ಬರುವ ಆಹ್ವಾನಗಳನ್ನು ನೋಡಿದರೆ ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಪ್ರದಾಯಬದ್ದರಾಗಬೇಕೆನಿಸುತ್ತದೆ. ಈ ಸಂಪ್ರದಾಯ ಒಂದು ಬಾರಿ ಕೈಬಿಟ್ಟು ಹೋದರೆ ಅದನ್ನು ಪುನಃ ತರುವುದು ಬಹಳ ಕಷ್ಟಕರವಾದದ್ದು.

ಪ್ರಶ್ನೆ: ನಿಮ್ಮ ತಂಡದ ಬಗ್ಗೆ ತಿಳಿಸಿ.
ಹೆಗಡೆ: ನಮ್ಮ ತಂಡದಲ್ಲಿ ಹೊರಗಿನ ಪ್ರದೇಶಕ್ಕೆ ಹೋಗಿ ಯಕ್ಷಗಾನ ಮಾಡಬಲ್ಲ ಒಟ್ಟು ಹದಿನೈದು ಜನ ಕಲಾವಿದರಿದ್ದಾರೆ. ಇಲ್ಲಿಗೆ ಬರಲು ಕೇವಲ 12 ಜನರಿಗೆ ಮಾತ್ರ ಅವಕಾಶವಿದ್ದುದರಿಂದ 12 ಜನರ ತಂಡ ಬಂದಿದೆ. ಅಲ್ಲಿ ಯಕ್ಷಗಾನ ತರಬೇತಿ ಶಿಬಿರವಿದ್ದು ನಾವು ಉತ್ಸುಕರಿಗೆ ಯಕ್ಷಗಾನದ ತರಬೇತಿ ನೀಡುತ್ತೇವೆ. ಹೊರದೇಶ-ಪ್ರದೇಶಗಳಲ್ಲಿ ಯಕ್ಷಗಾನ ನೀಡಲು ನಾವೆಲ್ಲಾ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಾನು ಸಹಕಾರೀ ಮನೋಭಾವದ, ಉತ್ತಮ ಕಲಾವಿದರನ್ನು ಇಲ್ಲಿಗೆ ಕರೆತಂದಿದ್ದೇನೆನಿಸುತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಸಾಕಷ್ಟು ಪೂರ್ವಭ್ಯಾಸ(Rehearsal)ದ ಅಗತ್ಯವಿರುತ್ತದೆ. ಅಲ್ಲದೇ ಸಭಾಂಗಣ, ವೇದಿಕೆಯ ಮೇಲೆ ಕೂಡ ಅಭ್ಯಾಸ ನಡೆಸಬೇಕು. ನಾನು ಯಾವಾಗಲೂ ನಮ್ಮ ತಂಡದ ಕಲಾವಿದರಿಗೆ ಹೇಳುವುದಿಷ್ಟೇ - ರಂಗಸ್ಥಳದಲ್ಲಿ ಮತ್ತು ಪೂರ್ವಭ್ಯಾಸದ ಸಮಯದಲ್ಲಿ ನಮ್ಮ ಸಂಬಂಧ ವೃತ್ತಿಪರ, ಬಾಕಿಯಂತೆ ನಾವು ಸ್ನೇಹಿತರು.
ಸುರೇಶ: ಕನ್ನಡ ಸಂಘ(ಸಿಂಗಪುರ)ದಿಂದಲೂ ನಿಮ್ಮನ್ನು ಮುಂದೊಮ್ಮೆ ಕರೆಯಿಸಿಕೊಳ್ಳುವ ಅವಕಾಶ ಒದಗಿಬರಲಿ. ಸಂದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
ಹೆಗಡೆ: ನಿಮಗೂ ಧನ್ಯವಾದಗಳು. ಮತ್ತೆ ಭೇಟಿಯಾಗೋಣ.
ಸಂದರ್ಶನ, ವರದಿ: ಸುರೇಶ ಎಚ್. ಸಿ. (ಸಿಂಗಪುರ). ಛಾಯಾಚಿತ್ರ: ರಾಜೇಶ್ ಹೆಗಡೆ (ಸಿಂಗಪುರ).












Click it and Unblock the Notifications