'ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ': IAS ರೋಹಿಣಿ ಸಿಂಧೂರಿ, ರೂಪಾ ಜಗಳಕ್ಕೆ ಸುಪ್ರೀಂ ಬ್ರೇಕ್, ಮಧ್ಯಸ್ಥಿಕೆಗೆ ಸೂಚನೆ
ನವದೆಹಲಿ: ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇಬ್ಬರೂ ಅಧಿಕಾರಿಗಳ ನಡುವಿನ ಈ ದೀರ್ಘಕಾಲದ ಕಾನೂನು ಸಮರಕ್ಕೆ ಮಧ್ಯಂತರ ತಡೆ ನೀಡಿರುವ ಸುಪ್ರೀಂ ಕೋರ್ಟ್, ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಶುಕ್ರವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ಸಚ್ದೇವ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ವಿಚಾರಣೆ ನಡೆಸಿತು. "ಇಬ್ಬರೂ ಅತ್ಯುತ್ತಮ ಮತ್ತು ಸಮರ್ಥ ಅಧಿಕಾರಿಗಳಾಗಿದ್ದಾರೆ. ಆದರೆ, ಈ ರೀತಿಯ ನಿರಂತರ ಕಾನೂನು ಹೋರಾಟಗಳಿಂದ ಇಬ್ಬರೂ ಪರಸ್ಪರ ತಮ್ಮ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳಿಗಿಂತ, ಈ ವಿವಾದವನ್ನು ಪರಸ್ಪರ ಮಾತುಕತೆ ಮತ್ತು ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಳ್ಳುವುದು ಸೂಕ್ತ" ಎಂದು ನ್ಯಾಯಪೀಠವು ಕಿವಿಮಾತು ಹೇಳಿದೆ.

ಮಧ್ಯಸ್ಥಿಕೆದಾರರಾಗಿ ನಿವೃತ್ತ ನ್ಯಾಯಮೂರ್ತಿ ನೇಮಕ
ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಈ ಹೈವೋಲ್ಟೇಜ್ ಪ್ರಕರಣವನ್ನು ಸೌಹಾರ್ದಯುತವಾಗಿ ಅಂತ್ಯಗೊಳಿಸುವ ಉದ್ದೇಶದಿಂದ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್ ನೇಮಿಸಿದೆ.
"ಕಕ್ಷಿದಾರರು ಮುಂದಿನ ದಿನಗಳಲ್ಲಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ಮುಂದೆ ಖುದ್ದಾಗಿ ಹಾಜರಾಗಿ ಮಾತುಕತೆ ನಡೆಸಬೇಕು. ಅಲ್ಲಿಯವರೆಗೆ, ವಿಚಾರಣಾ ನ್ಯಾಯಾಲಯಗಳಲ್ಲಿ ಇಬ್ಬರ ವಿರುದ್ಧವೂ ಬಾಕಿ ಇರುವ ಎಲ್ಲ ಪ್ರಕರಣಗಳ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಲಾಗುತ್ತಿದೆ" ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಏನಿದು ರೋಹಿಣಿ ಸಿಂಧೂರಿ-ರೂಪಾ ವಿವಾದ?
ಕರ್ನಾಟಕದ ಆಡಳಿತ ಯಂತ್ರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಈ ವಿವಾದವು ಫೆಬ್ರವರಿ 2023ರಲ್ಲಿ ಭುಗಿಲೆದ್ದಿತ್ತು. ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಜಾಲಹಳ್ಳಿಯಲ್ಲಿ ಬೃಹತ್ ಬಂಗಲೆ ನಿರ್ಮಾಣ, ಆಸ್ತಿ ವಿವರ ಸಲ್ಲಿಕೆಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಕೆಲವೊಂದು ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಈ ಆರೋಪಗಳಿಂದ ಆಕ್ರೋಶಗೊಂಡ ರೋಹಿಣಿ ಸಿಂಧೂರಿ, "ರೂಪಾ ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿಗೆ ತೀವ್ರ ಧಕ್ಕೆ ತಂದಿದೆ" ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅಲ್ಲದೆ, ತಮ್ಮ ಮಾನಹಾನಿ ಮಾಡಿದ್ದಕ್ಕಾಗಿ 1 ಕೋಟಿ ರೂ.ಗಳ ಪರಿಹಾರ ಹಾಗೂ ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿ ಲೀಗಲ್ ನೋಟಿಸ್ ನೀಡಿದ್ದರು.
ಈ ಖಾಸಗಿ ದೂರನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶ ಮತ್ತು ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ರೂಪಾ ಮೌದ್ಗಿಲ್ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇತ್ತೀಚೆಗೆ ಡಿ. ರೂಪಾ ಕೂಡ ರೋಹಿಣಿ ಸಿಂಧೂರಿ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದ್ದ ಈ ಇಬ್ಬರು ಮಹಿಳಾ ಅಧಿಕಾರಿಗಳ ವೈಯಕ್ತಿಕ ಹಾಗೂ ಕಾನೂನು ಸಮರಕ್ಕೆ ಇದೀಗ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು, ಮಾತುಕತೆಯ ಮೂಲಕ ವಿವಾದಕ್ಕೆ ಶಾಶ್ವತ ತೆರೆ ಎಳೆಯಲು ಮುಂದಾಗಿದೆ.












Click it and Unblock the Notifications