ಸಿಂಗಪುರದಲ್ಲಿ ಸಿರಿಗನ್ನಡಿಗರ ರಾಗಾಂಜಲಿ

Musical program Raaganjali in Singapore
ಕಿಕ್ಕಿರಿದ ಸಭಾಂಗಣ, ಜನಸ್ತೋಮದ ಕರತಾಡನದ ಮಧ್ಯೆ ಪುರಂದರ ದಾಸರು, ತ್ಯಾಗರಾಜರ ಕೃತಿಗಳು, ಹಿಂದೂಸ್ತಾನಿ ಸಂಗೀತದ ಬಂದಿಶ್‌ಗಳು ಮತ್ತು ಭರತನಾಟ್ಯ ಪ್ರದರ್ಶನ. ಏನು? ಬೆಂಗಳೂರಿನ ಸಂಗೀತ ಸಭೆಯೊಂದರ ವರ್ಣನೆ ಎನ್ನುತ್ತೀರಾ? ಅಲ್ಲ, ಇದು 29ನೇ ಸೆಪ್ಟೆಂಬರ್‌ರಂದು, ಕನ್ನಡ ಸಂಘ, ಸಿಂಗಪುರ ಮತ್ತು ವುಡ್‌ಲ್ಯಾಂಡ್ಸ್ CC IAECಯ ನೇತೃತ್ವದಲ್ಲಿ ಸಿಂಗಪುರದ ವುಡ್‌ಲ್ಯಾಂಡ್ಸ್ Community Clubನಲ್ಲಿ ಸಿಂಗಪುರದ ಸಂಗೀತ ಮತ್ತು ನೃತ್ಯ ವಿದುಷಿಯರು ನಡೆಸಿಕೊಟ್ಟ ರಾಗಾಂಜಲಿ ಕಾರ್ಯಕ್ರಮ. ಮೂರು ಗಂಟೆಗಳವರೆಗೆ ನೆರೆದಿದ್ದ ಕನ್ನಡ ಮತ್ತು ಕನ್ನಡೇತರ ಜನಸ್ತೋಮದ ಮನಸ್ಸನ್ನು ಸೆರೆ ಹಿಡಿದು ಅದ್ಭುತ ಯಶಸ್ಸಿನ ಕಾರ್ಯಕ್ರಮಗಳಲ್ಲೊಂದಾಯಿತು.

ಸಂಜೆ ಆರು ಗಂಟೆಗೆ ಕುಮಾರಿ ಮೇಘನಾ ಹೆಬ್ಬಾರ್ ಅವರ ಇಂಪಾದ ಗಣೇಶ ಸ್ತುತಿ ಮತ್ತು ಸ್ವಾಗತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಮೊದಲಿಗೆ ಕನ್ನಡ ಸಂಘದ ಅಧ್ಯಕ್ಷ ಡಾ. ವಿಜಯಕುಮಾರ್ ಅವರು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂಗಳ ಮಿಶ್ರ ಭಾಷೆಯಲ್ಲಿ ಸ್ವಾಗತ ಭಾಷಣ ಮಾಡಿ ನೆರೆದಿದ್ದ ಸಭಾಸದರೆಲ್ಲರ ಮನಗೆದ್ದು, ಅನೇಕ ವೈವಿಧ್ಯತೆಗಳ ಮಧ್ಯೆಯೂ ಭಾರತೀಯ ಮತ್ತು ಭಾರತೀಯ ಮೂಲದವರೆಲ್ಲರೂ ಒಂದು ಎಂಬ ಭಾವವನ್ನು ಎತ್ತಿ ತೋರಿಸಿದರು.

ವಿದುಷಿ ಶೃತಿ ಆನಂದ್, ವಿದುಷಿ ಶೋಭಾ ರಘು ಮತ್ತು ವಿದುಷಿ ಸಹನಾ ರಾಮಚಂದ್ರ ಅವರು ಸರಣಿಯಲ್ಲಿ ವಲಾಚಿ, ಖಮಾಜ್, ಆಭೇರಿ, ಷಣ್ಮುಖಪ್ರಿಯ, ಮಧುವಂತಿ ರಾಗಗಳಲ್ಲಿ ಪುರಂದರ ದಾಸರು, ತ್ಯಾಗರಾಜರಂತಹ ಮಹನೀಯರ ಶಿವದರುಶನ, ಬ್ರೋಚೆವಾ ರೆವರುರಾ, ನಗುಮೋಮು, ಸರವಣಭಾವ, ನಾನೇನು ಮಾಡಿದೆನು ಮತ್ತು ಜಯದೇವನ ಅಷ್ಟಪದಿಗಳಂತಹ ಇಂಪಾದ ಕೃತಿಗಳ ರಸದೌತಣ ಮಾಡಿಸಿದರು. ನಂತರ ಸಿಂಗಪುರದ ಉದಯೋನ್ಮುಖ ಯುವ ಪ್ರತಿಭೆ ಮತ್ತು ಇತ್ತೀಚೆಗೆ ರಂಗಪ್ರವೇಶ ಮಾಡಿದ ಕುಮಾರ್ ಪ್ರಜ್ವಲ್ ಶ್ರೀಕಾಂತ್ ಅವರು ಕುಂತವರಾಳಿ ರಾಗದಲ್ಲಿ ಕೊಳಲುವಾದನ ಮಾಡಿದರು.

ನಾಟ್ಯವಿದುಷಿ ಡಾ. ಸಿರಿ ರಾಮ ಮಧುಕಂಸ ರಾಗದಲ್ಲಿಯ ಎಂಗಿರಿಂದೊನ್ ವಂದಾನ ಎಂಬ ಕೃತಿಗೆ ಭರತನಾಟ್ಯ ಪ್ರದರ್ಶನ ಮಾಡಿದರೆ, ವಿದುಷಿ ಶ್ರೀಲಕ್ಷ್ಮಿ ಅವರು ಕಾಪಿ ರಾಗದ ಜನಪ್ರಿಯ ಕೃತಿ ಜಗದೋದ್ಧಾರನ ಮತ್ತು ಅಭೋಗಿ ರಾಗದ ದೇವಿ ಸ್ತುತಿಗಳಿಗೆ ಭರತನಾಟ್ಯ ಪ್ರದರ್ಶನ ಮಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ನಂತರ ಬಂದ ಯುವ ಪ್ರತಿಭೆ ಕುಮಾರಿ ಮೇಘನಾ ಹೆಬ್ಬಾರ್ ಅವರು ಕನ್ನಡದ ಪ್ರಸಿದ್ಧ ಭಕ್ತಿ ಗೀತೆ, ಮಲಯಮಾರುತ ರಾಗದ ಶರಣೆಂಬೆ ನಾ ಶಶಿ ಭೂಷಣ ಕೃತಿಗೆ ಭರತ ನಾಟ್ಯ ಮಾಡಿ ಜನಸ್ತೋಮದ ಮೆಚ್ಚುಗೆ ಪಡೆದರು.

ವಿದುಷಿ ಪ್ರತಿಮಾ ಬೆಳ್ಳಾವೆ ಗಣೇಶ್ ಅವರು ಹಿಂದೂಸ್ತಾನಿ ಸಂಗೀತವನ್ನು ಪ್ರಸ್ತುತ ಪಡಿಸಿದರು. ಮೊದಲು ರಾಗ ದುರ್ಗಾದಲ್ಲಿ ಬಂದಿಶ್ ಒಂದನ್ನು ಹಾಡಿದ ಪ್ರತಿಮಾ ಅವರು ನಂತರ ರಾಗ ದೇಶ್‌ದಲ್ಲಿ ತರಾನಾ ಒಂದನ್ನು ಹಾಡಿ ಜನರನ್ನು ರಂಜಿಸಿದರು. ಇದಾದ ಮೇಲೆ ವಿದುಷಿ ಅಶ್ವಿನಿ ಸತೀಶ್ ಮತ್ತು ವಿದುಷಿ ಭಾಗ್ಯ ಮೂರ್ತಿ ಅವರು ಸರಣಿಯಲ್ಲಿ ರಾಗ ಸುನಾದವಿನೋದಿನಿ, ಹಿಂದೋಳಮ್, ನಾದನಾಮಕ್ರಿಯಗಳಲ್ಲಿ ದೇವಾದಿ ದೇವ, ಸಾಮಗಾನ ಲೋಲನೆ ಮತ್ತು ಬಂದೇವಯ್ಯಾ ಕೃತಿಗಳನ್ನು ಹಾಡಿದರು. ಕೊನೆಯಲ್ಲಿ ವಿದುಷಿ ಭಾಗ್ಯ ಮೂರ್ತಿ ಅವರು ಅನೇಕ ರಾಗಗಳನ್ನೊಳಗೊಂಡ ರಸಾಯನವಾದ ರಾಗಮಾಲಿಕೆಯೊಂದನ್ನು ಹಾಡಿ ಸಭಿಕರನ್ನು ಬ್ರಹ್ಮಾನಂದದಲ್ಲಿ ಮುಳುಗಿಸಿದರು. ಈ ಎಲ್ಲ ಕಲಾವಿದರಿಗೆ ಸಮರ್ಥವಾಗಿ ಸಾಥ ನೀಡಿದವರು ಅಶೋಕ್ ಹೆಬ್ಬಾರ್ (ತಬಲಾ), ವೆಂಕಟ್ (ಮೃದಂಗ), ರಾಮ್‌ಕುಮಾರ್ (ವೀಣೆ) ಮತ್ತು ಆದಿತ್ಯ (ಪಿಟೀಲು) ಮತ್ತು ವಿಜಯಾ ಹಲಗೇರಿ (ತಂಬೂರಿ).

ಡಾ. ವಿಜಯಕುಮಾರ್, ವುಡ್‌ಲ್ಯಾಂಡ್ಸ್ CC IAECಯ ಅಜಯನ್ ಮತ್ತು ಭಾರತೀಯ ದೂತಾವಾಸದ ಜಿ.ಟಿ. ವೆಂಕಟೇಶ್ವರರಾವ್ ಅವರು ಕಲಾವಿದರನ್ನು ಸನ್ಮಾನಿಸಿದರು. ವಿನೀತಾ ಸುರೇಶ್ ವಂದನಾರ್ಪಣೆ ಮಾಡಿದರು. ಅಂತಿಮವಾಗಿ ವಿಶ್ವ ಕನ್ನಡ ಗೀತೆ(ರಚನೆ: ವಸಂತ ಮತ್ತು ಸುರೇಶ, ಸಂಗೀತ: ವಿದುಷಿ ಭಾಗ್ಯ ಮೂರ್ತಿ ಮತ್ತು ಕಿಶನ್) ಮತ್ತು ತಿಲ್ಲಾನದೊಂದಿಗೆ ಕಾರ್ಯಕ್ರಮದ ಭವ್ಯ ಮುಕ್ತಾಯವಾಯಿತು. ಈ ಕಾರ್ಯಕ್ರಮವನ್ನು ಪರಿಕಲ್ಪಿಸಿ, ರೂಪುರೇಷೆಗಳನ್ನು ನಿರ್ಧರಿಸಿ ನಡೆಸಿಕೊಟ್ಟ ಕಾರ್ಯಕ್ರಮದ ರೂವಾರಿಗಳು ವಿನೀತಾ ಸುರೇಶ್ ಮತ್ತು ಸುಮನಾ ಹೆಬ್ಬಾರ್. ಬೆಂಬಲ ನೀಡಿ ಮಾರ್ಗದರ್ಶನ ಮಾಡಿದವರು ಸಿಂಗಪುರದ ಹಿರಿಯ ಕನ್ನಡಿಗ ಕಲಾವಿದೆ ವಿದುಷಿ ಭಾಗ್ಯ ಮೂರ್ತಿ ಅವರು. ಕಾರ್ಯಕ್ರಮವನ್ನು ನಿರೂಪಿಸಿದವರು ಜಯಶ್ರೀ ಭಟ್ ಹಾಗೂ ಸುಮನಾ ಹೆಬ್ಬಾರ್. ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು ಸಿಂಗ್ ಹೆಲ್ತ್ ಮತ್ತು ಎಚ್ ಡಿ ಎಫ್ ಸಿ, ಸಿಂಗಪುರ ಸಂಸ್ಥೆಗಳು.

ಕನ್ನಡ ಸಂಘ, ಸಿಂಗಪುರವು ಇದೇ ಸಮಯದಲ್ಲಿ ಮಕ್ಕಳಿಗಾಗಿ ಪ್ರಬಂಧ ಮತ್ತು ರಚನಾತ್ಮಕ ಬರವಣಿಗೆಯ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತು ಅನೇಕ ಮಕ್ಕಳು ಭಾಗವಹಿಸಿದ್ದರು. ಒಟ್ಟಿನಲ್ಲಿ ಕನ್ನಡ ಸಂಘ ಸಿಂಗಪುರ ಮತ್ತು ವುಡ್‌ಲ್ಯಾಂಡ್ಸ್ CC IAECಯವರು ನೀಡಿದ ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಂಡು, ಉಚ್ಚಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಸಂಸ್ಕೃತ ಸಭಿಕರ ಅತ್ಯಪೂರ್ವ ಬೆಂಬಲವಿದೆ ಎಂಬುದನ್ನು ಸಿದ್ಧ ಮಾಡಿ ತೋರಿಸಿತು. ಈ ಕಾರ್ಯಕ್ರಮದ ನೆನಪನ್ನು ಸದಾ ಹಸಿರಾಗಿ ಮನದಲ್ಲಿಟ್ಟ ಸಭಿಕರು ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಬಯಸುತ್ತಾರೆ ಎಂಬುದಕ್ಕೆ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+