ಸಿಂಗಪುರದಲ್ಲಿ ಮೇವುಂಡಿ ಹಿಂದೂಸ್ತಾನಿ ಗಾನಸುಧೆ

ಪಂಡಿತ್ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ್ ಮನ್ಸೂರ್, ಗಂಗೂಬಾಯಿ ಮುಂತಾದ ಮೇರುಗಾಯಕರನ್ನು ನೀಡಿದ ಕರ್ನಾಟಕದ ನಾದ ಭೂಮಿ ಧಾರವಾಡದಿಂದ ಬಂದವರು ಮೇವುಂಡಿ. ತಮ್ಮ ಐದು ವರ್ಷದ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಪ್ರಾರಂಭಿಸಿ, ಹಿಂದೂಸ್ಥಾನೀ ಸಂಗೀತದಲ್ಲಿ ಮಾಡಿದ ಅಮೋಘ ಸಾಧನೆಗೆ “Young Maestro”, "ಬಸವರಾಜ ರಾಜಗುರು ಪುರಸ್ಕಾರ" ಮುಂತಾದ ಹಲವಾರು ಬಿರುದು-ಪುರಸ್ಕಾರಗಳನ್ನು ಗಳಿಸಿರುವ ಮೇವುಂಡಿ ಅವರ ದನಿಯನ್ನು ಕೇಳಲು ಇನ್ನೂರು ಕಲಾಪ್ರೇಮಿಗಳು ನೆರೆದಿದ್ದರು.
ಕಾರ್ಯಕ್ರಮದಲ್ಲಿ ಮೊಟ್ಟಮೊದಲು ವಿಲಂಬಿತ ಲಯದಲ್ಲಿ ಪ್ರಾರಂಭವಾದ ರಾಗ್ ಪೂರಿಯಾದ "ಪ್ಯಾರ್ ದೇಖ್ ನ ಲಾಗೇ" ಆರಂಬಿಸಿದ ಮೇವುಂಡಿಯವರು ಈ ರಾಗದ ಇಂಪಾದ ಸ್ವರಸಾಗರದಲ್ಲಿ ಪ್ರೇಕ್ಷಕವೃಂದವನ್ನು ಮುಳುಗಿಸಿದರು. ನಂತರ ಮಧ್ಯಲಯದಿಂದ ಮುಂದೆ ಸಾಗಿ ಧೃತ್ ಲಯದಲ್ಲಿ "ಜನನನ ಭಾಜೇ" ಚೀಸ್ ಅನ್ನು ಹಾಡಿ ಜನರನ್ನು ರಂಜಿಸಿದರು. ರಾಗ್ ಪೂರಿಯಾದ ಸಿಹಿಯೂಟದ ನಂತರ ಮಾರುಬಿಹಾಗ ರಾಗದಲ್ಲಿ "ತಡಪತೇ ರಹನಾ ದಿಲ್" ಧುನ್ ಅನ್ನು ಮತ್ತು ಮಿಶ್ರ ತಿಲಂಗ್‌ದಲ್ಲಿ "ದೇಖೋ ಜಿಯಾ ಮೈ ಜಾವೂಂ" ಠುಮ್ರಿಯನ್ನು ಪ್ರಸ್ತುತ ಪಡಿಸಿ ಜನರನ್ನು ಸಿಂಗಾರ ರಸಧಾರೆಯಲ್ಲಿ ಮೀಯಿಸಿದರು. ನಂತರ ಮರಾಠೀ ಅಭಂಗ್‌ಗಳಾದ ನಾಮದೇವ್ ವಿರಚಿತ "ತೀರ್ಥ ವಿಠ್ಠಲ, ಕ್ಷೇತ್ರ ವಿಠ್ಠಲ..", ನಿವೃತ್ತಿನಾಥ್ ವಿರಚಿತ "ಅಕಾರ ಉಕಾರ ಮಕಾರ.." ಮತ್ತು ಹಿಂದೀ ಭಜನೆ "ಟುಮಕ್ ಟುಮಕ್ ಪಗ್.."ಗಳನ್ನು ಹಾಡಿ ಜನರನ್ನು ಭಕ್ತಿಸಾಗರದಲ್ಲಿ ಲೀನಗೊಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ರಾಗ್ ಭೈರವಿಯ, ಪಂಡಿತ್ ಭೀಮ್‌ಸೇನ್ ಜೋಶಿಯವರು ಹಾಡಿರುವ ಪ್ರಖ್ಯಾತ ಭಜನೆ "ಜೋ ಭಜೇ ಹರೀ ಕೋ ಸದಾ ವೋಹೀ ಪರಮ ಪದ ಪಾವೇಗಾ" ಅನ್ನು ಆರಂಭಿಸಿ, ಅದೇ ರಾಗದಲ್ಲಿಯ ಕನ್ನಡದ ಪ್ರಖ್ಯಾತ ಕೀರ್ತನೆಯಾದ, ಮಹಿಪತಿದಾಸರು ರಚಿಸಿದ "ಕಾಯೋ ಕರುಣಾನಿಧೇ.."ಯನ್ನು ಹಾಡಿ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಶಾಸ್ತ್ರೀಯ ಸಂಗೀತದ ಸಿಹಿ ಮೇವುಂಡ ಸಭಿಕರು ಎದ್ದು ನಿಂತು, ಕರತಾಡನ ಮಾಡಿ ಮೇವುಂಡಿ ಮತ್ತಿತರ ಕಲಾವಿದರಿಗೆ ತಮ್ಮ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇವುಂಡಿ ಅವರಿಗೆ ಪಕ್ಕವಾದ್ಯದಲ್ಲಿ ಜೊತೆ ನೀಡಿದವರು:
ಹಾರ್ಮೋನಿಯಮ್ - ಮಂಗಳೂರಿನ ನರೇಂದ್ರ ನಾಯಕ್ (ಆಕಾಶವಾಣಿ ಆಲ್ ಇಂಡಿಯಾ ರೇಡಿಯೋದ "ಎ" ಶ್ರೇಣಿಯ ಕಲಾವಿದರು)
ತಬಲಾ - ಧಾರವಾಡದ ರವಿಕಿರಣ್ ನಾಕೋಡ್ (ಆಕಾಶವಾಣಿ ಆಲ್ ಇಂಡಿಯಾ ರೇಡಿಯೋದ "ಎ" ಶ್ರೇಣಿಯ ಕಲಾವಿದರು)
ತಾನ್ಪುರ - ಸಿಂಗಪುರದ ವಿಜಯಾ ಹಲಗೇರಿ ಹಾಗೂ ಶಿವದೀಪ್
ತಾಳ - ಸಿಂಗಪುರದ ಗಿರೀಶ್ ತಿಲಕ್
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಜಯತೀರ್ಥ್ ಮೇವುಂಡಿ, ನರೇಂದ್ರ ನಾಯಕ್ ಹಾಗೂ ರವಿಕಿರಣ್ ನಾಕೋಡ್ ಅವರ ಸಂಗೀತದ ಜುಗಲ್ ಬಂದಿಯನ್ನು ಆನಂದದಿಂದ ಕೇಳುತ್ತಿದ್ದ ಪ್ರೇಕ್ಷಕರು "ವಾಹ್ ವಾಹ್ ಕ್ಯಾ ಬಾತ್ ಹೈ" ಎಂದು ತಲೆದೂಗುತ್ತಿದ್ದರು. ಮರುದಿನ ಸಂಗೀತಪ್ರೇಮಿಯೊಬ್ಬರ ಮನೆಯಲ್ಲಿ ನಡೆದ ಚಿಕ್ಕ ಬೈಠಕ್ ಕಾರ್ಯಕ್ರಮದಲ್ಲಿ ಕೋಮಲ ರಿಷಭ ಅಸಾವರಿ ತೋಡಿ ಮತ್ತು ಲಲಿತ್ ರಾಗಗಳಲ್ಲಿ ಶಾಸ್ತ್ರೀಯ ಗಾಯನ ಮಾಡಿದ ಮೇವುಂಡಿಯವರು ಅನೇಕ ಮರಾಠೀ, ಕನ್ನಡ ಮತ್ತು ಹಿಂದೀ ಭಜನೆಗಳನ್ನು ಭಕ್ತಿಪೂರ್ಣವಾಗಿ ಹಾಡಿ ಸಂಗೀತಪ್ರೇಮಿಗಳನ್ನು ರಂಜಿಸಿದರು.
ವಿಶಾಲ ವಿಶ್ವದಲ್ಲಿ ಸಿಂಗಪುರ ಒಂದು ಚಿಕ್ಕ ಚುಕ್ಕೆ. ಬೆಂಗಳೂರಿಗಿಂತಲೂ ಚಿಕ್ಕದಾದ ಈ ಸಿಂಗಪುರ ಆರ್ಥಿಕವಾಗಿ ಮುಂದುವರೆದ ದೇಶ. ಆಷ್ಟೇ ಅಲ್ಲ, ಕಲೆ ಹಾಗೂ ಕಲಾಪೋಷಣೆಯಲ್ಲೂ ಮುಂದುವರೆದಿದೆ. ಕನ್ನಡಿಗರು ನಮ್ಮ ಕನ್ನಡ ಕಲಾಕಾರರನ್ನು ಎಷ್ಟರ ಮಟ್ಟಿಗೆ ಗುರುತಿಸುತ್ತಾರೋ ಏನೋ ಅದು ತಿಳಿಯದು - ಆದರೆ ಉದಯೋನ್ಮುಖ ಕಲಾವಿದರಿಗೆ ಅವಕಾಶ ನೀಡುವ ಗುರಿಯನ್ನು ಹೊತ್ತು, ಹುಬ್ಬಳ್ಳಿಯ ಈ ಮುತ್ತುರತ್ನವನ್ನು ಆಯ್ದು ಸಿಂಗಪುರಕ್ಕೆ ಕರೆತಂದ Engage Groupsನ ಅನು ರಾಜು ಮತ್ತು ಸರಿತಾ ಶ್ರೀರಾಮ್ ಅಭಿನಂದನಾರ್ಹರು. ಫೋಟೋ : ರಾಜನ್ ರಾಜು (ಸಿಂಗಪುರ)











Click it and Unblock the Notifications