ಖರ್ಗೆ : ಅಮೆರಿಕನ್ನಡಿಗರ ಮನೆಯಂಗಳದ ಅತಿಥಿ

ಪ್ರಸಕ್ತ ಉತ್ತರ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಅಧಿಕೃತ ಭೇಟಿಯಲ್ಲಿರುವ ಖರ್ಗೆ ಸದ್ಯ ಟೆಕ್ಸಾಸ್ ನಲ್ಲಿದ್ದು ಮಂಗಳವಾರ ಡಿಸಿ ಮೆಟ್ರೊಗೆ ಆಗಮಿಸುವವರಿದ್ದಾರೆ. ಕಾವೇರಿ ಕನ್ನಡಿಗರನ್ನು ಅವರು ಭೇಟಿ ಮಾಡುವ ಸ್ಥಳ : Diya Restaurant, 2070 Chain Bridge Road (Near Tysons Corner), Vienna, Virginia 22182. ಸಮಯ : ಸಂಜೆ 7 ಗಂಟೆ.
ಬುಧವಾರ ಸಂಜೆಯ ಸ್ನೇಹ ಕೂಟಕ್ಕೆ ಕಾವೇರಿ ಸಂಘದ ಸದಸ್ಯ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮನೆಯಂಗಳದ ಅತಿಥಿಯೊಂದಿಗೆ ಲೋಕಾಭಿರಾಮದಲ್ಲಿ ಪಾಲ್ಗೊಳ್ಳಬೇಕೆಂದು ಕಾವೇರಿ ಅಧ್ಯಕ್ಷ ಹರಿದಾಸ್ ಲಹರಿ ಸೋಮವಾರ 'ಒನ್ಇಂಡಿಯಕನ್ನಡ' ತಾಣಕ್ಕೆ ತಿಳಿಸಿದರು. ಖರ್ಗೆಯವರ ಜತೆಗೆ ವಾಣಿಜ್ಯ ಮಂತ್ರಿ ವಿನಯ್ ಕ್ವಾತ್ರ ಹಾಗೂ ರಾಯಭಾರ ಕಚೇರಿಯ ಕೌನ್ಸಲರ್ (ವಾಣಿಜ್ಯ) ಡಾ. ಬಾಲ ಭಾಸ್ಕರ್ ಇರುತ್ತಾರೆ.
ಆರಡಿ ಆಳು : ಕರ್ನಾಟಕ ರಾಜಕೀಯ ಅಂಗಳದಲ್ಲಿ ನಾಲಕ್ಕು ದಶಕಗಳ ಕಾಲ ಬಿಳಿಜೋಳ ಬೀಸಿದ ಅನುಭವಿ ಮಲ್ಲಿಕಾರ್ಜುನ ಖರ್ಗೆ. ಗುಲಬರ್ಗ ಜಿಲ್ಲೆ ಗುರುಮಿಠಕಲ್ ವಿಧಾನಸಭಾ (ಮೀಸಲು) ಕ್ಷೇತ್ರದಿಂದ ಸತತ 9 ಬಾರಿ ಆಯ್ಕೆಯಾದ ಹೆಗ್ಗಳಿಕೆ ಅವರದ್ದು. ಕಟ್ಟಾ ಕಾಂಗ್ರೆಸ್ಸಿಗ, ಇಂದಿರಾಗಾಂಧೀ ಕುಟುಂಬ ರಾಜಕೀಯ ಹೊಳೆಯಲ್ಲಿ ನಿರಂತರವಾಗಿ ಈಜುವ, ಕಾಂಗ್ರೆಸ್ ಹೈಕಮಾಂಡಿಗೆ ನಿಯತ್ತಿನ ಸೈನಿಕರಾಗಿರುವುದು ಖರ್ಗೆಯವರ ವೈಶಿಷ್ಯ್ಟ.
1972 ರಿಂದ 2009ರವರೆಗೆ ಶಾಸಕರಾಗಿ ಮತ್ತು ನಾನಾ ಮುಖ್ಯಮಂತ್ರಿಗಳ ಕೈಕೆಳಗೆ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ್, ಅಧಿಕಾರ ಇಲ್ಲದ ವೇಳೆ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ಕಾಂಗ್ರೆಸ್ಸಿನ ಒಳಪದರಗಳನ್ನು ಅರಿತವರಾಗಿದ್ದಾರೆ.
ಮೊದಲಬಾರಿಗೆ 2009ರ ಲೋಕಸಭಾ ಚುನಾವಣೆಯಲ್ಲಿ ಗುಲಬರ್ಗ (ರಿಸರ್ವ್ಡ್) ಕ್ಷೇತ್ರದಿಂದ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಖರ್ಗೆ ಅವರಿಗೆ ಕೇಂದ್ರ ಸಚಿವ ಸ್ಥಾನ ಒಮ್ಮೆಗೆ ಒಲಿದು ಬಂತು. ಅವರೀಗ ಕಾರ್ಮಿಕ ಮಂತ್ರಿ, ಉದ್ಯೋಗ ಸಚಿವ. [ಅನಿವಾಸಿಗಳೆ, ಭಾರತದಲ್ಲಿನ ಪಾಲಕರಿಗೆ ಹಣ ಹಳುಹಿಸಿ]











Click it and Unblock the Notifications