ಯುಕೆ ಕನ್ನಡ ಬಳಗದ ಸಂಭ್ರಮದ ಯುಗಾದಿ

ಯಥಾ ಪ್ರಕಾರ ಪೂಜೆಯೊಂದಿಗೆ ಹೊಸವರ್ಷವನ್ನು ಬರಮಾಡಿಕೊಂಡು, ಸ್ವಾದಿಷ್ಟ ಬ್ರಂಚಿನಿಂದ ಹೊಟ್ಟೆತುಂಬಿಸಿ, ಮನತುಂಬಿಸುವಂತೆ ಸ್ಥಳೀಯ ಕಲಾವಿದರಿಂದ ಸುಂದರವಾದ ಭರತ ನಾಟ್ಯ, ಚಿತ್ರಗೀತೆ, ಕಿರು ನಾಟಕ, ಕೋಲಾಟ, (ಇಂದಿನ ಕಾಲಕ್ಕನುಸಾರ) ಬಾಲಿವುಡ್ ನೃತ್ಯ. ಇದರ ನಂತರ ಒಂದು ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಮೈ.ಶ್ರೀ. ನಟರಾಜರು ಬರೆದ "ಅಪ್ಪ, ಅಮ್ಮ ಇಂಗ್ಲಂಡಿಗೆ ಬಂದದ್ದು" ಎಂಬ ನಾಟಕದಲ್ಲಿ ನಾಲ್ಕೇ ಪಾತ್ರಗಳು. ಯುಕೆಗೆ ಅಳವಡಿಸಿಕೊಂಡ ಈ ಹಾಸ್ಯ ನಾಟಕ (ಪ್ರಹಸನ) ನಮ್ಮ ಪಾಶ್ಚಿಮಾತ್ಯ ಜೀವನ-ಸಂಪ್ರದಾಯ, ಇವೆರಡರ ನಡುವಿನ ದ್ವಂದಕ್ಕೆ ಕನ್ನಡಿ ಹಿಡಿದಂತಿತ್ತು. ನಿದರ್ಶಿಸಿದವರು ಡಾ. ಸತ್ಯಪ್ರಕಾಶ್.
ತದನಂತರ ಸಂಗೀತ. ತಾಯಿ ನಾಡನ್ನು ಅಗಲಿ ಬಂದ ನಾವು ಚಾತಕ ಪಕ್ಷಿಗಳಂತೆ ಸಂಗೀತಾ ಕಟ್ಟಿ-ಕುಲಕರ್ಣಿ ಮತ್ತು ಸಂಗಡಿಗರ ಸಂಗೀತ ಆಲಿಸಲು ಕಾಯುತ್ತಿದ್ದವು. ಕಟ್ಟಿ ಮತ್ತು ತಂಡದವರು 'April showers'ನ ತುಂತುರು ಹನಿಗಳಷ್ಟೇ ಅಲ್ಲ, ಮಾನ್ಸೂನಿನ ಮಳೆ ಸುರಿಸಿ ತಮ್ಮ ಸುಶ್ರಾವ್ಯ ಸಂಗೀತ ಧಾರೆಯಲ್ಲಿ ನಮ್ಮನ್ನೆಲ್ಲ ಕೊಚ್ಚಿಹೋಗುವಂತೆ ಮಾಡಿದರು. ಶಾಸ್ತ್ರೀಯ ಸಂಗೀತ, ವಚನ, ದಾಸರಪದಗಳಷ್ಟೇ ಅಲ್ಲ, ಬೇಂದ್ರೆ ಕವನಗಳನ್ನು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಹಾಡಿ ಎಲ್ಲರ ಮನ ಸೂರೆಗೊಂಡರು. ಸಾಥಿಗಳಾಗಿ ಬಂದಿದ್ದ ರವೀಂದ್ರ ಕಟೋತಿ(ಪೇಟಿ) ಮತ್ತು ಉದಯರಾಜ ಕರ್ಪುರ (ತಬಲಾ) ಅವರ ಕರ ಚಮತ್ಕಾರ ಸಭೆಗೆ ಮೆರಗು ಕೊಟ್ಟಿತ್ತು. ಇನ್ನೂ ಬೇಕು ಎನ್ನುತ್ತಿದ್ದಂತೆ ಸಮಯದ ಅಭಾವದಿಂದ ಮುಗಿಸಬೇಕಾಯಿತು.
ಎಲ್ಲ ರೀತಿಯಿಂದಲೂ ಹೊಟ್ಟೆ ತುಂಬಿದ ಸದಸ್ಯರೆಲ್ಲ ವೇಲ್ಸಿನ ಸ್ಥಳೀಯ ಕಮಿಟಿಯ ಕಾರ್ಯಕರ್ತಕರ ಪರಿಶ್ರಮ ಸಾರ್ಥಕ ಎಂದು ತಲೆದೂಗಿದ್ದರಲ್ಲಿ ಅಚ್ಚರಿಯಿಲ್ಲ. ಕೊನೆಗೆ, ಎಂದಿನಂತೆ ಡಿಸ್ಕೋ ಕುಣಿದು ಯುವಕ-'ನವಯುವಕ'ರು ಕಾಲೆಳೆಯುತ್ತ ಮನೆಗೆ ಮರಳಿದರು.












Click it and Unblock the Notifications