ದುಬೈನಲ್ಲಿ ಕನ್ನಡ ಕವಿಗೋಷ್ಠಿ ಮತ್ತು ಭಾವಗೀತೆ

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತಾಡಿದ ಸಾಹಿತಿ ಹಾಗೂ ರಂಗಕರ್ಮಿ ಪ್ರಕಾಶ್ ರಾವ್ ಪಯ್ಯಾರ್ ಅವರು, ಆದಿಕವಿ ಪಂಪ, ಬಸವಣ್ಣ, ಕನಕದಾಸ, ಸರ್ವಜ್ಞ ಹಾಗೂ ಇಂದಿನ ಆಧುನಿಕ ಕಾಲದವರೆಗಿನ ಹೆಚ್ಚಿನ ಎಲ್ಲಾ ಕವಿಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮಲ್ಲಿರುವ ತಾರತಮ್ಯ ಬೇಧ ಮನೊಭಾವನೆಯನ್ನು ಬಿಟ್ಟು ನಾವು ಮುಂದೆ ಸಾಗಬೇಕೆಂಬ ಬೋಧನೆಯನ್ನು ನೀಡುತ್ತಾ ಬಂದಿರುವರು. ಕನ್ನಡಿಗರಲ್ಲಿ ಎಂದೂ ನಾವೆಲ್ಲ ಒಂದೇ ಎಂಬ ಭಾವನೆ ಮೂಡದಿರುವುದು ವಿಪರ್ಯಾಸ ಎಂದು ಹೇಳಿ, ಹೆತ್ತ ತಾಯಿಯಂತೆ ಕನ್ನಡಮ್ಮನ ಋಣ ತೀರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕವಿಗಳಾದ ಗೋಪಿನಾಥ್ ರಾವ್, ಇರ್ಶಾದ್ ಮೂಡುಬಿದ್ರಿ, ಅರ್ಶದ್ ಹುಸ್ಸೆನ್, ರಾಮ್ ಪ್ರಸಾದ್, ರೊಬರ್ಟ್ ಉದ್ಯಾವರ ಮತ್ತು ಪಿಯುಸ್ ಜೇಮ್ಸ್ ಡಿಸೋಜ ತಮ್ಮ ಕವನಗಳನ್ನು ವಾಚಿಸಿದರು. ಭಾವಗೀತೆ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಸುಮಾ ನಾರಾಯಣ, ಸೋನಿಯ ಗೌತಮ್, ಸರಳಾ ರಘುನಾಥ್, ದೀಪಾ ರಘುನಂದನ್, ರಘುನಂದನ್ ರಾವ್ ಹಾಗೂ ಗುರುರಾಜ್ ಅವರು ಭಾವ ಗೀತೆಗಳನ್ನು ಹಾಡಿ ರಂಜಿಸಿದರು. ಹಾಡುಗಳಿಗೆ ರಾಮ್ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದರು.
ಬಿ.ಎಲ್.ನಾರಾಯಣ, ಫ್ರೆಂಡ್ಸ್ ಅಫ್ ಇಂಡಿಯಾ ಬಳಗದ ಸತೀಶ್ ರಾವ್, ಇಂಡಿಯಾ ಫೈನ್ ಅರ್ಟ್ಸ್ ಬಳಗದ ರಘುನಂದನ್, ಗಲ್ಫ್ ಕರ್ನಾಟಕ ಫಾರಂನ ಹರ್ಮನ್ ಲೂಯಿಸ್, ಕರ್ನಾಟಕ ಸಂಘ ಶಾರ್ಜಾದ ಗಣೇಶ್ ರೈ, ಬಸವ ಸಮಿತಿಯ ಮುರ್ಗೆಶ್ ಗಾಜಾರೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡಾ. ದೀಪಾ ರಘುನಂದನ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ಪ್ರತಿಷ್ಠಾನದ ಕಾರ್ಯದರ್ಶಿ ಮಧುಸೂದನ್ ಅವರು ಸ್ವಾಗತಿಸಿ ಸರಳಾ ರಘುನಾಥ್ ಅವರು ವಂದಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. [ಧ್ವನಿ ಪ್ರತಿಷ್ಠಾನ, ದುಬೈ]












Click it and Unblock the Notifications