ನಾವಿಕ ಉತ್ತಮ, ಅಕ್ಕದಲ್ಲಿ ತೊಂದರೆ ಎಂದ್ರು ಚಂದ್ರು

ಅಮೆರಿಕಾದ ನಾವಿಕ ಕನ್ನಡ ಸಂಸ್ಥೆ ಅತ್ಯುತ್ತಮವಾಗಿ ಕನ್ನಡ ಕಾರ್ಯ ನಿರ್ವಹಿಸಿದೆ. ಕನ್ನಡ ಕಲಿಯುವ ಮಕ್ಕಳಿಗಾಗಿ ಪ್ರಾಧಿಕಾರದ ವತಿಯಿಂದ ಕನ್ನಡ ಕಲಿ ಶಾಲೆಗಳನ್ನು ತೆರೆಯಲಾಗಿದೆ. ಆದರೆ, ಅಕ್ಕದಲ್ಲಿ ಸ್ವಲ್ಪ ತೊಂದರೆ ಉಂಟಾಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಕನ್ನಡ ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರವೇ ಅನುದಾನ ಬಿಡುಗಡೆ ಮಾಡುವ ನಿಯಮ ಜಾರಿಯಾಗುವಂತೆ ತಾವು ಮುಖ್ಯಮಂತ್ರಿಗಳಿಗೆ ಪತ್ರಮುಖೇನ ತಿಳಿಸುವುದಾಗಿಯೂ ಚಂದ್ರು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿದೇಶಿ ಕನ್ನಡ ಕೂಟಗಳಿಗೆ ಸರಕಾರದ ಅನುದಾನ ಕುರಿತು ಪ್ರಸ್ತಾಪಿಸಿದರು. ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿದರೆ ಮಾತ್ರ ಹಣ ಬಿಡುಗಡೆ ಎಂದು ಷರತ್ತು ವಿಧಿಸಲಾಗುವುದು, ಈ ಬಗ್ಗೆ ಅಕ್ಕ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಾರ್ಯದರ್ಶಿ ಬಿಆರ್ ಜಯರಾಮರಾಜೇ ಅರಸ್ ಅವರು, ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ದಲ್ಲಿ ತಮ್ಮನ್ನು ಮತ್ತು ಕನ್ನಡನಾಡನ್ನು ಪ್ರತಿನಿಧಿಸುವ ಕಲಾವಿದರನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಸಮ್ಮೇಳನದ ಕೊನೆಯ ಎರಡು ದಿನ ಅಕ್ಕ ಪದಾಧಿಕಾರಿಗಳು ನುಡಿದಂತೆ ನಡೆಯಲಿಲ್ಲ ಎಂದು ಆರೋಪಿಸಿದರು. ಅಕ್ಕದ ಪದಾಧಿಕಾರಿಗಳು ಆರೋಪಿಸಿರುವಂತೆ ತಾವು ಅಮೆರಿಕಾಗೆ ತಿನ್ನಲು ಹೋಗಿರಲಿಲ್ಲ. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಪ್ರತಿನಿಧಿಸುವ ತಾವು ಬಂಡವಾಳ ಹೂಡಿಕೆ ಸಭೆಯಲ್ಲಿ ಮಾತನಾಡುವುದು ಆಗುವುದಿಲ್ಲ ಎಂದು ಅವರು ಅಕ್ಕದ ಸ್ಪಷ್ಟೀಕರಣಕ್ಕೆ ಖಾರವಾಗಿ ಪ್ರತಿಕ್ರಯಿಸಿದರು.












Click it and Unblock the Notifications