ಅಮೆರಿಕವಾಸಿ ಹವ್ಯಕರ ಮಧುರ ಸಮ್ಮೇಳನ

Subscribe to Oneindia Kannada
Havyaka Sammelana
ಬಿಸಿಬಿಸಿ ಜಿಲೇಬಿಯ ಜಿನುಗು ಅಂಟಿನ ಸವಿ ತುಟಿಯಲ್ಲಿ ಇನ್ನೂ ಇದೆಯೇನೋ ಎಂಬಂತೆ ಸಮ್ಮೇಳನ ಮುಗಿದು ಮೂರು ದಿವಸವಾದರೂ ತಲೆಯೊಳಗೆಲ್ಲ, ಒಂದೊಂದಾಗಿ ಸಾಲುಚಿತ್ರಗಳಂತೆ ಹವ್ಯಕ ಸಮ್ಮೇಳನದ ವಿವಿಧ ಘಟನಾವಳಿಗಳು, ಕಾರ್ಯಕ್ರಮಗಳು, ಸುಮಧುರ ಸಂಗೀತ, ಪುಟ್ಟ ಮಕ್ಕಳ ಮುದ್ದು ಕುಣಿತ, ಭೂರಿಭೋಜನ ಎಲ್ಲ ಅನುರುಣಿಸುತ್ತಿವೆ.

*ವೈಶಾಲಿ ಹೆಗಡೆ, ಅಮೆರಿಕ

ಇದೇ ಸೆಪ್ಟೆಂಬರ್ 5 ಮತ್ತು 6ರಂದು ನ್ಯೂಜೆರ್ಸಿಯ ಫೋರ್ಡ್ಸ್ "ರಾಯಲ್ ಆಲ್ಬರ್ಟ್ ಪ್ಯಾಲೇಸ್" ಸಭಾಂಗಣದಲ್ಲಿ ನಡೆದ "ಹವ್ಯಕ ಅಸೋಸಿಯೇಶನ್ಸ್ ಆಫ್ ಅಮೆರಿಕಾ"ದ ಹದಿಮೂರನೇ ದ್ವೈವಾರ್ಷಿಕ ಮಹಾಸಮ್ಮೇಳನ ಭರ್ಜರಿಯಾಗಿತ್ತು, ಅರ್ಥಪೂರ್ಣವಾಗಿತ್ತು. ಇದೇ ಕಾರಣದಿಂದಾಗಿ ಒಂದು ಸಮ್ಮೇಳನ ಸ್ಮರಣೀಯವಾಗುತ್ತದೆ. ಅರಮನೆಯೇ ಎಂಬಂತಿದ್ದ ಸಭಾಂಗಣ, ಅದಕ್ಕೆ ಹೊಂದಿಕೊಂಡಂತೆ ವಸತಿಗೃಹ. ಅಲ್ಲೇ ಒಂದು ಉತ್ತಮ ಭಾರತೀಯ ರೆಸ್ಟೋರೆಂಟ್! ಯಾವುದೇ ಭಾರತೀಯ ಕಾರ್ಯಕ್ರಮ ನಡೆಸಲು ಹೇಳಿ ಮಾಡಿಸಿದ ಸ್ಥಳ. ಒಟ್ಟೂ ಕಾರ್ಯಕ್ರಮದ ಸಾರಸಂಗ್ರಹವನ್ನು ಸಂಕ್ಷಿಪ್ತವಾಗಿ ನಿಮಗೆ ಕಟ್ಟಿಕೊಡುವುದು ಕಷ್ಟವೇ ಸರಿ!

ಹವ್ಯಕ ಸಮ್ಮೇಳನ ಸೆಪ್ಟೆಂಬರ್ 5ರ ಬೆಳಿಗ್ಗೆ ಹತ್ತು ಗಂಟೆಗೆ ಆರಂಭ, ಮರ್ಸರ್ ಕೌಂಟಿ ಪಾರ್ಕಿನಲ್ಲಿ ಪಿಕ್ನಿಕ್. ಕಾರ್ಯಕರ್ತರೆಲ್ಲ ಎಂಟು ಗಂಟೆಯಿಂದಲೇ ಆಗಮಿಸಿ ಸಕಲ ಸಿದ್ಧತೆಗಳನ್ನು ಆರಂಭಿಸಿಬಿಟ್ಟಿದ್ದರು. ಮಕ್ಕಳಂತೂ ಕುಣಿದದ್ದು ಸರಿ, ದೊಡ್ಡವರೂ ಮಕ್ಕಳಂತೆ ಆಟೋಟಗಳನ್ನು ಮನದಣಿಯೆ ಆಡಿ ಓಡಿ ನಕ್ಕು ನಲಿದಿದ್ದು ವಿಶೇಷ. ಮಕ್ಕಳ, ದೊಡ್ಡವರ ರನ್ನಿಂಗ್ ರೇಸ್, ಚಾಕಲೇಟ್ ಭರಿತ ಪಿನ್ಯಾಟ, ದಂಪತಿಗಳಿಗೆ ವಾಟರ್ ಬಲೂನ್, ಮೂರುಕಾಲಿನ ಓಟ ಸ್ಪರ್ಧೆ, ಅಂತ್ಯಾಕ್ಷರಿ, ರಸಪ್ರಶ್ನೆ ಕಾರ್ಯಕ್ರಮ ಹೀಗೆ ತರಾವರಿ ವಿನೋದಾವಳಿಗಳು.

ಮಧ್ಯೆ ಮಧ್ಯೆ ತಣ್ಣನೆಯ ಕಲ್ಲಂಗಡಿ ಹಣ್ಣು,ಮತ್ತು ರುಚಿಕರ ಊಟ. ಮಕ್ಕಳೆಲ್ಲ ಉರಿವ ಸೂರ್ಯನಿಗಿಂತಲೂ ಮಿಗಿಲಾಗಿ ಮಿನುಗುತ್ತಿದ್ದರೆ, ದೊಡ್ಡವರೆಲ್ಲ ಎಷ್ಟೋ ದಿವಸಗಳ ಮೇಲೆ ಭೆಟ್ಟಿಯಾದ ಬಂಧು ಬಾಂಧವರನ್ನು, ಮಿತ್ರರನ್ನು ಕಂಡು ಖುಷಿಯಿಂದ ಹರಟತೊಡಗಿದ್ದರು. ಸಂಭ್ರಮದಿಂದ ಆರಂಭವಾದ ಸಮ್ಮೇಳನಕ್ಕೆ ಇದು ನಾಂದಿ ಅಷ್ಟೇ. ಅಂದು ಸಂಜೆ ಸಭಾಂಗಣಕ್ಕೆ ಸುಮಾರು ಆರು ಗಂಟೆಯಷ್ಟೊತ್ತಿಗೆ ಅಂದವಾಗಿ ಅಲಂಕರಿಸಿಕೊಂಡು, ಫ್ಲೋರಿಡ, ವರ್ಜಿನಿಯ, ವಾಷಿಂಗ್ ಟನ್ ಡಿಸಿ, ಶಿಕಾಗೋ, ಬಾಸ್ಟನ್, ಕನೆಕ್ಟಿಕಟ್, ನ್ಯೂಯಾರ್ಕ್, ಪೆನ್ಸಿಲ್ವೇನಿಯ, ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾ ಮತ್ತಿತರ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಂದ, ಅಮೆರಿಕೆಯಲ್ಲಿ ನೆಲೆಸಿರುವ ಹವ್ಯಕ ಹೆಣ್ಣು, ಗಂಡು, ಮಕ್ಕಳು ಮರಿಗಳು. ಎಲ್ಲಿ ತಿರುಗಿದರೂ ಕಣ್ಣರಳಿಸಿ ಒಬ್ಬರನ್ನೊಬ್ಬರು "ಎಷ್ಟೆಲ್ಲ ದಿನ ಆತು ನೋಡಿ!" ಎಂದು ಉದ್ಗಾರದೊಂದಿಗೆ ಒಬ್ಬರನ್ನೊಬ್ಬರು ಮಾತನಾಡಿಸುವವರೇ. ಎಲ್ಲರಲ್ಲೂ ತಮ್ಮ ಮನೆಯ ಕಾರ್ಯವೇನೋ ಎಂಬಂತೆ ಸಡಗರ.

ಇನ್ನು ಕಾರ್ಯಕ್ರಮದ ಬಗ್ಗೆ ಹೇಳುವದಾದರೆ, ಅಚ್ಚುಕಟ್ಟಾಗಿ ನಡೆದ ಸುಂದರ ಮನೋರಂಜನೆಯ ಸಂಜೆಗಳು ಎನ್ನಬಹುದು. ಗಜಾನನ ಹೆಗಡೆಯವರ ಅಧ್ಯಕ್ಷತೆಯಲ್ಲಿ ಮೂಡಿಬಂದ, ಶಿವಶಂಕರ್ ಭಟ್ ನಡೆಸಿಕೊಟ್ಟ ನಿರರ್ಗಳ ಕಾರ್ಯಕ್ರಮ ನಿರ್ವಹಣೆ. ಹವ್ಯಕರಿಗಿರುವ 2 ಮುಖ್ಯ ಮಠಗಳಾದ ಸ್ವರ್ಣವಲ್ಲಿ ಮಠ ಹಾಗೂ ರಾಮಚಂದ್ರಾಪುರ ಮಠಗಳ ಶ್ರೀಗಂಗಾಧರೇಂದ್ರ ಸ್ವಾಮೀಜಿ ಹಾಗೂ ಶ್ರೀರಾಘವೇಶ್ವರ ಸ್ವಾಮೀಜಿಯವರ ಆಶೀರ್ವಚನದ ವಿಡಿಯೋ ಪ್ರಸಾರ, ಸಮ್ಮೇಳನದ ಬ್ಯಾನರ್, ಬ್ಯಾಡ್ಜ್ ಗಳಿಂದ ಹಿಡಿದು ಹವ್ಯಕ ಯುವ ಪೀಳಿಗೆಯ ಬರಹಗಳಿಂದ ತುಂಬಿರುವ ಸ್ಮರಣ ಸಂಚಿಕೆ. ಮುಖಪುಟ ವಿನ್ಯಾಸ ಮಾಡಿರುವ ಬಾಲ ಪ್ರತಿಭೆ ಪ್ರಥಮ್ ಕಾರಣಿಕ್ ಚಿತ್ರಕಲಾ ಪ್ರದರ್ಶನ.

ಅತಿಥಿ ಕಲಾವಿದರಾದ ಶಶಿಧರ್ ಕೋಟೆಯವರ ಕರ್ನಾಟಕ ಶೈಲಿಯ ಸುಶ್ರಾವ್ಯ ಸಂಗೀತ, ವೈಶಾಲಿ ಶ್ರೀನಿವಾಸ್ ಮಧುರ ಕಂಠದಲ್ಲಿ ಮೂಡಿಬಂದ ಹಿಂದೂಸ್ತಾನಿ ಗಾಯನ, ಗಣೇಶ್ ದೇಸಾಯಿ, ವಿನಾಯಕ್ ಹೆಗಡೆ ಮತ್ತಿತರರ ಸುಗಮ, ಲಘು ಸಂಗೀತ, ನಮಿತ ದೇಸಾಯಿ ಮತ್ತು ಸ್ಥಳೀಯರ ಸುಂದರ ಭರತನಾಟ್ಯ , ಮಕ್ಕಳ ಕಾರ್ಯಕ್ರಮಗಳು, ಜನಪ್ರಿಯ ನೃತ್ಯ ಶೈಲಿಯ ಕಾರ್ಯಕ್ರಮಗಳು, ಡಿ.ಸಿ. ತಂಡದವರ ಅತ್ಯುತ್ತಮ ಹಾಸ್ಯ ನಾಟಕ, ಹೊಸಬಗೆಯ ಫ್ಯಾಶನ್ ಷೋ, ಒಂದೇ ಎರಡೇ? ಇವೆಲ್ಲಕ್ಕೆ ಕಳಸವಿಟ್ಟಂತೆ, ಸಮ್ಮೇಳನದ ಸಭಾಂಗಣಕ್ಕೆ "ಶಂಭು ಹೆಗಡೆ ಸಭಾಂಗಣ" ಎಂದು ಹೆಸರಿಟ್ಟದ್ದನ್ನು ಸಾರ್ಥಕಗೊಳಿಸುವಂತೆ ಟೊರಾನ್ಟೊ, ಕೆನಡದಿಂದ ಬಂದ ಯಕ್ಷಮಿತ್ರ ಮಂಡಳಿಯವರು ಅದ್ಭುತವಾಗಿ ಅಭಿನಯಿಸಿದ "ಶ್ಯಮಂತಕೊಪಾಖ್ಯಾನ" ಯಕ್ಷಗಾನ. ಕಣ್ತುಂಬಿ, ಮನಮುದಗೊಳಿಸಿದ ವೈವಿಧ್ಯಮಯ ಕಾರ್ಯಕ್ರಮಗಳು.

ಇವೆಲ್ಲವುಗಳ ಜೊತೆ ಸ್ಪರ್ಧಿಸುವಂತಿದ್ದ ವ್ಯವಸ್ಥೆಯೆಂದರೆ ಬಂದವರ ಹೊಟ್ಟೆಯ ಬಗ್ಗೆ ಸ್ಥಳೀಯ ಕಾರ್ಯಕರ್ತರು ವಹಿಸಿದ ಅಮೋಘ ಕಾಳಜಿ. ಬೆಳಗ್ಗಿನ ಇಡ್ಲಿ, ವಡೆ, ಉಪ್ಪಿಟ್ಟು, ಅವಲಕ್ಕಿ ಇನ್ನೇನು ತಿಂದು ಮುಗಿಯಿತು ಎನ್ನುವಾಗ, ಭಜಿ, ಬೋಂಡ ಜೊತೆಗಿನ ಕಾಫಿ/ಟೀ ಬ್ರೇಕ್. ಮತ್ತೆರಡು ತಾಸಿಗೆ ಬಗೆಬಗೆಯ ಭಕ್ಷ್ಯಗಳ ಅದ್ಧೂರಿ ಔತಣ ಹಾಜರ್. ಮತ್ತೆ ಭೇಲ್ಪುರಿ, ಮಸಾಲಪುರಿ, ಸಮೋಸ ಚಾಟ್, ಕಾಫಿ, ಟೀ . ರಾತ್ರಿ ಎಂಟುಗಂಟೆಗೆ ಸರಿಯಾಗಿ ಭೂರಿಭೋಜನ. ಊಟದ ಒಂದು ಸಿಗ್ನೇಚರ್ ಐಟಂ ಎಂದರೆ ಕಣ್ಣೆದುರಿಗೆ ಬಾಣಲೆಯಿಂದೆದ್ದು ಪಾಕದಲ್ಲಿ ಮುಳುಗೇಳುವ ಗರಿಗರಿ ಬಿಸಿಬಿಸಿ ಜಿಲೇಬಿ! ಜೊತೆಯಲ್ಲಿ ಜಾಮೂನ್,ರಸಮಲೈ, ಕ್ಯಾರೆಟ್ ಹಲ್ವ ಎಂದು ಪ್ರತಿ ಊಟದಲ್ಲೂ ಇನ್ನಿತರ ಸಿಹಿಗಳಿದ್ದರೂ, "ಬೆಂಡೆಗದ್ದೆ ಜಿಲೇಬಿ ಹಂಗೆ ಇದ್ದಲೊ" ಎನ್ನುತ್ತಾ ಚಪ್ಪರಿಸಿದವರೇ ಹೆಚ್ಚು.

ಈ ಸಮ್ಮೇಳನವನ್ನು ತಪ್ಪಿಸಿಕೊಂಡ ಅಮೆರಿಕೆಯ ಹವ್ಯಕರು ಒಂದು ಸುಂದರ ಅನುಭವದಿಂದ ವಂಚಿತರಾದರು ಎನ್ನಲೇಬೇಕು. ಇಂಥ ಒಂದು ಸಮುದಾಯ ಸ್ನೇಹಿ, ಮಧುರ ಸಮ್ಮೇಳನವನ್ನು ಯಾವ ರೀತಿಯಲ್ಲೂ ಎಲ್ಲೂ ಎಡವದಂತೆ, ಮುಕ್ಕಾಗದಂತೆ ನಡೆಸಿಕೊಟ್ಟದ್ದಕ್ಕೆ HAAಗೆ ಚಪ್ಪಾಳೆಗಳು ಬೀಳಬೇಕು. ಅಭಿನಂದನೆ ಅಧ್ಯಕ್ಷ ಗಜಾನನ ಹೆಗಡೆಯವರಿಗೆ ಸಲ್ಲಬೇಕು. ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳೂ ದುಡಿದ ಆನಂದ, ಉಷಾ, ವಿದ್ಯಾವತಿ ,ವೆಂಕಟಗಿರಿ, ಪ್ರಸನ್ನ ಹೆಗಡೆ, ಭೀಮ್ ಭಟ್ ಹೀಗೆ ಹಲವಾರು ಕಾರ್ಯಕರ್ತರ ಪಟ್ಟಿ ಮಾಡುತ್ತಾ ಹೋದರೆ, ಅದೇ ಒಂದು ಪುಟವಾದೀತು.

ನೂರಾರು ಜನರನ್ನು ಸೇರಿಸುವ ಸಮಾರಂಭ ಎಂದರೆ ಚಿಕ್ಕಪುಟ್ಟ ನ್ಯೂನತೆಗಳು ಸಾಮಾನ್ಯ. ಅದು ಹವ್ಯಕ ಮಹಾಸಭೆ ಮುಂದಿನ ಸಮಾರಂಭಕ್ಕೆ ಬೇಕಾದ ಪಾಠ ಎಂದುಕೊಂಡು ಅಳವಡಿಸಿಕೊಳ್ಳಬಹುದಾದ ಚಿಕ್ಕಪುಟ್ಟ ಸುಧಾರಣೆಗಳು. ಆದರೆ, ಅತಿಥಿಗಳಾಗಿ ಹೋದವರಿಗೆ ಅನುಭವಕ್ಕೆ ಬಂದಿದ್ದು ಮಾತ್ರ ಕಾರ್ಯಕ್ರಮ ಇನ್ನೆರಡು ದಿವಸ ಇದ್ದರೂ ಇರಬಹುದಿತ್ತು ಎಂದು. ಎಷ್ಟು ಬೇಗನೆ ಮುಗಿದು ಹೋಯಿತಲ್ಲ ಎಂದು ಕೊನೆಯಲ್ಲಿ ಎಲ್ಲರೂ ಚಡಪಡಿಸುವಂತೆ ಮಾಡಿದ್ದು. ಯಾವುದೇ ಸಮಾರಂಭಕ್ಕೂ, ಅದನ್ನು ಆಯೋಜಿಸಿದವರಿಗೂ, ದುಡಿದ ಕಾರ್ಯಕರ್ತರಿಗೂ ಹೆಮ್ಮೆಯ ವಿಷಯವೇ. ಬಂದವರೆಲ್ಲರೂ 2011ರಲ್ಲಿ ಶಿಕಾಗೋದಲ್ಲಿ ನಡೆಯಲಿರುವ ಸಮ್ಮೇಳನಕ್ಕಾಗಿ ಈಗಲೇ ಎದುರು ನೋಡುತ್ತಿದ್ದಾರೆ. ನ್ಯೂಜೆರ್ಸಿಯ ಸಮ್ಮೇಳನ ಹಾಕಿಕೊಟ್ಟ ಮಾನದಂಡವನ್ನು ಮೀರಿ ಬೆಳೆಯುವ ಒಂದು ಗುರುತರ ಹೊಣೆ ಮುಂದಿನ ಅಧ್ಯಕ್ಷರ ಮೇಲೆ ತಾನೇ ತಾನಾಗಿ ಬಂದು ಬಿದ್ದಿದೆ.HAA ಮೇಲಿನ ಜವಾಬ್ದಾರಿಗಳೂ ದ್ವಿಗುಣವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...