ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಂದರ ದಾಸರಿಗೆ ಸಿಂಗಪುರದಲ್ಲಿ ಸಂಗೀತ ನಮನ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Purandasa Dasa remembered in Singapore
ಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ಪುರಂದರದಾಸರು. ಪುರಂದರದಾಸರು ದಕ್ಷಿಣಾದಿ ಸಂಗೀತವನ್ನು ಕಲಿಯಲು ಒಂದು ವ್ಯವಸ್ಥಿತ ಪದ್ಧತಿಯನ್ನು ಅಳವಡಿಸಿದರು. ಖರಹರಪ್ರಿಯ ರಾಗದಿಂದ ಸಂಗೀತವನ್ನು ಅಭ್ಯಾಸಮಾಡಲು ಆರಂಭಿಸುತ್ತಿದ್ದ ಹಿಂದಿನ ಕ್ರಮವನ್ನು ಬದಲಾಯಿಸಿ ಸುಲಭ ಕಲಿಕೆಗೆ ಅನುವಾಗುವಂತೆ ಮಾಯಾಮಾಳವ ಗೌಳರಾಗದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳನ್ನು ರಚಿಸಿದರು. ಈ ನಿಯಮಾವಳಿಗಳನ್ನು ಅವರು ಸುಮಾರು 500 ವರುಷಗಳ ಹಿಂದೆ ಕರ್ನಾಟಕ ಸಂಗೀತದಲ್ಲಿ ಅಳವಡಿಸಿ "ಕರ್ನಾಟಕ ಸಂಗೀತ ಪಿತಾಮಹ" ಎಂದೆನಿಸಿಕೊಂಡರು.

ದಾಸಶ್ರೇಷ್ಠ ಪುರಂದರದಾಸರು ಹುಟ್ಟಿದ ದಿನವೇ ಆಗಲಿ, ಹರಿದಾಸ ದೀಕ್ಷೆ ಪಡೆದ ದಿನವೇ ಆಗಲೀ ತಿಳಿಯದು. ಅವರ ಶರೀರವನ್ನು ಅಗಲಿದ ದಿನ ಮಾತ್ರ ರಕ್ತಾಕ್ಷಿ ಸಂವತ್ಸರ, ಪುಷ್ಯ ಮಾಸದ ಅಮಾವಾಸ್ಯೆ ಕ್ರಿ.ಶ. 1564 ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಈ ದಿನವನ್ನು ವಿಶ್ವದ ಬಹುತೇಕ ಕಡೆಗಳಲ್ಲಿ ಕರ್ನಾಟಕ ಸಂಗೀತ ಆರಾಧಕರು ಪುರಂದರರ ಪುಣ್ಯದಿನವೆಂದು ದಾಸವರೇಣ್ಯನಿಗೆ ಪುಷ್ಪಾಂಜಲಿ ಸಲ್ಲಿಸುತ್ತಾರೆ.

ಪುರಂದರರಿಗೆ ಸಲ್ಲಿಪ ಈ ಪುಷ್ಪಾಂಜಲಿಯು ಸಂಗೀತ ಕಲಿತ, ಕಲಿಯುವ, ಸಂಗೀತ ಕಲಾಭಿಮಾನಿಗಳು ಸಲ್ಲಿಪ "ಗುರುವಂದನೆ". ಈ ಗುರುವಂದನೆಯನು ಸಿಂಗಪುರ ಕನ್ನಡ ಸಂಘ ಹಾಗೂ ಸ್ಯಾಮ-ಸಂಸ್ಥೆಯ ಕಲಾವಿದರ ನೇತೃತ್ವದಲ್ಲಿ, 24 ಶನಿವಾರ ಸಂಜೆ ಡಿ.ಬಿ.ಎಸ್. ಸಭಾಂಗಣದಲ್ಲಿ "ದಾಸರು"-(ದೃಷ್ಟಿಯಲಿ ಕೃಷ್ಣ)-ನೃತ್ಯರೂಪಕ ಕಾರ್ಯಕ್ರಮ ಏರ್ಪಡಿಸಿತ್ತು.

ಕೃಷ್ಣನ ಬಾಲಲೀಲೆಗಳ ವರ್ಣನೆ, ಗೋಪಿಕೆಯರ ಒಡನಾಟ, ತಾಯಿ-ಮಗುವಿನ ಅನುಬಂಧ, ಕಾಳಿಂಗ ಮರ್ದನ ಕಣ್ಣಾರೆ ಕಂಡಂತೆ ತಮ್ಮ ರಚನೆಗಳಲಿ ವರ್ಣಿಸಿ.. ಏಕೆ, ಹೀಗೆ, ಇದೇನು, ಅದ್ಯಾಕೆ ಎಂದು ಅ ಭಗವಂತ ನಿನ್ನ ಲೀಲೆಗಳು ಇದೆಂತುಹುದೆಂದು ಪ್ರಶ್ನಿಸಿ.. ಕಡೆಯಲ್ಲಿ ಹರಿಯೇ ಈ ಭವಬಂಧನದಿಂದ ಮುಕ್ತಿ ನೀಡು ಎಂದು ಮೊರೆಯಿಟ್ಟು ಆ ವಿಠಲನಲ್ಲಿ ಲೀನಗೊಳ್ಳುವ ಪುರಂದರರ ರಚನೆಗಳ ನಾಟ್ಯ-ಗಾಯನವದಾಗಿತ್ತು.

ಕನ್ನಡ ಸಂಘದ ಕಲಾವಿದರಿಂದ ಗಾಯನ- ಸ್ಯಾಮ ಸಂಸ್ಥೆಯ ವಿದ್ಯಾರ್ಥಿನಿಯರ ನೃತ್ಯ-ರೂಪಕದಲಿ ದಾಸರ ಬುಕುಚ್ಚಿ ಮಾಡಲಾರೆ, ಅಮ್ಮಾ ಎತ್ತಿಕೊಳ್ಳಮ್ಮ, ಗುಮ್ಮನ ಕರೆಯದಿರೆ, ಜಗದೋದ್ದಾರನ, ಏನು ಮಾಡಲೋ ರಂಗ, ಏಕೆ ಬೆಳಗಾಯಿತು, ಚಿಕ್ಕವನೇ ಇವನು ಯಶೋದೆ, ಜಗನ್‌ಮೋಹನನೇ ಕೃಷ್ಣ, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ, ಆನೆಯು ಕರೆದರೆ ಆದಿಮೂಲ ಕೀರ್ತನೆಗಳು ಜನರ ಮನ ಗೆದ್ದವು.

ಗಾಯನ ಸಂಗೀತ ವಿದುಷಿ ಭಾಗ್ಯಮೂರ್ತಿ ಹಾಗೂ ತಂಡದವರಿಂದ ಕಲಾಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕೆ ತಕ್ಕ ಸಾರಥ್ಯ ನೀಡಿದವರು ರಾಜ ಸುಬ್ರಹ್ಮಣ್ಯಂ-ಮೃದಂಗ, ತ್ಯಾಗರಾಜು-ಕೊಳಲು, ವಿದ್ಯಾ-ವಯಲಿನ್, ರಾಮ್‌ಕುಮಾರ್ ವಾಸುದೇವನ್-ವೀಣೆ. ಶ್ರೀಲಕ್ಷ್ಮಿ- ನಟುವಾಂಗ, ಪ್ರಕೃತಿ, ಸಾಧನ ರಾಜಾರಾಂ, ಭಾರತಿ ಮೂರ್ತಿ ಮತ್ತು ಅತಿರ ಅವರಿಂದ ನೃತ್ಯಗೈದರು. ಪುರಂದರ ವೇಷಧಾರಿಯಾಗಿ ವಿಶಾಲಾಕ್ಷಿ ವೈದ್ಯ, ನಿರೂಪಣೆ ಸರಯೂ ವೈದ್ಯ ಅವರಿಂದ ನಡೆಯಿತು.

ಪುರಂದರ ದಾಸರು ಹಿರಿಯ ಭಕ್ತ, ಹಾಡುಗಾರ, ಕೀರ್ತನಕಾರ. ಅವರ ಕೃತಿಗಳಲ್ಲಿ ಸಮಾಜ ವಿಮರ್ಶೆ, ಸಮಾಜ ಬೋಧನೆ, ದೇವರ ನಾಮ ಮಹಿಮೆ, ಅಂತರಂಗ ನಿವೇದನೆ, ಆಧ್ಯಾತ್ಮಿಕ ಕಲ್ಪನೆಗಳು ಕಂಡು ಬರುತ್ತದೆ. ದಾಸರ ಕೃತಿಗಳಲ್ಲಿ ಭಕ್ತನ ಸಂಪೂರ್ಣ ಸಮಪರ್ಣೆಯ ಸಾಕ್ಷಾತ್ಕಾರ ಸುಂದರ ರೂಪ ಕಂಡು ಬರುತ್ತದೆ. ಹಾಗೆಯೇ ಭಕ್ತಿ, ಶೃಂಗಾರ, ಹಾಸ್ಯ, ವಾತ್ಸಲ್ಯ, ವೈರಾಗ್ಯ, ನೀತಿಭೋಧೆ, ಜೀವನ ನಿಷ್ಠೆ ಇದೆ.

'ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ' ಎಂದು ಭಕ್ತಿ ಸಕ್ಕರೆಯ ಹಂಚಿ, ರಾಮನಾಮವ ನುಡಿ, ನುಡಿ, ಕಾಮಕ್ರೋಧಗಳ ಬಿಡಿ, ಬಿಡಿ-ಎಂದ್ನುಡಿದ ಪಿತಾಮಹನ ಆರಾಧನೆಯ ವೇದಿಕೆ ಹಾಡುಗಾರ ವೇದಿಕೆ. ಪ್ರತಿಯೋರ್ವ ಸಂಗೀತ ಪ್ರೇಮಿಯೂ ಹಿರಿಯ ವ್ಯಕ್ತಿಗೆ ಸಂಗೀತದ ಮೂಲಕ ಸಲ್ಲಿಸುವ ಪುರಂದರ ನಮನವೆಂಬ ಪೂಜೆ ಹೀಗೆಯೇ ಪ್ರತಿವರುಷವೂ ನಡೆಯುತ್ತಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X