ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸನ ಮಾಡಿಕೊ ಎನ್ನ,ಸಾಸಿರನಾಮದ ವೆಂಕಟರಮಣ

By Staff
|
Google Oneindia Kannada News

Musical tributes to Purandara in Aucklandಅಕ್ಲೆಂಡಿನ ಮೌಂಟ್ ಈಡನ್ ಹಿರಿಯ ನಾಗರೀಕರ ಕೇಂದ್ರ ಭವನದಲ್ಲಿ "ಸ್ವರ ರಾಗ ಸುಧಾ" ಕರ್ನಾಟಕ ಸಂಗೀತ ಶಾಲೆಯವರು ಆಯೋಜಿಸಿದ್ದ ಪುರಂದರ ದಾಸರ ಆರಾಧನೆ ಕಾರ್ಯಕ್ರಮ ಶ್ರೋತೃ ವೃಂದದ ಮನದಲ್ಲಿ ಬಹು ಕಾಲ ಉಳಿಯುವುದರಲ್ಲಿ ಸಂದೇಹವಿಲ್ಲ. ಫೆ. 8ರ ಶುಕ್ರವಾರ ಸಂಜೆ ಇಲ್ಲಿ ನಡೆದ ಪುರಂದರ ಸ್ಮರಣೆ ಕಾರ್ಯಕ್ರಮದ ಸತ್ವ ಹಾಗಿತ್ತು.

ವರದಿ: ಪ್ರಕಾಶ್ ರಾಜಾರಾವ್, ಅಕ್ಲೆಂಡ್

ವೃತ್ತಿಯಿಂದ ಇಂಜಿನೀಯರ್ ಆಗಿರುವ ವಿದ್ವಾನ್ ಎಂ.ಡಿ. ದಿವಾಕರ್ ಅವರು ಖ್ಯಾತ ಗಾಯಕರೂ ಹೌದು. ನ್ಯೂಜಿಲೆಂಡ್‌ನಲ್ಲಿ ಬಂದು ನೆಲೆಸಿದ ನಂತರ ತಮ್ಮ ಪ್ರತಿಭೆ ಮತ್ತು ವಿದ್ವತ್ತನ್ನು ಗಾಯನಕ್ಕೆ ಮಾತ್ರ ಸೀಮಿತಗೊಳಿಸದೆ ಸಂಗೀತ ಕಲಿಸಲು ವಿಸ್ತರಿಸಿದರು. ಆಸಕ್ತ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಪಾಠ ಹೇಳಲು ಅನುವಾಗುವಂತೆ ಅವರು ಪ್ರಾರಂಭಿಸಿದ ಸ್ವರ ರಾಗ ಸುಧಾ ಶಾಲೆ ಈಗ ಸುಮಾರು ಮೂವತ್ತಕ್ಕೂ ಹೆಚ್ಚು ಪ್ರತಿಭಾವಂತ ಗಾಯಕರನ್ನು ಸೃಷ್ಟಿಸಿದೆ. ಶ್ರೀ ದಿವಾಕರ್ ಅವರು ವೀಣಾ ವಾದನದಲ್ಲೂ ನುರಿತವರಾದ್ದರಿಂದ ಅವರ ಶಿಷ್ಯರಲ್ಲಿ ಹಲವರು ವೈಣಿಕರೂ ಆಗಿದ್ದಾರೆ.

ಪುರಂದರ ದಾಸರ ಬದುಕು ಮತ್ತು ಕೃತಿಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿ ಸ್ವಾಗತ ಭಾಷಣ ಮಾಡಿದವರು ಸ್ವಯಂ ಗಾಯಕರೂ ಆದ ಪ್ರೊ. ಎಂ.ಕೆ. ವಾಮನ ಮೂರ್ತಿಯವರು. ಪುರಂದರ ದಾಸರ ಕೃತಿಗಳು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ, ಮಹಾರಾಷ್ಟ್ರಗಳಲ್ಲಿನ ಸಂಗೀತ ಕ್ಷೇತ್ರದ ದಿಗ್ಗಜರುಗಳಿಗೆ ಪ್ರೇರಣೆ ನೀಡಿದ್ದನ್ನು ವಿವರಿಸಿ , ಜರ್ಮನ್, ಆಂಗ್ಲ ಮೊದಲಾದ ಭಾಷೆಗಳಿಗೆ ಭಾಷಾಂತರವಾದ ಕಾರಣ ಇವುಗಳ ಸೌರಭ ಜಗತ್ತನ್ನೆ ತಲುಪಿದೆ ಎನ್ನಬಹುದಾಗಿದೆ ಎಂದು ಅವರು ಹೇಳಿದರು. ಭಕ್ತಿ ಮುಕ್ತಿ ಮಾರ್ಗದಲ್ಲಿ ಸಾಧನೆ ಮಾಡಬಯಸುವವರಿಗೆ ಪುರಂದರ ದಾಸರ ಕೃತಿಗಳು ಅತ್ಯುಪಯುಕ್ತವಾಗಿವೆ ಎಂದವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮೂಹ ಗಾನದಲ್ಲಿ ಶ್ರೀ ಗಣನಾಥ , ಕೆರೆಯ ನೀರನು ಕೆರೆಗೆ ಚೆಲ್ಲಿ ಮತ್ತು ಪದುಮನಾಭ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಕು. ದಿಶಾ ಮತ್ತು ಸಾಕೇತ್ ಅವರು ವೀಣಾ ವಾದನದಲ್ಲಿ ಗಜವದನ ಬೇಡುವೆ ನುಡಿಸಿ ಎಲ್ಲರ ಮನ ಸೆಳೆದರು. ಅತಿ ಕಿರಿಯ ವಯಸ್ಸಿನ ವಿದ್ಯಾರ್ಥಿನಿಯರಾದ ಸೌಮ್ಯ, ಭಾರ್ಗವಿ, ನಿಧಿ, ಸಾತ್ವಿಕಾ ಅವರುಗಳು ದಾಸನ ಮಾಡಿಕೊ ಎನ್ನ , ಮಾನಸಿ ಮತ್ತು ನೇಹಾ ವಿಜಯ್ ಅವರು ಮರೆಯ ಬೇಡ , ಮಾಳವಿ ಹಾಗೂ ಸುರಕ್ಷಾ ಅವರು ಗೋವಿಂದ ನಿನ್ನ , ಕೃತ್ತಿಕಾ ಪ್ರಹ್ಲಾದ್ ಮತ್ತು ಅನುಷಾ ದತ್ತಾತ್ರೇಯ ಅವರು ತಂಬೂರಿ ಮೀಟಿದವ, ವರ್ಷ ಪೈ ಹಾಡಿದ ನಾನೇಕೆ ಬಡವನು ಎಲ್ಲವೂ ಮಧುರವಾಗಿದ್ದು ಈ ಗಾಯಕರು ಉತ್ತಮ ಭವಿಷ್ಯ ಹೊಂದಿರುವುದನ್ನು ಧೃಡಪಡಿಸಿದವು.

ಕನ್ನಡದ ಗಂಧವೇ ಇಲ್ಲದ [ಮಾತೃ ಭಾಷೆ ಬೇರೆಯಾದ ಕಾರಣ] ಅರಾಹನ್, ಕ್ರೀಶಾಂತ್, ಕವಿನೇಶ್ ಇವರುಗಳು ರಾಮ ಮಂತ್ರವ ಜಪಿಸೋ ಎಂದು ಅಚ್ಚ ಕನ್ನಡದಲ್ಲಿ ಹಾಡಿ ಸಂಗೀತ ಭಾಷಾತೀತವಾದುದೆಂದು ಸಾರಿದರು. ಈಗಾಗಲೇ ಪ್ರಭುದ್ಧ ಗಾಯಕಿಯರಾಗಿ ಖ್ಯಾತರಾಗಿರುವ ಚೈತ್ರ ರವಿ, ಸ್ಮಿತಾ ಗೌರಿ, ಅನುಪಮ ಪ್ರಭಾಕರ್ ಅವರುಗಳು ಹಾಡಿದ ಮನೆಯೊಳಗೆ , ಕಡೆಗೋಲ ತಾರೆನ್ನ , ರಾಮ ರಾಮ ರಾಮಾ ಎನ್ನಿರೊ , ಎಲ್ಲರನ್ನು ತನ್ಮಯರಾಗಿಸಿದವು. ಹಿರಿಯ ಗಾಯಕಿ ಶ್ರೀಮತಿ ರತ್ನಾ ವಾಮನ ಮೂರ್ತಿಯವರು ಹಾಡಿದ ಕೃಷ್ಣ ನಾಮ , ಶ್ರೀ ವಾಮನ ಮೂರ್ತಿಯವರು ಹಾಡಿದ ಹರಿ ಸ್ಮರಣೆ ಮಾಡೋ ನಿರಂತರ , ಕೃತಿಗಳ ಗಾಯನ ಕಂಠ ಮಾಧುರ್ಯ ಮತ್ತು ಭಕ್ತಿ ಭಾವ ಬೆರೆತು ಕೇಳುಗರಿಗೆ ನಿಜಾನಂದದ ಅನುಭವವಾಯಿತು.

ದಿವಾಕರ್ ಅವರು ಕಂಡೆನಾ ಕನಸಿನಲಿ ಕೃತಿಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ವೀಣಾ ವಾದನದಲ್ಲಿ ದಿವಾಕರ್, ವಯೋಲಿನ್ ನಲ್ಲಿ ಡಾ.ಅಶೋಕ್ ಮಾಲೂರ್, ಕೀಬೋರ್ಡ್ ನಲ್ಲಿ ಚಿ. ಸಾಕೇತ್, ಖಂಜರದಲ್ಲಿ ಸತ್ಯ ಕುಮಾರ್ ಅವರುಗಳು ಗಾಯನದ ಪಾಯಸಕ್ಕೆ ವಾದ್ಯ ಸಂಗೀತದ ಸಕ್ಕರೆ ಬೆರೆಸಿದರು.

ಕೊನೆಯಲ್ಲಿ ಎಲ್ಲಾ ಗಾಯಕರೂ ಒಟ್ಟಾಗಿ ಜನಪ್ರಿಯ ಭಾಗ್ಯದಾ ಲಕ್ಷ್ಮೀ ಬಾರಮ್ಮ ಕೃತಿಯನ್ನು ಹಾಡಿ ಇಡೀ ಶ್ರೋತೃ ವೃಂದವೇ ದನಿಗೂಡಿಸುವಂತೆ ಮಾಡಿದರು. ಕಾರ್ಯಕ್ರಮವನ್ನು ಕೃತ್ತಿಕಾ ಪ್ರಹ್ಲಾದ್ , ವರ್ಷಾ ಪೈ, ಮತ್ತು ಸೌಮ್ಯ ಕೊಳ್ಳಿ ಉತ್ತಮವಾಗಿ ನಿರೂಪಿಸಿದರು. ಸ್ವಾಗತ ಭಾಷಣದಲ್ಲಿ ಪ್ರೊ.ವಾಮನ ಮೂರ್ತಿಯವರು, ಮದರಾಸ್ ಮ್ಯೂಸಿಕ್ ಅಕಾಡೆಮಿಯ ವರದಿಯನ್ನು ಉಲ್ಲೇಖಿಸಿ ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ಹೇಗೊ ಹಾಗೆ ಕರ್ನಾಟಕ ಸಂಗೀತಕ್ಕೆ ಪುರಂದರ ದಾಸರು ಎಂದು ಹೇಳಿದ್ದರು. ಇಂತಹ ಪುಣ್ಯ ಪುರುಷರ ಸ್ಮರಣೆ ಮಾಡಿದ ಸ್ವರ ರಾಗ ಸುಧಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಈ ಸಂಸ್ಠೆಯ ಬೆನ್ನೆಲುಬಾದ ವಿದ್ವಾನ್ ದಿವಾಕರ್ ಮತ್ತು ಅವರ ಪತ್ನಿ ಶಾಂತಾ ದಿವಾಕರ್ ಅವರುಗಳು ಅಭಿನಂದನಾರ್ಹರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X