ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಚ್ಚು ದೂರ ಮಾಡಿ ಸಿಹಿ ಹಂಚುವ ಸಂಕ್ರಾಂತಿ

By ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

ಸಂಕ್ರಾಂತಿ ಹಬ್ಬ ತರುತ್ತದೆ ಸಂಭ್ರಮದ ಸಂತಸದ ಕಾಲ. ಸಂಕ್ರಾತಿಯ ದಿನದಂದು ಹಗಲು-ರಾತ್ರಿಗಳು ಸಮಕಾಲ, ಸೂರ್ಯ ಮಕರರಾಶಿ ಪ್ರವೇಶಿಸುವ ಶುಭಘಳಿಗೆ, ಚಳಿಯೋ ಚಳಿಯ ಕಾಲದಲಿ ಎಲೆಗಳುದುರಿ ಬೋಡಾಗಿರುವ ಮರಗಳಲಿ ಹೊಸ ಚಿಗುರು, ಮಾಗಿಯ ಸುಗ್ಗಿ-ಸಿಹಿಯ ಹಿಗ್ಗು ಜೊತೆಗೂಡಿ ಸಂಕ್ರಮಣದಂದು ಮನೆಮನೆಯಲ್ಲೂ ಉಕ್ಕಿಪ ಸಿಹಿ ಹುಗ್ಗಿ ತರುವುದು ಎಲ್ಲರ ಮೊಗದಲಿ ಸುಖದ ಬುಗ್ಗೆ.

ಹೊಸ ಮಡಕೆ, ಹೊಸ ಪಾತ್ರೆಗೆ ಅರಿಶಿನದ ಕೊಂಬನು ಕಟ್ಟಿ, ಅರಿಶಿನ ಕುಂಕುಮ ಹಚ್ಚಿ ಹುಗ್ಗಿ ಉಕ್ಕಿಸುವ ಪರಿ. ಹುಗ್ಗಿ ಉಕ್ಕಿ ಒಲೆಯ ಮೇಲೆ ಸುರಿಯುವಂತೆ ಮುಂಬರುವ ದಿನಗಳಲೂ ಸಂತೋಷ-ಸುಖಗಳು ಪೊಂಗಲಿ ಎಂಬುದು ಒಂದು ಸಂಕೇತ. ರೈತಾಪಿಗಳ ಮೊಗದಲಿ ಸಡಗರದ ಸಂಭ್ರಮ. ಪಿತಾಮಹ ಭೀಷ್ಮ ಇಚ್ಚಾಮರಣವನು ಹೊಂದಿದ ದಿನ. ಕೃಷ್ಣ ಗೋವರ್ಧನ ಗಿರಿಯನು ಎತ್ತಿ, ಸುರಿವ ಮಳೆಯಿಂದ ಗೋಕುಲವಾಸಿಗಳನು ಕಾಯ್ದ ದಿನ. ಸ್ವರ್ಗದ ಬಾಗಿಲು ತೆರೆದಿರುವ ಕಾಲ. ದೇವತೆಗಳಿಗೆ ಹಗಲು, ರಕ್ಕಸರಿಗೆ ರಾತ್ರಿ ಎಂದು ಒಂದು ನಂಬಿಕೆ.

ಪ್ರತಿ ತಿಂಗಳಿನಲೂ ಸೂರ್ಯ ತನ್ನಯ ದಿಕ್ಕು ಬದಲಿಸುತ್ತಾನಾದರೂ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗುವ ಸಂಕ್ರಾತಿಗೆ ವಿಶೇಷತೆ. ಚಳಿಯಪ್ಪ ಚಳಿಯೋ ಎಂದು ಗುಬ್ಬರುಕಟ್ಟಿ ಎಳೆ ಬಿಸಿಲಿನ ಹಿತ ಸವಿವ ಕಾಲವಿದು. ಹೋಲೆಯಲಿ ನೀರು, ಹೊಲದಲಿ ಬೆಳೆ, ಮನೆಯಲಿ ಸುಗ್ಗಿಯ ಹೊಳೆ ತರುವ ಸಂಕ್ರಾಂತಿ ಸಗ್ಗದ ಸಿರಿ ಬಂತು ನಮ್ಮೂರಿಗೆ ಎಂದು ಪ್ರಕೃತಿಯ ಸುಗ್ಗಿಯನು ಆಹ್ವಾನಿಸುವ, ಸಂತಸದಿಂದ ನಲಿವ ಪರ್ವಕಾಲವಿದು.

ಭಾರತದೆಲ್ಲೆಡೆಯಲ್ಲೂ ಹೊಸ ಧಾನ್ಯಗಳಿಗೆ ಪೂಜಿಸಿ ಅಡುಗೆ ಮಾಡುವುದು ಸಾಮಾನ್ಯ. ಬೆಳೆಗಳನು ಕೊಯ್ದ, ಕಣದಲಿ ತುಂಬಿ, ದವಸ-ಧಾನ್ಯಗಳನು ರಾಶಿ ಹಾಕಿ ಸಮೃದ್ಧ ಬೆಳೆಯನು ನೀಡಿದ ಭೂಮಿತಾಯಿಗೆ, ತನ್ನ ಅಗಾಧ ತೇಜಸ್ಸಿನ ಮೂಲಕ ಕೃಷಿ ಬೆಳೆಯಲು ಕಾರಣಿಕನಾದ ಆದಿತ್ಯನನು ಆರಾಧಿಪ ದಿನ ಸಂಕ್ರಾಂತಿ. ಎಳ್ಳು-ಬೆಲ್ಲ, ಹುಗ್ಗಿ, ಹೋಳಿಗೆ, ಅವರೆ, ಕುಂಬಳ, ಗೆಣಸು, ಗಜ್ಜರಿ ಹಾಕಿ ಕೂಟು ಕರ್ನಾಟಕದಲಿ, ಖಾರ ಹಾಗೂ ಸಿಹಿ ಪೊಂಗಲೋ ಪೊಂಗಲ್-ತಮಿಳುನಾಡಿನಲಿ, ಅವಿಯಲ್ ಮಾಡಿ ಮಕರವಿಳಕ್ಕು ಕಾಣ್ಬರು ಕೇರಳದಲಿ, ತಿಳ್‌ಗುಳ್ (ಎಳ್ಳುಬೆಲ್ಲ)ದ ಜೊತೆಗೆ ಗಾಳಿ ಪಟ ಹಾರಿಸುವ ಪದ್ದತಿ ಮಹಾರಾಷ್ಟ್ರದಲಿ. ಸಿಹಿ ಕಿಚಡಿ, ಗೋಪೂಜೆ ಗುಜರಾತಿನಲ್ಲಿ. ಉತ್ತರ ಪ್ರದೇಶದಲಿ ನದಿ ಸ್ನಾನಕ್ಕೆ ಪ್ರಾಮುಖ್ಯತೆ. ಮಕರ ಸಂಕ್ರಾತಿಯಂದು ಸ್ನಾನ ಮಾಡದವ ಗಾರ್ಧಭನಾಗಿ ಜನಿಸುವನೆಂಬ ನಂಬಿಕೆ. ಇಲ್ಲಿಯೂ ಕೂಡ ಗಾಳಿ ಪಟ ಹಾರಿಸುವ ಪರಿ ಚಾಲ್ತಿಯಲ್ಲಿದೆ.

ಸಂಕ್ರಾಂತಿ-ಭಾರತೀಯ ಸಂಸ್ಕೃತಿ ಪರಂಪರೆಯನು ಸಾರುವ, ಪ್ರಾದೇಶಿಕ ವಿಶಿಷ್ಟತೆಯನು ಸಾರುವ ಗ್ರಾಮೀಣರ ಹಬ್ಬ. ಭೂಮಿ, ಸೂರ್ಯನ ಜೊತೆಗೆ ನೇಗಿಲ ಯೋಗಿಗಳ ಜೊತೆಗೂಡಿ ದುಡಿದ ಜಾನುವಾರುಗಳಿಗೆ ಪ್ರಥಮ ಪೂಜೆ. ಮೊದಲಿಗೆ ಬರುವ ಭೋಗಿ ಹಬ್ಬ ಮಳೆ ನೀಡುವ ಇಂದ್ರನಿಗೆ ಮೀಸಲು. ಈ ದಿನ ಧಾನ್ಯಗಳಲಿ ಬೆರೆತ ಕಡ್ಡಿ ಕಸಗಳಿಗೆ ಬೆಂಕಿ ಇಟ್ಟು ಮನದ ಕ್ಲೇಶಗಳು ಕಿಚ್ಚಿನಂತೆ ಸುಟ್ಟು ಭಸ್ಮವಾಗಲಿ ಎಂದು ಸುಡುವರು.

ಸಗ್ಗದ ಸಿರಿ ಬಂತು ನಮ್ಮೂರಿಗೆ ಎನ್ನುತ್ತಾ ಎಲಚಿ, ಗೆಣಸು, ಹಸಿಕಡಲೆ, ಅವರೆಯ ಹಸಿ ಸೊಗಡಿನೊಂದಿಗೆ ಎಳ್ಳು ನೀಡುವುದರಿಂದ ಕಷ್ಟ ಪರಿಹಾರ, ಪಾಪ ನಿವಾರಣೆ ಎಂಬ ನಂಬಿಕೆ. ಎಳ್ಳು ಬೀರುವ ನೆಪದಲಿ ಆತ್ಮೀಯರನು, ಹಿರಿಯರನು ಭೇಟಿ ಮಾಡಿ ಕುಶಲ ವಿಚಾರಿಸಿ, ಶುಭಕೋರಿ, ಆಶೀರ್ವಾದ ಪಡೆಯುವ ಅವಕಾಶ ನೀಡುವುದು ಸಂಕ್ರಾಂತಿ.

ನೇಗಿಲಯೋಗಿಗೆ ಹೆಗಲು ನೀಡಿ ಜಗತ್ತಿನ ಹೊಟ್ಟೆ ತುಂಬುವ ಎತ್ತುಗಳನ್ನು ಸಿಂಗರಿಸಿ ಪೂಜಿಸುವುದು ಹಳ್ಳಿಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಇದಕ್ಕೆ ಒಂದು ಕಥೆಯೂ ಉಂಟು. ಒಮ್ಮೆ ಶಿವ ಬಸವನ ಕೈಯಲ್ಲಿ ಅವನ ಭಕುತರಿಗೆ "ದಿನಾ ಸ್ನಾನ, ಶಿವಧ್ಯಾನ, ಒಪ್ಪೊತ್ತಿನ ಊಟ, ಕೈಲಾಸಕ್ಕೆ ಮಾರ್ಗ" ಎಂದು ನಿರೂಪ ಕಳುಹಿದನಂತೆ. ಶಿವನ ಮುಂದೆ ಹೇಳುವೆನೆಂದು ಕೋಲೆ ಆಡಿಸಿದ ಬಸವ ಭುವಿಗೆ ಬಂದು ಶಿವ ಭಕುತರ ಬಳಿ ದಿನಾ ಸ್ನಾನ, ಮೂರು ಹೊತ್ತಿನ ಊಟ, ಶಿವಧ್ಯಾನ ಕೈಲಾಸಕ್ಕೆ ಮಾರ್ಗ ಎಂದು ಅರುಹಿದನಂತೆ. ಮೂರು ಹೊತ್ತಿನ ಊಟ-ಎಂದು ತಪ್ಪು ಅರುಹಿದೆಯಲ್ಲಾ, ಬೆಳೆ ಬೆಳೆದರೆ ತಾನೆ ಊಟ? ಹೋಗು ಮೂರು ಹೊತ್ತಿನ ಊಟಕ್ಕಾಗಿ ಬೆಳೆ ಬೆಳೆಯುವ ಮನುಜನಿಗೆ ಸಹಾಯಕನಾಗಿ ಜೀವಿಸು ಎಂದು ಬಸವನಿಗೆ ಆಣತಿ ಇತ್ತನಂತೆ. ಅಂದಿನಿಂದ ನೊಗಕ್ಕೆ ಬಂದಿಯಾದ ಹುಲ್ಲಿನ ಬಸವ ಹುಲು ಮಾನವನಿಗಾಗಿ ಶ್ರಮಿಸುತ್ತಿದ್ದಾನೆ.

ದನದ ಕೊಟ್ಟಿಗೆಗಳನು ಶುದ್ಧೀಕರಿಸಿ, ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ಬಣ್ಣ, ರಿಬ್ಬನ್ನು, ಕೊರಳಿಗೆ ಗಂಟೆಸರ, ಹೂ ಹಾರ, ಗಬ್ಬವಾಗಿರುವ ಹಸುವಿಗೆ ಮೈಮೇಲೆ ಬಣ್ಣದ ವಸ್ತ್ರವನು ಹಾಕಿ ಆರತಿ ಮಾಡಿ, ಮೆರವಣಿಗೆ ಮಾಡಿಸುತ್ತಾರೆ. ಅನೇಕ ಕಡೆಗಳಲಿ ಕಿಚ್ಚು ಹಾಯಿಸುವುದು ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯಾಗಿದೆ. ಕಿಚ್ಚು ಹಾಯಿಸುವುದು ಹಸು-ಎತ್ತುಗಳ ದೃಷ್ಟಿನಿವಾರಣೆಗೆ ಎಂದರೂ ಮುಖ್ಯವಾಗಿ ಉರಿಯ ಸೋಂಕಿನಿಂದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಹಾಗೂ ಅವುಗಳ ಮೈಗಳಲಿ ಅಂಟಿಕೊಂಡ ಸಣ್ಣ ಸಣ್ಣ ಕ್ರಿಮಿ ಕೀಟಗಳು ಬಿಸಿಯ ಶಾಖದಿಂದ ನಾಶವಾಗುವುದು ಎಂಬ ಕಾರಣವೂ ಉಂಟು.

ಸಂಕ್ರಾಂತಿಯ ಸಡಗರ ಮನೆ-ಮನೆಯಲ್ಲಿ ತಾಜಾ ತಾಜಾ ಎಲಚಿ ಹಣ್ಣು, ಸೀಬೇ ಹಣ್ಣು, ಹಸಿ ಕಡಲೆಕಾಯಿ, ಗೆಣಸು, ಕಬ್ಬು, ಗಜ್ಜರಿ, ಅವರೆಗಳ ಘಮಲು ಜೊತೆಗೆ ಅಮ್ಮ ಮಾಡುತ್ತಿದ್ದ ಬಣ್ಣ ಬಣ್ಣದ, ವಿವಿಧ ರೂಪಗಳ ಸಕ್ಕರೆ ಅಚ್ಚುಗಳ ಮುಟ್ಟಿ-ಮುಟ್ಟಿ, ಅತ್ತ ಇತ್ತ ಯಾರೂ ಗಮನಿಸದೆ ಇದ್ದಾಗ ನೆಕ್ಕಿ, ಎಳ್ಳು-ಬೆಲ್ಲ ಹಂಚುವ ಸಂಭ್ರಮ. ಸಂಜೆಗೆಂಪು ಮೂಡುತ್ತಿದ್ದಂತೆ ಜರಿ ಲಂಗ, ಕೈ ತುಂಬಾ ಬಳೆ, ತಲೆಗೆ ಹೂ, ಕಾಲಿಗೆ ಗೆಜ್ಜೆ ತೊಟ್ಟು, ಎಳ್ಳು ಬೀರೋಣ ಬಾರೇ ಎಂದು ಗೆಳತಿಯರೊಡಗೂಡಿ ಸಂಭ್ರಮದಿಂದ ಎಳ್ಳು-ಬೆಲ್ಲ ಬೀರುವ ಹುಡುಗಿಯರ ಸಂಭ್ರಮ ನೋಡೋದೆ ಒಂದು ರೀತಿಯ ಮಜಾ.

ಆ ಕಾಲದ ನೆನಪಿನ ಸಿಹಿಯ ಪೊಂಗಿನಲಿ ಇಂದು ಬೀರುವಿನಲಿ ಮಡಿಸಿಟ್ಟ ಸಿಲ್ಕ್ ಸೀರೆ ಹೊರಬಂದು ಹಾರಾಡುವ ಕೂದಲನು ಕ್ಲಿಪ್ಪಿಸಿ, ಮೋಟುದ್ದ ಕೂದಲಿಗೆ ಹೂ ಶಾಸ್ತ್ರಿಸಿ, ಹಣೆಗೆ ಬಿಂದಿಯನಿಟ್ಟು, ಕೈಗೆ ಮ್ಯಾಚಿಂಗ್ ಬಳೆಯ ತೊಟ್ಟು, ಎಲ್ಲೆಡೆಯಲೂ ಸಿಗುವ ರೆಡಿಮೇಡ್ ಎಳ್ಳನು ಕೊಂಡು, ದೇಗುಲಕೆ ಹೋಗಿ ದೇವನಿಗೆ ಶರಣು ಶರಣೆಂದು ಅಡ್ಡಬರುವ ಕಾಲವದಾಗಿದೆಯಷ್ಟೇ.

ನಮ್ಮುಡಿಪಿನಲಿ, ರೀತಿ, ರಿವಾಜುಗಳಲಿ ಅಲ್ಪ ಸ್ವಲ್ಪ ಮಾರ್ಪಾಡಾಗಿದ್ದರೂ ಮಾಗಿಯ ಸುಗ್ಗಿಯ ಸಂಭ್ರಮದ ಸಡಗರದಲಿ, ಎಳ್ಳು-ಬೆಲ್ಲವನು ಮನೆ-ಮನೆಗೆ ಹೋಗಿ ಬೀರದಿದ್ದರೂ ಫೋನಾಯಿಸಿ ಶುಭನುಡಿಯೇ ಶಕುನದ ಹಕ್ಕಿ ಎಂಬಂತೆ ಸಂಕ್ರಾಂತಿಯ ಶುಭಕೋರುವ ಪರಿಪಾಠದಲಿ, ಅಣ್ಣ-ತಮ್ಮಂದಿರ ಒಳಿತಿಗಾಗಿ ಶುಭುಕೋರುವ ಪರಿಯಲಿ ಮಾರ್ಪಾಡಾಗಿಲ್ಲ.

ನಮ್ಮಲ್ಲಿನ ಪ್ರತಿ ಹಬ್ಬಗಳಲೂ ಒಂದು ವಿಶಿಷ್ಟತೆ, ಸಂದೇಶ ಇರುವಂತೆ ಸಂಕ್ರಾತಿಯ ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬ ನಾಣ್ನುಡಿಯು ಜಾತಿ, ಮತ, ಕುಲ ಎಂಬ ಭೇದವಿಲ್ಲದೆ ಮನುಜರ ಮನದಲ್ಲಿನ ಕಿಚ್ಚುಗಳನು ಎತ್ತೆಸೆದು, ಕೆಟ್ಟತನವನು, ಕಹಿ ಭಾವನೆಗಳನು ದೂರ ಮಾಡಿ, ಒಳ್ಳೆಯ ತನ, ಮಾತು, ನಡವಳಿಕೆಗಳನು ನಮ್ಮಯ ಜೀವನದಲಿ ಅಳವಡಿಸಿಕೊಂಡು "ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು" ಎಂದು ಸರ್ವದಾ ಹಾರೈಸುವ ನಿತ್ಯ ಸಂಕ್ರಾತಿಯಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X