ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕನ್ನಡ ರಾಜ್ಯೋತ್ಸವದ ಸಿಂಗಾರ

By Staff
|
Google Oneindia Kannada News

Shakuntala Deve felicitating AN Rao in Singapore
ಪ್ರತಿ ಕನ್ನಡ, ಕರ್ನಾಟಕ, ಸಾಂಸ್ಕೃತಿಕ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವ ಸಿಂಗಪುರ ಕನ್ನಡ ಸಂಘದವರು ನವೆಂಬರ್ 15ರಂದು ದೀಪಾವಳಿ, ಕನ್ನಡ ರಾಜ್ಯೋತ್ಸವ ಸಂಗಮದ 'ಕನ್ನಡ ದೀಪ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶತಾವಧಾನಿ ಗಣೇಶ್, ನಟ ವಿಜಯ ರಾಘವೇಂದ್ರ ಭಾಗವಹಿಸಿದ್ದರು.

* ವಾಣಿ ರಾಮದಾಸ್, ಸಿಂಗಪುರ

"ಕುಡಿ ದೀಪವಿಡುವೆ ತಾಯಿ ನಿನ್ನ ಗುಡಿಯ ಮುಂದೆ, ಎಲ್ಲಿದ್ದರೇನಮ್ಮ ನಿನಗೆ ಮಕ್ಕಳೆಲ್ಲರೂ ಒಂದೇ" ...

ಕನ್ನಡದ ಕಂಪನ್ನು ಹೊತ್ತ ಕನ್ನಡಿಗರು ಹೊರನಾಡುಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಸೊಂಪು-ಪೆಂಪುಗಳು ಮರೆಯದಂತೆ ವರುಷದುದ್ದಕ್ಕೂ ಹಬ್ಬ, ಕ್ರೀಡೆ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ, ತವರಿನ ಬಳ್ಳಿಯನ್ನು ಕಾಪಾಡಿಕೊಳ್ಳುತ್ತಿರುವುದು ಹೆಮ್ಮೆ ತರುವ ವಿಷಯ. ಈ ನಿಟ್ಟಿನಲ್ಲಿ ಸಿಂಗಪುರ, ಕನ್ನಡ ದೀಪ-ರಾಜ್ಯೋತ್ಸವದ ಉತ್ಸವ ಆಚರಿಸಲು ನವೆಂಬರ್ 15, ಶನಿವಾರ ಸಂಜೆ ಜಿ.ಐ.ಎಸ್.ಎಸ್. ಸಭಾಂಗಣದಲ್ಲಿ "ಕನ್ನಡ ದೀಪ" ಕಾರ್ಯಕ್ರಮ ಆಯೋಜಿಸಿತ್ತು. ಕನ್ನಡದ ಕಂಪನ್ನು ಹಂಚಿಕೊಳ್ಳಲು ತೌರಿನಿಂದ ಆಗಮಿಸಿದ್ದರು ಗಣಿತ ಪರಿತಜ್ಞೆ ಶಕುಂತಲಾದೇವಿ, ಶತಾವಧಾನಿ ಡಾ. ಆರ್. ಗಣೇಶ್ ಹಾಗೂ ನಟ ವಿಜಯ ರಾಘವೇಂದ್ರ.

ಹಚ್ಚೇವು ಕನ್ನಡದ ದೀಪದೊಂದಿಗೆ, ಎಚ್.ಎಮ್.ರಂಗನಾಥ್ ಅವರ ಕನ್ನಡ ನಾಡಿನ ಮಕ್ಕಳ ಚಂದಿರ ತುಂಬಿ ಬೆಳಗಿ ಬರಲಿ ಹಾಡು ಸೊಗಸಾಗಿ ಮೂಡಿ ಬಂದಿತು ಸಂಘದ ಮಹಿಳಾ ಸದಸ್ಯರಿಂದ. ಕನ್ನಡ ಸಂಘದ ಅಧ್ಯಕ್ಷರಿಂದ ಸ್ವಾಗತ ಭಾಷಣ, ಅತಿಥಿಗಳ ಪರಿಚಯ ಮುಗಿದಂತೆ ಡಾ. ಗಣೇಶ್ ಅವರು ವೇದಿಕೆಯನೇರಿದರು. ಶತಾವಧಾನಿ ಡಾ | ಆರ್ ಗಣೇಶ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಸಮಕಾಲೀನ ಯುಗದಲ್ಲಿ ಯಾವುದೇ ವಿಷಯದ ಕುರಿತಾಗಿ ಪ್ರಬುದ್ಧವಾಗಿ, ಪ್ರಗತಿಪರ ದೃಷ್ಟಿಯಿಂದ ಮಾತನಾಡಬಲ್ಲ ವಾಗ್ಮಿ, ಹಲವು ಭಾಷೆಗಳ ಪರಿಣಿತ.

ಅವಧಾನ ಎಂಬುದು ಅತ್ಯಂತ ಹಳೆಯ ಕಲೆ. ಅವಧಾನ ಎಂದರೆ ಸ್ಥೂಲವಾಗಿ ಗಮನವಿಟ್ಟು ಕೇಳು' ಎಂದರ್ಥ. ಅವಧಾನದಲ್ಲಿನ ಕ್ರಿಯೆಗಳು ಕೇಳು, ಗ್ರಹಿಸು, ಮನನ ಹಾಗೂ ಸಂದರ್ಭಕ್ಕೆ ಪುನರುಚ್ಚರಿಸು. ಅವಧಾನಿ ಅವಧಾನವನ್ನು ನಡೆಸಿಕೊಡುವವನು.

ಸಭಿಕರ ಕೋರಿಕೆಯಂತೆ ಕಾವ್ಯಗಳಲ್ಲಿ ಹಾಸ್ಯ, ಆಶು ಕವಿತೆ ಇವೆರಡೂ ವಿಷಯಗಳ ಬಗ್ಗೆ ಅವಧಾನಿಯವರು ಮಾತನಾಡಿದರು. ಹಾಸ್ಯ ದೃಷ್ಟಾಂತ ಸರ್ವ ಜನಪ್ರಿಯ ರಸ. ಜೀವನ ಪರಿಶೀಲನೆ ಮಾಡಿದರೆ ಜಾನಪದ, ತ್ರಿಪದಿ, ಕಾವ್ಯ, ಮಹಾಭಾರತ-ರಾಮಾಯಣಗಳಲ್ಲಿ ಹಾಸ್ಯ ಕಂಡುಕೊಳ್ಳಬಹುದು. ಜನ ಜೀವನದ ವಿವಿಧ ಮುಖಗಳಾದ ಕಲೆ, ಸಾಹಿತ್ಯ, ಸಮಾಜ, ಸ೦ಸ್ಕ್ರತಿಗಳಲ್ಲೂ ಹಾಸ್ಯ ಹಾಸುಹೊಕ್ಕಾಗಿ ಬೆರೆತಿದೆ. ಸಾಮಾನ್ಯವಾಗಿ ವಸ್ತು ವ್ಯಕ್ತಿ ಮತ್ತು ಸನ್ನಿವೇಶಗಳು ನಮಗೆ ನಗೆ ಬರುವಂತೆ ಮಾಡುತ್ತವೆ ಎಂದರು. ಕಥೆಗಳಲ್ಲಿ, ಹೇಳಿಕೆಗಳಲ್ಲಿ ದೆವ್ವ ರಕ್ತ ಕುಡಿಯುತ್ತೆ ಎನ್ನುತ್ತಾರೆ. ಈಗ ಕಾಲ ಬದಲಾಗಿದೆ ನೋಡಿ, ರಾಜಕಾರಣಿಗಳು ಬದುಕಿರೋವ್ರ ರಕ್ತ ಕುಡಿತಾರೆ ಅದನ್ನ ನೋಡಿದ್ರೆ ದೆವ್ವಗಳೇ ಸಾವಿರ ಪಾಲು ಮೇಲು, ಸತ್ತಮೇಲೆ ರಕ್ತ ಕುಡಿಯುತ್ವೆ ಎಂದಾಗ ಆ ಮಾತುಗಳಲ್ಲಿನ ಸತ್ಯ ತಟ್ಟಿತು, ಹೇಳಿದ ಪರಿಯ ಕಂಡು ನಗೆಯಲೆಯುಕ್ಕಿತು.

ಸಭಿಕರಿತ್ತ ಕೆಲವು ಪದಗಳಿಗೆ ಛಟ್ಟನೆ ನೀಡಿದ ಆಶು ಕವಿತೆಗಳ ಕೆಲವೊಂದು ತುಣುಕುಗಳು ನಿಮಗಾಗಿ:-

"ಹೆಂಡತಿ"-ಹೆಂಡತಿಗೆ ನಾನೇನು ಹೆದರುವವನಲ್ಲ ಏಕೆಂದರೆ ನನಗೆ ಹೆಂಡತಿಯೇ ಇಲ್ಲ.
"ಗಂಡ" - ಮಾತಿನಲ್ಲಿ ತಾನವನು ದಕ್ಷಿಣಾ ಮೂರ್ತಿ, ಚೇತನದ ರೂಪವೋ ಕಾಮನಂತೆ! ಅವನು ನೆವರ್ ಸ್ಪೀಕ್(-ದಕ್ಷಿಣಾಮೂರ್ತಿ (ಮೌನಿ), ನೆವರು ಅಪಿಯರ್(ಮನ್ಮಥ). ಅವನುಲಿವ ಒಂದೇ ಪದ "ಆಗಲಿ".
"ಅಡುಗೆ ಬಲ್ಲ ಗಂಡ" -ಮುಂದೆ ಇಟ್ಟರೆ ಹಿಂದೆ ಚೆಲ್ಲುವ, ಹಿಂದೆ ಬಡಿಸಲು ಮುಂದೆ ಬಯ್ವ, ಕೊಂದೆ ಬಿಡುವನು ಆವುದಿಟ್ಟರು, ನೊಂದೆ ಈ ಪರಿ ಗಂಡನಿಂ.
"ಮದುವೆಯಾಗುವ ಹುಡುಗಿ":- ಕಾರ್ಯೇ ಪರಾರಿ, ಕರುಣೇ ಭಿಕಾರಿ, ರೂಪೇಶು ವಿಕಾರಿ, ಕ್ಷಮಯಾ ಮಾರಿ, ಭೋಜ್ಯೇಶು ಕುಶಾರಿ ಇವೆಲ್ಲ ಗುಣ ಇರುವವಳನ್ನು ಮದುವೆ ಆಗಿ.

ಕನ್ನಡದೀಪ- ಹೃದಯದ ಹರಿವಾಣದಲ್ಲಿ, ಪ್ರೀತಿಯ ದೀಪವನಿಟ್ಟು, ಜ್ಞಾನದ ಎಣ್ಣೆ ಹಾಕಿ ಬೆಳಗಿಸಿ. ಅದು ಸದಾ ಬೆಳಗುತ್ತೆ, ಎಲ್ಲರಿಗೂ ಬೆಳಕನು ನೀಡುತ್ತೆ ಹಾಗೆಯೇ ಕನ್ನಡ ದೀಪವೂ ಕೂಡ. ನಿಮ್ಮ ಆತ್ಮೀಯತೆಗೆ ನನ್ನ ನಮಸ್ಕಾರ ಎಂದಾಗ ಚಪ್ಪಾಳೆಗಳ ಸುರಿಮಳೆ ಆಯಿತು.

ಇಷ್ಟರಲ್ಲಿ ಮಣ್ಣಲ್ಲಿ ಬಿದ್ದೊನು, ಮುಗಿಲಲ್ಲಿ ಎದ್ದನು, ಕತ್ಲಲ್ಲಿ ಇದ್ದನು, ಬಂಗಾರ ಗೆದ್ದನು ಎನ್ನುತ್ತಾ ಪುಟ್ಟ ಪುಟಾಣಿಗಳು ಕುಣಿಯುತ್ತಾ ವೇದಿಕೆಯ ಮೇಲೆ ಬಂದಾಗ ಮತ್ತೊಮ್ಮೆ ಚಪ್ಪಾಳೆಗಳ ಸುರಿಮಳೆ. ಚಿನ್ನಾರಿ ಮುತ್ತದ ನಟ ವಿಜಯರಾಘವೇಂದ್ರ ಕುಣಿಯುತ್ತಿದ್ದ ಮಕ್ಕಳೊಂದಿಗೆ ಒಂದಾದರು. ನಮಸ್ಕಾರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಷ್ಟೊಂದು ಜನ ಕನ್ನಡಿಗರನ್ನು ಸಿಂಗಪುರದಲ್ಲಿ ಕಂಡು ಬಹಳ ಸಂತೋಷ ಆಗ್ತಾ ಇದೆ, ಬೆಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಇಷ್ಟೊಂದು ಜನ ಸೇರೋಲ್ಲ ಎಂದುಲಿದ ನಟ, ಸಭಿಕರ ಕೋರಿಕೆಯ ಮೇರೆಗೆ ಕೆಲವು ಚಿತ್ರ ಗೀತೆಗಳನ್ನು ಹಾಡಿದರು. ವಿಜಯ ರಾಘವೇಂದ್ರ ಚೆನ್ನಾಗಿ ಹಾಡುತ್ತಾರೆ, ಇಷ್ಟವಾದದ್ದು ಸೊಗಸಾಗಿ, ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಚಿತ್ರನಟನೆಂಬ ಅಹಂ ಇನ್ನೂ ಹತ್ತಿರ ಸುಳಿಯಗೊಟ್ಟಿಲ್ಲ ಎಂಬುದು.

ಪ್ರತಿಭಾ ಪುರಸ್ಕಾರ : ಈ ಬಾರಿಯ ಕನ್ನಡ ದೀಪ ಕಾರ್ಯಕ್ರಮ ಕ್ರೀಡೆ, ಸಾಹಿತ್ಯ, ಸಂಗೀತಗಳಲ್ಲಿ ವಿಜೇತರಾದ, ಸಿಂಗಪುರದಲ್ಲಿ ಕನ್ನಡಸಂಘಕ್ಕೆ ಬುನಾದಿ ಹಾಕಿದ ಹಿರಿಯರನ್ನು ಗೌರವಿಸುವ, "ಸಿಂಗಾರ"-ವಾರ್ಷಿಕ ಪತ್ರಿಕೆಯ ಬಿಡುಗಡೆ ಹಾಗೂ ಸಿಂಗಾರ ಪುರಸ್ಕಾರ ವಿಜೇತರುಗಳಿಗೆ ಬಹುಮಾನ ನೀಡುವ ಕಾರ್ಯಕ್ರಮವಾಗಿತ್ತು. ಗಣಿತ ಪರಿತಜ್ಞೆ ಶಕುಂತಲಾದೇವಿ ಅವರು ಕು. ಧ್ಯುತಿ ರಾಮದಾಸ್, ಕು. ಆದಿತ್ಯ ಕುರ್ತುಕೋಟಿ ಹಾಗೂ ಧರ್ಮಿಚಂದ್ ಮುಲೇವಾ ಅವರುಗುಗಳಿಗೆ ಸಿಂಗಾರ ಪುರಸ್ಕಾರ ನೀಡಿದರು. ಈ ಪುರಸ್ಕಾರ ಪ್ರತಿ ವರುಷ ಶೈಕ್ಷಣಿಕ ಕ್ಷೇತ್ರದಲಿ ಹೆಚ್ಚು ಅಂಕಗಳಿಸಿದ ಜೊತೆಗೆ ಕ್ರೀಡೆ, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಕನ್ನಡಿಗರ ಮಕ್ಕಳಿಗೆ ನೀಡಲಾಗುತ್ತಿದೆ.

ಮೊಟ್ಟ ಮೊದಲ ಬಾರಿ ಕನ್ನಡ ಸಂಘದ ಪ್ರಶಸ್ತಿಗಳಲ್ಲಿ "ಆಜೀವ ಸಾಧನೆ ಪುರಸ್ಕಾರ ಪ್ರಶಸ್ತಿ"ಯ ಅಳವಡಿಸಲಾಗಿದೆ. ಇದು ವಲಸೆ ಬಂದ ನಮ್ಮ ಹಿರಿಯರುಗಳಿಗೆ, ಪ್ರತಿಭಾನ್ವಿತರಿಗೆ ಸಲ್ಲಿಪ ನಮನ-ಗೌರವ, ಮುಂದಿನ ಪೀಳಿಗೆ ಇದೊಂದು ಮಾರ್ಗದರ್ಶನ. ಇದರ ಮೊಟ್ಟ ಮೊದಲ ಗೌರವಾನ್ವಿತರು ಸಂಘದ ಹಿರಿಯರು, ಪ್ರತಿಭಾನ್ವಿತರೂ ಆದ ಪ್ರೊ.ರಾವ್ ಹಾಗೂ ಸಂಗೀತ ಕಲಾನಿಧಿ ಭಾಗ್ಯಮೂರ್ತಿ.

ಪ್ರೊ. ಎ.ಎನ್. ರಾವ್ : ಕಳೆದ 40 ವರುಷಗಳಿಂದ ಸಿಂಗಪುರದಲ್ಲಿ ನೆಲೆಸಿರುವ ಇಲ್ಲಿನ ಕನ್ನಡ ಸಂಘ ರೂಪುಗೊಳ್ಳಲು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕನ್ನಡ ಸಂಘದ ಮೊಟ್ಟ ಮೊದಲ ಅಧ್ಯಕ್ಷರಾದ ಎ.ಎನ್. ರಾವ್ ಮೂಲತಃ ಚನ್ನಪಟ್ಟಣದವರು. 1959ರಲ್ಲಿ ಅಮೇರಿಕದ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದು, 1960ರಲ್ಲಿ ಸಿಂಗಪುರದ ಎನ್.ಯು.ಎಸ್.ನಲ್ಲಿ ಶಿಕ್ಷಕರಾಗಿ ನೇಮಕಗೊಂಡು ನಿರ್ದೇಶಕ ಹಾಗೂ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಉನ್ನತ ಸಂಸ್ಥೆಗಳಲ್ಲಿ ಸಲಹೆಗಾರರಾಗಿ, ಮಾರ್ಗದರ್ಶನ ನೀಡಿ, ವಿವಿಧ ದೇಶಗಳ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ. ಮೂರ್ನಾಲ್ಕು ಕುಟುಂಬಗಳಿಂದ ಪ್ರಾರಂಭಗೊಂಡ ಕನ್ನಡಸಂಘದಲ್ಲಿ ನಾವು ಮಾಡಿದ ಕೆಲಸ ಬಹಳ ಸಣ್ಣದು, ನೀವು ತೋರಿದ ವಿಶ್ವಾಸ ಬಹಳ ದೊಡ್ಡದು ಎಂದರು ರಾವ್.

ಭಾಗ್ಯಮೂರ್ತಿ : ಸಿಂಗಪುರದಲ್ಲಿ ಭಾಗ್ಯಮೂರ್ತಿ ಎಂದಾಕ್ಷಣ ಹಾಡ್ತಾರಲ್ಲ ಅವ್ರುತಾನೆ ಎಂಬಷ್ಟು ಜನಜನಿತ. 1970ರ ದಶಕದಲ್ಲಿ ಬೆಂಗಳೂರು ಆಕಾಶವಾಣಿ ಕಲಾವಿದೆಯಾಗಿದ್ದ ಭಾಗ್ಯ ಎಮ್. ಪ್ರಭಾಕರ್ ಅವರ ಶಿಷ್ಯೆ. ದಶಕಗಳಿಂದ ಸಿಂಗಪುರದಲ್ಲಿ ನಡೆವ ಪುರಂದರ ನಮನದ ರೂವಾರಿ, ಬಹಳಷ್ಟು ಸಂಘ ಸಂಸ್ಥೆಗಳಿಂದ ಬಹುಮಾನ, ಬಿರುದುಗಳ ಪುರಸ್ಕೃತೆ. ಈ ಬಾರಿ ಸಿಂಗಾರ ವಾರ್ಷಿಕ ಪತ್ರಿಕೆಗಾಗಿ ಶ್ರಮಿಸಿದ ಸಂಪಾದಕ ಮಂಡಳಿಯವರನ್ನು ಗೌರವಿಸಲಾಯಿತು. ನಂತರ ವಿದುಷಿ ವರ್ಣ ಅರುಣ್ ಅವರು ಕನಕದಾಸರ ಬಾಗಿಲನು ತೆರೆದು ಹಾಡಿಗೆ ನಾಟ್ಯಗೈದರು.

ಗುಡ್ ಈವ್‌ನಿಂಗ್ ಎವೆರಿಬಡಿ, ನೌ ಐ ವಿಲ್ ಎನ್ನುತ್ತಾ ವೇದಿಕೆ ಏರಿದ ಶಕುಂತಲಾದೇವಿಯವರ ಮಾತಿಗೆ, ಕನ್ನಡ ಪ್ಲೀಸ್, ಕನ್ನಡ ಬರುತ್ತಾ ಎಂದು ಶರೀರವಾಣಿ ಮೊಳಗಿದವು. ಯಾರ್ರೀ ಅದು "ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹುಟ್ಟಿ ಇಷ್ಟು ದಿನ ಬದುಕಿದ್ದೀನಿ, ಕನ್ನಡ ಬರುತ್ತಾ ಅಂತೀರಲ್ಲಾ? ನಾನಿವತ್ತು ಪಾತಾಳಕ್ಕಿಳಿದು ಹೋದೆ. ಚೈನೀಸ್ ಬರುತ್ತಾ, ಫ್ರೆಂಚ್ ಬರುತ್ತಾ ಅಂದ್ರೆ ಸರಿ. ಕನ್ನಡಿಗರನ್ನು ಕನ್ನಡ ಬರುತ್ತಾ ಎಂದು ಹೇಗೆ ಕೇಳ್ತೀರಾ?" ಎಂದು ಗರಂ ಆದ ಮೇಡಂ ಮಾತಿಗೆ, ಸಭೆಯಲ್ಲಿ ಕರತಾಡನ, ನಗೆಬುಗ್ಗೆ. ಸಭೆಯಲ್ಲಿ ಕೇಳಿದ ಪ್ರಶ್ನೆ ತಪ್ಪಲ್ಲ ಬಿಡಿ, ಅವರಿಗೇನು ಗೊತ್ತು ಶಕುಂತಲಾ ದೇವಿ ಅವರಿಗೆ ಕನ್ನಡ ಬರುತ್ತೆ ಎಂದು. ಬೆಂಗಳೂರಿನಲ್ಲಿ ಹುಟ್ಟಿದವರಿಗೆಲ್ಲಾ ಕನ್ನಡ ಬರುತ್ತೇನು? ಶಕುಂತಲಾ ದೇವಿಯವರ ವಯೋಗುಣವೋ, ಮನೋಗುಣವೋ ಮೇಡಂ ಅವರ "ಗರಂ ಹವಾ" ಮಾತ್ರ ಕಾರ್ಯಕ್ರಮದುದ್ದಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಬೀಸುತ್ತಲೇ ಇತ್ತು.

ಗಣಿತ ಕಬ್ಬಿಣದ ಕಡಲೆ. ಗಣಿತ ತಲೆಗೇ ಹತ್ತೋಲ್ಲ ಎಂದೊದರುವ ನನ್ನಂಥವರು. ಶಕುಂತಲಾ ದೇವಿಯವರು ಚಣ ಮಾತ್ರದಲ್ಲಿ ಸ್ವಲ್ಪವೂ ಪ್ರಯಾಸವಿಲ್ಲದೆ ಕೂಡಿ, ಕಳೆದು, ಭಾಗ, ಗುಣಾಕಾರಗಳನ್ನು, ಅಂಕಿ-ಅಂಶಗಳನ್ನು, ತಾರೀಖು-ದಿನಗಳನ್ನು ಪಟಪಟನೆ ನಿರಾಯಾಸವಾಗಿ ಹೇಳುವ ಸಜೀವ ಗಣಕ ಶಕ್ತಿಯ ಕಂಡಾಗ ಅಬ್ಬಾ, ಎಂದು ಉದ್ಗರಿಸುವಲ್ಲಿ ಸಂದೇಹವೇ ಇಲ್ಲ. ಈ ಕಾರ್ಯಕಲಾಪಗಳಲ್ಲಿ ಹೊತ್ತಿನ ಅರಿವೇ ಆಗಲಿಲ್ಲ, ಕಾರ್ಯಕ್ರಮ ಮುಗಿದಂತೆ ಮುಂಬೈನಲ್ಲಿ ಕೇಳಿದ್ದ "ಕುಡಿ ದೀಪವಿಡುವೆ ತಾಯಿ ನಿನ್ನ ಗುಡಿಯ ಮುಂದೆ, ಎಲ್ಲಿದ್ದರೇನಮ್ಮ ನಿನಗೆ ಮಕ್ಕಳೆಲ್ಲರೂ ಒಂದೇ" ನೆನಪಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X