ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಲೆಂಡಿನಲ್ಲಿ ಶೇಷಗಿರಿದಾಸ ರಾಯಚೂರ ಸಂಗೀತಸುಧೆ

By ವರದಿ: ಪ್ರಕಾಶ್ ರಾಜಾರಾವ್
|
Google Oneindia Kannada News

Sheshagiridas Raichur concert in Aucklandಅಕ್ಟೋಬರ್ 11 ಮತ್ತು 12ರಂದು ಅಕ್ಲೆಂಡಿನ ಸಂಗೀತ ಪ್ರಿಯರಿಗೆ ಮರೆಯಲಾರದ ದಿನಗಳು. ಎರಡೂ ದಿನ ಕರ್ಣಾನಂದಕರವಾದ ಸಂಗೀತದ ರಸ ದೌತಣ ಲಭಿಸಿ, ಶಾಸ್ತ್ರೀಯ ಸಂಗೀತ, ಭಾವಗೀತೆ, ಗೀಗೀ ಪದ, ಜನಪದ ಹಾಡುಗಳು, ವಚನಗಳು, ಸಂತರ ಭಕ್ತಿಪೂರಿತ ಕೃತಿಗಳು, ಸುಗಮ ಸಂಗೀತ ಎಲ್ಲವೂ ಶೋತೃಗಳನ್ನು ಕೃತಾರ್ಥರನ್ನಾಗಿಸಿದವು. ಇಷ್ಟೆಲ್ಲಾ ವೈವಿಧ್ಯಮಯ ಸಂಗೀತ ಹಾಡಿದ ಗಾಯಕ ಮಾತ್ರ ಒಬ್ಬರೆ, ಹರಿದಾಸ ಗಾನ ಭಾಸ್ಕರ ಎಂದು ಪ್ರಸಿದ್ಧರಾದ ರಾಯಚೂರು ಶೇಷಗಿರಿದಾಸ್ ಅವರು.

ಕಳೆದ ವರ್ಷ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆ ಕಾರ್ಯಕ್ರಮದಲ್ಲಿ ಶೇಷಗಿರಿದಾಸ್ ಅವರ ಗಾಯನದಿಂದ ಹರ್ಷಿತರಾದ ಭಕ್ತಾದಿಗಳ ಅಹ್ವಾನದ ಮೇರೆಗೆ ಅವರು ಮತ್ತೊಮ್ಮೆ ಆಕ್ಲೆಂಡಿಗೆ ಬಂದು ತಮ್ಮ ಗಂಧರ್ವ ಗಾಯನದ ಸವಿಯುಣಬಡಿಸಿದರು.

ಎರಡು ದಿನವೂ ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತುತಿಯಿಂದ ತಮ್ಮ ಕಾರ್ಯಕ್ರಮ ಆರಂಭಿಸಿ, ಶ್ರೀಪಾದ ರಾಜರು, ಪುರಂದರ ದಾಸರು, ಕನಕದಾಸರು ಮುಂತಾದ ಹಲವಾರು ದಾಸವರೇಣ್ಯರ ಕೃತಿಗಳು, ಅಲ್ಲಮ ಪ್ರಭು, ಅಕ್ಕ ಮಹದೇವಿಯವರ ವಚನಗಳು, ಸಂತ ಶರೀಫರ ಕೃತಿಗಳು, ಕಬೀರ್ ದಾಸ್, ಮೀರಾ ಬಾಯಿಯವರ ರಚನೆಗಳು, ಗೀಗೀ ಪದ, ಜನಪದ ಹಾಡುಗಳು, ಭಾವಗೀತೆಗಳು ಎಲ್ಲವನ್ನೂ ಹಾಡಿದರು. ಭಾಷೆ ಬೇರೆ ಭಕ್ತಿ ಭಾವವೊಂದೇ ಎನ್ನುವಂತೆ ಅವರು ಕನ್ನಡ, ಸಂಸ್ಕೃತ, ಹಿಂದಿ ಮತ್ತು ತಮಿಳು ಭಾಷೆಯ ಹಾಡುಗಳಿಂದ ತಮ್ಮ ಭಕ್ತಿ ಸಂಗೀತ ಪ್ರವೀಣ ಎಂಬ ಬಿರುದನ್ನು ಸಾರ್ಥಕವೆನಿಸಿದರು.

ಪಂಡಿತ್ ಶೇಷಗಿರಿದಾಸ್ ಅವರು ಶ್ರೀ ರಾಘವೇಂದ್ರಸ್ವಾಮಿಗಳ ಹಾಡುಗಳನ್ನು, ಹನುಮಂತನ ಸ್ತುತಿಯನ್ನು , ಅಪೂರ್ವವೆನಿಸಿದ ಪಂಚರತ್ನ ಸುಲದಿಗಳು, ವರ ಕವಿ ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ, ಡಾ.ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು ಗೀತೆಗಳನ್ನು, ಅಜರಾಮರ ದಾಸರ ಕೃತಿಗಳಾದ ತಾರಕ್ಕ ಬಿಂದಿಗೆ ನಾ ನೀರಿಗೆಹೋಗುವೆ, ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿದಾಗ ತನ್ಮಯರಾಗಿ ಆಲಿಸಿದ ಶೋತೃಗಳು ಜಾನಪದ ಗೀತೆಗಳನ್ನು ಕೇಳಿ ಹುಚ್ಚೆದ್ದು ಕುಣಿದರು. ಹಳ್ಳಿಯ ರೈತನೊಬ್ಬ ಎತ್ತಿನ ಗಾಡಿ ಹೊಡೆದುಕೊಂಡು ಸವದತ್ತಿಗೆ ಹೋಗಿಬಂದ ಹಾಡು ಹಾಡಿ ನಮ್ಮೆಲ್ಲರಿಗೂ ಯಾರದೂ ದುಡ್ಡಿಲ್ಲದೆಯೇ ಎಲ್ಲಮ್ಮನ ಜಾತ್ರೆ ದರ್ಶನ ಮಾಡಿಸಿದರು. ಕಬೀರ ದಾಸರ ಜಗಮೇ ಸುಂದರ್ ಹೈ ದೊ ನಾಮ್ ಎಂದು ಸುಶ್ರಾವ್ಯವಾಗಿ ಅವರು ಹಾಡುತ್ತಿದ್ದಾಗ ನನಗೆ ಶೇಷಗಿರಿ ದಾಸರ ಹೆಸರು ಅಷ್ಟೇ ಸುಂದರ ಮಧುರವೆನ್ನಿಸಿತು.

ಅವರಿಗೆ ಅತ್ಯುತ್ತಮವಾಗಿ ವಾದ್ಯ ಸಂಗೀತದ ನೆರವು ನೀಡಿದವರು ಸ್ಥಳೀಯ ಕಲಾವಿದರಾದ ಪಂಡಿತ್ ಬಸಂತ್ ಮಾಧುರ್ [ತಬ್ಲಾ], ವಿದ್ವಾನ್ ಎಂ.ಡಿ.ದಿವಾಕರ್[ಸಾರಂಗ ಸರಸ್ವತಿ ವೀಣೆ], ರತ್ನಾ ವಾಮನ ಮೂರ್ತಿ[ತಂಬೂರಿ], ಸತ್ಯಕುಮಾರ್ ಕಟ್ಟೆ [ತಾಳ] ಹಾಗೂ ಮಾಸ್ಟರ್ ಸಾಕೇತ್ [ಕೀ ಬೊರ್ಡ್]. ಶ್ರೀ ರಾಘವೇಂದ್ರ ಭಕ್ತಿ ಪ್ರಚಾರ ಪೀಠದ ಕಾರ್ಯಕರ್ತರು ಸ್ಥಳೀಯ ಉದ್ಯಮಿ ರಘುಪತಿಯವರ ನೆರವಿನೊಂದಿಗೆ ಸುವ್ಯವಸ್ಥಿತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಪ್ರಾಚಾರ್ಯ ಎಂ.ಕೆ.ವಾಮನ ಮೂರ್ತಿ, ಭುವನೇಂದ್ರ ಭೂಪಾಲ ಮತ್ತು ಶ್ರೀಕಾಂತ್ ಕೊಳ್ಳಿಯವರು ಕಾರ್ಯಕ್ರಮ ನಿರ್ವಹಣೆ ಮತ್ತು ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X