ನಮ್ಮ ಕೇರಿ ಮನೆಯ ಗೊಂಬೆ ಹಬ್ಬ

ಲೇಖನ : ಸವಿತಾ ಮತ್ತು ರವಿಶಂಕರ್, ಕೇರಿ-ನಾರ್ತ್ ಕೆರೋಲಿನಾ
ವರುಷದುದ್ದಕ್ಕೂ ಸಾಲಾಗಿ ಬರುವ ಹಬ್ಬಗಳನ್ನು ಉತ್ಸಾಹದಿಂದ ಆಚರಿಸುವ ಪ್ರಯತ್ನ ನಮ್ಮ ಕುಟುಂಬದಲ್ಲಿ ಅನೂಚಾನವಾಗಿ ನಡೆದು ಬಂದಿದೆ. ಸಂಕ್ರಾಂತಿ, ಯುಗಾದಿ, ಗೌರಿ, ಗಣೇಶ, ದಸರಾ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಮೈಸೂರಿನವರಾದ ನಮಗೆ ದಸರಾದ ಬಗ್ಗೆ ವಿಶೇಷ ಅಕ್ಕರೆ. ನಾವಿಂದು ದೂರದಲ್ಲಿದ್ದರೂ ಚಿಕ್ಕಂದಿನಲ್ಲಿ ಕಂಡ ದಸರಾದ ವೈಭವ, ಅರಮನೆಯ ದೀಪಾಲಂಕಾರ, ದಸರಾ ವಸ್ತುಪ್ರದರ್ಶನ, ಫಲಪುಷ್ಪಪ್ರದರ್ಶನ, ದಸರಾ ಮೆರವಣಿಗೆ, ಗೊಂಬೆ ನೋಡಲು ಮನೆ ಮನೆಗೆ ಹೋಗುತ್ತಿದ್ದ ಸಂಭ್ರಮ ಎಲ್ಲವೂ ಮನದಲ್ಲಿ ಹಸಿರಾಗಿ ಉಳಿದಿದೆ.
ಇಲ್ಲಿ ನಮ್ಮ ಕುಟುಂಬದ ದಸರಾ ಆಚರಣೆಯ ಸಂಭ್ರಮ ಗೊಂಬೆಯ ಸಾಲಿನಿಂದ ಪ್ರಾರಂಭ. ಹದಿನೈದಿಪ್ಪತ್ತು ಮೆಟ್ಟಿಲಿಗೂ ಮೀರಿದ ಪುರಾಣದೃಶ್ಯ, ಪಟ್ಟದ ಗೊಂಬೆ, ಜಂಬೂಸವಾರಿ, ಶೆಟ್ಟರ ಅಂಗಡಿ, ಸಾಮಾಜಿಕ, ಧಾರ್ಮಿಕ, ಜನಪದ ದೃಶ್ಯಗಳ ಮೇಳ ಮನೆಮಂದಿಯೆಲ್ಲರ ಪರಿಶ್ರಮ, ಭಾವುಕತೆ ಹಾಗೂ ಕಲ್ಪನಾಶಕ್ತಿಯ ಪೂರ್ಣಫಲ. ವರುಷಕ್ಕೊಮ್ಮೆ ಬರುವ ದಸರಾ ಹಬ್ಬದ ತಯಾರಿ ಎರಡು ತಿಂಗಳಿಂದಲೇ ಶುರು. ಮೆಟ್ಟಿಲುಗಳನ್ನು ಕಟ್ಟಿ, ಜರಿ ಅಂಚು ಹಚ್ಚಿ, ಬಣ್ಣದ ದೀಪಗಳನ್ನು ಕಟ್ಟಿ, ಪೆಟ್ಟಿಗೆಯಿಂದ ಒಂದೊಂದಾಗಿ ಗೊಂಬೆಗಳನ್ನು ತೆಗೆದು, ಜೋಡಿಸುವುದು ಮನೆಮಂದಿಗೆಲ್ಲಾ ಅತಿ ಸಂತಸ. ಮಣಿ, ಹರಳು, ರೇಶಿಮೆ, ಜರಿ, ಚಿಂದಿ ಚೂರು ಪಾರುಗಳನ್ನೆಲ್ಲಾ ಹರಡಿಕೊಂಡು ಗೊಂಬೆಯಾಟವೇ ಅಮ್ಮನ ಇನ್ನೆರಡು ತಿಂಗಳ ಉದ್ಯೋಗ ಎಂದು ಮಕ್ಕಳು ಹಾಸ್ಯ ಮಾಡುತ್ತಾರೆ.
ನವರಾತ್ರಿಯಲ್ಲಿ ನಮ್ಮ ಮನೆಯಲ್ಲಿ ಬಲು ಸಂಭ್ರಮದ ವಾತವರಣ. ಅತಿಥಿಗಳಿಗೆ ಭೋಜನ, ಕೋಲಾಟ ಕುಣಿತ, ಸಂಗೀತ ನರ್ತನದ ಮೇಳ ಹೀಗೆ ಶುರುವಾದ ಸಂಭ್ರಮ ನವಂಬರ್, ಡಿಸೆಂಬರ್ ಕೊನೆಯವರೆಗೂ ಮುಂದುವರೆದುಕೊಂಡು ಹೋಗಿದೆ. ಸ್ನೇಹಿತರು, ಬಂಧು ಮಿತ್ರರಲ್ಲದೆ ಹಲವಾರು ಸಂಘ, ಸಂಸ್ಥೆಗಳು, ಗರ್ಲ್ ಸ್ಕೌಟ್ಸ್, ಶಾಲಾ ಕಾಲೇಜಿನ ಮಕ್ಕಳು, ನಿವೃತ್ತಾಲಯದ ಹಿರಿಯರೂ ಸೇರಿದಂತೆ ಸುಮಾರು 500ಕ್ಕೂ ಮೀರಿದ ಜನರು ಗೊಂಬೆ ವೀಕ್ಷಿಸಲು ಬಂದಿದ್ದಾರೆ. ಬಂದ ಅತಿಥಿಗಳಿಗೆಲ್ಲ ಅರಿಶಿನ ಕುಂಕುಮ ತಾಂಬೂಲ ಹಾಗೂ ಊಟ ಉಪಚಾರವನ್ನು ಉಣಬಡಿಸುವ ಆಚಾರ ಮನೆಮಂದಿಯ ಸಹಕಾರದಿಂದ ಈವರೆಗೂ ಸುಗಮವಾಗಿ ನಡೆದುಕೊಂಡು ಬಂದಿದೆ. ವರುಷ ವರುಷಕ್ಕೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಿವಿಯಿಂದ ಕಿವಿಗೆ ಸುದ್ದಿ ಹರಡಿ, ಕಡೆಗೆ ಪ್ರಾದೇಶಿಕ ಪತ್ರಿಕೆಯ ಹಾಗೂ ದೂರದರ್ಶನ ಮಾಧ್ಯಮದ ವರದಿಗಾರರು, ಛಾಯಗ್ರಾಹಕರು ಬಾಗಿಲುತಟ್ಟಿ, ನಮ್ಮ ಗೊಂಬೆಗಳನ್ನು ನೋಡಿ ಬೆರಗಾಗಿ, ನಮ್ಮ ಸಂಭ್ರಮದಲ್ಲಿ ಅವರೂ ಪಾಲುದಾರರಾಗಿ ಸಡಗರಪಟ್ಟಿದ್ದಾರೆ. ಹಲವಾರು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಬೆಳೆಯುವುದು ಅಮೇರಿಕನ್ ಸಂಸ್ಕೃತಿಯ ವಿಶೇಷ ಗುಣ. ನಮ್ಮ ಸಂಸ್ಕೃತಿಯ ಪರಂಪರೆಯನ್ನು ಇಲ್ಲಿನವರೊಡನೆ ಹಂಚಿಕೊಂಡು ಇಲ್ಲಿನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವುದು ಈ ದೇಶಕ್ಕೆ ಬಂದು ನೆಲೆಸಿರುವ ನಮ್ಮ ಹೊಣೆಯೂ ಹೌದು. ಕೇರಿಯ ಪ್ರಮುಖ ಪತ್ರಿಕೆಯಲ್ಲಿ ಅನೇಕ ಚಿತ್ರಗಳೊಂದಿಗೆ ಪುಟ ತುಂಬಿದ ವಿಶೇಷ ವರದಿ ಹಾಗೂ ಪ್ರಾದೇಶಿಕ ಎನ್‌ಬಿಸಿ ದೂರದರ್ಶನ ಮಾಧ್ಯಮದಲ್ಲಿ ವಿಜಯದಶಮಿಯಂದು ಸುದ್ದಿಸಮಚಾರದಲ್ಲಿ ಗೊಂಬೆಹಬ್ಬವನ್ನು ಬಿತ್ತರಿಸಿದಾಗ ಇಲ್ಲಿನ ಜನತೆಗೂ ನಮ್ಮ ಪರಂಪರೆ ಪ್ರತಿಭೆಯ ಪರಿಚಯವಾಯಿತೆಂಬ ಸಾರ್ಥಕತೆಯ ಭಾವನೆ ಮೂಡಿತ್ತು.
ಒಮ್ಮೆ ಕೃಷ್ಣಲೀಲೆಯ ಕಥೆ, ಮತ್ತೊಮ್ಮೆ ರಾಮಾಯಣದ ಕಥೆ, ಮತ್ತೊಂದು ವರ್ಷ ಹಿಂದೂ ಹಬ್ಬಗಳ ಸಾಲು, ಈ ವರುಷ ಅಷ್ಟಲಕ್ಷ್ಮಿಯರಿಗೆ ಅಲಂಕಾರ, ಜಂಬೂಸವಾರಿಯ ಮೈಲಿ ಉದ್ದದ ಮೆರವಣಿಗೆ ಹೀಗೆ ಪ್ರತೀ ವರುಷವೂ ಬೇರೆ ಬೇರೆ ಥೀಮ್‌ಗಳಲ್ಲಿ ಗೊಂಬೆ ಜೋಡಿಸುವುದು ನಮ್ಮ ಗೊಂಬೆ ಹಬ್ಬದ ಒಂದು ವಿಶೇಷ. ಮುಂದಿನ ವರ್ಷ ಯಾವ ಥೀಮ್ ಎಂದು ಕುತೂಹಲದಿಂದ ಈಗಲೇ ತಿಳಿದುಕೊಳ್ಳುವ ತವಕ ಹಲವರಿಗೆ. ಹಿಂದೂ ಸೊಸೈಟಿಯ ಬಾಲವಿಹಾರ ಮತ್ತು ಗುರುಕುಲದಲ್ಲಿ ಕಲಿಯುವ ಮಕ್ಕಳು ತಾವೂ ಬಂದು ಗೊಂಬೆ ಜೋಡಿಸುವುದರಲ್ಲಿ ಸಹಾಯ ಮಾಡುವೆವು ಎಂದು ಆಶಿಸಿದಾಗ ನಮ್ಮ ಪರಿಶ್ರಮ ಸಾರ್ಥಕವೆನಿಸಿತ್ತು. ಕಳೆದ ವರುಷ ರಾಮಯಣದ ಕತೆಯನ್ನು ಬಿಂಬಿಸುವ 21 ದೃಶ್ಯಗಳನ್ನು ನಿರೂಪಿಸಿದ್ದೆವು. ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ, ದಶರಥ, ಕೈಕೇಯಿ, ಕೌಸಲ್ಯ, ಸುಮಿತ್ರ, ಮಂಥರೆ, ವಿಶ್ವಾಮಿತ್ರ, ವಸಿಷ್ಟ, ಜನಕ, ಗುಹ, ರಾವಣ, ಕುಂಭಕರ್ಣ, ಮಾರೀಚ, ಪುಷ್ಪಕ ವಿಮಾನ, ಜಟಾಯು, ಹನುಮಂತ, ಸುಭಾಹು, ತಾಟಕಿ ಮುಂತಾದ ಗೊಂಬೆಗಳನ್ನೆಲ್ಲಾ ಕೈಯಲ್ಲೇ ಮಾಡಿ ಅಲಂಕರಿಸಿದ್ದೆವು. ವಿವರವಾದ ದೃಶ್ಯಗಳ ಹಿನ್ನೆಲೆ ಹಲವರ ಪ್ರಶಂಸೆಗಳಿಸಿತ್ತು.
ಕೃಷ್ಣಲೀಲೆಯ ಗೋಪಿಕಾ ವಸ್ತ್ರಾಪಹರಣದ ಕೊಳ, ರಾಸಲೀಲೆ, ದ್ರೌಪದಿ ವಸ್ತ್ರಾಪಹರಣ, ಕೃಷ್ಣ ಸುಧಾಮನ ಗೆಳೆತನ, ಪೂತನಿ ಶಕಟಾಸುರ ಸಂಹಾರ, ಭಕ್ತ ಮೀರ, ಗೋವರ್ಧನಗಿರಿಧಾರಿ, ಅಂಬೆಗಾಲ ಕೃಷ್ಣ, ಕೃಷ್ಣನ ತೊಟ್ಟಿಲ ಶಾಸ್ತ್ರ ಮುಂತಾದ ದೃಶ್ಯ ನಿರೂಪಣೆಗಳು ಮನೆಯವರನ್ನೆಲ್ಲಾ ಒಟ್ಟುಗೂಡಿಸಿ, ಕಣ್ತುಂಬ ನೋಡಿ, ಪರಸ್ಪರ ಪ್ರಶಂಸಿಸಿ ಆನಂದ ಹೊಂದುವ ಅವಕಾಶ ತಂದುಕೊಟ್ಟಿದೆ. ನಾಗಾಲೋಟದ ಗಡಿಬಿಡಿಯ ಜೀವನದಲ್ಲಿ ಗೊಂಬೆ ಹಬ್ಬವು ನಮಗೆ ಈ ರೀತಿಯ ಕ್ವಾಲಿಟೀ ಟೈಮ್ ಹಾಗೂ ಫ್ಯಾಮಿಲಿ ಟೈಮ್ ದೊರಕಿಸಿಕೊಟ್ಟಿದೆ. ಪ್ರತಿ ವರುಷವೂ ಉತ್ಸಾಹದಿಂದ ನಮಗೆ ಬೇಕಾಗುವ ಗೊಂಬೆ ಮತ್ತು ಅಲಂಕಾರಗಳನ್ನು ಊರಲ್ಲಿ ತೆಗೆದಿಟ್ಟು, ಸಕಲ ಸಾಮಾಗ್ರಿಗಳನ್ನು ಹೊಂದಿಸಿಕೊಡುವಲ್ಲಿ ನನ್ನ ತಂಗಿ, ತಂದೆ, ತಾಯಿ ಹಾಗೂ ಅತ್ತೆಯ ಪರಿಶ್ರಮ ಸ್ತುತ್ಯರ್ಹ.
ಕಳೆದ ಎರಡು ವರುಷಗಳಿಂದ ನ್ಯೂಜರ್ಸಿ ಸೌತ್ ಇಂಡಿಯನ್ ಸ್ಪೆಷಾಲಿಟಿಸ್ ವಾರಸುದಾರರು ರಾಷ್ಟ್ರಮಟ್ಟದ ನವರಾತ್ರಿ ಗೊಂಬೆ ಸ್ಪರ್ಧೆ ಏರ್ಪಡಿಸಿ ಇಲ್ಲಿ ನೆಲೆಸಿರುವ ಭಾರತೀಯರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮ ಕೃಷ್ಣಲೀಲ ಥೀಮಿಗೆ ದ್ವಿತೀಯ ಬಹುಮಾನ ನೀಡಿದ್ದರು. ಕಳೆದ ವರುಷ ಎರಡು ಬಗೆಯ ಸ್ಪರ್ಧೆಗಳಿದ್ದವು. ಒಂದು ದೃಶ್ಯ ನಿರೂಪಣೆಗೆಂದು ಮತ್ತೊಂದು ವಂಶಪಾರಂಪರ್‍ಯವಾಗಿ ಸಾಗಿ ಬಂದ ಹಳೆಯ ಗೊಂಬೆಗಳ ಸಂಗ್ರಹಣೆಗೆ ಎಂದು. ನಮ್ಮ ಗೊಂಬೆಗಳಿಗೆ ಎರಡು ವಿಭಾಗದಲ್ಲಿಯೂ ಪ್ರಥಮ ಬಹುಮಾನ ದೊರಕಿತು. ನಮ್ಮ ನಾಡಿನ ಹಿರಿಮೆ, ಇತಿಹಾಸ ಹಾಗೂ ಪರಂಪರೆಯ ಧನ್ಯತಾ ಭಾವವೇ ನಮ್ಮ ಗೊಂಬೆಹಬ್ಬದ ಯಶಸ್ಸಿನ ಗುಟ್ಟು.
****
ಸವಿತಾ ಹಾಗೂ ರವಿಶಂಕರ್ ದಂಪತಿಗಳು ಮತ್ತು ಮಕ್ಕಳಾದ ಸಿಂಧು(19), ಸೀಮಾ(16) ಕೇರಿ ನಾರ್ತ್ ಕೆರೋಲಿನಾದಲ್ಲಿ ಕಳೆದ 19 ವರ್ಷಗಳಿಂದ ವಾಸವಾಗಿದ್ದಾರೆ. ರವಿಯವರು ಕೇರಿಯ ಕನ್ನಡ ಮೇಷ್ಟ್ರಾಗಿ ಮಕ್ಕಳಿಗೆ ಕನ್ನಡ ಪಾಠ ಕಲಿಸಿದ್ದರೆ, ಸವಿತಾರವರು ಸಂಪಿಗೆ ಕನ್ನಡ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. "ಹರಟೆಕಟ್ಟೆ" ಎಂಬ ಸಾಹಿತ್ಯ ಸಂಘಕ್ಕೆ ಚಾಲನೆ ನೀಡಿ ರವಿಶಂಕರ್ ದಂಪತಿಗಳು ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಮನೆಯಲ್ಲಿ ಕನ್ನಡ ಗ್ರಂಥಾಲಯವನ್ನೂ ತೆರೆದಿದ್ದಾರೆ. ಭಾರತದಿಂದ ಬರುವ ಹಲವಾರು ಸಾಹಿತಿ, ಕಲೆಗಾರರನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡು ಅವರುಗಳ ಕಾರ್ಯಕ್ರಮಗಳಿಗೆ ಬೇಕಾದ ಸಹಕಾರ ನೀಡಿದ್ದಾರೆ. ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆಯ ಬಗ್ಗೆ ಅಪಾರ ಆಸಕ್ತಿ ಹಾಗೂ ಅಕ್ಕರೆ ಹೊಂದಿರುವ ರವಿಶಂಕರ್ ಕುಟುಂಬವು ಕನ್ನಡದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ರಾಮಾಯಣ ಕಥೆ ಸಾರುವ ಬೊಂಬೆ ಪ್ರದರ್ಶನ












Click it and Unblock the Notifications