ಅಕ್ಲೆಂಡಿನಲ್ಲಿ ಶ್ರೀಗುರುರಾಯರ ಆರಾಧನೆ
ಇತ್ತೀಚೆಗೆ ಸ್ಥಾಪಿಸಲಾದ ಶ್ರೀ ಗುರು ರಾಘವೇಂದ್ರ ಭಕ್ತಿ ಪ್ರಚಾರ ಪೀಠದ ವತಿಯಿಂದ ದಿನಾಂಕ 17ನೇ ಆಗಸ್ಟ್ 2008ರ ಭಾನುವಾರ ಗುರುಗಳ 337ನೇ ಆರಾಧನೆ ಕಾರ್ಯಕ್ರಮವನ್ನು ಇಲ್ಲಿ ಏರ್ಪಡಿಸಲಾಗಿತ್ತು. ಆಕ್ಲೆಂಡಿನ ಮೌಂಟ್ ರಾಸ್ಕಿಲ್ ಇಂಟರ್ ಮೀಡಿಯೆಟ್ ಶಾಲೆಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮ ಆಗಮಿಸಿದ್ದ ಭಕ್ತಾದಿಗಳ ಮನಸ್ಸಿನಲ್ಲಿ ಧನ್ಯಭಾವ ಮೂಡಿಸುವಲ್ಲಿ ಯಶಸ್ವಿಯಾಯಿತು.
ಪ್ರಾರ್ಥನೆ, ಗುರುಗಳ ಅಷ್ಟೋತ್ತರದ ಸಾಮೂಹಿಕ ಪಠನೆಗಳೊಂದಿಗೆ ಕಾರ್ಯಕ್ರಮಗಳು ಬೆಳಿಗ್ಗೆ ಪ್ರಾರಂಭವಾಗಿ ದಿನವಿಡಿ ನಡೆದ ಆರಾಧನೆಯಲ್ಲಿ ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ, ರಾಘವೇಂದ್ರ ಸ್ತೋತ್ರ, ಸಾಮೂಹಿಕ ಭಜನೆ ಎಲ್ಲವೂ ಇತ್ತು. ನಂತರ ಸಂಗೀತ ಸೇವೆಯಲ್ಲಿ ಪಾಲ್ಗೊಂಡ “ಸ್ವರ ರಾಗ ಸುಧಾ“ ಸಂಗೀತ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಮಧುರ ಗಾಯನದಿಂದ ಎಲ್ಲರನ್ನು ತನ್ಮಯರಾಗಿಸಿದರು. ಈ ಶಾಲೆಯ ಸಂಸ್ಥಾಪಕರಾದ ವಿದ್ವಾನ್ ಎಂ.ಡಿ. ದಿವಾಕರ್ ಅವರು ಕೊನೆಯಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು ರಚಿಸಿದ “ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದ“ ಕೃತಿಯನ್ನು ಹೃದಯಸ್ಪರ್ಶಿಯಾಗಿ ಹಾಡಿದರು.
ಈ ಸಂಗೀತಕ್ಕೆ ವಾದ್ಯಸೇವೆಯ ನೆರವು ನೀಡಿದವರು ಡಾ.ಅಶೋಕ್ ಮಾಲೂರ್[ವಯೊಲಿನ್], ಚಿ. ಸಾಕೇತ್ [ವೀಣೆ], ಕು.ಕೃತ್ತಿಕಾ [ತಬಲ] ಹಾಗೂ ವಿದ್ವಾನ್ ದಿವಾಕರ್ [ಸಾರಂಗ ಸರಸ್ವತಿ ವೀಣೆ]. ಹಿರಿಯರಾದ ಪ್ರೊ.ಎಂ.ಕೆ.ವಾಮನ ಮೂರ್ತಿಯವರು ಹಾಡಿದ ಶ್ರೀ ಪುರಂದರದಾಸರು ರಚಿಸಿದ ಉಗಾ ಭೋಗ ಎಲ್ಲರ ಮೆಚ್ಚುಗೆ ಗಳಿಸಿತು.
ಭುವನೇಂದ್ರ ಭೂಪಾಲಾ ಅವರು “ರಾಯರ“ ಬಗ್ಗೆ ಸಂಕ್ಷಿಪ್ತ ಪ್ರವಚನ ಮಾಡಿ, “ಅಹಂಭಾವ ತೊರೆದು, ವಿನೀತ ಭಾವದಿಂದ ಭಕ್ತಿಮಾರ್ಗದಲ್ಲಿ ನಡೆದು ಪುನೀತರಾದ“ ಗುರು ರಾಘವೇಂದ್ರರೇ ನಮಗೆ ಆದರ್ಶವಾಗಬೇಕು ಎಂದು ಕರೆಯಿತ್ತರು. ಕಾರ್ಯಕ್ರಮದ ಅಂಗವಾಗಿ ಗುರು ರಾಘವೇಂದ್ರರ ಬದುಕು ಮತ್ತು ಕೃತಿಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಛಾಯಾ ಚಿತ್ರ ಪ್ರದರ್ಶನ, ಶ್ರೀ ಕ್ಷೇತ್ರ ಮಂತ್ರಾಲಯದ ಬಗ್ಗೆ ಚಲನಚಿತ್ರ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಸಾವಿತ್ರಮ್ಮ ಭುವನೇಂದ್ರ ಅವರು ಸಮರ್ಥವಾಗಿ ನಿರ್ವಹಿಸಿದರು.
ಈ ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಭಕ್ತರು ಶ್ರಮಿಸಿದ್ದು ವಿಶೇಷವಾಗಿತ್ತು. ಮಂತ್ರಾಲಯದ ನೆನಪು ತರುವಂತೆ ಮರದಲ್ಲಿ “ಬೃಂದಾವನ“ ನಿರ್ಮಿಸಿದ್ದ ಶ್ರೀಕಾಂತ್ ಕೊಳ್ಳಿ ಮತ್ತು ತಿಪ್ಪೆಸ್ವಾಮಿ, ಭಕ್ತಿಭಾವ ಮೂಡಿಸಿದ ಸುಂದರ ವೇದಿಕೆಯ ನಿರ್ಮಾಣದಲ್ಲಿ ಸಹಕಾರ ನೀಡಿದ ಭಕ್ತರುಗಳು, ದಿನವಿಡೀ ಪೂಜೆ ಆರತಿ ಮಂತ್ರ ಪಠಣೆ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ಶ್ರಧ್ಧೆ ಭಕ್ತಿಗಳಿಂದ ನೇರವೇರಿಸಿದ ಉಮೇಶ್ ಪ್ರಸಾದ್, ವೆಂಕಟ್, ಸತ್ಯನಾರಾಯಣ ಮತ್ತು ಚಿ.ವಾದಿರಾಜ್, ಮಹಾ ಪ್ರಸಾದ ತಯಾರಿಕೆ ಮತ್ತು ವಿನಿಯೋಗದಲ್ಲಿ ನೆರವಾದ ವೆಂಕಟೇಶ ಕುಮಾರ್, ವಿದ್ಯಾ ಮತ್ತು ಸಂಗಡಿಗರು, ಧ್ವನಿ ಮತ್ತು ಬೆಳಕು ಸಂಯೋಜನೆ ಹೊಣೆ ಹೊತ್ತ ಸತ್ಯನಾರಾಯಣ ಸೆಟ್ಟಿ, ಎಲ್ಲ ರೀತಿಯ ನೆರವು ನೀಡಿದ ಶ್ರೀಕಾಂತ್ ಕೊಳ್ಳಿ ಮತ್ತು ಜಯಶ್ರೀ ಕೊಳ್ಳಿ ಹಾಗೂ ಇನ್ನೂ ಹಲವರ ಕೊಡುಗೆ ಸ್ಮರಣಾರ್ಹವಾಗಿತ್ತು. ಶ್ರೀ ಗುರು ರಾಘವೇಂದ್ರ ಭಕ್ತಿ ಪ್ರಚಾರ ಪೀಠದ ಎಲ್ಲ ಕಾರ್ಯಕರ್ತರು ಅಭಿನಂದನಾರ್ಹರು.


Click it and Unblock the Notifications
