• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಡ್ನಿ ಕನ್ನಡ ಸಂಘ-ರಜತ ಮಹೋತ್ಸವ ವೈಭವ

By Staff
|

sydney kananda sangha souvenir releaseಸಾವಿರಾರು ದೀಪಗಳಿಂದ ಝಗಮಗಿಸುತ್ತಿರುವ ಮೈಸೂರು ಅರಮನೆಯ ಅಂಗಳದಲ್ಲಿ ಬಣ್ಣಬಣ್ಣದ ಉಡಿಗೆ ತೊಟ್ಟಮಕ್ಕಳಿಂದ ಸುಂದರವಾದ ಹಾಡು, ನೃತ್ಯ,ಕೋಲಾಟ ನಡೆಯುತ್ತಿದೆ. ಪ್ರೇಕ್ಷಕರು ಸಂಪೂರ್ಣ ತನ್ಮಯರಾಗಿ ನೋಡುತ್ತಾಕುಳಿತಿದ್ದಾರೆ. ಇದ್ದಕಿದ್ದಂತೆ ಸಭಾಂಗಣದಲ್ಲಿ ದೀಪಗಳು ಹತ್ತಿದವು. ಆಗಲೇ ಜನರಿಗೆ ಅರಿವಾಗಿದ್ದು, ತಾವು ಮೈಸೂರು ಅರಮನೆಯ ಅಂಗಳದಲ್ಲಲ್ಲ, ಮೈಸೂರಿನಿಂದ ದೂರ,ಬಹುದೂರದ ಸಿಡ್ನಿ ನಗರದ ಬೌಮನ್ ಸಭಾಂಗಣದಲ್ಲಿಕುಳಿತ್ತಿದ್ದೇವೆ ಎನ್ನುವುದು!

*ವರದಿ: ಆನು ಶಿವರಾಂ,ಸಿಡ್ನಿ,ಆಸ್ಟ್ರೇಲಿಯಾ

ಶನಿವಾರ, ಜುಲೈ 26ರಂದು, ಸಿಡ್ನಿ ಕನ್ನಡ ಸಂಘ ವಿಜೃಂಭಣೆಯಿಂದ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತು. ಈ ಸಂದರ್ಭಕ್ಕೆಂದೇ ಸಿಡ್ನಿಯ ಪ್ರತಿಭಾವಂತ ಕಲಾವಿದ ದಕ್ಷಿಣಾಮೂರ್ತಿ ಆಂಜನಪ್ಪನವರು ಕಲಾತ್ಮಕವಾಗಿ ರಚಿಸಿದ ದೀಪಾಲಂಕೃತ ಮೈಸೂರು ಅರಮನೆಯ ಅತಿ ಸುಂದರ ಹಿನ್ನೆಲೆ, ಕಾರ್ಯಕ್ರಮಕ್ಕೆ ಅತ್ಯಂತ ವೈಭವ ವಾಗಿ ಮೆರೆಗು ನೀಡಿತ್ತು. ಸಮಾರಂಭವೆಲ್ಲ ಮೈಸೂರು ಅರಮನೆಯಲ್ಲೇ ನಡೆದಂತೆಭಾಸವಾಗುತ್ತಿತು!

ಬೆಳ್ಳಿ ಹಬ್ಬಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ದೇವತಾ ಬಿಲ್ಡರ್ಸ್ ನ ಆರಾಧ್ಯರ ಸಮ್ಮುಖದಲ್ಲಿ ರಜತ ಮಹೋತ್ಸವದ ಅಧ್ಯಕ್ಷರಾದ ಡಾ||ಸಿದ್ದಲಿಂಗೇಶ್ವರ ಒರೆಕೊಂಡಿ ಹಾಗೂ ಕನ್ನಡ ಸಂಘದ ಅಧ್ಯಕ್ಷೆ ಡಾ||ನಾಗಮ್ಮಪ್ರಕಾಶ್ ಅವರು ಬೆಳ್ಳಿ ಹಬ್ಬದ ಜ್ಯೋತಿಯನ್ನು ಬೆಳಗಿಸಿದರು.ಭಾರತದ ಹೈ ಕಮಿಷನರ್ ಸುಜಾತ ಸಿಂಗ್ ಅವರು ಈ ಶುಭ ಸಂದರ್ಭದಲ್ಲಿ ರಜತ ಮಹೋತ್ಸವದ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಿಡ್ನಿ ಕನ್ನಡಿಗರ ಉತ್ತಮ ಸಾಹಿತ್ಯಾಭಿರುಚಿಯನ್ನು ಬಿಂಬಿಸುವ ಈ ಸ್ಮರಣ ಸಂಚಿಕೆಯನ್ನು ಓಂಕಾರಸ್ವಾಮಿ ಗೊಪ್ಪೇನಳ್ಳಿ ಹಾಗೂ ಗೀತಾ ಗೋಪೀನಾಥ್ ಅವರು ಬಹಳ ಆಸಕ್ತಿವಹಿಸಿ ಹೊರತಂದಿದ್ದಾರೆ.

Cultural programತಮ್ಮ ಹಿತ-ಮಿತವಾದ ಭಾಷಣದಲ್ಲಿ ಸುಜಾತ ಸಿಂಗ್ ಅವರು ತಂತ್ರಜ್ಞಾನ,ವಾಣಿಜ್ಯ, ಸಾಹಿತ್ಯ, ಕಲೆ, ಕ್ರೀಡೆ ಮುಂತಾದ ಹಲವಾರು ದಿಶೆಗಳಲ್ಲಿ ಕರ್ನಾಟಕದ ಯೋಗದಾನವನ್ನು ಬಣ್ಣಿಸುತ್ತಾಕನ್ನಡಿಗರನ್ನು ಅಭಿನಂದಿಸಿದರು. ಆಸ್ಟ್ರೇಲಿಯಾದ ಮಲ್ಟಿಕಲ್ಚರ್ ಅಫೇರ್ಸ್ ಅಂಡ್ ಸೆಟೆಲ್ಮೆಂಟ್ ಸರ್ವಿಸಸ್ಸ್ ವಿಭಾಗದ ಕಾರ್ಯದರ್ಶಿ ಲ್ಯಾರಿ ಫರ್ಗುಸನ್‌ವರು ರಜತೋತ್ಸವವನ್ನು ಆಚರಿಸುತ್ತಿರುವ ಕನ್ನಡ ಸಂಘವನ್ನು ಅಭಿನಂದಿಸಿದರು. ಅಂಕಿ-ಅಂಶಗಳನ್ನುನೀಡುತ್ತಾ ಅವರು ಭಾರತಮೂಲದ ಜನ ಎಷ್ಟು ಸುಶಿಕ್ಷಿತರು, ಶಾಂತಿಪ್ರಿಯರು ಎಂದು ವರ್ಣಿಸಿದರು.

ಆಸ್ಟ್ರೇಲಿಯಾದ ಅಭಿವೃದ್ದಿಯಲ್ಲಿ ಭಾರತೀಯರ ಹಾಗೂ ಕನ್ನಡಿಗರ ಸಹಯೋಗವನ್ನು ಉಲ್ಲೇಖಿಸಿದರು.ಆಸ್ಟ್ರೇಲಿಯಾದ ಹಾಗೂ ವಿದೇಶದ ಕನ್ನಡ ಸಂಘಗಳಿಂದ ಮತ್ತು ಸಿಡ್ನಿಯ ಅನೇಕ ಗಣ್ಯವ್ಯಕ್ತಿಗಳಿಂದ ಕನ್ನಡ ಸಂಘಕ್ಕೆ ಬೆಳ್ಳಿಹಬ್ಬದ ಅಭಿನಂದನಾ ಸಂದೇಶಗಳು ಬಂದಿದ್ದವು. ರಜತ ಮಹೋತ್ಸವದ ಅಧ್ಯಕ್ಷರಾದ ಡಾ.|ಸಿದ್ದಲಿಂಗೇಶ್ವರ ಒರೆಕೊಂಡಿಯವರು 25ವರ್ಷಗಳಿಂದ ಕನ್ನಡ ಸಂಘದಸದಸ್ಯರಾಗಿದ್ದಾರೆ. 1982ರಲ್ಲಿ ಕೇವಲ ನಾಲ್ಕಾರು ಕುಟುಂಬಗಳ ಸದಸ್ಯತ್ವದೊಂದಿಗೆ ಪ್ರಾರಂಭವಾದ ಕನ್ನಡ ಸಂಘ,ಇಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾಗಿ ಬೆಳೆದು ಬಂದ ದಾರಿಯತ್ತ ನೋಟ ಹರಿಸಿದರು.2004 ರಿಂದ ಏಶಿಯಾ ಫೆಸಿಫಿಕ್ ಕನ್ನಡ ಒಕ್ಕೂಟವೆಂಬ ವೇದಿಕೆಯಡಿಯಲ್ಲಿ ಈ ವಲಯದಲ್ಲಿರುವ ಮುಖ್ಯ ನಗರಗಳ ಕನ್ನಡಿಗರ ಮಧ್ಯೆ ಮೈತ್ರಿ ಬೆಸೆಯಲು ಹಾಗೂ ಕರ್ನಾಟಕದಿಂದ ಹಲವಾರು ಹೆಸರಾಂತ ಕಲಾವಿದರನ್ನು ಕರೆಸಿ ಈ ಎಲ್ಲಾನಗರಗಳಲ್ಲಿ ಅವರ ಕಲೆಯನ್ನು ಆನಂದಿಸಿ ಆದರಿಸುವಂತೆ ಮಾಡಲು ಸಿಡ್ನಿ ಕನ್ನಡ ಸಂಘ ವಹಿಸಿದ ಪ್ರಮುಖ ಪಾತ್ರದ ಬಗ್ಗೆವಿವರಿಸಿದರು.

ಸಿಡ್ನಿಯ ಭಾರತೀಯ ಒಕ್ಕೂಟದ ಅಧ್ಯಕ್ಷರಾಗಿರುವ, ಕನ್ನಡದವರೇ ಆದ ರಾಜ್ ನಟರಾಜನ್ ಅವರು ಭಾರತೀಯ ಒಕ್ಕೂಟದ ಅಭಿವೃದ್ದಿಯಲ್ಲಿ ಕನ್ನಡಿಗರ ಯೋಗದಾನ, ಕನ್ನಡಿಗರು ನೀಡಿರುವ ಮುಂದಾಳತ್ವವನ್ನುಶ್ಲಾಘಿಸಿದರು. ಕನ್ನಡ ಸಂಘದ ಅಧ್ಯಕ್ಷೆ ಡಾ.ನಾಗಮ್ಮ ಪ್ರಕಾಶ್ ಅವರು ಸಿಡ್ನಿಯ ಕನ್ನಡ ಶಾಲೆಗಳು, ಇಲ್ಲಿನಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳ ವಿತರಣೆ, ಯುವ ವೇದಿಕೆಯ ಸ್ಥಾಪನೆ, ಇತ್ಯಾದಿ ಸಂಘದ ಚಟುವಟಿಕೆಗಳನ್ನುವಿವರಿಸಿ ಸಂಸ್ಥೆಯ ಬೆಳೆವಣಿಗೆಗೆ ನೆರೆವಾದ ಎಲ್ಲರಿಗೂ ಕೃತಜ್ನತೆಗಳನ್ನು ಅರ್ಪಿಸಿದರು. ಕರ್ನಾಟಕದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಅಭಿನಂದನಾ ಸಂದೇಶವನ್ನು ಈ ಸಂದರ್ಭದಲ್ಲಿ ಅವರುಸಭೆಗೆ ಓದಿ ತಿಳಿಸಿದರು.

Cultural program at sydney silver jubileeಇದರ ನಂತರ ಸಭಿಕರು ಕಾತರದಿಂದ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಮೊದಲಿಗೆ ಸಿಡ್ನಿಯಕಲಾವಿದರಿಂದ ವೃಂದಗಾನ ಹಾಗೂ ಮಕ್ಕಳಿಂದ ನೃತ್ಯ ನಡೆಯಿತು. ಸಿಡ್ನಿಯ ಯುವ ವೇದಿಕೆಯ ಸದಸ್ಯೆಯರು ಅತ್ಯಂತಭಾವಪೂರ್ಣವಾಗಿ ದಶಾವತಾರ ನೃತ್ಯ ರೂಪಕವನ್ನು ಭರತನಾಟ್ಯದಲ್ಲಿ ನಿರೂಪಿಸಿದರು. ಪುಟ್ಟ ಪುಟ್ಟ ಬಾಲಕರನ್ನುದಶಾವತಾರದ ಪಾತ್ರಗಳಂತೆ ಅಲಂಕರಿಸಿ ಅವರನ್ನು ನೃತ್ಯದಲ್ಲಿ ಬಳಸಿದ್ದು ಒಂದು ನೂತನ ಪ್ರಯೋಗವಾಗಿತ್ತು. ಸುಂದರ ಯುವತಿಯರ ಇನ್ನೊಂದು ತಂಡ ರಾಷ್ಟ್ರಕವಿ ಕುವೆಂಪುರವರ 'ಜೈ ಭಾರತ ಜನನಿಯ ತನುಜಾತೆ' ಹಾಡಿಗೆ ಸಂಯೋಜಿಸಿದ ನೃತ್ಯವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.ಈ ಸಮಾರಂಭಕ್ಕೆಂದೇ ಕರ್ನಾಟಕದಿಂದ ಆಗಮಿಸಿದ ಪಲ್ಲವಿ ಅರುಣ್ಹಾಗೂ ಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿದರು.

ಗಂಗಾವತಿ ಬೀಚಿಯೆಂದು ಪ್ರಸಿದ್ದರಾಗಿರುವ ಪ್ರಾಣೇಶ್ ವೇದಿಕೆಯನ್ನೇರಿದಾಗ, ಈಗಾಗಲೇ ಅವರ ಮಾತಿನ ರುಚಿಯನ್ನು ಟಿವಿಯಲ್ಲಿ, ಸಿಡ್ನಿ ಕನ್ನಡ ರೇಡಿಯೋದ ಸಂದರ್ಶನದಲ್ಲಿ ಕೇಳಿ ಆನಂದಿಸಿದ ಜನಕ್ಕೆ ಅವರ ಪರಿಚಯದ ಅಗತ್ಯವೇ ಇಲ್ಲದಷ್ಟು ಆತ್ಮೀಯರಾಗಿ ಬಿಟ್ಟಿದ್ದರು! ಸಿಡ್ನಿಗೆ ಬರುವಾಗ ವಿಮಾನಯಾನದ ತಮ್ಮ ಅನುಭವಗಳನ್ನು ರಸವತ್ತಾಗಿ ಬಣ್ಣಿಸುತ್ತ ಪ್ರಾಣೇಶ್ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಅನುದಿನದ ಸಾಮಾನ್ಯ ಸಂದರ್ಭಗಳಲ್ಲೂ ಹಾಸ್ಯಹೇಗೆ ಅಡಗಿರುತ್ತದೆ ಎಂದು ವಿವರಿಸುತ್ತ ಅವರು ಹಲವಾರು ಉದಾಹರಣೆಗಳೊದಿಗೆ ನಿರೂಪಿಸಿದರು. ಇಡೀ ರಾತ್ರಿ ನಡೆದಒಂದು ಸಂಗೀತ ಸ್ಪರ್ಧೆಗೆ ತಾವು ಅನಿವಾರ್ಯವಾಗಿ ತೀರ್ಪುಗಾರರಾಗಬೇಕಾದ ಅಸಹಾಯಕತೆಯನ್ನು ಪ್ರಾಣೇಶ್ ಸಭಿಕರಲ್ಲಿ ಹೇಳಿಕೊಳ್ಳುತ್ತಿದ್ದರೆ, ಜನ ಸ್ವಲ್ಪವೂ ಕನಿಕರವಿಲ್ಲದೆ ಬಿದ್ದು, ಬಿದ್ದು ನಗುತ್ತಿದ್ದರು! ಮುದುಕಿಯೊಬ್ಬಳ "ಒಂದು ದಳದಕಮಲದಲ್ಲಿ" ಎಂದು ಶುರುವಾದ ಅಪಸ್ವರದ ಪ್ರಾರ್ಥನೆ ಮುಗಿಯುವ ಸೂಚನೆಯೇ ಸಿಗದೆ ತಾವು ಗಾಬರಿಗೊಂಡ ಸನ್ನಿವೇಶವನ್ನು ಪ್ರಾಣೇಶ್ ವಿವರಿಸಿದಾಗಲಂತೂ ಇಡೀ ಸಭಾಂಗಣ ನಗೆಗಡಲಿನಲ್ಲಿ ತೇಲಿಹೋಯಿತು.

ಜನರಿಗೆ ಒಂದೆಡೆ ಪ್ರಾಣೇಶರ ಹಾಸ್ಯ ಚಟಾಕಿಗಳನ್ನು ಇನ್ನಷ್ಟು ಸವಿಯುವ ಆಸೆಯಾದರೆ, ಇನ್ನೊಂದೆಡೆ ಪಲ್ಲವಿಯವರ ಗಾನಸುಧೆಯನ್ನು ಯಾವಾಗ ಸವಿದೇವೋ ಎಂಬ ತವಕ. ಒಲ್ಲದ ಮನಸ್ಸಿನಿಂದಲೇ ಪ್ರಾಣೇಶರನ್ನು ಬೀಳ್ಕೊಟ್ಟ ನಂತರ ಪಲ್ಲವಿಯವರನ್ನು ವೇದಿಕೆಗೆ ಆಹ್ವಾನಿಸಿದರು ನಿರೂಪಕರು."ಅಜಂನಿರ್ವಿಕಲ್ಪಂ" ಎಂಬ ಗಣೇಶಸ್ತುತಿಯೊಡನೆ ತಮ್ಮ ಕಾರ್ಯಕ್ರಮವನ್ನು ಭವ್ಯವಾಗಿ ಪ್ರಾರಂಭಿಸಿದರು ಪಲ್ಲವಿ.ಅಲ್ಲಿಂದ ಮೊದಲಾಯ್ತು ಸಿಡ್ನಿ ಕನ್ನಡಿಗರಿಗೆ ಪಲ್ಲವಿಯವರ ಸಿರಿಗಾನದ ರಸದೌತಣ. ಕುವೆಂಪುರವರ "ಇಳಿದು ಬಾತಾಯಿ"ಕವನವನ್ನು ಮನದುಂಬಿ, ಭಾವತುಂಬಿ ಹಾಡಿದಾಗ ಸಭಿಕರ " ವನ್ಸ್ ಮೋರ್'' ಕೋರಿಕೆ ಸಹಜವೇ ಆಗಿತ್ತು.

ಪಲ್ಲವಿ ಚಿಕ್ಕವಯಸ್ಸಿನವರಾದರೂ ಅವರ ಮಾತಿನಲ್ಲಿ, ಕವನಗಳ ಆಯ್ಕೆಯಲ್ಲಿ, ಪ್ರತಿ ಕವನವನ್ನೂ ಅವರು ಪರಿಚಯಿಸುತ್ತಿದ್ದ ರೀತಿಯಲ್ಲಿ ಪ್ರಬುದ್ಧತೆ ಎದ್ದು ಕಾಣುತಿತ್ತು. ಕನ್ನಡದ ಪ್ರಖ್ಯಾತ ಕವಿಗಳಾದ ಬೇಂದ್ರೆ, ಅಡಿಗ, ನರಸಿಂಹಸ್ವಾಮಿ, ಪು.ತಿ.ನ, ಲಕ್ಷ್ಮೀನಾರಾಯಣ ಭಟ್ಟರ ಕವನಗಳನ್ನು ತಮ್ಮ ಇನಿದನಿಯಲ್ಲಿ ನಿರಾಯಸವಾಗಿ ಹಾಡಿದರು ಪಲ್ಲವಿ. ನಗುನಗುತ್ತಾ ಪ್ರೇಕ್ಷಕರೊಂದಿಗೆ ಮಾತನಾಡುತ್ತ ಒಂದು ಸ್ನೇಹಮಯ ವಾತಾವರಣವನ್ನು ಸೃಸ್ಟಿಸಿದರು. ಕರ್ಣಾಟಕದಲ್ಲಿ ಮನೆ ಮಾತಾಗಿರುವ ಹಿರಿಯ ಕಲಾವಿದ ಎ.ಎಸ್. ಮೂರ್ತಿಯವರ ಮೊಮ್ಮಗಳಾದ ಪಲ್ಲವಿ ತನ್ನ ಪ್ರೀತಿಯ ತಾತನ ನಾಟಕದ ಹಾಡಿನೊಂದಿಗೆ ತಮ್ಮ ಕಾರ್ಯಕ್ರಮವನ್ನು ಮುಗಿಸಿದರು.

ಹಾಡಿಗೆ ಬೇಕಾದ ಪಕ್ಕವಾದ್ಯಗಳೆಲ್ಲ ಲ್ಯಾಪ್ ಟಾಪ್ನಲ್ಲಿ ಅಡಗಿದ್ದು, ನಿಜವಾದ ವಾದ್ಯವೃಂದದ ಕೊರತೆ ಬಹುಶಃಪಲ್ಲವಿಯವರನ್ನು ಕಾಡಿರಬಹುದು. ಆದರೆ ಅವರ ಹಾಡಿನ ಮೋಡಿಗೆ ಮಾರುಹೋದ ಸಿಡ್ನಿ ಕನ್ನಡಿಗರಿಗೆ ಅದೇನು ವಿಶೇಷಕೊರತೆಯಾಗಿ ಕಂಡಿರಲಾರದು. ಜುಲೈ ತಿಂಗಳ ಕೊರೆಯುವ ಚಳಿಯಲ್ಲಿ ಮಧ್ಯರಾತ್ರಿಯವರೆಗೂ ಜನ ಅಲ್ಲಾಡದೆಕುಳಿತಿದ್ದೇ ಇದಕ್ಕೆ ಸಾಕ್ಷಿ.ಸಂಘದ ಉಪಾಧ್ಯಕ್ಷೆ ಗೀತಾ ಗೋಪಿನಾಥ್ ರವರ ವಂದನಾರ್ಪಣೆಯ ನಂತರ, ಕನ್ನಡದ ಕವಿ ನಿಸಾರ್ ಅಹಮದ್‌ರವರ ನಿತ್ಯೋತ್ಸವ ಗೀತೆಯನ್ನು ಸಂಘದ ಸದಸ್ಯರು ಪಲ್ಲವಿ, ಪ್ರಾಣೇಶ್ ಹಾಗೂ ಸಿಡ್ನಿಯ ಕಲಾವಿದೆ ಪುಷ್ಪಾ ಜಗದೀಶ್ ಮತ್ತು ಇತರ ಗಾಯಕರೊಂದಿಗೆ ವೃಂದಗಾನ ಹಾಡಿ, ಕನ್ನಡ ತಾಯಿಗೆ ನಿತ್ಯೋತ್ಸವ ಸಲ್ಲಿಸುವುದರೊ೦ದಿಗೆ ರಜತ ವೈಭವದ ಬೆಳ್ಳಿ ತೆರೆ ನಿಧಾನವಾಗಿ ಕೆಳಗಿಳಿಯಿತು. ಏಶಿಯಾ ಪೆಸಿಫಿಕ್ ಕನ್ನಡ ಒಕ್ಕೂಟದ ವೇದಿಕೆಯಡಿಯಲ್ಲಿ ಈ ಕಲಾವಿದರು ಆಡಿಲೇಡ್, ಮೆಲ್ಬೊರ್ನ್ ಮತ್ತು ಸಿಂಗಪುರ ನಗರಗಳಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.

ಸಿಡ್ನಿ ಕನ್ನಡ ಸಂಘ ರಜತ ಹಬ್ಬದ ರಸನಿಮಿಷಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more