ಆಕ್ಲೆಂಡಿನಲ್ಲಿ ಅನುಪಮ ಸಂಗೀತೊಲ್ಲಾಸದ ಹೂಮಳೆ
ನಮ್ಮೂರಿನಲ್ಲೀಗ ಮಳೆಯೋ ಮಳೆ, ಚಂಡಿ ಹಿಡಿದು ಬಿಡದೆ ಹುಯ್ಯುವ ಜಡಿ ಮಳೆ. ಈ ಮಳೆಯ ಬೇಸರವನ್ನು ಅನುಪಮ ಪ್ರಭಾಕರ್ ಹಾಡಿದ ಉಲ್ಲಾಸದ ಹೂಮಳೆ ಹಾಡು ದೂರ ಓಡಿಸಿತು. ದಿನಾಂಕ 26ನೇ ಎಪ್ರಿಲ್ 2008 ರಂದು ಶನಿವಾರ, ಆಕ್ಲೆಂಡಿನ ಮೌಂಟ್ ಆಲ್ಬರ್ಟ್ ಯುದ್ಧ ಸ್ಮಾರಕ ಭವನದಲ್ಲಿ ನಡೆದ ಅನುಪಮ ಅವರ ಅಚ್ಚ ಕನ್ನಡದ ಹಾಡುಗಳ ಧ್ವನಿ ಮುದ್ರಿಕೆ 'ಮಾಧುರಿ' ಬಿಡುಗಡೆ ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಂಗೀತ ಸುರಿಮಳೆ ಸುರಿದು ಶೋತೃಗಳ ಮನದಲ್ಲಿ ಸಂತೋಷ ತುಂಬಿ ಹರಿಯಿತು.
*ವರದಿ:ಪ್ರಕಾಶ್ ರಾಜಾರಾವ್, ಆಕ್ಲೆಂಡ್, ನ್ಯೂಜಿಲೆಂಡ್.
ನ್ಯೂಜಿಲೆಂಡ್ ಕನ್ನಡ ಕೂಟ, ಭಜನ್ ಸತ್ಸಂಗ, ಸ್ಥಳೀಯ ಭಾರತೀಯ ಸಂಘ ಸಂಸ್ಥೆಗಳು ನಡೆಸಿದ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿ ಖ್ಯಾತರಾದವರು ಅನುಪಮ ಪ್ರಭಾಕರ್. ಹಿಂದೆ ರಾಜು ಅನಂತಸ್ವಾಮಿ, ಬಿ.ಆರ್.ಛಾಯಾ, ಮಂಜುಳ ಗುರುರಾಜ್ ಮುಂತಾದ ಪ್ರಸಿದ್ಧ ಗಾಯಕರು ಇಲ್ಲಿಗೆ ಬಂದಿದ್ದಾಗ ಅವರೊಡನೆ ದನಿಗೂಡಿಸಿದ್ದ ಅನುಪಮ ನ್ಯೂಜಿಲೆಂಡಿನಲ್ಲಿ ಕನ್ನಡ ಸಂಗೀತದ ಪ್ರಥಮ ಧ್ವನಿ ಮುದ್ರಿಕೆ ಹೊರತಂದ ಮೊದಲ ಗಾಯಕಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
ವರ್ಷಾ ಪೈ ಅವರ ಪ್ರಾರ್ಥನೆ ನಮ್ಮಮ್ಮ ಶಾರದೆ ಯೊಂದಿಗೆ ಪ್ರಾರಂಭವಾಗಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ರಸ ಸಂಜೆಯಲ್ಲಿ ಹಾಡಿ ಕುಣಿದವರ ಪೈಕಿ ಹೆಸರಾಂತ ಗಾಯಕಿಯರಾದ ಚೈತ್ರಾ ರವಿಶಂಕರ್, ಅಖಿಲಾ ಪುತ್ತಿಗೆ, ಸ್ಮಿತಾ ಗೌರಿ, ಅವರಲ್ಲದೆ ಕನ್ನಡೇತರರಾದ ವಿಷ್ಣು ಪ್ರಿಯ ಮಲ್ಲೆಲಾ, ಆಶಿಶ್ ರಾಮಕೃಷ್ಣನ್ [ ಝಿ ಟಿವಿಯ ಸಾರೆಗಮ ಪ್ರತಿಸ್ಪರ್ಧೆಯ ವಿಜೇತರು] ಸಹ ಇದ್ದರು. ಹಳೆಯ ಚಲನಚಿತ್ರಗಳ ಮರೆಯಲಾಗದ ಭಾಮೆಯ ನೋಡಲು ತಾ ಬಂದ, ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ಭಾವವೆಂಬ ಹೂವು ಅರಳಿ, ಜೋಕೆ ನಾನು ಬಳ್ಳಿಯ ಮಿಂಚು, ಗಿಲ್ ಗಿಲಿ ಗಿಲಕ್ಕು, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು , ಇವುಗಳ ಜೊತೆಗೆ ಇತ್ತೀಚಿನ ಅಮೃತ ವರ್ಷಿಣಿ, ಮುಂಗಾರು ಮಳೆ, ಚೆಲುವಿನ ಚಿತ್ತಾರ ಚಿತ್ರಗಳ ಹಾಡುಗಳೂ ಸೇರಿದ್ದು ಚಹಾದ ಜೋಡಿ ಚೂಡಾದಾಂಗಿತ್ತು.
ಸಂಗೀತವೆಂದರೆ ಬರಿಯ ಸಿನಿಮಾ ಸಂಗೀತ ಮಾತ್ರವಲ್ಲ ಎಂದು ನಿರೂಪಿಸಲು ಎಲ್ಲೋ ಜೋಗಪ್ಪ ನಿನ್ನರಮಾನೆ ಮುಂತಾದ ಜಾನಪದ ಹಾಡುಗಳ ಸೊಗಡೂ ಇತ್ತು. ಅಖಿಲಾ, ಚೈತ್ರಾ, ರಮ್ಯ ಇವರುಗಳ ಮೋಹಕ ನೃತ್ಯಕ್ಕೆ ಪ್ರಸಿದ್ಧ ಅಪ್ಪ ಮಕ್ಕಳು ಬೆಂಗಳೂರು ಪ್ರಭಾಕರ್ ಮತ್ತು ಆನಂದ್ ವಸಿಷ್ಟ್ ಅವರುಗಳು ಲಗ್ನ ಪತ್ರಿಕೆ ಚಿತ್ರದ ಬಲು ಅಪರೂಪ ನಮ್ ಜೋಡಿ ಹಾಡಿಗೆ ನರ್ತಿಸಿದ್ದು ಸವಾಲಾಗಿತ್ತು
ಈ ಸಮಾರಂಭಕ್ಕೆ ಆಗಮಿಸಿದ್ದ ಕಾಶಿ ವಿಶ್ವನಾಥ ದೇವಾಲಯದ ಶ್ರೀ ಸೀತಾರಾಮ್ ಅವರು ಗಾಯಕಿ ಅನುಪಮ ಮತ್ತು ಅವರ ಕುಟುಂಬದವರನ್ನು ಆಶೀರ್ವದಿಸಿದರು. ಅನುಪಮಾ ಅವರ ವಿದ್ಯಾ ಗುರುಗಳಾದ ಸ್ವರ ರಾಗ ಸುಧಾ ಸಂಗೀತ ಶಾಲೆಯ ವಿದ್ವಾನ್ ಎಂ.ಡಿ. ದಿವಾಕರ್ ಅವರು ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಿ ತಮ್ಮ ಶಿಷ್ಯಳ ಸಾಧನೆಯನ್ನು ಹೊಗಳಿ ಹರಸಿದರು. ಕನ್ನಡ ಕೂಟದ ಅಧ್ಯಕ್ಷರೂ ಅದ ಅನುಪಮ ಅವರ ತಂದೆ ಬೆಂಗಳೂರು ಪ್ರಭಾಕರ್ ಈ ಕಾರ್ಯದಲ್ಲಿ ನೆರವಾದ ಎಲ್ಲರನ್ನು ವಂದಿಸಿ ಇತರ ಗಾಯಕರೂ ಸಹ ಇಂತಹ ಪ್ರಯತ್ನ ಮಾಡುವಂತೆ ಕರೆಯಿತ್ತರು.
ಮಧುರ ಕಂಠದಷ್ಟೇ ವಿನಮ್ರತೆಗೂ ಹೆಸರಾದ ಅನುಪಮ ತಮ್ಮ ಸಾಧನೆಗೆ ಗುರುಗಳು, ನನ್ನ ತಂದೆ ಹಾಗೂ ಮುಖ್ಯವಾಗಿ ನನ್ನ ತಾಯಿ ಮಂಗಳಾ ಪ್ರಭಾಕರ್ ಅವರ ಉತ್ತೇಜನವೇ ಕಾರಣ ಎಂದರು. ಕಾರ್ಯಕ್ರಮಕ್ಕೆ ನೆರವಾದ ಭಾಗವಹಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನರ್ಪಿಸಿದರು. ಕಾರ್ಯಕ್ರಮವನ್ನು ರಘುನಂದನ್ ಮತ್ತು ಆಕಾಂಕ್ಷಾ ಬಿರಾದರ್ ಅವರು ಆಕರ್ಷಕವಾಗಿ ನಿರೂಪಿಸಿದರು.
ಮಾಧುರಿ ಧ್ವನಿ ಮುದ್ರಿಕೆಯ ಬಗ್ಗೆ
ಖ್ಯಾತ ಕವಿಗಳಾದ ಬೇಂದ್ರೆ, ಕೆ.ಎಸ್.ನರಸಿಂಹ ಸ್ವಾಮಿ, ನಿಸ್ಸಾರ್ ಅಹಮದ್ ಅವರುಗಳ ಕವನಗಳೂ, ಹಳೆಯ ಮತ್ತು ಹೊಸ ಕನ್ನಡ ಚಲನ ಚಿತ್ರಗಳ ಹಾಡುಗಳೂ ಇದ್ದು ಜೊತೆಗೆ ಪುರಂದರದಾಸರ ಭಕ್ತಿ ಸಂಗೀತವೂ ಸೇರಿರುವ ಕಾರಣ, ಈ ಮುದ್ರಿಕೆಯ ಪ್ರಾರಂಭದಲ್ಲಿ ಪ್ರೊ. ಎಂ. ಕೆ. ವಾಮನ ಮೂರ್ತಿಯವರು ಹೇಳಿರುವಂತೆ ನಿಜಕ್ಕೂ ಇದು ಒಂದು ಅಪೂರ್ವ ಕಲಾಕುಸುಮವಾಗಿದೆ.












Click it and Unblock the Notifications