ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ದಟ್ಸ್‌ಕನ್ನಡ ಡಾಟ್ ಕಾಂನಲ್ಲಿ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ನಿಮ್ಮೆಲ್ಲರಿಗೂ ಜಪಾನ್ ದೇಶದಲ್ಲಿನ ಟೋಕಿಯೋ ಕನ್ನಡ ಬಳಗದ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು ಈ ಸಂದೇಶದ ಉದ್ದೇಶ.
***
ಟೋಕಿಯೋ ಕನ್ನಡ ಬಳಗ ಸ್ಥಾಪನೆಯಾಗಿದ್ದು 2002ನೇ ಇಸವಿಯಲ್ಲಿ. ಕೆಲವೇ ಕುಟುಂಬಗಳು ಒಂದೆಡೆ ಸೇರಿ ಹಬ್ಬಗಳನ್ನು ಆಚರಿಸುವ ಮಟ್ಟದಲ್ಲಿ ಪ್ರಾರಂಭವಾದ ಬಳಗ, ಕಳೆದ ಆರು ವರುಷಗಳಲ್ಲಿ 125 ಮಂದಿ ಸದಸ್ಯಬಲ ಪಡೆದುಕೊಂಡಿದೆ. ಪ್ರತೀ ವರುಷವೂ ನಮ್ಮ ಕನ್ನಡ ಬಳಗ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಟೋಕಿಯೋ ಹಾಗೂ ಹತ್ತಿರದ ಪ್ರದೇಶಗಳ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಸಕ್ರಿಯ ಪಾತ್ರವಹಿಸುತ್ತ ಬಂದಿದೆ.
ಕಳೆದ ಶನಿವಾರ, ಮೇ 10ರಂದು ಬಳಗದ ವತಿಯಿಂದ ಕನ್ನಡ ಬಳಗ ಸದಸ್ಯರ ಮಿಲನ ಕೂಟವೊಂದನ್ನು ಆಯೋಜಿಸಲಾಗಿತ್ತು. ಸುಮಾರು ಮೂವತ್ತು ಮಂದಿ ಕನ್ನಡಿಗರು ಟೋಕಿಯೋದ ಪ್ರಸಿದ್ಧ The Taj ಹೋಟೆಲಿನಲ್ಲಿ ಒಂದೆಡೆ ಸೇರಿ ಸಂಭ್ರಮಪಟ್ಟೆವು. ಟೋಕಿಯೋ ನಗರವಷ್ಟೇ ಅಲ್ಲದೇ ಸುಮಾರು ದೂರದ ಪ್ರದೇಶಗಳಿಂದಲೂ ಅನೇಕ ಸದಸ್ಯರು ಬಂದಿದ್ದು ಇಲ್ಲಿನ ಕನ್ನಡಿಗರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿತ್ತು. ಪರಸ್ಪರರ ಪರಿಚಯದ ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮ ಕೂಟದ ವಿಶೇಷ ಆಕರ್ಷಣೆಯಾಗಿತ್ತು.
ಭಾರತ, ಕರ್ನಾಟಕ ಹಾಗೂ ಜಪಾನ್ ದೇಶಗಳ ಸಂಸ್ಕೃತಿ, ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೋತ್ತರದಲ್ಲಿ ದೊಡ್ಡವರು ಹಾಗೂ ಚಿಕ್ಕ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರುಚಿಯಾದ ಭೋಜನವೂ ವ್ಯವಸ್ಥೆಯಾಗಿತ್ತು. ಇತರೆ ಕನ್ನಡಿಗರೊಂದಿಗೆ ಬೆರೆತು, ಬಾಯ್ತುಂಬಾ ಕನ್ನಡದಲ್ಲಿ ಮಾತನಾಡಿ ಕಾಲ ಕಳೆದಿದ್ದು ಅತ್ಯಂತ ಸಂತಸದ ಅನುಭವವಾಗಿತ್ತು.
ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವುದು ಬಳಗದ ಉದ್ದೇಶ. ಬರುವ ಸೆಪ್ಟೆಂಬರ್ ತಿಂಗಳಲ್ಲಿ ಗೌರಿ, ಗಣೇಶ ಹಬ್ಬ ಮತ್ತು ನವೆಂಬರ್ ತಿಂಗಳಲ್ಲಿ ರಾಜೋತ್ಸವವನ್ನು ಆಚರಿಸುವ ಯೋಜನೆಯಿದೆ. ಈ ಸಂದರ್ಭಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಬಳಗದ ಮಹದಾಸೆಯಾಗಿದೆ. ಟೋಕಿಯೋ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ, ಉತ್ಸಾಹದಿಂದ ಭಾಗವಹಿಸಬೇಕಾಗಿ ವಿನಂತಿ.
ಬಳಗದ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ದಯವಿಟ್ಟು ಕೆಳಗಿನ ಯಾಹೂ ಗ್ರೂಪ್ ಸದಸ್ಯರಾಗಬೇಕೆಂದು ವಿನಂತಿ. ಆ ಮೂಲಕ ಮುಂದಿನ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಳ್ಳಿ. ಈ ವಿಷಯವನ್ನು ನಿಮ್ಮ ಪರಿಚಯದ ಇತರೇ ಕನ್ನಡಿಗರಿಗೊಂದಿಗೆ ಹಂಚಿಕೊಳ್ಳಲು ಮರೆಯದಿರಿ.
http://groups.yahoo.com/group/TokyoKannadaBalaga/
To Subscribe, Send mail to: [email protected]
ವಿಶ್ವಾಸದಿಂದ,
ಗುರುಪ್ರಸಾದ್
ಟೋಕಿಯೋ ಕನ್ನಡ ಬಳಗದ ಪರವಾಗಿ












Click it and Unblock the Notifications