• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಡಿಲೇಡ್ ಕನ್ನಡಿಗರ ಮನತಣಿಸಿದ ರಸಸಂಜೆ

By Staff
|

ಆಗಸ್ಟ್ 25ರಂದು ಅಡಿಲೇಡ್‌ನಲ್ಲಿ ಕನ್ನಡಿಗರ ಸಡಗರವೋ ಸಡಗರ. ಸಣ್ಣವರು ದೊಡ್ಡವರೆನ್ನದೆ ಕನ್ನಡ ಡಿಂಡಿಮ ಬಾರಿಸಲು ಎಲ್ಲರಲ್ಲಿ ಪೈಪೋಟಿ.


Party time, Adelide Kannada Sanghaಸರಿ ಸುಮಾರು ಇನ್ನೂರೈವತ್ತು ಜನ, ಸಡಗರದಿಂದ ಓಡಾಡುವ ಚಿಣ್ಣರು, ಜುಬ್ಬಾ ಪೈಜಾಮ, ಪೇಟ, ಟೋಪಿ, ರುಮಾಲು, ಬಣ್ಣ ಬಣ್ಣದ ಸೀರೆಗಳು ಧರಿಸಿ ಸಂಭ್ರಮಿಸುವ ಕನ್ನಡಿಗರು. ಅಡಿಲೈಡ್ ಕನ್ನಡ ಸಂಘದವತಿಯಿಂದ ಆಗಸ್ಟ್ 25ರಂದು ಆಚರಿಸಲ್ಪಟ್ಟ ರಸ ಸಂಜೆಯ ಒಂದು ವಿಹಂಗಮ ನೋಟವಿದು. ಆ ಜನಸಾಗರ ಆ ಪರಿ ಸಂಭ್ರಮಿಸುತ್ತಿರುವದನ್ನು ನೋಡಿದರೆ ನಾವೆಲ್ಲ ಕನ್ನಡ ನಾಡಿನಲ್ಲಿಲ್ಲ ಎಂದೆನೂ ಅನಿಸಲಿಲ್ಲ. ಒಟ್ಟಾರೆ ಒಂದು ಮಿನಿ ಕರ್ನಾಟಕವೇ ನೆರೆದಂತಿತ್ತು ಆ ದಿನ.

ಕಳೆದ ವರ್ಷ ಈ ಸಮಯದಲ್ಲಿ ನಮ್ಮ ಕನ್ನಡ ಬಳಗ ಅಸ್ತಿತ್ವದಲ್ಲೇ ಇರಲಿಲ್ಲ, ಇದ್ದುದರಲ್ಲೇ ಅಡಿಲೇಡ್‌ನ ಹಿರಿಯ ಸದಸ್ಯರೆಲ್ಲ ಒಂದೆಡೆ ಸೇರಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ 19 ಜೂನ್ 2006ರಂದು, ಕನ್ನಡದ ಪ್ರಸಿದ್ಧ ಗಾಯಕಿ ಮಂಜುಳಾ ಗುರುರಾಜ್ ಇಲ್ಲಿಗೆ ಬಂದಾಗ ಹೊರಹೊಮ್ಮಿದ ಈ ಬಳಗ ಈವತ್ತಿಗೆ ಭಾರಿ ಬೆಳವಣಿಗೆ ಕಂಡಿದೆ. ಕನ್ನಡೋತ್ಸಾಹ ಇಮ್ಮಡಿಯಾಗಿದೆ. ಈ ಎಲ್ಲದಕ್ಕೆ ಕಾರಣ ಹಿರಿಯ ಕನ್ನಡಿಗರ ಮಾರ್ಗದರ್ಶನ ಹಾಗೂ ಕಿರಿಯರ ಏನೇ ಬಂದರೂ ಮುನ್ನುಗ್ಗುವ ಸ್ವಭಾವ.

ತಮ್ಮ ಸ್ವಾಗತ ಭಾಷಣದಲ್ಲಿ ಅಧ್ಯಕ್ಷ್ಶರಾದ ಡಾ. ಉಮೇಶ್‌ರವರು ಸಂಘಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿ ಧನ್ಯವಾದಗಳನ್ನರ್ಪಿಸಿದರು. ದಕ್ಷಿಣ ಆಸ್ಟ್ರೇಲಿಯಾ ಪ್ರಾಂತ್ಯದ ಪ್ರಿಮಿಯರ್‌ವತಿಯಿಂದ ಕನ್ನಡ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ ಮಲ್ಲಿಕಾ ಪ್ರಸಾದ್, ಡಾ. ಅನಂತ ರಾವ್, ಕ್ರಿಷ್ಣಪ್ರಸಾದ್, ಮತ್ತು ಬಸವರಾಜ್ ಶೀಲವಂತರ್ ಇವರುಗಳನ್ನು ಉಮೇಶ್‌ರವರು ಪ್ರಮಾಣ ಪತ್ರಗಳನ್ನು ಕೊಟ್ಟು ಸನ್ಮಾನಿಸಿದರು.

ಈ ರಸ ಸಂಜೆಯ ಆಯೋಜನೆ ಆದಾಗಿನಿಂದ ನಿರ್ವಾಹಕರಿಗೆ ಕಾಡುತ್ತಿದ್ದ ದೊಡ್ಡ ಪ್ರಶ್ನೆ ಎಂದರೆ ಪ್ರದರ್ಶನ ನೀಡಲು ಯಾರಾದರೂ ಮುಂದೆ ಬರುತ್ತಾರೋ ಇಲ್ಲವೋ ಎಂಬುದು. ಆದರೆ, ಕಡೆಗೆ ಆಗಿದ್ದು ಪ್ರದರ್ಶನಗಳ ನೂಕುನುಗ್ಗಲು!

ಜನಮನಗೆದ್ದ ಪುಟಾಣಿಗಳು : ಪುಟಾಣಿ ತುಳಸಿ ಹಾಡಿದ ಗಣೇಶ ವಂದನೆಯೊಂದಿಗೆ ಸಂಜೆ ಕಾರ್ಯಕ್ರಮ ಶುರುವಾಯಿತು. ನಂತರ, ಚಿಣ್ಣರಾದ ಮಾ. ವೈಭವ್, ಭುಮಿಕಾ, ಅನಿಕೆತ್ ಹಾಗೂ ಪುಟಾಣಿ ಖುಶಿ ಹಾಡುಗಳೊಂದಿಗೆ ಮನತಣಿಸಿದರು. ನಿರೀಕ್ಷಾ ಮತ್ತು ಅನಗಾ ನಡೆಸಿಕೊಟ್ಟ ‘ಭಾಳ ಒಳ್ಳೆಯೊವ್ರು ನಮ್ ಮಿಸ್ಸು’ ರೂಪಕ ಜನರನ್ನು ಆಕರ್ಶಿಸಿತು. ನಮ್ಮ ಅಣ್ಣಾವ್ರ ಹಾಡುಗಳಿಲ್ಲದೇ ಯಾವುದೇ ಕನ್ನಡ ಕಾರ್ಯಕ್ರಮ ಸಾಂಗವಾಗುವದೇ ಇಲ್ಲ, ಅಡಿಲೇಡೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಮಾ. ಮಣಿಸಾಗರ್ ಮತ್ತು ತಂಡ ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು’ ಹಾಡಿಗೆ ಹೆಜ್ಜೆ ಹಾಕಿ ನೆರೆದವರಲ್ಲಿ ರೋಮಾಂಚನ ಉಂಟುಮಾಡಿದರು. ಕನ್ನಡ ಜನಪದ ಗೀತೆಯೊಂದಕ್ಕೆ ರೂಪ ಮೋಹನ್ ಮತ್ತು ಸುಮಾ ಸುನಿಲ್ ಇವರ ತಾಳಕ್ಕೆ ತಕ್ಕಂತೆ ಪುಟಣಿಗಳಾದ ಅನುಜಾ, ಅನಗಾ, ತುಳಸಿ, ಸುಮೆಧಾ, ಭುಮಿಕಾ, ಸ್ರುಜಲಾ ಮತ್ತು ಗೌತಮಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದುದು ಜನ ಮನ ಗೆದ್ದಿತು.

ತರುವಾಯ ಮಾ. ಡರ್ರೆನ್ ಮತ್ತು ಮಾಲ್ಕಂರ ಗಿಟಾರ್ ವಾದನ ಹಾಗೂ ಹಾಗೂ ಮಾ. ಸುಮುಖ್ ನ ಗಾಯನ ನಡೆಯಿತು. ರಸ ಸಂಜೆಯ ಈ ಭಾಗದಲ್ಲಿ ಕೊನೆಯದಾಗಿ ಪ್ರದರ್ಶನಗೊಂಡಿದ್ದು ಮಾ. ಅರ್ಜುನ್, ಲಕ್ಷಯ್, ಮಾನಸ್, ರೊಹನ್, ಸೊನು ಮತ್ತು ಮಣಿ ಇವರ ಬಾಲಿವುಡ್ ಡಾನ್ಸ್ ಮಿಕ್ಸ್. ಈ ಎಲ್ಲ ಚಿಣ್ಣರ ಪ್ರದರ್ಶನಗಳನ್ನು ಸುಮ ತೊಟಗಿ ಇವರು ನಡೆಸಿ ಕೊಟ್ಟರು.

ಹಿಂದೆ ಬೀಳದ ಹಿರಿಯರು : ತಮ್ಮ ಮಕ್ಕಳೇ ಇಷ್ಚೊಂದು ಉತ್ಸಾಹದಿಂದ ಭಾಗವಹಿಸುವದನ್ನು ನೋಡಿದರೆ ಪಾಲಕರು ಸುಮ್ಮನಿದ್ದಾರೆಯೇ? ಹಚ್ಚೇವು ಕನ್ನಡದ ದೀಪ ಎಂದು ಕುಣಿದೋವ್ರು ಅಶ್ವಿನಿ, ಗೌರಿ, ವಿಜಯಾ, ಶೀಲಾ, ಮಮತಾ ಮತ್ತು ಅನೂಷಾ. ವಿನಯಾ ರೈ ಮತ್ತು ತಂಡದವರಿಂದ ‘ಕೋಲು ಕೋಲೆನ್ನ ಕೋಲೆ’ ಜಾನಪದ ನೃತ್ಯ ಹಾಗೂ ಮಲ್ಲಿಕಾ ಪ್ರಸಾದ ಇವರ ಗಾಯನ ನಡೆಯಿತು. ಮುಬಾರಕ್‌ರವರು ಮಾ. ಅದಿಲ್‌ನೊಂದಿಗೆ ಒಂದು ಚುಟುಕು ನಾಟಕ ಮಾಡಿ ಅನಿವಾಸಿ ಕನ್ನಡಿಗರಿಗೆ ಕನ್ನಡ ಸಂಸ್ಕೃತಿಯ ಮಹತ್ವ ಹಾಗೂ ಅವಶ್ಯಕತೆಯ ಮನವರಿಕೆ ಮಾಡಿಸಿಕೊಟ್ಟರು.

ನಂತರ ಎಲ್ಲರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿತು. ಹಳೆಯ ಜನಪ್ರಿಯ ಗೀತೆಗಳಾದ ‘ಕನಸಲೂ ನೀನೆ ಮನಸಲೂ ನೀನೆ’, ‘ಜೀವ ವೀಣೆ ನೀಡು ಮಿಡಿತದ ಸಂಗೀತ’ ಹಾಗೂ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’ ಹಾಡುಗಳು ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ದವು. ನಾನು ಮತ್ತು ಜೂಲಿ ಹಾಡಿದ ಕನ್ನಡ ಗೀತೆಗಳು ಜನರ ಮನರಂಜಿಸಿದವೆಂಬುದಕ್ಕೆ ನೆರೆದವರ ಹರ್ಷೋಲ್ಲಾಸದ ಚಪ್ಪಾಳೆಗಳೇ ಸಾಕ್ಷಿ. ವಿವೇಕ್ ಭಟ್‌ ‘ಬಾರೆ ಬಾರೆ ಅಂದದ ಚೆಲುವಿನ ತಾರೆ’ ಸೊಗಸಾಗಿ ಹಾಡಿ ರಂಜಿಸಿದರು. ಸುಧೀಂದ್ರ ಮತ್ತು ಪ್ರಸನ್ನ ಇವರ ನಗೆ ಹನಿಗಳು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದವು.

ಕಡೆಯಲ್ಲಿ ಮುರುಗೇಶ್ ‘ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ’ ಎಂದು ಸೊಗಸಾಗಿ ಹಾಡಿ ರಸ ಸಂಜೆಗೆ ತೆರೆ ಎಳೆದರು. ಶಶಿಕಾಂತ್ ವಂದನಾರ್ಪಣೆ ಮಾಡಿದರು. ಮುಂಬರುವ ದಿನಗಳಲ್ಲಿ ಚಲನಚಿತ್ರ ಗೀತೆಗಳಿಗಾಗಿಯೇ ಒಂದು ಕಾರ್ಯಕ್ರಮವನ್ನೇರ್ಪಡಿಸುವುದಾಗಿ ಉಮೇಶ್‌ರವರು ಹೇಳಿದ್ದು ಎಲ್ಲ ಪಾರ್ಟ್ಟೈಮ್ ಗಾಯಕರಿಗೆ ಸಾಕಷ್ಟು ಹುರುಪು ಮೂಡಿಸಿತು.

ರಸ ಸಂಜೆಯ ಆ ದಿನ ಒಂದು ವಿಶಿಷ್ಟ ರೀತಿಯ ರಸಪ್ರಶ್ನೆ ಕಾರ್ಯಕ್ರಮವೂ ಏರ್ಪಾಡಾಗಿತ್ತು. ಒಟ್ಟಾರೆ ಕರ್ನಾಟಕಕ್ಕೆ ಸಂಬಂಧಪಟ್ಟ 10 ಪ್ರಶ್ನೆಗಳನ್ನು ನೆರೆದ ಎಲ್ಲಾ ಸಭಿಕರಿಗೆ ಕೇಳಲಾಯಿತು. ಅತೀ ಹೆಚ್ಚು ಸರಿ ಉತ್ತರ ಕೊಟ್ಟವರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು. ಒಂದನೇ ಬಹುಮಾನ ಪಡೆದ ಮಾ. ಸುಮುಖ್ ಮತ್ತು ಎರಡನೇ ಬಹುಮಾನ ಗಳಿಸಿದ ಉಲ್ಲಾಸ್ ಅರಬಾವಿಗೆ ಟಿ.ಎನ್.ಸೀತಾರಾಂ ಅವರ ಜನಪ್ರಿಯ ಧಾರಾವಾಹಿ ‘ಮಾಯಾಮೃಗ’ ಡಿವಿಡಿ ವಿತರಿಸಲಾಯಿತು.

ನಿಮ್ಮ ಪ್ರತಿಕ್ರಿಯೆಗಳನ್ನು adelaide@kannada.com.au ವಿಳಾಸಕ್ಕೆ ರವಾನಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more