ಹತ್ತಿರದಲ್ಲಿದೆ 21ನೇ ಶತಮಾನದ ಸುದೀರ್ಘ ಸೂರ್ಯಗ್ರಹಣ: ಹಗಲಲ್ಲೇ ಆವರಿಸುವುದು ಸಂಪೂರ್ಣ ಕತ್ತಲು

ಮಟ ಮಟ ಮಧ್ಯಾಹ್ನವೇ ಇದ್ದಕ್ಕಿದ್ದಂತೆ ಕತ್ತಲು ಆವರಿಸಿದರೆ ಹೇಗಿರುವುದು?. ಬೆಚ್ಚಗಿನ ವಾತಾವರಣದ ತಾಪಮಾನ ದಿಢೀರ್‌ ಕುಸಿತ ಕಾಣುವುದು, ಬಾನಲ್ಲಿ ಸ್ವಚಂದವಾಗಿ ಹಾರುತ್ತಿರುವ ಹಕ್ಕಿಗಳು ತರಾತುರಿಯಲ್ಲಿ ಗೂಡು ಸೇರುವುದು, ಹಗಲು ಹೊತ್ತಿನಲ್ಲಿಯೇ ಭಾನು ಸಂಪೂರ್ಣ ಕತ್ತಲಾಗಿ ಆಗಸದಲ್ಲಿ ನಕ್ಷತ್ರಗಳ ಮಿನುಗು. ಇದು ಕೇವಲ ಕಲ್ಪನೆಯಲ್ಲ, ಇಂಥ ಸನ್ನಿವೇಶಕ್ಕೆ ಆಗಸ್ಟ್‌ನಲ್ಲಿ ಸಾಕ್ಷಿಯಾಗಲಿದೆ ಜಗತ್ತು. ಆಗಸ್ಟ್ ತಿಂಗಳಿನ ಒಂದು ದಿನ ಹಗಲಿನಲ್ಲಿಯೇ ಸಂಪೂರ್ಣವಾಗಿ ಕತ್ತಲು ಆವರಿಸಿಕೊಳ್ಳುವುದು. ಮಧ್ಯಾಹ್ನದ ಹೊತ್ತಿಗೆ ಸೂರ್ಯ ಕಣ್ಮರೆಯಾಗಿ ಬಿಡುವನು. ಹೌದು, ಇದೊಂದು ದೀರ್ಘಾವಧಿಯ ಸೂರ್ಯಗ್ರಹಣವಾಗಿರಲಿದ್ದು, ದಶಕಗಳಿಂದ ಇಂಥ ಖಗೋಳ ವಿದ್ಯಾಮಾನ ಘಟಿಸಿರಲಿಲ್ಲ. ಮಾತ್ರವಲ್ಲ ಮತ್ತೆ ಇಂಥ ಗ್ರಹಣ ಮತ್ತೆ ಗೋಚರಿಸಬೇಕಾದರೆ ಮುಂದಿನ 157 ವರ್ಷಗಳವರೆಗೆ ಕಾಯಬೇಕು.

ಜಿಬ್ರಾಲ್ಟರ್ ಜಲಸಂಧಿಯಿಂದ ಅರೇಬಿಯನ್ ಪರ್ಯಾಯ ದ್ವೀಪದವರೆಗೆ ವಿಸ್ತರಿಸಿರುವ ಕಿರಿದಾದ ಕಾರಿಡಾರ್‌ನಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆ ಮಾಚಿಸಿ ಬಿಡುತ್ತಾನೆ. ಈ ಮೂಲಕ ಮಧ್ಯಾಹ್ನದ ಹೊತ್ತಿಗೆಯೇ ಕತ್ತಲಾಗುವುದು. ಈ ಗ್ರಹಣವು ಆಗಸ್ಟ್ 2, 2027 ರಲ್ಲಿ ಗೋಚರಿಸಲಿದ್ದು, 21 ನೇ ಶತಮಾನದ ಅತಿ ಉದ್ದದ ಗ್ರಹಣ ಇದಾಗಿರಲಿದೆ ಎಂದು ನಾಸಾ ದೃಢಪಡಿಸಿದೆ.

Longest Solar Eclipse

ಏಜೆನ್ಸಿಯ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಪ್ರಕಾರ ಈ ಗ್ರಹಣ ಗರಿಷ್ಠ ಒಟ್ಟು 6 ನಿಮಿಷ ಮತ್ತು 23 ಸೆಕೆಂಡುಗಳರೆಗೆ ಗೋಚರಿಸಲಿದೆ. ಈ ಶತಮಾನದಲ್ಲಿ ಯಾವುದೇ ಸಂಪೂರ್ಣ ಸೂರ್ಯಗ್ರಹಣವು ಆ ಮಟ್ಟವನ್ನು ತಲುಪಿಲ್ಲ. ಇಷ್ಟು ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣಕ್ಕೆ ಕೊನೆಯ ಬಾರಿ ಸಾಕ್ಷಿಯಾಗಿದ್ದು 1991.

ಜೂನ್‌ ಆರಂಭದಲ್ಲಿಯೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ : ಹಣಕ್ಕೆ ಕೊರತೆ ಇರುವುದಿಲ್ಲ, ಪ್ರತಿ ಹೆಜ್ಜೆಗೂ ಸಿಗುವುದು ಗೆಲುವು
ಜೂನ್‌ ಆರಂಭದಲ್ಲಿಯೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ : ಹಣಕ್ಕೆ ಕೊರತೆ ಇರುವುದಿಲ್ಲ, ಪ್ರತಿ ಹೆಜ್ಜೆಗೂ ಸಿಗುವುದು ಗೆಲುವು

ಗ್ರಹಣ ಇಷ್ಟು ದೀರ್ಘವಾಗಿರಲು ಕಾರಣ:

ಈ ಹೊತ್ತಿನಲ್ಲಿ ಚಂದ್ರನು ಭೂಮಿಗೆ ಅತ್ಯಂತ ಹತ್ತಿರದ ಬಿಂದುವಿನಲ್ಲಿ ಇರುತ್ತಾನೆ. ಹಾಗಾಗಿ ಆಕಾಶದಲ್ಲಿ ಎಂದಿಗಿಂತಲೂ ದೊಡ್ಡದಾಗಿ ಕಾಣಿಸಿಕೊಂಡು ಸೂರ್ಯನನ್ನು ಪೂರ್ಣವಾಗಿ ಮುಚ್ಚುತ್ತಾನೆ. ಭೂಮಿಯು ಸೂರ್ಯನಿಂದ ತುಸು ದೂರದಲ್ಲಿ ಇರುವುದರಿಂದ ಸೂರ್ಯನ ಗಾತ್ರವು ಕಿರಿದಾಗಿ ಗೋಚರಿಸುತ್ತದೆ. ಈ ಬೆಳವಣಿಗೆ ದೀರ್ಘಾವಧಿಯವರೆಗೆ ಕತ್ತಲೆ ಆವರಿಸುವಂತೆ ಮಾಡುತ್ತದೆ.

ಎಲ್ಲೆಲ್ಲಿ ಎಷ್ಟುಹೊತ್ತು ಗ್ರಹಣ ಗೋಚರ:

ಆಗಸ್ಟ್ 2, 2027 ರಂದು ಉತ್ತರ ಆಫ್ರಿಕಾದಾದ್ಯಂತ ಈ ಸೂರ್ಯಗ್ರಹಣ ಮಾರ್ಗ ಸಾಗುತ್ತದೆ. ಉತ್ತರ ಆಫ್ರಿಕಾ, ದಕ್ಷಿಣ ಸ್ಪೇನ್ , ಉತ್ತರ ಮೊರಾಕೊ, ಅಲ್ಜೀರಿಯಾ, ಟುನೀಶಿಯಾ, ಲಿಬಿಯಾ ಮತ್ತು ಈಜಿಪ್ಟ್ ಮೂಲಕ ಹಾದು ಸೌದಿ ಅರೇಬಿಯಾ ಮತ್ತು ಯೆಮೆನ್‌ಗೆ ಸಾಗುತ್ತದೆ. ಪಶ್ಚಿಮದಿಂದ ಪೂರ್ವಕ್ಕೆ ಸಾಗುತ್ತಿದ್ದಂತೆ ಗ್ರಹಣದ ಅವಧಿ ಹೆಚ್ಚಾಗುತ್ತವೆ. ಸ್ಪೇನ್‌ನ ದಕ್ಷಿಣ ತುದಿಯಲ್ಲಿರುವ ತಾರಿಫಾದಲ್ಲಿ 4 ನಿಮಿಷ 39 ಸೆಕೆಂಡುಗಳವರೆಗೆ ಗ್ರಹಣ ಗೋಚರಿಸಿದರೆ ಜಲಸಂಧಿಯ ಆಚೆಗಿರುವ ಟ್ಯಾಂಜಿಯರ್ 4 ನಿಮಿಷ 50 ಸೆಕೆಂಡುಗಳವರೆಗೆ ಕತ್ತಲು ಇರುವುದು. ಲಿಬಿಯಾದ ಬೆಂಗಾಜಿಯಿಂದ , ಒಟ್ಟು 6 ನಿಮಿಷ 7 ಸೆಕೆಂಡುಗಳವರೆಗಿದ್ದರೆ ಈಜಿಪ್ಟ್‌ನ ಲಕ್ಸರ್ 6 ನಿಮಿಷ 19 ಸೆಕೆಂಡುಗಳವರೆಗೆ ಗ್ರಹಣಕ್ಕೆ ಸಾಕ್ಷಿಯಾಗುತ್ತದೆ. ಕೆಂಪು ಸಮುದ್ರದ ಕರಾವಳಿಯಲ್ಲಿ, ಈ ಅವಧಿಯು 6 ನಿಮಿಷ 20 ಸೆಕೆಂಡುಗಳನ್ನು ತಲುಪುತ್ತದೆ.

ಗ್ರಹಣ ಸಂದರ್ಭದಲ್ಲಿ ಹವಾಮಾನದಲ್ಲಿಯೂ ಬದಲಾವಣೆಯಾಗುತ್ತದೆ. ಗ್ರಹಣದ ಸಮಯದಲ್ಲಿ ಆಕಾಶವು ಸಂಪೂರ್ಣ ಕಪ್ಪಾಗುವುದು ಮಾತ್ರವಲ್ಲ ಹಗಲಿನಲ್ಲೇ ನಕ್ಷತ್ರಗಳು ಗೋಚರಿಸುತ್ತದೆ. ತಾಪಮಾನದಲ್ಲಿ ದಿಢೀರ್ ಕುಸಿತ ಉಂಟಾಗುವಂತಹ ಅನುಭವವಾಗುವುದು.ಮಧ್ಯಾಹ್ನದ ತಾಪಮಾನವನ್ನು 43 ಡಿಗ್ರಿ ಸೆಲ್ಸಿಯಸ್‌ಗೆ ತಳ್ಳುವ ಒಣ ಮರುಭೂಮಿ ಗಾಳಿಯು ಸೂರ್ಯನ ಬೆಳಕು ಕಡಿಮೆಯಾದಾಗ ವೇಗವಾಗಿ ಪ್ರತಿಕ್ರಿಯಿಸುತ್ತದೆ. ಅಂದರೆ ಗ್ರಹಣದ ವೇಳೆಯಲ್ಲಿ ತಾಪಮಾನವು ದಿಢೀರ್‌ ಕುಸಿತಕ್ಕೆ ಕಾರಣವಾಗುವುದು ಎನ್ನುತ್ತಾರೆ ವಿಜ್ಞಾನಿಗಳು.

Full Moon May 2026: ಈ ರಾಶಿಯವರ ಹಣಕಾಸಿನ ಸ್ಥಿತಿ ಮೇಲೆ ಬ್ಲೂ ಮೂನ್ ಪರಿಣಾಮ,‌ ನಿಮ್ಮ ಮೇಲೆ ಹೇಗಿರಲಿದೆ ನೋಡಿ ಪ್ರಭಾವ
Full Moon May 2026: ಈ ರಾಶಿಯವರ ಹಣಕಾಸಿನ ಸ್ಥಿತಿ ಮೇಲೆ ಬ್ಲೂ ಮೂನ್ ಪರಿಣಾಮ,‌ ನಿಮ್ಮ ಮೇಲೆ ಹೇಗಿರಲಿದೆ ನೋಡಿ ಪ್ರಭಾವ

ಹೆಚ್ಚಿನ ಸ್ಥಳಗಳಲ್ಲಿ ಗ್ರಹಣವು ಮಧ್ಯಾಹ್ನದ ಹೊತ್ತಿಗೆಯೇ ಗೋಚರಿಸಲಿದೆ. ಲಕ್ಸಾರ್‌ನಲ್ಲಿ, ಮಧ್ಯಾಹ್ನ 1:02 ಕ್ಕೆ ಅಂದರೆ ಮಟ ಮಟ ಮಧ್ಯಾಹ್ನದ ವೇಳೆಗೆ ಪೂರ್ಣ ಗ್ರಹಣ ಸಂಭವಿಸುತ್ತದೆ. ಜೆಡ್ಡಾದಲ್ಲಿ, ಮಧ್ಯಾಹ್ನ 1:22 ಕ್ಕೆ ಗ್ರಹಣ ಪ್ರಾರಂಭವಾಗುತ್ತದೆ. ತಾರಿಫಾದಲ್ಲಿ, ಬೆಳಿಗ್ಗೆ 10:45 ಕ್ಕೆ ಸೂರ್ಯನನ್ನು ಚಂದ್ರ ಆವರಿಸಿ ಬಿಡುತ್ತಾನೆ.

ಕೇಂದ್ರ ಬ್ಯಾಂಡ್‌ನ ಹೊರಗೆ, ಆಫ್ರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯದ ಹೆಚ್ಚಿನ ಭಾಗಗಳಲ್ಲಿ ಆಳವಾದ ಭಾಗಶಃ ಗ್ರಹಣವಿರುತ್ತದೆ. ಲಿಸ್ಬನ್‌ನಲ್ಲಿ ಸೌರ ಡಿಸ್ಕ್‌ನ ಶೇಕಡಾ 93 ರಷ್ಟು ಭಾಗವು ಅಸ್ಪಷ್ಟವಾಗಿರುತ್ತದೆ. ಮ್ಯಾಡ್ರಿಡ್‌ನಲ್ಲಿ ಶೇಕಡಾ 86 ರಷ್ಟು, ಪ್ಯಾರಿಸ್‌ನಲ್ಲಿ ಶೇಕಡಾ 52 ರಷ್ಟು ಭಾಗವು ಅಸ್ಪಷ್ಟವಾಗಿರುತ್ತದೆ. ಲಂಡನ್‌ನಲ್ಲಿ ಶೇಕಡಾ 42 ರಷ್ಟು ಮತ್ತು ಬರ್ಲಿನ್‌ನಲ್ಲಿ ಶೇಕಡಾ 34 ರಷ್ಟು ದಾಖಲಾಗುತ್ತದೆ. ದಕ್ಷಿಣದಲ್ಲಿರುವ ಕೈರೋದಲ್ಲಿ ಶೇಕಡಾ 95 ರಷ್ಟು ಕವರೇಜ್ ಇರುತ್ತದೆ. ಆದರೆ ಅಲ್ಜಿಯರ್ಸ್ ಮತ್ತು ಟ್ರಿಪೋಲಿಯಲ್ಲಿ ಭಾಗಶಃ ಹಂತವು ಎರಡು ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸುತ್ತದೆ.

ಭಾರತದಲ್ಲಿ ಗೋಚರಿಸುವುದೇ ಸಂಪೂರ್ಣ ಸೂರ್ಯ ಗ್ರಹಣ:

2027ರ ಸಂಪೂರ್ಣ ಸೂರ್ಯಗ್ರಹಣ ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಇದು ಶತಮಾನದ ಅತ್ಯಂತ ದೀರ್ಘಾವಧಿಯ ಗ್ರಹಣವಾಗಿದ್ದರೂ, ಭಾರತದಲ್ಲಿ ಇದು ಕೇವಲ ಭಾಗಶಃ ಸೂರ್ಯಗ್ರಹಣವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ. ಭಾರತೀಯ ಕಾಲಮಾನ ಮಧ್ಯಾಹ್ನ ಸುಮಾರು 3:34 ಕ್ಕೆ ಭಾಗಶಃ ಗ್ರಹಣ ಆರಂಭವಾಗುತ್ತದೆ. ಭಾರತದ ಪಶ್ಚಿಮ ಮತ್ತು ವಾಯುವ್ಯ ಭಾಗಗಳಾದ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಸೂರ್ಯನ ಒಂದು ಸಣ್ಣ ಭಾಗ ಮಾತ್ರ ಚಂದ್ರನಿಂದ ಆವೃತವಾಗಿ ಕಾಣಿಸುತ್ತದೆ. ದೇಶದ ಇತರೆ ಭಾಗಗಳಲ್ಲಿ ಇದನ್ನು ವೀಕ್ಷಿಸುವ ಅವಕಾಶ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದೂ ಹೇಳಬಹುದು.

ವೀಕ್ಷಕರ ಕಣ್ಣಿಗೆ ಹೇಗೆ ಕಾಣಿಸುತ್ತದೆ ?:

ಖಗೋಳದ ಈ ಅದ್ಭುತ ವಿದ್ಯಮಾನವು ಅತ್ಯಂತ ನಿಖರವಾದ ಹಂತಗಳಲ್ಲಿ ಕಾಣಿಸುತ್ತದೆ. ಪ್ರತಿ ಹಂತವೂ ತನ್ನದೇ ಆದ ವಿಶಿಷ್ಟ ದೃಶ್ಯಗಳನ್ನು ಹೊಂದಿರುತ್ತದೆ.

ಬೈಲಿಸ್ ಬೀಡ್ಸ್: ಚಂದ್ರನ ಅಂಚಿನಲ್ಲಿರುವ ಕಣಿವೆಗಳ ಮೂಲಕ ಸೂರ್ಯನ ಕಿರಣಗಳು ಹಾದುಬಂದಾಗ ಹೊಳೆಯುವ ಮುತ್ತುಗಳಂತೆ ಕಾಣಿಸುತ್ತವೆ.

ಡೈಮಂಡ್ ರಿಂಗ್: ಬೈಲಿಸ್ ಬೀಡ್ಸ್ ಕಣ್ಮರೆಯಾಗುತ್ತಿದ್ದಂತೆ, ಕೇವಲ ಒಂದು ಪ್ರಕಾಶಮಾನವಾದ ಬಿಂದು ಉಳಿದು ವಜ್ರದ ಉಂಗುರದಂತೆ ಕಂಗೊಳಿಸುತ್ತದೆ.

ಪೂರ್ಣ ಗ್ರಹಣ : ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಿದಾಗ ಸೂರ್ಯನ ಕರೋನಾ ಮುತ್ತಿನ ಬಣ್ಣದ ಪ್ರಭೆಯಾಗಿ ಗೋಚರಿಸುತ್ತದೆ.

ಗ್ರಹಣ ವೀಕ್ಷಿಸುವುದು ಹೇಗೆ ?:

ಸೂರ್ಯನು ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುವ ಅತ್ಯಲ್ಪ ಅವಧಿಯಲ್ಲಿ ಮಾತ್ರ ಬರಿಗಣ್ಣಿನಿಂದ ಗ್ರಹಣ ನೋಡಬಹುದು. ಗ್ರಹಣದ ಆರಂಭದಿಂದ ಅಂತ್ಯದವರೆಗಿನ ಎಲ್ಲಾ ಹಂತಗಳನ್ನು ವೀಕ್ಷಿಸಬೇಕಾದರೆ ಸೌರ ವೀಕ್ಷಣಾ ಕನ್ನಡಕಗಳನ್ನು ಧರಿಸಿರಬೇಕು. ಯಾಕೆಂದರೆ ಈ ಸಂದರ್ಭದಲ್ಲಿ ಸೂರ್ಯನಿಂದ ಹೊರ ಸೂಸುವ ಸಣ್ಣ ಕಿರಣ ಕೂಡಾ ಕಣ್ಣಿನ ರೆಟಿನಾವನ್ನು ಶಾಶ್ವತವಾಗಿ ಸುಟ್ಟುಹಾಕಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+