• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲವ್ಲಿ ಲಂಡನ್‌ನಲ್ಲಿ ಯುಗಾದಿ ಕಲರವ!

By Staff
|

ಕೃಷ್ಣೆ, ಕಾವೇರಿ ತುಂಗ ಭದ್ರೆಯರ ನಾಡಿಗೆ ಮಾ.19ರಂದು ಲಗ್ಗೆ ಹಾಕಿದ್ದ ಸರ್ವಜಿತ್‌ ಐದು ದಿವಸಗಳ ನಂತರ ಥೇಮ್ಸ್‌ ನದೀ ಕಿನಾರೆಗೆ ಬಂದ. ತನ್ನ ಹೆಸರಿಗೆ ತಕ್ಕಂತೆ ಇಲ್ಲಿಯ ಎಲ್ಲರ ಮನಸ್ಸನ್ನೂ ಗೆದ್ದ. ಸಂದರ್ಭ - ಯುರೋಪ್‌ ಕನ್ನಡ ಸಂಘದ ವತಿಯಿಂದ ಲಂಡನ್‌ ನಗರದಲ್ಲಿ, ಥೇಮ್ಸ್‌ ನದಿಯ ದಡದಲ್ಲಿ ಯುಗಾದಿ ಆಚರಣೆ.

Europe Kannada Sangha celebrated Ugadi in Londonದೀಪಿಕಾರವರಿಂದ ಕನ್ನಡದಲ್ಲೇ ಗಣೇಶನ ನೆನಪು ನಮನಗಳೊಂದಿಗೆ ಆರಂಭವಾದ ಯುಗಾದಿ ಕಾರ್ಯಕ್ರಮವನ್ನು ಡಾ. ನಂದಕುಮಾರ್‌ (ಭಾರತೀಯ ವಿದ್ಯಾ ಭವನ ಲಂಡನ್‌ ಶಾಖೆಯ ಮುಖ್ಯ ಕಾರ್ಯದರ್ಶಿ) ಮತ್ತು ಎಸ್‌.ಕೆ. ಶ್ರೀರಂಗರಾಜು (ಬ್ರಿಟಿಷ್‌ ಹೈಕಮಿಷನ್‌ ಇಮಿಗ್ರೇಷನ್‌ ಆಫೀಸರ್‌) ಅವರು ದೀಪ ಬೆಳಗಿಸಿ ಉದ್ಘಾಟಿಸಿದರು . ಹಾಗೆಯೇ ‘ಯುಗ ಯುಗಾದಿ ಕಳೆದರೂ’ ಆಚಂದ್ರಾರ್ಕ ಹಾಡಿನ ಹಿನ್ನೆಲೆಯಲ್ಲಿ ‘ಮರಳಿ ಬಂದಿರುವ’ ಯುಗಾದಿ ಸಮಾರಂಭಕ್ಕೆ ಶುಭ ಕೋರಿದರು. ಎಂಥ ಕನ್ನಡಿಗನನ್ನು ಪರವಶನನ್ನಾಗಿಸುವ ಆ ಮುಗ್ಧ, ಮಧುರ ಹಾಡು ತಮಗೆ 20 ವರ್ಷ ಹಿಂದೆ ಆಕಾಶವಾಣಿಯ ಉಗಾದಿ ಕಾರ್ಯಕ್ರಮದ ನೆನಪು ತಂದಿತೆಂದು ಸ್ಮರಿಸಿಕೊಂಡರು. ಎಲ್ಲರಿಗೂ ಬೇವು ಬೆಲ್ಲದ ವಿನಿಮಯವಾಯಿತು.

ನಾಡಗೀತೆಯ ನಂತರ ಕಾರ್ಯಕ್ರಮದ ರಂಗೇರಿಸುವಂತೆ ಪ್ರೇಮಲೋಕ, ಗೀತಾ ಇತ್ಯಾದಿ ಚಿತ್ರಗಳ ತೀವ್ರಗತಿಯ ಜನಪ್ರಿಯ ಗೀತೆಗಳಿಗೆ ನೃತ್ಯಗೈದವರು ಸರಿತಾ ಅರುಣ್‌, ಅರುಣ್‌ ಮತ್ತು ಕಲ್ಪನಾ. ಅವರ ಹಾಡು ಕೇಳುತ್ತಾ ಮೊದಲು ನಿಂತಲ್ಲೇ ಹೆಜ್ಜೆಯಾಡಿಸುತ್ತಿದ್ದ ಪ್ರೇಕ್ಷಕರರು ಕೊನೆಕೊನೆಗೆ ಸಂಕೋಚ ಕಿತ್ತೊಗೆದು ಕುಣಿದಾಡಿದರು.

ಕುಣಿದು ಸುಸ್ತಾದ ಪ್ರೇಕ್ಷಕರಿಗೆ ಹೊಟ್ಟೆ ಬಿರಿಯುವಂತೆ ನಗುವ ಶಿಕ್ಷೆ ಕಾದಿತ್ತು. ಆ ಶಿಕ್ಷೆ ವಿಧಿಸಿದವರು, ಬಭ್ರುವಾಹನ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ..’ ಸಮರ ಗೀತೆಯ ದೃಶ್ಯವನ್ನು ಅಣಕವಾಗಿ ಪ್ರಸ್ತುತ ಪಡಿಸಿದ ಸುಹೃತ, ಕುಮಾರ್‌ ಮತ್ತು ಹರೀಶ್‌.

ಯುಗಾದಿಯು ನಿಜ ಅರ್ಥದಲ್ಲಿ ದೇಸಿ ಹಬ್ಬ, ಜನಪದದ ಹಬ್ಬ; ಅದಕ್ಕೆ ಪೂರಕವಾಗಿ ಶರೀಫಜ್ಜನವರ ಜಗತ್ಪ್ರಸಿದ್ಧ ಜಾನಪದ ಗೀತೆ‘ಕೋಡಗನ ಕೋಳಿ ನುಂಗಿತ್ತಾ’ ಹಾಡಿ ಸಭಾಸದರ ಮನದುಂಬಿದವರು ರವಿ ಮತ್ತು ಸುಹೃತ. ಇಷ್ಟು ಹೊತ್ತಿಗೆಲ್ಲಾ ಸಭಾಂಗಣವಿಡೀ ಕನ್ನಡದ ಕಂಪೇ ತುಂಬಿಕೊಂಡು ಉಲ್ಲಾಸಭರಿತ ಭಾವನೆಗಳ ಮಾಯಾಲೋಕವೇ ಸೃಷ್ಟಿಯಾಗಿತ್ತು.

ಕುಮಾರಿ ರಕ್ಷಾ ಅವರು ಅದಕ್ಕೆ ಇನ್ನಷ್ಟು ಐಂದ್ರಜಾಲಿಕ ಛೂಮಂತರ್‌ ಸ್ಪರ್ಶ ನೀಡಿದರು. ಆ ಪುಟಾಣಿ ಹುಡುಗಿಯ ಮಾಯಾಲೋಕದಲ್ಲಿ ಮಂತ್ರಮುಗ್ಧರಾಗಿದ್ದ ಪ್ರೇಕ್ಷಕರನ್ನು ಪೂರ್ಣವಾಗಿ ವಶೀಕರಿಸಿ ಯಕ್ಷಲೋಕಕ್ಕೊಯ್ದದ್ದು ಗಂಡುಗಲಿಗಳ ಗಂಡುಕಲೆ ಯಕ್ಷಗಾನ. ಕುಂಟಿಕಾನಮಟ್ಟ ಕುಮಾರ್‌ ಅವರ ನೇತೃತ್ವದಲ್ಲಿ ಪ್ರದರ್ಶಿತಗೊಂಡ ಯಕ್ಷಗಾನದ ಭರ್ಜರಿ ಪ್ರಸಂಗವನ್ನು ಅನುಭವಿಸಿ ಬೆರಗಾದ ಪ್ರೇಕ್ಷಕರು ‘ಮತ್ತೊಮ್ಮೆ, ಮತ್ತೊಮ್ಮೆ’ ಎಂದು ಕೂಗುತ್ತಿದ್ದುದು ಸಂಘಟಕರಿಗೆ ತಮ್ಮ ಪ್ರಯತ್ನ ಸಫಲವಾಯಿತು ಎನ್ನುವ ಧನ್ಯತೆ ನೀಡಿತು.

ಇದುವರೆಗೂ ನಿರೂಪಕರಾಗಿ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿದ್ದ ಸರಿತಾ ಮತ್ತು ರವಿಯವರಿಗೆ ಇದು ಸಾರ್ಥಕ ಇದು ಸಾರ್ಥಕ ಎನಿಸಿರಬೇಕು.

ಚಿತ್ರಗೀತೆಗಳಿಲ್ಲದ ಕನ್ನಡ ಕಾರ್ಯಕ್ರಮವುಂಟೆ? ಬಸಿದಷ್ಟೂ ಬರಿದಾಗದ ಮಾಧುರ್ಯವನ್ನು ಚಿತ್ರರಂಗ ಕನ್ನಡಕ್ಕೆ ನೀಡಿದೆ. ವಿಜೇಂದ್ರ ಮತ್ತು ಅವರ ಶ್ರೀಮತಿಯವರು ‘ಜೀವ ವೀಣೆ’ ಮುಂತಾದ ಇಂಪಾದ ಹಳೆಯ ಮತ್ತು ಜನಪ್ರಿಯ ಹೊಸ ಹಾಡುಗಳನ್ನು ಹಾಡಿ ಜನರನ್ನು ರಂಗದೆದುರು ಮತ್ತೊಮ್ಮೆ ಕುಣಿಯುವಂತೆ ಮಾಡಿದರು.

ಗುಂಪಿನಲ್ಲಿದ್ದಾಗ ‘ಮಸ್ತ್‌ ಮಸ್ತ್‌ ಹುಡುಗಿ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಹಾಡುಗಳಿಗೆ ಕುಣಿಯದೆ ಇರಲಾಗುತ್ಯೆ?‘ಕುಲದಲ್ಲಿ ಕೀಳ್ಯಾವುದೋ’ ಹಾಡಿನೊಂದಿಗೆ ಮುಗಿಸಹೊರಟವರನ್ನು ಪ್ರೇಕ್ಷಕರೇ ತಡೆದು ಹೊಸ ಸಂಚಲನೆ ಉಂಟುಮಾಡಿರುವ ‘ಮುಂಗಾರು ಮಳೆ’ಯ ಹೃದಯಸ್ಪರ್ಶಿ ‘ಅನಿಸುತಿದೆ ಯಾಕೋ ಇಂದು’ ಹಾಡನ್ನು ಹಾಡಿಸಿದರು. ಯಾರಿಗೆ ಯಾವ ರೀತಿಯ ಕೋಮಲ ಅನಿಸಿಕೆಗಳಿದ್ದವೋ ಯಾರು ಬಲ್ಲರು?

ಕಾರ್ಯಕ್ರಮ ಮುಗಿದು ಉಲ್ಲಾಸ ತುಂಬಿದ್ದರೂ ಹೊಟ್ಟೆ ತಾಳ ಹಾಕುತ್ತಿತ್ತಲ್ಲ? ಮುಂದಿನದು ಆ ದಿನದ ಎರಡನೆ ಅಧ್ಯಾಯ. ಸಹಕನ್ನಡಿಗರೊಂದಿಗೆ ಕುಳಿತು ಆತ್ಮೀಯವಾಗಿ ಹರಟುತ್ತಾ ಶುದ್ಧ ಕರ್ನಾಟಕ ಶೈಲಿಯ ಮೃಷ್ಟಾನ್ನ ಭೋಜನವನ್ನು ಎಲ್ಲರೂ ಉಂಡರು; ಎಂದಿಗೂ ಮರೆಯಲಾಗದ ಊಟ ಅದು. ಊಟದ ನಂತರ ಒಬ್ಬೊಬ್ಬರಾಗಿ ಬೀಳ್ಕೊಟ್ಟು ಹೊರಡಲಾರಂಭಿಸಿದ ಕನ್ನಡಿಗರಿಗೆ ಅದೊಂದು ಬೇವು-ಬೆಲ್ಲ ಬೆರೆಸಿದ ಕ್ಷಣ. ಕೂಡುವಿಕೆಯ ಸುಖದ ಜೊತೆ, ವಿದಾಯದ ನೋವು ಕೂಡಿದ್ದು ಇನ್ನೊಮ್ಮೆ ಇಂಥಾ ಕಾರ್ಯಕ್ರಮ ಆದಷ್ಟು ಬೇಗ ಬರಲಿ ಎಂದು ಹಾರೈಸುವುದೇ ಎಲ್ಲರ ಸ್ಥಿತಿಯಾಗಿತ್ತು.

ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಎಲ್ಲ ಸಂಘಟಕರಿಗೂ, ಮುಖ್ಯವಾಗಿ ಯುರೋಪ್‌ ಕನ್ನಡ ಸಂಘದ ರೂವಾರಿಗಳಾದ ಜಗದೀಶ್‌ ಮತ್ತು ಗಿರೀಶ್‌ ಅವರಿಗೆ ಶುಭ ಹಾರೈಸುತ್ತಾ, ಎಲ್ಲರನ್ನೂ ಸಂತೋಷಪಡಿಸಿದ, ಬರಲಿರುವ ವರ್ಷದ ಸಿಹಿಕಹಿ ಕ್ಷಣಗಳಿಗೆ ತಮ್ಮನ್ನು ಮಾನಸಿಕವಾಗಿ ಬಲಪಡಿಸಿದ ಸರ್ವಜಿತನನ್ನು ಎದೆತುಂಬಿಕೊಳ್ಳುತ್ತಾ ಎಲ್ಲರೂ ನಿರ್ಗಮಿಸುವಲ್ಲಿಗೆ ಯೂರೋಪ್‌ ಕನ್ನಡ ಸಮುದಾಯದ ಯಶಸ್ವಿ ಸಮಾರಂಭವೊಂದು ಕೊನೆಗೊಂಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X