ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್‌ಟನ್‌ನಲ್ಲಿ ಸುಗ್ಗಿಯ, ಹುಗ್ಗಿಯ ಹಿಗ್ಗಿನ ಬುಗ್ಗೆ..

By Staff
|
Google Oneindia Kannada News


ವರ್ಷದ ಆದಿಯಲ್ಲಿ ಬರುವ ಹಬ್ಬ ಸಂಕ್ರಾಂತಿ. ಕಾವೇರಿಯ ಹೊಸ ಆಡಳಿಯ ಸಮಿತಿಯೂ ಹೊಸದು. ಹೇಗಾಯಿತು ಈ ಸಲದ ಸುಗ್ಗಿ?

  • ತಾರಾ
Memorable Sankranthi event at Kaveri, Washingtonವಾಷಿಂಗ್‌ಟನ್‌ ಡಿಸಿ : ಜನವರಿ 20ರ ಶನಿವಾರದ ಸಂಜೆ ಸ್ಥಳೀಯ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಹಬ್ಬ ವು ಹೊಸ ವರ್ಷದ ಹುರುಪನ್ನು, ಭಾರತೀಯ ಸಂಸ್ಕೃತಿಯ ಮೆರುಗನ್ನು ಮತ್ತೆ ನೆನಪಿಸುವಲ್ಲಿ, ಪಸರಿಸುವಲ್ಲಿ , ತನ್ಮಯಗೊಳಿಸುವಲ್ಲಿ ಯಶಸ್ವಿಯಾಯಿತು.

ಕಾವೇರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ರೆಡ್ಡಿಯವರು ತಯಾರಿಸಿದ ಎಳ್ಳು-ಬೆಲ್ಲ ಮೆಲ್ಲುವುದರೊಂದಿಗೆ ಹಬ್ಬದ ಸಡಗರ ಆರಂಭವಾದದ್ದು ಔಚಿತ್ಯಪೂರ್ಣವಾಗಿತ್ತು.

ಸಂಕ್ರಾಂತಿಗಾಗಿಯೇ ನಿರ್ಮಿಸಲಾಗಿದ್ದ ಕಲಾವಿದ ಹರಿದಾಸ್‌ ಅವರ ಕೈಚಳಕದ ವೇದಿಕೆಯಲ್ಲಿ ಕಾರ್ಯಕ್ರಮಗಳು, ಹೊರಹೊಮ್ಮಲು ಸಜ್ಜಾಗಿತ್ತು. ಉಪಾಧ್ಯಕ್ಷ ಶಿವುಭಟ್‌ ಅವರ ಮುನ್ನಾ ಮಾತುಗಳೊಂದಿಗೆ ಧ್ವನಿವರ್ಧಕವು ಲೇಖಕಿ, ಸಂಘಟಕಿ ಶಶಿಕಲಾ ಚಂದ್ರಶೇಖರ್‌ ಅವರ ಕೈ-ಬಾಯಿಗೆ ಬರುತ್ತಿದ್ದಂತೆಯೇ ಅಂದಿನ ಸಂಭ್ರಮಪೂರ್ಣ ಕಾರ್ಯಕ್ರಮಗಳ ಸುರುಳಿ ಬಿಚ್ಚಿಕೊಂಡಿತು.

ಮೊದಲ ಕಾರ್ಯಕ್ರಮ ಶಾಂತಿ ತಂತ್ರಿ ನಿರ್ದೇಶನದ ಮಕ್ಕಳ ಯಕ್ಷಗಾನ ನ್ಯತ್ಯ ‘ದಶಾವತಾರ’’ ಬಹಳ ಸುಂದರವಾಗಿ ಮೂಡಿ ಬಂತು. ಮಕ್ಕಳ ನಗುಮುಖದಲ್ಲಿ ತುಂಬಿದ್ದ ಲವಲವಿಕೆ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಶ್ರೀಮತಿ ತಂತ್ರಿ ಅವರು ಮೇರಿಲ್ಯಾಂಡ್‌ ರಾಜ್ಯದಲ್ಲಿ ಕನ್ನಡ ಶಾಲೆಯನ್ನು ಆರಂಭಿಸಿದ್ದಾರೆ. ಇವರಿಗೆ ಈ ನಿಟ್ಟಿನಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

ಮೇರಿಲ್ಯಾಂಡ್‌ ಯುನಿವರ್ಸಿಟಿಯ ಶೀನಾ ಪಟೇಲ್‌ ಹಾಗೂ ಸಂಗಡಿಗರು ನಡೆಸಿ ಕೊಟ್ಟ ‘ಫ್ಯೂಶನ್‌’’ ನ್ಯತ್ಯ ಕಾರ್ಯಕ್ರಮ ಜನಸಮೂಹದಿಂದ ಅಪಾರ ಮೆಚ್ಚುಗೆ ಪಡೆಯಿತು. ಕಾವೇರಿಯ ಯುವಸದಸ್ಯರು ಯಾರಿಂದಲೂ ಕರೆಸಿಕೊಳ್ಳದೇ ತಾವೇ ಬಂದು ಕಾರ್ಯಕ್ರಮ ನೋಡಿದ್ದು ಒಂದು ವಿಶೇಷ.

ಅಮೆರಿಕದಲ್ಲಿ ಉಯಿಲಿನ (ವಿಲ್‌) ಮಹತ್ವದ ಬಗೆಗೆ ತಿಳಿಸಿಕೊಟ್ಟವರು ಕನ್ನಡತಿ ತೇಜುರಾವ್‌. ಉಯಿಲಿನ ಅವಶ್ಯಕತೆ, ಮಹತ್ವ ಮತ್ತು ಅದರ ದೂರಗಾಮಿ ಪ್ರಯೋಜನಗಳನ್ನು ಅವರು ವಿವರಿಸಿದ್ದು ಕಾವೇರಿ ಅನೇಕ ಕನ್ನಡಿಗರ ಕಣ್ಣು ತೆರೆಸಿತು. ಈ ಬಗ್ಗೆ ಯಾರಿಗಾದರೂ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ದಯವಿಟ್ಟು ಕಾವೇರಿ ಕಾರ್ಯಕಾರಿ ಸಮಿತಿಯನ್ನು ಸಂಪರ್ಕಿಸಿ. ಕಾವೇರಿ ಅಧ್ಯಕ್ಷರ ಇ-ವಿಳಾಸ : [email protected]

ಶರ್ಮಿಳ ಮೂರ್ತಿಯವರು ನಡೆಸಿಕೊಟ್ಟ ಕಾವೇರಿಯ ಯುವ ಸದಸ್ಯೆಯರ ‘ ಸಂಪಿಗೆ ಮರದ ಹಸಿರಲೆ ನಡುವೆ ’ ನೃತ್ಯ ನೋಡುಗರ ಮೆಚ್ಚುಗೆ ಗಳಿಸಿತು. ಮುಂದೆ ಬಂದದ್ದು 2007ನೇ ಸಾಲಿನ ಕಾವೇರಿ ಕಾರ್ಯಕಾರಿ ಸಮಿತಿಯ ಕಿರುಪರಿಚಯ ಗೀಗೀ ಪದದ ಮೂಲಕ. ಇದಕ್ಕೆ ಸದಸ್ಯರ ತಯಾರಿ ಸ್ವಲ್ಪ ಕಡಿಮೆಯಾಯಿತು ಎನಿಸಿತು. ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟಿದ್ದು ಮೇಧಿನಿ ಭಟ್‌ ಹಿನ್ನೆಲೆ ಗಾಯನವೇ.

ಕಾವೇರಿಯ ಹೊಸ ಅಂತರ್ಜಾಲ ವಿನ್ಯಾಸದ ಅನಾವರಣ ಹಾಗೂ ವಿನ್ಯಾಸದ ಹೊಣೆ ಹೊತ್ತ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭು ಗೌಡ ಹಾಗೂ ಹರಿದಾಸ್‌ ಲಹರಿಯವರ ಪರಿಚಯ ಕಾವೇರಿ ಅಧ್ಯಕ್ಷ ಸ್ವಾಮಿ ನಾರಾಯಣ ಅವರಿಂದ. ಜೊತೆಗೆ ವಿಚಿತ್ರಾನ್ನದ ಜೋಷಿಯವರಿಂದ ಹಾಸ್ಯದ ಚಿತ್ರಾನ್ನವೂ ಇತ್ತು ಮಾರಾಯರೇ, ಅಲ್ಲ ನೋಡಲಿಕ್ಕೆ ಭಾಳ ಸೀರಿಯಸ್ಸು ಅನ್ನಿಸೋ ಜೋಷಿ ಹಾಸ್ಯಗಾರರು ಅಂತ ಅವತ್ತೇ ಗೊತ್ತಾಗಿದ್ದು ಬಿಡಿ!

ಕಟ್ಟ ಕಡೆಯ ಕಾರ್ಯಕ್ರಮವನ್ನು ನಮ್ಮ ಮುಂದಿಟ್ಟವರು ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದ ಶಶಿ ವಸಂತ ಹಾಗೂ ಸಂಗಡಿಗರ ಸಂಗೀತ, ನೃತ್ಯ, ಹಾಸ್ಯ, ಕೋಲಾಟದ ಸುಂದರ ಸಂಜೆ. ಶಶಿ ಅವರ ಕೋಗಿಲೆ ಕಂಠದಲ್ಲಿ ಕೇಳಿಬಂದ ಹಾಡುಗಳು ಸಭಿಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದವು. ಅವರು ಹಾಡಿದ ‘ನೀರ ಮೇಲೆ ಅಲೆಯ ಉಂಗುರ’, ಅಮೃತವರ್ಷಿಣಿ, ಬಯಲುದಾರಿ ಚಲನಚಿತ್ರಗಳ ಹಾಡುಗಳು ಇನ್ನೂ ನನ್ನ ಕಿವಿಯಲ್ಲೇ ಇವೆ. ಆಶಾ ಅಡಿಗ ಅವರ ದೀಪ ನ್ಯತ್ಯ ಈ ಸಂಜೆಯ ಹೈಲೈಟ್‌ ಎನ್ನಬಹುದು.

ದೀಪಗಳನ್ನು ಶಿರ, ಕರ, ಕಾಲ್ಗಳ ಮೇಲೆ ಇಟ್ಟುಕೊಂಡು ಬ್ಯಾಲನ್ಸ್‌ ಮಾಡಿಕೊಂಡು ನರ್ತಿಸಿದ ಆಶಾ ಪ್ರತಿ ಭಂಗಿ ಬದಲಾಯಿಸುವಾಗಲೂ ಸಭಿಕರಿಂದ ಕರತಾಡನವಾಗುತ್ತಿತ್ತು. ಹಾಗೆಯೇ ಉಸಿರು ಬಿಗಿಹಿಡಿದು ಕುಳಿತವರು ಹಲವರು. ನಿಮ್ಮೂರಿಗೆ ಈ ಗ್ರೂಪ್‌ ಬಂದರೆ ಮಿಸ್‌ ಮಾಡಿಕೊಳ್ಳಬೇಡಿ. ಕಡೆಯಲ್ಲಿ ಪ್ರೇಕ್ಷಕರನ್ನು ಕರೆದು ಅವರ ಕೈಲೆರಡು ಕೋಲು ಕೊಟ್ಟು ಕೋಲಾಟ ಆಡುವಂತೆ ವಸಂತ ಶಶಿ ಪ್ರೇರೇಪಿಸಿದರು. ಅದಂತೂ ಸೂಪರ್‌ ಹಿಟ್‌ ಆಯ್ತು ಬಿಡಿ.

ಬಿ. ವಿ. ಲಕ್ಷ್ಮೀನಾರಾಯಣ ಅವರ ವಂದನೆಯ ನಂತರ ಸೊಗಸಾದ ಟಿಪಿಕಲ್‌ ಸಂಕ್ರಾಂತಿ ಭೋಜನದ ನಂತರ ಕಳೆದ ವರ್ಷದ ಉಪಾಧ್ಯಕ್ಷೆ ಸುಚೇತ ಮನಗೋಳಿ ತಯಾರಿಸಿದ್ದ ‘ಪಾನ್‌’ ಸವಿದು ಹೊರಟಾಗ ರಾತ್ರಿ ಹತ್ತು ಗಂಟೆಯಾಗಿತ್ತು.

ಕಾವೇರಿ ಕನ್ನಡಿಗರು ಮತ್ತೆ ಭೇಟಿಯಾಗುವ ಅವಕಾಶ ಇನ್ನೇನು ಹತ್ತಿರವಾಗುತ್ತಿದೆ. ಮಾರ್ಚ್‌ 3ರಂದು ನಾಗಾಭರಣರ ‘ಕಲ್ಲರಳಿ ಹೂವಾಗಿ’ ತೆರೆಕಾಣುತ್ತಿದೆ. ವಿವರಗಳಿಗೆ ಭೇಟಿಕೊಡಿ. www.kaverionline.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X