ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣಭಾರತದ ಭಾಷೆಗಳ ಹೋಲಿಕೆ ಮತ್ತು ವ್ಯತ್ಯಾಸ

By Staff
|
Google Oneindia Kannada News


ದ್ರಾವಿಡ ಭಾಷೆಗಳು ಒಟ್ಟು 26. ಅವುಗಳಲ್ಲಿ ತಮಿಳು ಎಲ್ಲಕ್ಕಿಂತ ಹಳೆಯದು. ತಮಿಳಿನ ಸಾಹಿತ್ಯ ಪುರಾಣವು ಕ್ರಿ.ಪೂ.2ನೇ ಶತಮಾನದಿಂದ ಪ್ರಾರಂಭವಾಯಿತೆಂಬ ಅಂದಾಜಿದೆ. ಕನ್ನಡದ ಸಾಹಿತ್ಯ ಪುರಾಣವು ಕ್ರಿ.ಶ.450ರಿಂದ ಆರಂಭವಾಯಿತು.

Dr. Kusumadhara Gowdaಆಗಸ್ಟ್ 12ರಂದು ಮೇರಿಲ್ಯಾಂಡಿನ ಭೂಮಿಕಾದ ವೇದಿಕೆ ಮೇಲೆ ಕನ್ನಡ, ತಮಿಳು, ಹಾಗೂ ಇನ್ನಿತರ ದಕ್ಷಿಣಾತ್ಯ ಭಾಷೆಗಳಲ್ಲಿರುವ ಹೋಲಿಕೆ ಹಾಗೂ ವ್ಯತ್ಯಾಸಗಳ ಬಗ್ಗೆ ಮಾತನಾಡಿದವರು ಡಾ.ಕುಸುಮಾಧರಗೌಡ.

ವೃತ್ತಿಯಲ್ಲಿ ವೈದ್ಯರಾದ ಡಾ.ಕುಸುಮಾಧರಗೌಡರು ಕನ್ನಡ ನುಡಿ ಪ್ರಕಾರಗಳು, ಲಿಪಿಗಳ ಬೆಳವಣಿಗೆ ಮುಂತಾದ ವಿಷಯಗಳಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ. ಬಹಳ ವರ್ಷಗಳಿಂದ ಭೂಮಿಕಾದ ಪೋಷಕ ಸದಸ್ಯರಾಗಿ, ಇದೇ ವೇದಿಕೆಯ ಮೇಲೆ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮುದ್ದಣರ ರಾಮಾಶ್ವಮೇಧದಿಂದ ಆರಿಸಿದ ಕೆಲವು ಸಾಲುಗಳನ್ನು ಓದುವುದರೊಂದಿಗೆ ಉಪನ್ಯಾಸವನ್ನು ಆರಂಭಿಸಿದ ಕುಸುಮಾಧರಗೌಡರು, "ಓವೋ| ಕಾಲಪುರುಷರಿಗೆ ಗುಣಮಣಮಿಲ್ಲಂ ಗಡ| ನಿಸ್ತೇಜಂ ಗಡ| ... ಸುಗ್ಗಿಯೊಳುಂಡುದಂ ಕಾರೊಳ್ ಕಾಱುವನಕ್ಕುಂ: ಕಾಲಂ ಕಷ್ಟಂ| ಕಷ್ಟಂ|" ಎಂಬ ಹಳೆಗನ್ನಡದ ಸಾಲುಗಳನ್ನು ತಮಿಳು ಚೆನ್ನಾಗಿ ಬಲ್ಲವರು ಅರ್ಥಮಾಡಿಕೊಳ್ಳಬಲ್ಲರು. ಅದೇ ತೆಲುಗು ಮಾತ್ರ ಬಲ್ಲವರಿಗೆ ಹೆಚ್ಚು ಅರ್ಥವಾಗದು ಎಂದು ತಮ್ಮ ಅನುಭವವನ್ನು ಪ್ರಸ್ತಾಪಿಸಿದರು.

ದ್ರಾವಿಡ ಭಾಷೆಗಳು ಒಟ್ಟು 26 ಎಂಬ ಅಭಿಪ್ರಾಯವಿದೆ. ಅವುಗಳಲ್ಲಿ ತಮಿಳು ಎಲ್ಲಕ್ಕಿಂತ ಹಳೆಯದು. ತಮಿಳಿನ ಸಾಹಿತ್ಯ ಪುರಾಣವು ಕ್ರಿ.ಪೂ.2ನೇ ಶತಮಾನದಿಂದ ಪ್ರಾರಂಭವಾಯಿತೆಂಬ ಅಂದಾಜಿದೆ. ಕನ್ನಡದ ಸಾಹಿತ್ಯ ಪುರಾಣವು ಕ್ರಿ.ಶ.450ರಿಂದ, ತೆಲುಗಿನಲ್ಲಿ ಕ್ರಿ.ಶ.7ನೇ ಶತಕದಿಂದ, ಮಲಯಾಳದಲ್ಲಿ ಕ್ರಿ.ಶ.12ನೇ ಶತಮಾನದಿಂದ ಸಾಹಿತ್ಯ ಪುರಾಣ ಆರಂಭವಾಯಿತೆಂಬ ದಾಖಲೆಗಳಿವೆ.

ಕನ್ನಡ ಹಾಗೂ ತಮಿಳಿನ ಸರ್ವನಾಮಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ನಾನು =ನಾನ್; ನೀನು = ನಿ; ನೀವು(ಗಳು) = ನಿಂಗಳ್; ಅವರು ಅವನು ಅವಳು = ಅವರ್ ಅವನ್ ಅವಳ್; ಇತ್ಯಾದಿ. ಹಾಗೆಯೇ ಕ್ರಿಯಾಪದಗಳು ಸಹಾ: ಬಾ = ವಾ; ಹಾಡು = ಪಾಡು; ಓಡು = ಓಟು; ಆಡು = ಆಡು; ನಿಲ್ಲು = ನಿಲ್; ಇತ್ಯಾದಿ.

ಇತರ ಪದಪ್ರಕಾರಗಳಲ್ಲೂ ಬಹಳಷ್ಟು ಸಾಮ್ಯತೆ ಇದೆ: ತಲೆ = ತಲೈ; ಹಲ್ಲು = ಪಲ್ಲು; ಕೈಕಾಲು ಬೆರಳು = ಕೈ ಕಾಲ್ ವೆರಳ್; ಮಗಳು = ಮಗಳ್; ಅಣ್ಣ = ಅಣ್ಣನ್; ತಂಗಿ = ತಂಗೈ; ಅಕ್ಕ = ಅಕ್ಕಾಳ್; ಇತ್ಯಾದಿ.

ತೆಲುಗು ಅಕ್ಷರಗಳು ಕನ್ನಡ ಅಕ್ಷರಗಳಿಗೆ ಹತ್ತಿರವಾದರೂ, ಭಾಷೆಯಲ್ಲಿ ತಮಿಳಿನಷ್ಟು ಹತ್ತಿರವಿಲ್ಲ. ನಾನು = ನೇನು; ನಾವು = ಮೇಮು; ನೀನು = ನುವ್ವು; ನೀವು = ಮೀರು; ರಾಮ ಒಳ್ಳೆಯ ಹುಡುಗ =ರಾಮು ಮಂಚಿ ಕುರ್ರಾಡ; ಕೆಟ್ಟ = ಚೆಡ್ಡ; ಬಾ = ರಾ; ಹೋಗು = ಪೋಗು; ಓಡು = ಪರುಗೆತ್ತು; ಹೀಗೆ ಸಾಮ್ಯತೆಗಿಂತ ಭಿನ್ನತೆಯೇ ಹೆಚ್ಚು.

ಇನ್ನೂ ಮುಂದುವರೆದು ಕುಸುಮಾಧರಗೌಡರು, ಮಲಯಾಳಂ ಭಾಷೆ ತಮಿಳಿನ ತಂಗಿಯೋ, ಮಗಳೋ ಎನ್ನಬಹುದು ಎಂದರು. ಇದರಲ್ಲಿ ಮಣಿಪ್ರವಾಳವೆಂಬುದು ತಮಿಳಿನಿಂದ ಬೇರ್ಪಟ್ಟು ನಂಬೂದರಿ ಬ್ರಾಹ್ಮಣರ ಪ್ರಭಾವದಿಂದ ಸಂಸ್ಕೃತ ಶಬ್ದಗಳನ್ನು ಅಳವಡಿಸಿಕೊಂಡಿರುವ ಭಾಷೆ. ಮಣಿ ಎಂದರೆ ಮಲಯಾಳಂದಲ್ಲಿ ರತ್ನವೆಂದೂ, ಪ್ರವಾಳ ಎಂದರೆ ಸಂಸ್ಕೃತದಲ್ಲಿ ಹವಳವೆಂದು ಅರ್ಥ. ಇನ್ನೊಂದು ಭಾಷೆ ಪಾಟ್ಟು ತಮಿಳನ್ನು ಅನುಸರಿಸಿದ ಭಾಷೆ. ಪಾಟ್ಟು ಭಾಷೆಯಲ್ಲಿ ಹೆಚ್ಚಾಗಿ ಧಾರ್ಮಿಕ ಸಾಹಿತ್ಯ ಕಂಡುಬಂದರೆ, ಮಣಿಪ್ರವಾಳದಲ್ಲಿ ಭೋಗಲಾಲಸೆಯುಕ್ತವಾದ ಸಾಹಿತ್ಯವಿದೆ.

ತುಳು ಹಳೆಯ ದಕ್ಷಿಣಕನ್ನಡದ ಭಾಷೆ. ತುಳುವಿಗೆ ಕೆಲವು ಕಡೆ ತನ್ನದೇ ಲಿಪಿಯಿದ್ದರೂ, ಕನ್ನಡ ಲಿಪಿ ಉಪಯೋಗಿಸುವುದೇ ಹೆಚ್ಚು. ತುಳುವಿನ ಕೆಲವು ಪದಗಳು : ನಾನು = ಯಾನ್; ನಾವು = ಯೆಂಕಳೊ; ಅವರು = ಅಕ್‌ಳ್/ಆರ್; ಇವರು = ಇಂಬೆರ್; ಹೆಣ್ಣು = ಪೊಣ್ಣು; ಹಬ್ಬ = ಪರ್ಬೊ; ಬರುತ್ತೇನೆ = ಬರ್ಪೆ; ಹಸು ಬರುತ್ತದೆ = ಪೆತ್ತ ಬರ್ಪುಂಡು ಇತ್ಯಾದಿ.

ಕೊಡಗಿನ ಕೊಡವ ಭಾಷೆ ಕನ್ನಡ ಹಾಗೂ ತಮಿಳುಗಳ ಮಿಶ್ರ ಭಾಷೆ. ನಾನು ಹೋಗುತ್ತೇನೆ = ನಾ ಪೋಪಿ; ನಾನು ಬರುತ್ತೇನೆ = ನಾ ಬಪ್ಪಿ ಇತ್ಯಾದಿ.

ಹೀಗೆ ಅನೇಕ ಉದಾಹರಣೆಗಳೊಂದಿಗೆ ದಕ್ಷಿಣಭಾರತದ ಭಾಷೆಗಳ ಹೋಲಿಕೆ, ವ್ಯತ್ಯಾಸಗಳನ್ನು ಕುರಿತು ಮಾತನಾಡಿದ ಕುಸುಮಾಧರಗೌಡರು, ಅರಂಗೇಟ್ರಂ ಪದದ ವಿವರಣೆಯೊಂದಿಗೆ ತಮ್ಮ ಉಪನ್ಯಾಸವನ್ನು ಮುಗಿಸಿದರು.

’ಅರಂಗೇಟ್ರಂ’ ಕನ್ನಡದ ’ರಂಗವೇರು’ (ರಂಗಪ್ರವೇಶ) ಪದದ ಅಪಭ್ರಂಶವೆಂಬ ಅಭಿಪ್ರಾಯವಿದೆ. ತಮಿಳಿನಲ್ಲಿ ಕನ್ನಡದ ಱ(ರ)ದ ಹಾಗಿರುವ ಅಕ್ಷರವಿದೆ. ಆದರೆ ಆ ಅಕ್ಷರಕ್ಕೆ ಒತ್ತಕ್ಷರ ’ರ’ ಬಂದಾಗ ಅದನ್ನು ’ಟ್ರಂ’ ಎಂದು ಉಚ್ಚರಿಸುತ್ತಾರೆ. ಕನ್ನಡದ ರಂಗವೇರು=ರಂಗೇರು=ರಂಗೇರ್ರು ತಮಿಳಿನಲ್ಲಿ ರಂಗೇಟ್ರಂ ಆಗುತ್ತದೆ. ಇನ್ನೊಂದು ಅಂಶವೆಂದರೆ ತಮಿಳಿನಲ್ಲಿ ಅ, ಇ, ಉ ಗಳನ್ನು ಸೇರಿಸಿ ಸಂಸ್ಕೃತ ಪದಗಳನ್ನು ತಮಿಳೀಕರಿಸುವ ಅನೇಕ ಉದಾಹರಣೆಗಳಿವೆ: ಲಂಕೆ - ಇಲಂಗೈ; ರಾಮ - ಇರಾಮ. ಅದರಂತೆಯೇ ಕನ್ನಡದ ಮೂಲದ ರಂಗೇಟ್ರಂ (ರಂಗೇರ್ರು) ಪದಕ್ಕೆ ’ಅ’ ಸೇರಿಸಿದರೆ ’ಅರಂಗೇಟ್ರಂ’ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X