ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿಯೂ ವರಮಹಾಲಕ್ಷ್ಮಿಗೆ ಸಿಂಗಾರ!

By Staff
|
Google Oneindia Kannada News


ತಮಿಳರು ಹೆಚ್ಚು ನೆಲೆಸಿರುವ ಸಿಂಗಪುರದಲ್ಲೂ ಆಡಿ ಲೆಚುಮಿ ಅಮ್ಮನ್ ನೋಂಬ್(ವ್ರತ) ಆಚರಣೆಯಲ್ಲಿದೆ. ವ್ರತ ಪಾಲಿಪರು ಹಿಂದಿನ ದಿನ ಉಪವಾಸವಿದ್ದು, ಹಳದಿ ಸೀರೆಯನುಟ್ಟು, ಕೈಗಳಿಗೆ ಹಳದಿ ದಾರ ಧರಿಸುತ್ತಾರೆ.

ವರಮಹಾಲಕ್ಷ್ಮೀ ವರದೆ ಕಲ್ಯಾಣಿ
ಹರಿಮನೋ ವಲ್ಲಭೇ, ಪರಿಪಾಲಯಾ ಸುಮಾ
ನೀರಜಾಸನಾ ತಾಯೇ, ನೀರಜ ಸುಮಾಪಾಣಿ
ವಾರಿಜಾಸನಾ ಜನನೀ

VaraMahalakshmi celebration in Singaporeಎಂದು ಹಬ್ಬದ ದಿನ ಅಮ್ಮ ಹಾಡುತ್ತಾ, ಮುಸುಕು ಹೊದ್ದು ಮಲಗಿರುತ್ತಿದ್ದ ನಾನು, ನನ್ನಕ್ಕನಿಗೆ ಏಳ್ರೇ ತಲೆಗೆ ಎಣ್ಣೆ ನೀರು ಹಾಕಿಕೊಳ್ಳಬೇಕು ಎನ್ನುತ್ತಿದ್ದಳು ಅಮ್ಮ. ಅವಳಿಗೆ ಅವರಮ್ಮ ಎಣ್ಣೆ ಇಡುವಾಗ ಇದನ್ನು ಹೇಳುತ್ತಿದ್ದರಂತೆ. ವರಮಹಾಲಕ್ಷ್ಮೀ ಹಬ್ಬದ ದಿನ ಆರತಿ ಮಾಡುವಾಗ ತಾನೇ ತಾನಾಗಿ ಬರುತ್ತೆ ಈ ಹಾಡು. ಎಣ್ಣೆ-ನೀರು, ಸೀಗೇಕಾಯಿ ಅಭ್ಯಾಸ ತಪ್ಪಿಹೋದ್ರು, ಮುಸುಕು ಇನ್ನೂ ಹೋಗಿಲ್ಲ, ಪ್ರಾಯಶಃ ಹೋಗೋದೂ ಇಲ್ಲ. ಕೆಲವು ಒಳ್ಳೆಯ/ಕೆಟ್ಟ ಅಭ್ಯಾಸಗಳು, ಸ್ತೋತ್ರ, ಹಾಡು, ಆಚಾರ ಯಾರೂ ಹೇಳಿಕೊಡಲೇ ಬೇಕಿಲ್ಲ. ಅದು ಪರಂಪರಾನುಗತವಾಗಿ ಹರಿದು ಬಂದು ಮುಂದಿನ ಪೀಳಿಗೆಗಳಿಗೂ ಹರಿದುಹೋಗುತ್ತದೆ ಅಲ್ಲವೇ?

ನಮ್ಮ ಮನೆಯಲ್ಲಿ ವ್ರತ ಮಾಡುವ ಪದ್ದತಿ ಇರಲಿಲ್ಲ. ಲಕ್ಷ್ಮಿ ಪೂಜೆ ನಡೆಯುತ್ತಿತ್ತು. ಒಡವೆ, ನೂರ ಒಂದು ರೂ ಒಂದು ರೂ ನಾಣ್ಯಗಳನ್ನು ಇಟ್ಟು ಅದರ ಮಧ್ಯೆ ಲಕ್ಷ್ಮೀ ವಿಗ್ರಹವನಿಟ್ಟು ಅದಕ್ಕೆ ಪೂಜೆ, ಧೂಪ, ದೀಪಾರಾಧನೆ, ಜೊತೆಗೆ ಅನೇಕ ಲಕ್ಷ್ಮೀ ಸ್ತೋತ್ರಗಳ ಹೇಳುತ್ತಾ ಕಡೆಯಲ್ಲಿ ಭಾಗ್ಯಾದ ಲಕ್ಶ್ಮೀ ಬಾರಮ್ಮಾ ಪ್ರಾರಂಭಗೊಂಡಂತೆಯೇ ನಮ್ಮಗಳ ಧ್ವನಿ ಜೋರಾಗುತ್ತಿತ್ತು. ಧ್ಯಾನವೆಲ್ಲ ನೈವೇದ್ಯಕ್ಕೆ ಇಟ್ಟಿರುತ್ತಿದ್ದ ಹೋಳಿಗೆ ಮೇಲಿರುತ್ತಿತ್ತು.

ಶ್ರೀ ಮಹಾಲಕ್ಷ್ಮೀಯ ಸಾಕ್ಷಾತ್ಕಾರ ಸರ್ವ ಕಾಲಗಳಲ್ಲೂ, ಸರ್ವರಿಗೂ ಬೇಕು. ಅವಳನ್ನು ಕುರಿತು ಪ್ರಾರ್ಥಿಸದವರಿಲ್ಲ, ಬೇಡಿಕೊಳ್ಳದವರಿಲ್ಲ. ಸಕಲ ಸಂಪತ್ತುಗಳಿಗೆ ಮೂಲವಾಗಿಯೂ, ಪುತ್ರಪೌತ್ರ ಸುಖದಾಯಕವಾಗಿಯೂ ಇರುವ "ವರಮಹಾಲಕ್ಷ್ಮಿ ವ್ರತ" ಚಾಂದ್ರಮಾನ ಪಾಲಿಪ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ಶ್ರಾವಣ ಮಾಸದಲ್ಲಿ ಬಂದರೆ ಅದೇ ಹಬ್ಬ ಸೌರಮಾನ ಪಾಲಿಸುವ ತಮಿಳರಿಗೆ ಆಷಾಢ ಮಾಸದಲ್ಲಿ ಬರುತ್ತದೆ. ತಮಿಳರು ಹೆಚ್ಚು ನೆಲೆಸಿರುವ ಸಿಂಗಪುರದಲ್ಲೂ ಆಡಿ ಲೆಚುಮಿ ಅಮ್ಮನ್ ನೋಂಬ್(ವ್ರತ) ಆಚರಣೆಯಲ್ಲಿದೆ. ದುರ್ಗೆ, ಕಾಳಿ ದೇಗುಲಗಳಲ್ಲಿ, ಮನೆಗಳಲ್ಲಿ ಸುಮಂಗಲಿ ಪೂಜೆಗೆ ಮಹತ್ವ. ವ್ರತ ಪಾಲಿಪರು ಹಿಂದಿನ ದಿನ ಉಪವಾಸವಿದ್ದು, ಹಳದಿ ಸೀರೆಯನುಟ್ಟು, ಕೈಗಳಿಗೆ ಹಳದಿ ದಾರ ಧರಿಸುತ್ತಾರೆ. ದೇಗುಲಗಳಿಗೆ ಭೇಟಿ ನೀಡುವ ಪ್ರತಿಯೋರ್ವ ಹೆಣ್ಣೂ ಅಂದು ಲಕ್ಷ್ಮಿ, ಶಕ್ತಿ ಸ್ವರೂಪಿ. ಹಣೆಗೆ ಕುಂಕುಮ ಹಚ್ಚಿ, ಹೂ ಕೊಟ್ಟು ಹಿರಿ-ಕಿರಿಯರೆನ್ನದೆ ಕಾಲಿಗೆರಗುವ ಅನೇಕ ಜನರನ್ನು ಕಾಣಬಹುದು. ಲಕ್ಷ್ಮಿಗೆ ಕಜ್ಜಾಯ, ಚಕ್ಕುಲಿ, ಪುಳಿಯೋಗರೈ ನೈವೇದ್ಯ. ಅರಿಶಿನ-ಕುಂಕುಮಕ್ಕೆ ಕರೆವ ಕನ್ನಡಿಗರ ಮನೆಯಲ್ಲಿ ಕಾಯಿ ಹೋಳಿಗೆ ರುಚಿಸುವ ಸುದಿನವಿದು.

ಹೊರದೇಶಗಳಲ್ಲೇ ಅಲ್ಲ ಬೆಂಗಳೂರಿನಲ್ಲಿ ಕೂಡ ಅನೇಕ ಮನೆಗಳಲ್ಲಿ ಎಲ್ಲಾ ಹಬ್ಬದಡುಗೆ, ಪೂಜೆ ರಾತ್ರಿಹೊತ್ತು. ನಾವೂ ಇದಕ್ಕೆ ಬದ್ಧರು. ಪೂಜೆ, ಹೋಳಿಗೆ, ಚಿತ್ರಾನ್ನ ಗ್ಯಾರಂಟಿ ಅದು ಉದರಕ್ಕೆ ಬೇಕೇ ಬೇಕಲ್ಲಾ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಅವಸರ. ಹೆಣ್ಣೂ ಹೊರಗೆ ದುಡಿಯುವುದರಿಂದ ನಮ್ಮ ಅನುಕೂಲಕ್ಕೆ ತಕ್ಕಂತೆ ಪೂಜಾ ವಿಧಿಗಳನ್ನು ಬದಲಾಯಿಸಿಕೊಂಡಿದ್ದೇವೆ. ಪೂಜೆಗೆ ಕೂತರೆ ಅರ್ಧದಲ್ಲಿ ಏಳೋಕ್ಕೆ ಆಗೋಲ್ಲ. ಲೇಟಾಯ್ತು ಅಂದ್ರೆ ಬಾಸ್ ಕೇಳ್ತಾನೆ ಯಾಕೆ ಅಂತ. ದೇವ್ರು ಯಾಕೆ ನಂಗೆ ಪೂಜೆ ಮಾಡ್ಲಿಲ್ಲ ಅಂತ ಕೇಳೋಲ್ವಲ್ಲ. ಅನುಕೂಲ ಸಿಂಧುಗಳು ನಾವು.

ಹಬ್ಬಗಳ ನೆವದಲ್ಲಿ ನಾಲಿಗೆಗೆ ಸವಿ ಭೋಜನ. ಕೆಲವರಿಗೆ ಹಾಲು-ಹೋಳಿಗೆ ಪ್ರಿಯ, ಸಾರು-ಹೋಳಿಗೆ ಇನ್ನೂ ಹಲವರಿಗೆ. ಉಪ್ಪಿನಕಾಯಿ ರಸ ಹೋಳಿಗೆ ಸವಿದಿದ್ದೀರಾ? ಇದು ನನ್ನ ಮನೆಯಲ್ಲಿ ನನ್ನ ಅಣ್ಣ ಹಾಗೂ ಮಗನಿಗೆ ಬಲು ಪ್ರಿಯ. ನೀವೂ ಹೊಸ ರುಚಿ ಪ್ರಯತ್ನಿಸಿ ನೋಡಿ.

ಪೂರಕ ಓದಿಗೆ-

ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ
ಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ
ಇಂದ್ರಕೃತ ಶ್ರೀ ಮಹಾಲಕ್ಷ್ಮ್ಯಾಷ್ಟಕಂ ಸ್ತೋತ್ರ ಪಠಿಸಿ
ವರಲಕ್ಷ್ಮೀವ್ರತ ಕಥಾಸಂಗ್ರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X