• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಗಿರೀಶ್‌ ಕಾಸರವಳ್ಳಿ ಚಿತ್ರಗಳ ಮೆರಗು

By Staff
|

ಗಿರೀಶ್‌ ಕಾಸರವಳ್ಳಿ ಜೊತೆ ಕೂತು, ಅವರ ‘ಹಸೀನಾ’ ಮತ್ತು ‘ನಾಯಿನೆರಳು’ ನೋಡಿದ ಸಿಂಗಪುರದ ಮಂದಿ, ತಮ್ಮ ಅನುಮಾನಗಳನ್ನು, ಅಭಿಮಾನವನ್ನು ಹಂಚಿಕೊಂಡದ್ದು ಹೀಗೆ..

Girish Kasaravalli and Rameshwari varma at the Singapore film festivalಏಪ್ರಿಲ್‌ 18-30ರವರೆಗೆ ಸಿಂಗಪುರದಲ್ಲಿ 20ನೇ ಸಿಂಗಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ. ಈ ಸಂದರ್ಭದಲ್ಲಿ ಏಷ್ಯನ್‌ ಸಿಲ್ವರ್‌ ಸ್ಕಿೃೕನ್‌ ಅವಾರ್ಡಿಗೆಂದು 11 ಚಿತ್ರಗಳು ಹಾಗೂ ‘‘ಬೆಸ್ಟ್‌ ಸಿಂಗಪೂರ್‌’’ ಪ್ರಶಸ್ತಿಗೆಂದು 53 ಚಿತ್ರಗಳೂ ಆಯ್ಕೆಗೊಂಡು ಪ್ರದರ್ಶಿತಗೊಳ್ಳುತ್ತಿವೆ. ಇದರಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳಿಸಿರುವ ಗಿರೀಶ್‌ ಕಾಸರವಳ್ಳಿ ಅವರ ‘‘ಹಸೀನಾ’’ ಹಾಗೂ ‘‘ನಾಯಿನೆರಳು’’ ಚಿತ್ರಗಳು ಏಪ್ರಿಲ್‌ 21 ಹಾಗೂ 22ರಂದು ಸಂಜೆ ಲಿಡೋ ಚಿತ್ರಮಂದಿರದಲ್ಲಿ ಪ್ರದರ್ಶಿತಗೊಂಡವು.

21ರ ಸಂಜೆ ಥಿಯೇಟರ್ನಲ್ಲಿ ಹೆಚ್ಚು ಜನ ಇರಲಿಲ್ಲ. ಕಂಡಿತು ಹತ್ತಾರು ನಮ್ಮದೇ ಪರಿಚಿತ, ಇಪ್ಪತ್ತಾರು ಅಪರಿಚಿತ ವಿದೇಶಿ ಮುಖಗಳು. ಕಮರ್ಶಿಯಲ್‌ ಚಿತ್ರ ಆದ್ರೆ ನೂರಾರು ಜನ ಕನ್ನಡಿಗರು ಓಡೋಡಿ ಬರ್ತಾರೆ, ಅವಾರ್ಡ್‌ ಮೂವಿ ಅಂದ್ರೂ ಹತ್ತಾರು ಮಾತ್ರಾನಾ ಎಂದು ಗೊಣಗುತ್ತಾ ಕುಳಿತೆ. ಚಿತ್ರ ಶುರುವಾಗುವುದರಲ್ಲಿತ್ತು, ಮಬ್ಬುಗತ್ತಲಿತ್ತು ,ಬಿಳಿ ಪರದೆಯ ಮುಂದೆ ಹಲೋ ಎನ್ನುತ್ತಾ ಬಂದ ವ್ಯಕ್ತಿಯೋರ್ವರು, ಹಸೀನಾ ಚಿತ್ರದ ನಿರ್ದೇಶಕ ‘‘ಗಿರೀಶ್‌ ಕಾಸರವಳ್ಳಿ’’ ಅವರನ್ನು ಪರಿಚಯಿಸಿದರು.

ನಾ ಕಂಡಂತೆ ‘ಹಸೀನಾ’ :

A still from the movie Hasinaಹಸೀನಾಳ ಆರ್ತನಾದ, ಮಸೀದಿಯಲ್ಲಿನ ಒಳ ರಾಜಕೀಯ, ಸಣ್ಣತನ, ಹೆಣ್ಣಿನ ಮೇಲೆ ನಡೆವ ದಬ್ಬಾಳಿಕೆ, ಅಹವಾಲು, ಅಪೀಲು, ಅಲೆದಾಟ, ಒಣ ಭರವಸೆಗಳ ಸುತ್ತ ಚಿತ್ರ ಸುತ್ತುತ್ತದೆ. ಮಗಳಿಗಾಗಿ ಅವಳು ಮಾಡುವ ಪ್ರಾರ್ಥನೆ ಯಾರ ಕಿವಿಗೂ ಬೀಳುವುದೇ ಇಲ್ಲ,

ಗಂಡ ಬಿಟ್ಟದ್ದು ತನ್ನ ವಿಧಿಬರಹ ಎಂದು ನಂಬಿದ ಅನಕ್ಷರಸ್ಥ ಹೆಣ್ಣೊಬ್ಬಳು, ಅಕ್ಷರಸ್ಥ ಹೆಣ್ಣಿನಿಂದ ತನ್ನ ಹಕ್ಕು-ಬಾಧ್ಯತೆಗಳನ್ನು ಅರಿತು ನಡೆಸುವ ಪ್ರತಿಭಟನೆ ಚಿತ್ರದಲ್ಲಿದೆ. ಚಿತ್ರ ಮುಗಿದಂತೆ ಹಸೀನಾ ರೂಪದಲ್ಲಿ ತಾರಾ, ಕಣ್ಣಿಲ್ಲದ ಮಗು, ಮುತಾವಲಿಯ ಹೆಂಡತಿ ಮನದಲ್ಲಿ ಅಚ್ಚೊತ್ತಿದ್ದರು.

ಚಿತ್ರಮಂದಿರದಿಂದ ಹೊರ ಬಂದಾಗ, ಕೆಲವು ನಿಮಿಷ ಗಿರೀಶ್‌ ಅವರೊಡನೆ ಮಾತನಾಡಲು, ಅವಕಾಶ ಸಿಕ್ಕಿತ್ತು. ಪರಿಚಯ, ನಮಸ್ಕಾರಗಳ ವಿನಿಮಯದ ನಂತರ :

ವಾಣಿ : ಹಸೀನಾದಲ್ಲಿ ದಂಪತಿಗಳ ಪ್ರೇಮ ಸೂರ್ಯೋದಯದಿಂದ ಪ್ರಾರಂಭಗೊಂಡು, ಮಧ್ಯದಲ್ಲಿ ಬಿರುಕು ಬಿಡುತ್ತದೆ. ಅಸ್ತಮಾನದಲ್ಲಿ ಮಗಳ ಸಾವಿನಲ್ಲಿ ಕೊನೆಗೊಳ್ಳುತ್ತದೆ? ಆ ಸಮಯದಲ್ಲಿ ಮತ್ತೋರ್ವರಲ್ಲಿ ಹುಟ್ಟಿದ್ದು ಪ್ರತಿಭಟನೆಯ ಬೆಳಕು. ಮತ್ತೇಕೆ ಸೂರ್ಯೋದಯ ತೋರಿಸಲಿಲ್ಲ?

ಗಿರೀಶ್‌ : ಮತ್ತೆ ಸೂರ್ಯೋದಯ ತೋರಿಸಿದಲ್ಲಿ ಅದು ಬೆಳಗಿನ ಪ್ರಾರ್ಥನೆ ಎನಿಸುತ್ತದೆ. ಅದಕ್ಕಾಗಿ ಮರುದಿನ ಮಸೀದಿಯ ಅಧಿಕಾರಿಯ ಪತ್ನಿ ಆತನ ಅಸ್ತಿತ್ವವನ್ನು ಧಿಕ್ಕರಿಸಿಯೂ, ಧಿಕ್ಕರಿಸದಂತೆ ಆತ್ಮವಿಶ್ವಾಸದಿಂದ ಆಪರೇಷನ್‌ ಮಾಡಿಸಿಕೊಳ್ಳಲು ಮುನ್ನಡೆಯುತ್ತಾಳೆ. ಆತ ಸತ್ತವನಂತೆ ನೋಡುತ್ತಾ ನಿಂತಿರುತ್ತಾನೆ.

ವಾಣಿ : ಹಸೀನಾ ಇನ್ನೊಂದು ಸ್ವಲ್ಪ ಅಗ್ರೆಸ್ಸಿವ್‌ ಆಗಿರಬಹುದಿತ್ತಲ್ಲವೇ?

ಗಿರೀಶ್‌: ಇನ್‌ ವಾಟ್‌ ವೇ. ಅವಳ ಮೌನ ಪ್ರತಿಭಟನೆ ಅದು ಅಸಹನೀಯ. ಹಸೀನಾ, ನನಗೆ ಗಂಡ ಬೇಕಾಗಿಲ್ಲ, ಮೆಹರ್‌ ಕೊಡಿಸಿ ಎನ್ನುವ ಅವಳ ಬೇಡಿಕೆಯಲ್ಲಿ ಮಗಳ ಮೇಲಿನ ಪ್ರೀತಿ, ಹಣದ ಅಸಹಾಯಕತೆ, ಏನಾದರೂ ಆಗಲಿ ಆಪರೇಷನ್‌ ಮಾಡಿಸುತ್ತೇನೆ ಎನ್ನುವ ಛಲವಿದೆ.

ಮಾತುಕತೆಗೆ ಅಲ್ಲಿಗೆ ಅನಿವಾರ್ಯ ತೆರೆಬಿತ್ತು. ಮನೆ ಹಾದಿ ಕರೆದಿತ್ತು.

***

ನಾಯಿನೆರಳು ಪ್ರದರ್ಶನ :

Girish Kasaravalli interacting to audience at Singpore International film festಭಾನುವಾರ(ಏ.22) ಸಂಜೆ ಚಿತ್ರಮಂದಿರ ತುಂಬಿತ್ತು. ‘ನಾಯಿನೆರಳು’ ಚಿತ್ರ ಪ್ರಾರಂಭಗೊಳ್ಳುವ ಮೊದಲು ಮೈಕ್‌ ಹಿಡಿದ ಗಿರೀಶ್‌ The film has no dog and no shadow, ಎಂದು ನಗುತ್ತಾ ಹೇಳಿದರು - The image is from the Mahabharata where Yudhishtra insists that he will not enter swarga without his faithful dog — representing the individuals good and bad deeds in life.

‘ನಾಯಿನೆರಳು’ ಭೈರಪ್ಪನವರ ಕಾದಂಬರಿ. ಎಂದೋ ಓದಿದ್ದ ಕಾದಂಬರಿಯ ಪಾತ್ರಗಳ ನೆನಪಿಸಿಕೊಳ್ಳುತ್ತಾ ಕುಳಿತಂತೆ ಚಿತ್ರ ಪ್ರಾರಂಭಗೊಂಡಿತು.

ಅತ್ತೆ-ಸೊಸೆ-ಮೊಮ್ಮಗಳು ಮೂವರು ಹೆಣ್ಣುಗಳ ಸುತ್ತ ಹೆಣೆದ ಕಥೆ ‘ನಾಯಿನೆರಳು’. 22 ವರುಷದ ಹಿಂದೆ ಸತ್ತ ಮಗ ಪುನರ್ಜನ್ಮ ಪಡೆದಿದ್ದಾನೆ. ಇದನ್ನು ನಂಬಿದ ಅತ್ತೆ ನಾಗಲಕ್ಷ್ಮಿ, 22 ವರುಷದ ಮಂಡೆ ಇಲ್ಲದ ವಿಶ್ವನನ್ನು ಮನೆಗೆ ಕರೆಯುತ್ತಾಳೆ. ಮತ್ತೊಂದು ಕಡೆ 22 ವರುಷದ ಮಗಳೊಂದಿಗೆ ಸಂಪ್ರದಾಯಬದ್ಧ ಕುಟುಂಬದಲ್ಲಿ ಅಪ್ರಾಪ್ತ ವಯಸ್ಸಿನಿಂದಲೇ ವೈಧವ್ಯದ ನೆರಳಲ್ಲಿ ಸೊಸೆ ವೆಂಕಟಲಕ್ಶ್ಮಿಬದುಕುತ್ತಿದ್ದಾಳೆ.

A still from Nayi Neralu movieಅತ್ತೆಯ ಆಣತಿಯಂತೆ, ವಿಶ್ವನ ಆಸೆಯಂತೆ ಬೇಡಬೇಡವೆಂದು ಸಂಬಂಧ ಒಪ್ಪಿಕೊಳ್ಳುತ್ತಾಳೆ. ಅಡಗಿದ್ದ ಸುಪ್ತ ಬಯಕೆ ಹೊತ್ತಿಕೊಳ್ಳುತ್ತದೆ. ಆಗ ಕೂಡಿತು ನೇಹ, ಬೆಸೆಯಿತು ದೇಹ. ಬೆಳೆಯಿತು ವೆಂಕುವಿನಲಿ ಹೊಸ ಜೀವ. ಅಜ್ಜಿಯ ಪುನರ್ಜನ್ಮದ ನಂಬಿಕೆ-ಅಮ್ಮನ ಹೊಸ ನಡವಳಿಕೆಗೆ ವಿವೇಕ ಹೇಳಲು ಮಗಳು ರಾಜಲಕ್ಷ್ಮಿಬರುತ್ತಾಳೆ. ಹೀಗೆ ಕತೆ ಮುಂದುವರೆಯುತ್ತದೆ.

ಚಿತ್ರ ಮುಗಿದಾಗ ಕೆಲವು ಹೊತ್ತು ವೆಂಕುವಿನ ಗುಂಗಿನಿಂದ ಹೊರಬರಲಾಗಲಿಲ್ಲ, ಯಾರಿಗೂ ಮನೆಗೆ ತೆರಳುವ ಧಾವಂತ ಇರಲಿಲ್ಲ. ನಿಂದರು ಮನದಲಿ ರಾಮೇಶ್ವರಿ, ಪವಿತ್ರಾ ಲೋಕೇಶ್‌ ಮತ್ತು ರಾಮಣ್ಣ. ‘ಅಬ್ಬಾ ಎಂಥಾ ಮನ ಮುಟ್ಟುವ ಚಿತ್ರ’ ಎಂಬ ತೃಪ್ತಿ.

‘‘ಥಾಂಕ್ಯೂ, ಥಾಂಕ್ಯೂ, ವಾಹ್‌ ವಾಟ್‌ ಎ ಗ್ರೇಟ್‌ ಮೂವಿ, ಗಿವ್‌ ಅಸ್‌ ಮೋರ್‌ ಮೂವೀಸ್‌ ಲೈಕ್‌ ದಿಸ್‌’’ ಎನ್ನುತ್ತಿದ್ದರು ಎಣಿಸಲಾರದಷ್ಟು ವಿದೇಶಿಯರು. ಎಣಿಕೆಯಷ್ಟು ಕನ್ನಡಿಗರು. ಎಲ್ಲರ ತುಂಬು ಹೃದಯದ ಕರತಾಡನ ಸ್ವೀಕರಿಸುತ್ತಾ ಒಮ್ಮೆ ಕೈಮುಗಿದು, ಹೆಮ್ಮೆಯಿಂದ ಬೀಗುತ್ತಾ ತುಂಬು ಸಭಿಕರ ಗೌರವಕ್ಕೆ ಪಾತ್ರರಾದರು ಗಿರೀಶ್‌ ಕಾಸರವಳ್ಳಿ, ಜೊತೆಗೂಡಿದರು ‘ನಾಯಿ ನೆರಳು’ ಚಿತ್ರದಲ್ಲಿ ತಾಯಿ ಪಾತ್ರದಲಿ ನಟಿಸಿದ್ದ ರಾಮೇಶ್ವರಿ ವರ್ಮ. ಅವರ ನಟನೆಯೂ ಜನರ ಮನ ತಟ್ಟಿತ್ತು . ಶಹಭಾಷ್‌ಗಳ ಸುರಿಮಳೆ ಅವರನ್ನೂ ಮುಟ್ಟಿತ್ತು.

ಸುತ್ತುವರೆದ ಜನರ ಮಧ್ಯೆ ಗಿರೀಶ್‌ ಅವರನ್ನು ಕಂಡಾಗ ಅನಿಸಿದ್ದು ‘‘ಈತ ಕನ್ನಡದ ಶ್ಯಾಮ್‌ ಬೆನಗಲ್‌’’. ಕಂಡ ಕೂಡಲೇ ಕೈಮುಗಿದು ನನ್ನ ಅನಿಸಿಕೆ ತಿಳಿಸಿದೆ ಕೂಡ. ಅವರಿಗೇನನಿಸಿತೋ ನಾನರಿಯೆ? ಒಂದೆರಡು ಪ್ರಶ್ನೆ ಕೇಳಿದೆ.

ವಾಣಿ : ‘ನಾಯಿನೆರಳು’ ಪುಸ್ತಕದಲ್ಲಿ ಪುನರ್ಜನ್ಮಕ್ಕೆ ಪ್ರಾಮುಖ್ಯತೆ. ಸಿನಿಮಾದಲ್ಲಿ ಕತೆಯೇ ಬೇರೆ. ಯಾಕೆ ಹೀಗೆ?

ಗಿರೀಶ್‌ : ನಿಜ, ನಾನು ಹೊಸ ಪಾತ್ರಗಳನ್ನು ಮೂಡಿಸಿ, ಮಾರ್ಪಾಡುಗಳನ್ನು ಮಾಡಿದ್ದೇನೆ.

ವಾಣಿ : ವಿಶ್ವನಿಗೆ ಬುದ್ಧಿ ಮಾಂದ್ಯತೆಯೇ? ಅದು ಅಷ್ಟು ನಿಖರವಾಗಿಲ್ಲ.

ಗಿರೀಶ್‌ : ಹಾಗನಿಸುತ್ತಾನೆ, ಅವನು ಏನೂ ಬೇಡದ, ಸೋಮಾರಿ, ಬೇಜವಾಬ್ದಾರಿಯ ವ್ಯಕ್ತಿ. ಅವರು ಮುಂದೆ ಹೇಳುವಷ್ಟರಲ್ಲಿ ಫೋಟೋ ಪ್ಲೀಸ್‌ ಎಂದು ಮುತ್ತಿದರು ರಾಮೇಶ್ವರಿ ಹಾಗೂ ಗಿರೀಶರನ್ನು ಹಲವರು.

ನಾ ಸರಿದೆ ಹಿಂದಕೆ ಉತ್ತರ ಸಿಗದ ಈ ಪ್ರಶ್ನೆಗೆ. ಒಬ್ಬ ವ್ಯಕ್ತಿ ಸತ್ತ 22 ವರುಷಗಳ ನಂತರ ಮತ್ತೆಲ್ಲೋ ಇದ್ದ ವಿಶ್ವನಿಗೆ ಹಿಂದಿನ ಜನುಮದ ಊರು, ತಂದೆ, ತಾಯಿ, ಹೆಂಡತಿಯ ಹೆಸರು ಹೇಗೆ ಗೊತ್ತಾಯಿತು ಎಂದು ಯೋಚಿಸುತ್ತಾ? ಉತ್ತರ ಸಿಗುವ ತನಕ ಹಿಂಬಾಲಿಸುವುದು ಈ ಪ್ರಶ್ನೆ ಬೆಂಬಿಡದೆ ಬೇತಾಳನಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X