• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಿವಾಸಿ ಕನ್ನಡಿಗರ ಕಣ್ಣಲ್ಲಿ ‘ಕಾವೇರಿ ಸಮಸ್ಯೆ-ಪರಿಹಾರ’

By Staff
|

ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿ ಅಂದು(ಮಾ.3) ಆಯೋಜಿಸಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಕಾವೇರಿ ಸಮಸ್ಯೆ ಬಗ್ಗೆ ಅನಿವಾಸಿ ಕನ್ನಡಿಗರ ಅಭಿಪ್ರಾಯ ಅಲ್ಲಿ ವ್ಯಕ್ತವಾಯಿತು.

  • ಕೆ.ಜಿ. ಕಲಾವತಿ

ಸಾಹಿತ್ಯಗೋಷ್ಠಿ ಕಾರ್ಯಕ್ರಮದ ಉತ್ತರಾರ್ಧವು ಗಹನವಾದ ಚರ್ಚೆಯನ್ನೊಳಗೊಂಡಿತ್ತು. ಚರ್ಚೆಯ ವಿಷಯ ‘ಕಾವೇರಿ ಜಲವಿವಾದದ ಬಗ್ಗೆ ನ್ಯಾಯಮಂಡಳಿ ನೀಡಿದ ತೀರ್ಪು’.

ಸಭಾಧ್ಯಕ್ಷರಾದ ವಿಶ್ವನಾಥ್‌ರವರು ಕರ್ನಾಟಕದಲ್ಲಿ ಭುಗಿಲೆದ್ದಿರುವ ಜಲವಿವಾದದ ಸಮಸ್ಯೆಯ ಮತ್ತು ಇತ್ತೀಚಿನ ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ಸಭಿಕರಿಗೆ ವಿವರಣೆಯನ್ನು ನೀಡಿ, ಈ ಸಮಸ್ಯೆಯ ಪರಿಹಾರಕ್ಕೆ ಸಭಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದರು.

ಈ ಆಹ್ವಾನವನ್ನು ಮನ್ನಿಸಿ ಸದಾನಂದ್‌, ಜಗದೀಶ್‌ ವಾಸುದೇವಮೂರ್ತಿ, ಶ್ರೀನಾಥ್‌ ಈಶ್ವರಹಳ್ಳಿ, ಆನಂದ್‌ ರಾಮಮೂರ್ತಿ, ಗಣೇಶ್‌ ಕಡಬ, ಯಶೋದಮ್ಮ, ಮಹಾಬಲಶಾಸ್ತ್ರಿ, ಸುರೇಶ್‌ಬಾಬು, ರವಿರೆಡ್ಡಿ, ಜಿ.ಎಸ್‌. ಸತ್ಯ ಮತ್ತು ಕುಮಾರಸ್ವಾಮಿ ಇವರುಗಳು ತಮ್ಮ ವಿಚಾರಗಳನ್ನು ಮಂಡಿಸಿದರು. ಇವುಗಳ ಮಧ್ಯೆ ಶ್ರೀಮತಿ ಕಲಾವತಿ ಅವರು ತಾವು ಕಾವೇರಿಯ ಬಗ್ಗೆ ಬರೆದ ಕವನವನ್ನು ಓದಿದರು.

ಕಾವೇರಿ ಬಗೆಗಿನ ಚರ್ಚೆಯಲ್ಲಿ ಕೇಳಿ ಬಂದ ವಿಚಾರಗಳು :

  • ನ್ಯಾಯಮಂಡಳಿಯ ಮೇಲೆ ತಮಿಳುನಾಡಿನ ಡಿ.ಎಂ.ಕೆ. ಪಕ್ಷದ ಪ್ರಭಾವ, ಕೈಚಳಕ ಇರುವುದು ಸ್ಪಷ್ಟವಾಗಿದೆ. ತಮಿಳುನಾಡಿನ ಜನ ಸಮಸ್ಯೆಗಳು ಬಂದಾಗ ಸರ್ಕಾರದ ಮೇಲೆ ತಮ್ಮ ಒತ್ತಡ ತಂದಾದರೂ ಸಮಸ್ಯೆ ನಿವಾರಿಸಿಕೊಳ್ಳುವ ಶಕ್ತಿಶಾಲಿಗಳು. ದುರದೃಷ್ಟವಶಾತ್‌ ಕರ್ನಾಟಕದಲ್ಲಿ ಇಂತಹ ಒಗ್ಗಟ್ಟು ಇಲ್ಲ. ಈಗ ಎಲ್ಲರೂ ಒಂದಾಗಿ ಪ್ರತಿಭಟಿಸುವ ಸಮಯ ಬಂದಿದೆ.
  • ನ್ಯಾಯಾಧಿಕರಣ ಸಮಿತಿ ಮುಂದೆ ನಮ್ಮವರು ಸಮರ್ಪಕವಾಗಿ ಅಂಕಿ-ಅಂಶಗಳನ್ನು ನೀಡಿಲ್ಲದಿರುವುದರಿಂದ ಈ ಅನ್ಯಾಯ ಆಗಿದೆ. ನಮಗೆ ಕಾವೇರಿ ನೀರು ಬರೀ ವ್ಯವಸಾಯಕ್ಕೆ ಮಾತ್ರವಲ್ಲ, ನಗರಗಳ ನೀರುಪೂರೈಕೆ, ಉದ್ಯಮ ಎಲ್ಲಕ್ಕೂ ಅಗತ್ಯವಿದೆ. ತೀರ್ಪಿನ ಪುನರ್‌ಪರಿಶೀಲನೆಗೆ ಅವಕಾಶ ದೊರೆತಾಗ, ಇವುಗಳನ್ನು ಸಮಿತಿಯ ಮುಂದೆ ಸ್ಪಷ್ಟವಾಗಿ ಬಿಡಿಸಿಹೇಳಬೇಕು.
  • ಈ ಸಮಸ್ಯೆಯ ಹಿಂದೆ ಕೇಂದ್ರಸರ್ಕಾರದ ಮಲತಾಯಿ ಧೋರಣೆ ಕಂಡುಬರುತ್ತಿದೆ. 1892ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದ ಒಪ್ಪಂದದಂತೆ ಕರ್ನಾಟಕ 11 ಲಕ್ಷ ಎಕರೆ ಸಾಗುವಳಿಗೆ ಬದ್ಧವಾಯಿತು. ಆದರೆ ತಮಿಳುನಾಡು ಒಪ್ಪಂದಕ್ಕಿಂತಲೂ 28 ಲಕ್ಷ ಎಕರೆ ಹೆಚ್ಚಾಗಿ ಸಾಗುವಳಿ ಮಾಡಿದಾಗ, ಕರ್ನಾಟಕ ಪ್ರತಿಭಟಿಸಲಿಲ್ಲ, ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ನಮ್ಮ ದೌರ್ಬಲ್ಯದ/ತಾಳ್ಮೆಯ ದುರುಪಯೋಗವಾಗುತ್ತಿದೆ. ಮೂರನೆಯವರ ಹಸ್ತಕ್ಷೇಪವಾಗದೆ, ಮಂಡ್ಯದ ರೈತರು ಹಾಗೂ ತಮಿಳುನಾಡಿನ ರೈತರು ಒಟ್ಟಾಗಿ ಈ ಸಮಸ್ಯೆಯ ಬಗ್ಗೆ ಚರ್ಚಿಸಬೇಕು.
  • ಕರ್ನಾಟಕವು ತಂತ್ರಜ್ಞಾನ, ವಿಜ್ಞಾನಗಳಲ್ಲಿ ಇಡೀ ದೇಶ ಯಾಕೆ, ಪ್ರಪಂಚದಲ್ಲಿಯೇ ಹೆಸರು ಮಾಡಿದೆ. ಕಾವೇರಿ ಸಮಸ್ಯೆಗೆ ನ್ಯಾಯಾಧಿಕರಣದ ತೀರ್ಪನ್ನು ಒಪ್ಪಿಕೊಂಡು, ನಮ್ಮ ಜಲಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳುವುದರತ್ತ ಸರ್ಕಾರ ಗಮನ ಹರಿಸಬೇಕು. ನ್ಯಾಯಾಧಿಕರಣದ ವ್ಯವಸ್ಥೆಗಾಗಿ ನೂರಾರು ಕೋಟಿ ವೆಚ್ಚ ಮಾಡಿರುವ ಕರ್ನಾಟಕ ಸರ್ಕಾರ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪರಿಹಾರಸೂತ್ರವನ್ನು ಕಂಡುಹಿಡಿಯಲು ಹಣ ವೆಚ್ಚಮಾಡಲು ಹಿಂದೆ ಮುಂದೆ ನೋಡಬಾರದು. ಇದಕ್ಕಾಗಿ ಟಾಟಾ ವಿಜ್ಞಾನ ಕೇಂದ್ರ, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌(ಐಐಎಂ) ಮುಂತಾದ ತಾಂತ್ರಿಕ ಹಾಗೂ ವೈಜ್ಞಾನಿಕ ಕೇಂದ್ರಗಳು ಶೀಘ್ರದಲ್ಲಿ ಪರಿಹಾರ ಕಂಡುಹಿಡಿಯುವಂತೆ ಒಪ್ಪಿಸಬೇಕು.
  • ಕಾವೇರಿ ಜಲಸಮಸ್ಯೆಗೆ ಪರಿಹಾರವಾಗಿ ಇದುವರೆಗೆ ಆಗಿರುವ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಜಲಸಂಪನ್ಮೂಲದ ಕೊರತೆಯಾದಲ್ಲಿ, ಬೇರೆ ಸಂಪನ್ಮೂಲಗಳನ್ನು ಶೋಧಿಸಿ, ನಮ್ಮ ಅಭಿವೃದ್ಧಿಪರ ಕಾರ್ಯಗಳನ್ನು ಆ ನಿಟ್ಟಿನಲ್ಲಿ ಹೊರಳಿಸಬೇಕು. ಉತ್ತರ ಭಾರತದ, ಹಾಗೂ ದಕ್ಷಿಣ ಭಾರತದ ನದಿಗಳನ್ನು ಸೇರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಕಡಿಮೆ ನೀರಿನಲ್ಲಿ ಭತ್ತಕ್ಕಿಂತ ಬೇರೆಯೇ ಬೆಳೆಗಳನ್ನು ತೆಗೆಯುವ ವಿಧಾನಗಳನ್ನು ಸಂಶೋಧಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ, ಜನಸಮುದಾಯ, ವಿಜ್ಞಾನ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು.
  • ಕರ್ನಾಟಕದ ಜನತೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ತಾಮಸಗುಣವೇ ನಮ್ಮ ಇಂದಿನ ಪರಿಸ್ಥಿತಿಗೆ ಕಾರಣ. ಇಂದಿನ ನಮ್ಮ ತುರ್ತು ಅಗತ್ಯವೆಂದರೆ, ನಮ್ಮ ಜನರಲ್ಲಿ ಕ್ಷಾತ್ರ ತೇಜಸ್ಸನ್ನು ಬೆಳೆಸಬೇಕು. ಆಗ ನಾವು ನಮ್ಮ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಸಾಧ್ಯ. ಜನರನ್ನು ನಿವೃತ್ತಿಮಾರ್ಗದಿಂದ ಪ್ರವೃತ್ತಿಮಾರ್ಗಕ್ಕೆ ತನ್ಮೂಲಕ ಸಾಹಸಮಾರ್ಗಕ್ಕೆ ಕರೆದೊಯ್ಯುವ ಅಗತ್ಯವನ್ನು ವಿವೇಕಾನಂದರ ವಾಣಿಯಿಂದ, ಬೇಂದ್ರೆಯವರ ಕವನದಿಂದ ಸಾದೋಹರಣಸಹಿತವಾಗಿ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X