ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದರ ನಿಮಿತ್ತಂ ಗಾಯಕ ವೇಷಂ!

By Staff
|
Google Oneindia Kannada News


ಗುಂಡೂಗೆ ಒಂಥರ ಶಾಕ್‌ ಆಗಿ ಕಿಟ್ಟಿ ಹೇಳಿದ್ದರಲ್ಲಿ ಅರ್ಧದಷ್ಟು ತಲೆಗೇ ಹೋಗಲಿಲ್ಲ. ‘ಕಿಟ್ಟಿ ಬಂದಿದ್ದು ಮಸಾಲೆ ದೋಸೆಗಾಗಿಯಾ ಅಥವಾ ತನ್ನ ನೋಟ್ಸಿಗಾಗಿಯಾ’ ಎಂಬ ಜಿಜ್ಞಾಸೆಗೊಳಗಾಗಿದ್ದ ಪುಟ್ಟ ಗುಂಡೂ ಎದೆಯಾಳದಲ್ಲಿ ಮಿಸುಕಾಡಿದ.

ಗುಂಡು ಕನ್ನಡ ಕೂಟದ ಸಕ್ರಿಯ ಸದಸ್ಯನಾಗಿದ್ದಕ್ಕೂ ಸಾರ್ಥಕವಾಯಿತು. ಕ.ಕೂ.ದ ಅಧ್ಯಕ್ಷರ ಮೇಲೆ ಸ್ವಲ್ಪ ಇನ್ಫ್ಲುಯನ್ಸ್‌ ಉಪಯೋಗಿಸಿ ಕಿಟ್ಟೀಗೆ ಆಮಂತ್ರಣ ಕಳಿಸಿದ್ದಾಯಿತು. ವೀಸಾನೂ ಸಿಕ್ಕಿತು. ಕನ್ನಡಕೂಟದ ಸಮಾರಂಭ ಒಂದರಲ್ಲಿ ಕಿಟ್ಟಿಯ ಸಂಗೀತ ಕಚೇರಿ ಇಟ್ಟುಕೊಳ್ಳಲಾಯಿತು.

ಸಮಾರಂಭಕ್ಕೆ ಒಂದು ವಾರ ಇರಬೇಕಾದರೆ ಕಿಟ್ಟಿಯ ಸವಾರಿ ಅಮೆರಿಕಾಗೆ ಚಿತ್ತೈಸಿತು. ಏರ್‌ಪೋರ್ಟಿನಲ್ಲಿ ಎರಡು ದೊಡ್ಡ ಸೂಟ್‌ಕೇಸುಗಳನ್ನು ಎಳೆಯುತ್ತಾ ಏಗುತ್ತಾ ಬಂದ ಕಿಟ್ಟಿಯನ್ನು ಗುಂಡು ಕೇಳಿದ ‘ಪ್ರಯಾಣ ಚನ್ನಾಗಿತ್ತೇನೋ?’ ಸುಸ್ತಾದ ಕಿಟ್ಟಿ ಹೌದೆಂಬಂತೆ ಗೋಣು ಹಾಕಿದ.

‘ಇದೇನು ಎರಡೆರಡು ದೊಡ್ಡ ಲಗೇಜ್‌ ತಂದಿದ್ದೀ. ಅಮೆರಿಕಾದಲ್ಲಿ ಬಟ್ಟೆ ಒಗೆಯೋದು ಕಷ್ಟ ಅಂತ ಎರಡು ತಿಂಗಳಿಗಾಗುವಷ್ಟು ಬಟ್ಟೆ ತಂದೆಯಾ? ಏನು ಕಥೆ ಮಾರಾಯಾ?’

‘ಅಲ್ಲಪ್ಪಾ ಒಂದರಲ್ಲಿ ಬಟ್ಟೆ ಬರೆ ಇದೆ. ಇನ್ನೊಂದು ಪೆಟ್ಟಿಗೆಯಲ್ಲಿ ಒಂದು ಸ್ವಲ್ಪ ಸಿಡಿ ಗಳನ್ನ ತಂದಿದ್ದೀನಿ. ಅಷ್ಟೆ’ ಅದು ಸ್ವಲ್ಪವೂ ಅಲ್ಲ ‘ಅಷ್ಟೆ’ ಅಂತ ಹೇಳುವಷ್ಟು ಕಡಿಮೆಯಂತೂ ಅಲ್ಲವೇ ಅಲ್ಲ ಅಂತ ಪೆಟ್ಟಿಗೆಯ ಗಾತ್ರವೇ ಹೇಳುತ್ತಿತ್ತು.

ಸಮಾರಂಭದ ದಿನ ಕಿಟ್ಟಿಯ ತರಾತುರಿ ಹೇಳತೀರದು. ಹುಟ್ಟಾ ಕಲೆಗಾರನಾದ ಅವನಿಗೆ ಸಿದ್ಧತೆ ಮಾಡಿಕೊಳ್ಳುವಂತಹದ್ದೇನೂ ಇರಲಿಲ್ಲ. ಆದರೆ ಸರಸ್ವತಿ ಕಟಾಕ್ಷದ ಜೊತೆಗೆ ಲಕ್ಷ್ಮಿ ಕಟಾಕ್ಷವನ್ನೂ ಹೇಗಾದರೂ ಸಂಪಾದಿಸಬೇಕೆಂಬುದೇ ಈ ತರಾತುರಿಗೆ ಕಾರಣ. ಸೂಟ್‌ಕೇಸಿನಿಂದ ಸಿಡಿಗಳನ್ನು ತೆಗೆದು ಎಣಿಸಿದ್ದೇನು, ಅವಕ್ಕೆ ಎಷ್ಟು ಬೆಲೆ ಇಟ್ಟರೆ ಒಳ್ಳೆಯದು ಅಂತ ಲೆಕ್ಕಚಾರ ಮಾಡಿದ್ದೇನು, ಇಷ್ಟು ಸಿಡಿ ಮಾರಿದರೆ ಎಷ್ಟು ದುಡ್ಡಾಗಬಹುದಂತ ಗುಣಾಕಾರ ಮಾಡಿದ್ದೇನು? ಬೆಂಗಳೂರಿನಲ್ಲಿ ನೂರು ರೂಪಾಯಿಗೆಲ್ಲ ಸಿಕ್ಕುವ ಸಿಡಿಗಳಿಗೆ ಇಲ್ಲಿ ಹತ್ತು ಡಾಲರುಗಳಿಗೆ ಭಡ್ತಿ ಸಿಕ್ಕಿತ್ತು! ಎಷ್ಟಾದರೂ ಫಾರಿನ್‌ ಟ್ರಾವಲ್‌ ಮಾಡಿದ ಸಿಡಿಗಳಲ್ಲವೆ? ಗುಂಡೂಗೆ ತಲೆ ಚಿಟ್ಟು ಹಿಡಿದು ಹೋಯಿತು. ಆದರೆ ತಾನೇ ತಲೆ ಮೇಲೆ ಎಳೆದುಕೊಂಡ ಪ್ರಾರಬ್ಧ. ರೇಗೋಕಾಗುತ್ತಾ? ಅಂತ ಸುಮ್ಮನಾದ.

ಸಮಾರಂಭಕ್ಕೆ ಎರಡು ಗಂಟೆಗೆ ಮುಂಚೆಯೇ ಅಲ್ಲಿಗೆ ಹೋಗಬೇಕಂತ ಶುರು ಮಾಡಿದ ಕಿಟ್ಟಿಯ ವರಾತವನ್ನು ‘ಈಗ ಹೋದರೆ ಅಲ್ಲಿ ವ್ಯವಸ್ಥಾಪಕರೇ ಬಂದಿರಲ್ಲ.’ ಅಂತ ಹೇಳಿ ತಪ್ಪಿಸಿಕೊಂಡ ಗುಂಡು. ಅಂತೂ ಇಂತೂ ಕಚೇರಿಗೆ ಒಂದು ಗಂಟೆಗೆ ಮುಂಚೆ ಸಭಾಂಗಣಕ್ಕೆ ಹೋದರು. (ಭಾರವಾಗಿದ್ದ ಸಿಡಿಗಳ ಪೆಟ್ಟಿಗೆಯನ್ನು ಹೊತ್ತು ತಂದವನು ಗುಂಡೂ ಅಂತ ಪ್ರತ್ಯೇಕವಾಗಿ ಹೇಳಬೇಕೆ?) ಅಲ್ಲಿ ಬಂದ ವ್ಯವಸ್ಥಾಪಕರನ್ನೆಲ್ಲ ಪರಿಚಯ ಮಾಡಿಸಿಕೊಡುವುದಕ್ಕಿಲ್ಲ ತನ್ನ ಸಿಡಿಗಳನ್ನು ಜನರ ಗಮನ ಸೆಳೆಯುವಂತಹ ಸ್ಥಳದಲ್ಲಿ ಇಡಬೇಕಂತ ಕಿಟ್ಟಿಯ ತಾಕೀತಾಯಿತು. ‘ನಾನು ನೋಡಿಕೋತೀನಿ. ಸುಮ್ಮನಿರು.’ಅಂತ ಹೇಳಿ ಗುಂಡು ತಲೆ ಮರೆಸಿಕೊಂಡು ಹೋದ. ಇಲ್ಲೇ ಇದ್ದರೆ ಕಿಟ್ಟಿಯಿಂದ ಇನ್ನೂ ಹಲವಾರು ತಾಕೀತುಗಳು ಬಂದಾವು ಅನ್ನುವ ಅಂಜಿಕೆ ಅವನಿಗೆ!

ಸಿಡಿಗಳನ್ನು ಒಂದು ಟೇಬಲ್‌ ಮೇಲೆ ಇಟ್ಟು ಅವುಗಳ ಬೆಲೆಗಳನ್ನು ನೀಟಾಗಿ ಬರೆದು ಅಂಟಿಸಿ ತನ್ನ ಕೈ ಚಳಕವನ್ನು ತಾನೇ ನೋಡಿ ಮೆಚ್ಚಿಕೊಳ್ಳುತ್ತಿದ್ದ ಗುಂಡೂ ಹಿಂದಿನಿಂದ ಕಿಟ್ಟಿಯ ಸ್ವರ ಕೇಳಿ ಹೌಹಾರಿದ! ‘ಏನೋ ಇದು! ಈ ಜಾಗ ಚನ್ನಾಗಿಲ್ಲ. ಕತ್ತಲೆಯಾಗಿದೆ. ಜನರಿಗೆ ಇಲ್ಲಿ ಸಿಡಿ ಇರೋದೇ ಗೊತ್ತಾಗಲ್ಲ. ಅದೂ ಅಲ್ದೆ ಅಲ್ಲಿ ನನ್ನ ಕಚೇರಿ ನಡೆಯುವಾಗ ಇಲ್ಲಿ ಒಬ್ಬರು ಕೂತಿರಬೇಕು. ಯಾರಾದರೂ ಎಗರಿಸಿಕೊಂಡು ಹೋದರೆ!’ ಕಿಟ್ಟಿ ಇನ್ನೂ ಏನೇನೋ ಬಡಬಡಿಸುತ್ತಿದ್ದ.

ಗುಂಡೂಗೆ ನಿಜವಾಗಿಯೂ ರೇಗಿ ಹೋಯಿತು. ಅಲ್ಲ ಇಷ್ಟೆಲ್ಲ ಊಟ, ಉಪಚಾರ, ವಸತಿ, ಸಂಭಾವನೆ ಅಂತ ಮಾಡಿದರೂ ಕೂಡಾ ಎಲ್ಲಾದರೂ ಹುಳುಕು ಹುಡುಕುತ್ತಾನೆಯೇ ಹೊರತು ಒಂದು ಕೃತಜ್ಞತೆ ಇಲ್ಲವಲ್ಲ! ಅನ್ನಿಸಿಬಿಟ್ಟಿತು. ಇಷ್ಟರಲ್ಲಿ ‘ಕಚೇರಿ ಶುರುವಾಗಲಿದೆ’ ಅಂತ ಯಾರೋ ಬಂದು ಕಿಟ್ಟಿಯನ್ನು ಎಳೆದುಕೊಂಡು ಹೋದರು. ತನ್ನ ಸಿಡಿಗಳನ್ನು ಕರುಣಾಜನಕ ದೃಷ್ಟಿಯಿಂದ ನೋಡುತ್ತಾ ತೆರಳಿದ ಕಿಟ್ಟಿ.

ಕಚೇರಿ ಚೆನ್ನಾಗಿ ನಡೆಯಿತು. ಬಂದವರೆಲ್ಲ ತಲೆದೂಗಿದರು. ವಂದನಾರ್ಪಣೆ ಮಾಡಲು ಬಂದವರು ಸರಸ್ವತಿ ಅಂತ ಕನ್ನಡ ಕೂಟದ ಪದಾಧಿಕಾರಿಗಳಲ್ಲೊಬ್ಬರು. ಅವರಿಗೆ ‘ ಸರಸ್ವತಿ’ ಅನ್ನೋದು ಅನ್ವರ್ಥ ನಾಮ ಅಲ್ಲ ಅಂತ ಎಲ್ಲರಿಗೂ ಗೊತ್ತಿರುವ ಓಪನ್‌ ಸೀಕ್ರೆಟ್‌. ಅವರು ಕಷ್ಟದಿಂದ ಯಾರೋ ಬರೆದುಕೊಟ್ಟ ಭಾಷಣವನ್ನು ಓದುತ್ತಿದ್ದರು. ‘ಇಂತಹ ಅದ್ಭುತ ಕಚೇರಿಯನ್ನು ನೀಡಿ ನಮ್ಮನ್ನೆಲ್ಲ...(ಯಾಕೋ ತಡವರಿಸಿದ ಸರಸ್ವತಿಯನ್ನು ನೋಡಿ ಮುಂದಿನ ಪದ ಸ್ವಲ್ಪ ಕಷ್ಟದ್ದು ಅಂದುಕೊಂಡ ಗುಂಡು) ಗ..ಗ.ಗಂಧರ್ವ....ಲೋಕಕ್ಕೆ ಕರೆದೊಯ್ದ ಕೃಷ್ಣಮಾಚಾರ್ಯರಿಗೆ ಅನಂತನ ವಂದನೆಗಳು.’ ಅಂತ ಹೇಳಿ ಬೆವರೊರೆಸಿಕೊಂಡರು ಸರಸ್ವತಿ.

ಪಾಪ ಯಾವಾಗಲೂ ಬೆಂಗಳೂರು ಕನ್ನಡದಲ್ಲಿ ಮಾತಾಡುವ ಅವರಿಗೆ ಇಷ್ಟು ಕಷ್ಟದ ಭಾಷಣ ಬರೆದುಕೊಟ್ಟರೆ ಹೇಗೆ? ಅಂತ ಸಹಾನುಭೂತಿ ಉಂಟಾಯಿತು ಗುಂಡೂಗೆ. ಆದರೆ ‘ಅನಂತ ವಂದನೆಗಳು’ ಅಂತ ಬರೆದುಕೊಟ್ಟಿದ್ದು ಅವರ ಬಾಯಲ್ಲಿ ‘ಅನಂತನ ವಂದನೆಗಳು’ ಆಗಿದ್ದು ಸಖತ್‌ ತಮಾಷೆಯಾಗಿತ್ತು.

ಭಾಷಣ ಮುಂದುವರೆಯಿತು. ‘ಕೃಷ್ಣಮಾಚಾರ್ಯರ ಗಾನ ಸೌರಭವನ್ನು ಸವಿಯಲು ಕಾರಣ.......ಭೂತರಾದ ಗುಂಡೂ ರಾವ್‌ ಅವರಿಗೆ ನಮ್ಮ ಕೃತಘ್ನತೆಗಳು.‘ಅಯ್ಯೋ ರಾಮ! ನನ್ನನ್ನು ಭೂತ ಮಾಡಿದ್ದೂ ಅಲ್ಲದೆ ತಾವು ಕೃತಘ್ನರೂ ಅಂತ ಬೇರೆ ಹೇಳ್ತಾರಲ್ಲ! ಕನ್ನಡಾಭಿಮಾನಿ ಗುಂಡೂಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ. ಅವನ ಹೆಂಡತಿ ಪಕ್ಕದಲ್ಲೇ ಕುಳಿತಿದ್ದವಳು ಹೇಳಿದಳು.

‘ನಾನು ಎಷ್ಟು ಹೇಳ್ತೀನಿ. ಸ್ವಲ್ಪ ತೂಕ ಇಳಿಸಿ ಅಂತ. ಕೇಳ್ತೀರಾ? ಈಗ ನೋಡಿ ‘ಭೂತ’ ಅಂತ ಬಿರುದು ಸಿಕ್ಕಿಬಿಟ್ಟಿತು. ಅಂದರೆ ನೀವು ಭೂತಾಕಾರ ಇದ್ದೀರಿ ಅಂತ’ ಕಿಸಕ್ಕನೆ ನಕ್ಕಳು. ‘ನಗು ನಗು. ಅದೇನೋ ಬೆಕ್ಕಿಗೆ ಆಟ. ಇಲಿಗೆ ಪ್ರಾಣ ಸಂಕಟ ಅಂತಾರಲ್ಲ. ಹಾಗೇ. ನನಗೆ ಕಿಟ್ಟಿ ಕೊಡೋ ಕಷ್ಟವೇ ಸಾಕಾಗಿದೆ. ಈಗ ನೀನು ಬೇರೆ.’ ಅಂತ ಹೆಂಡತಿಯ ಮೇಲೆ ರೇಗಿದ.

ತನ್ನ ಸಿಡಿಗಳೆಲ್ಲವೂ ಮಾರಾಟವಾಗಿ ಹೋದವು ಅಂತ ತಿಳಿದ ಕಿಟ್ಟಿಗೆ ಖುಷಿಯೋ ಖುಷಿ. ಆದರೆ ಹಾಗೇ ಬೇಸರವೂ ಆಯಿತು. ಈಗಲೇ ಎಲ್ಲ ಮಾರಾಟವಾಗಿ ಹೋಗಿದೆ! ಇನ್ನೂ ಎರಡು ತಿಂಗಳು ಅಮೆರಿಕಾದಲ್ಲಿ ಊರೂರು ತಿರುಗಿ ಎಷ್ಟು ಕಚೇರಿ ಕೊಡಬೇಕಾಗಿದೆ! ಅಲ್ಲಿ ಮಾರುವುದಕ್ಕೆ ಸಿಡಿಗಳಿಲ್ಲವಲ್ಲ.

ಅಂತೂ ಗುಂಡೂನ ಗೋಳು ಹುಯ್ದು, ಅಂಗಲಾಚಿ ಯಾರೋ ಸಾಫ್ಟ್‌ವೇರ್‌ ಎಂಜಿನಿಯರ್‌ ಹಿಡಿದು ಅವರ ಕೈಯಲ್ಲಿ ಸಿಡಿಗಳನ್ನು ಕಾಪಿ ಮಾಡಿಸಿದ. ಇನ್ಯಾರೋ ಇಂಡಿಯಾದಿಂದ ಬರುವವರ ಕೈಯಲ್ಲಿ ಸಿಡಿಗಳನ್ನು ತರಿಸಿಕೊಂಡ. ಹಾಗೂ ಹೀಗೂ ಗುಂಡು ಮನೆಯಿಂದ ಮುಂದಿನ ಕಚೇರಿಗಾಗಿ ನ್ಯೂಯಾರ್ಕಿಗೆ ಹೊರಡುವಾಗ ಕಿಟ್ಟಿಯ ಎರಡನೆಯ ಸೂಟ್‌ಕೇಸಿನ ಹೊಟ್ಟೆಯ ತುಂಬ ಮತ್ತೆ ಸಿಡಿಗಳು ಕುಳಿತಿದ್ದವು.

ಕೊನೆಗೊಮ್ಮೆ ಕಿಟ್ಟಿಯನ್ನು ನ್ಯೂಯಾರ್ಕಿಗೆ ಕಳಿಸಿಕೊಟ್ಟಾಗ ಗುಂಡೂಗೆ ತನ್ನ ಚಿಕ್ಕಂದಿನ ಜಿಜ್ಞಾಸೆಗೆ ಉತ್ತರ ಸಿಕ್ಕಿತ್ತು. ಆ ದಿನ ಕಿಟ್ಟಿ ಬಂದಿದ್ದು ಮಸಾಲೆ ದೋಸೆ ತಿನ್ನೋಕಾಗಿ ನೋಟ್ಸಿಗಾಗಿಯಲ್ಲ. ಆಮೇಲೆ ಕಿಟ್ಟಿ ಶಾಲು ಹೊದಿಸಿದ್ದು ಅಮೆರಿಕಾದ ಡಾಲರ್‌ ಎಂಬ ಕಡು ರುಚಿಯ ದೋಸೆಗಾಗಿ.

ಕಿಟ್ಟಿಯನ್ನು ಕಳಿಸಿಕೊಟ್ಟು ಮನೆಯ ಕಡೆ ಡ್ರೈವ್‌ ಮಾಡುತ್ತಿದ್ದಾಗ ಗುಂಡೂ ಕಾರಿನಲ್ಲಿ ಕಿಟ್ಟಿಯ ಸಿಡಿಯ ಒಂದು ಹಾಡು ಕೇಳಿ ಬರುತ್ತಿತ್ತು. ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ.....’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X