ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದರ ನಿಮಿತ್ತಂ ಗಾಯಕ ವೇಷಂ!

By Staff
|
Google Oneindia Kannada News


ಅಳೆದೂ ಸುರಿದೂ ಮುಖದಲ್ಲಿ ಕೊಂಚವೇ ನಗೆ ತೇಲಿಸುತ್ತಾ ಕುಳಿತುಕೊಳ್ಳಲು ಹೇಳಿ ‘ಏನ್ಮಾಡ್ತಾ ಇದ್ದೀಯೋ? ಎಲ್ಲಿದ್ದೀ ಈವಾಗ?’ಅಂತ ಯೋಗಕ್ಷೇಮ ವಿಚಾರಿಸಿದ. ಗುಂಡೂಗೆ ಈವಾಗ ‘ಯಾಕಾದರೂ ಬಂದೆನೋ’ ಅನ್ನಿಸೋಕೆ ಹತ್ತಿತ್ತು. ಅವನು ಕಿಟ್ಟಿ ತನ್ನ ಗುರುತು ಹೇಳಿದಾಕ್ಷಣ ಬಂದು ತಬ್ಬಿಕೊಂಡೇ ಬಿಡುತ್ತಾನೆ ಅಂದುಕೊಂಡಿದ್ದ.

‘ಶಿಕಾಗೊದಲ್ಲಿ ಡಾಕ್ಟರಾಗಿದ್ದೀನಿ ಕಣಪ್ಪ. ಈಗಾಗಲೇ ಇಪ್ಪತ್ತು ವರ್ಷಗಳ ಮೇಲಾಯಿತು. ನಿನ್ನನ್ನು ನೋಡಿ ಇಪ್ಪತ್ತೈದು ವರ್ಷಾನಾದ್ರೂ ಆಗಿರಬೇಕಲ್ವಾ?’ಅಂದ.

‘ಶಿಕಾಗೊ’ ಅಂತ ಕೇಳಿದಕೂಡಲೆ ಕಿಟ್ಟಿಯ ಕಿವಿ ನೆಟ್ಟಗಾಗಿದ್ದು ಗುಂಡೂಗೆ ಕಾಣಿಸದಿರಬೇಕಾದರೆ ಅದಕ್ಕೆ ಅವನ ಕಣ್ಣು ಮಂದವಾಗಿದ್ದೇ ಕಾರಣ. ಇದ್ದಕ್ಕಿದ್ದ ಹಾಗೆ ಕಿಟ್ಟಿಯ ಹಾವಭಾವ ಬದಲಾಗಿಹೋಯಿತು! ಎಲ್ಲಿಲ್ಲದ ಸಲಿಗೆಯಿಂದ ಗುಂಡೂಗೆ ತನ್ನ ಮನೆ ತೋರಿಸಿದ, ಮಕ್ಕಳನ್ನೆಲ್ಲ ಪರಿಚಯ ಮಾಡಿಸಿದ, ಹೆಂಡತಿಗೆ ‘ಬೇಗ ಕಾಫಿ ಮಾಡೇ, ಇವನು ನನ್ನ ಚಡ್ಡಿ ದೋಸ್ತಿ’ ಅಂದ.

ಗುಂಡೂಗಂತೂ ತುಂಬ ಸಂತೋಷ ಆಯಿತು. ‘ಪಾಪ ಮೊದಲು ಕಿಟ್ಟಿಗೆ ಏನೋ ಕನ್ಫ್ಯೂಷನ್‌ ಆಗಿತ್ತು. ಈಗ ನಾನ್ಯಾರು ಅಂತ ಸರಿಯಾಗಿ ಗೊತ್ತಾದ ಮೇಲೆ ನೋಡು ಹೇಗೆ ಅಕರಾಸ್ಥೆ ತೋರಿಸ್ತಾ ಇದ್ದಾನೆ’ ಅಂದುಕೊಂಡ.

‘ನಾಳೆ ನಂಗೆ ಸಂಗೀತ ಕಚೇರಿ ಇದೆ. ನಾಡಿದ್ದು ನೀನು ಊಟಕ್ಕೆ ಬರಲೇಬೇಕು’ ಅಂತ ಹೇಳಿ ಗುಂಡೂನ ಕಳಿಸಿಕೊಟ್ಟ ಕಿಟ್ಟಿ. ಅವನನ್ನು ಆ ಕಡೆ ಸಾಗಹಾಕಿ ಗೇಟು ಬಾಗಿಲು ಮುಚ್ಚಿ ಬಂದು ಹೆಂಡತಿಗೆ ಹೇಳಿದ. ‘ನಾನೂ ಇಷ್ಟು ದಿನದಿಂದ ಅಮೆರಿಕಾಗೆ ಹೋಗೋಕೆ ಯಾರನ್ನು ಹಿಡಿದರೆ ಸರಿಯಾಗುತ್ತೆ ಅಂತ ಯೋಚಿಸ್ತಾನೇ ಇದ್ದೆ. ಕಡೆಗೂ ಒಬ್ಬ ಬಕರ ಸಿಕ್ಕೇಬಿಟ್ಟ ಕಣೆ. ಎಲ್ಲ ಅವನ ಕೃಪೆ’ ಅಂತ ನಿಂತಲ್ಲೇ ದೇವರಿಗೆ ನಮಸ್ಕಾರ ಮಾಡಿದ.

ಬಂದೇಬಂತು ಆದಿನ! ಊಟಕ್ಕೆ ಬಂದ ಗುಂಡೂಗೆ ರಾಜ ಮರ್ಯಾದೆ! ಏನು ಉಪಚಾರ! ಏನು ಕಥೆ! ಗುಂಡೂಗಂತೂ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿಬಿಟ್ಟಿತು. ಹೊರದೇಶದಲ್ಲಿರೋ ಪರದೇಶಿ ಪ್ರಾಣಿಗಳಿಗೆಲ್ಲ ಹಾಗೇ. ಭಾರತ ಅಂದರೆ ಪ್ರೀತಿಯ ಗಣಿ ಅನ್ನೋ ಭ್ರಮೆ.

ಭರ್ಜರಿ ಊಟವಾದ ಮೇಲೆ ಕಿಟ್ಟಿ ಗುಂಡೂನ ಮದುಮಗನ ಹಾಗೆ ಪೀಠದ ಮೇಲೆ ಕುಳ್ಳಿರಿಸಿ ಬಹಳ ಆತ್ಮೀಯತೆಯಿಂದ ಒಂದು ಶಾಲನ್ನು ಹೊದಿಸಿದ. ಅಷ್ಟೇ ಅಲ್ಲ. ತಾನು ಶಾಲು ಹೊದೆಸುತ್ತಿರುವ ದೃಶ್ಯವನ್ನು ಶಾಶ್ವತವಾಗಿ ಸೆರೆ ಹಿಡಿದಿಡುವ ಸಲುವಾಗಿ ತನ್ನ ಮಡದಿಗೆ ಫೋಟೋ ಕ್ಲಿಕ್ಕಿಸಲು ಹೇಳಿದ. ಗುಂಡೂಗೆ ಒಂದು ಕಡೆ ಸಂಕೋಚ, ಇನ್ನೊಂದು ಕಡೆ ಸಂತೋಷ. ಅಷ್ಟೇ ಅಲ್ಲ, ಬಾಲ್ಯದ ಸ್ನೇಹವನ್ನು ಇದುವರೆಗೂ ಎದೆಯಲ್ಲಿ ಜತನವಾಗಿ ಕಾಪಾಡಿಕೊಂಡು ಬಂದಿರುವ ಗೆಳೆಯನ ಬಗ್ಗೆ ಏನೋ ಅಭಿಮಾನ! ಸ್ವಲ್ಪ ಕಣ್ಣೂ ತೇವವಾಯಿತು.

ಮರುದಿನ ಗುಂಡೂ ಅಪ್ಪನ ಮನೆಯ ಹತ್ತಿರದಲ್ಲೇ ವಾಸವಾಗಿದ್ದ ಕಿಟ್ಟಿಯ ತಂಗಿ ಲಲಿತ ವಾಕಿಂಗ್‌ ಹೋಗುತ್ತಿದ್ದವಳು ಸಿಕ್ಕಿದಳು. ಗುಂಡೂನೂ ಅವಳ ಜೊತೆ ಇಷ್ಟು ದೂರ ನಡೆದ. ‘ಯಾಕೆ ನಿಮ್ಮ ಜೊತೆಗೆ ವಾಕ್‌ ಮಾಡೋರು ಯಾರೂ ಸಿಗಲಿಲ್ವಾ?’ಅಂದ.

‘ನಮ್ಮ ಯಜಮಾನರಿಗೆ ಈವತ್ತು ಹುಶಾರಿಲ್ಲ. ಇಲ್ಲದಿದ್ದರೆ ದಿನಾ ಅವರೂ ನನ್ನ ಜೊತೆ ಬರ್ತಾರೆ.’ ಅಂದಳು.

ಗುಂಡೂ ಕಿಟ್ಟಿಯ ಸದ್ಗುಣಗಳ ವರ್ಣನೆ ಮಾಡಿದ್ದೇ ಮಾಡಿದ್ದು. ಲಲಿತ ಮುಸಿಮುಸಿ ನಕ್ಕಿದ್ದು ಅವನಿಗೆ ಕಾಣಿಸಲಿಲ್ಲ. ಕಣ್ಣು ಮಂದ ಅಂತ ಆಗಲೇ ಹೇಳಿದ್ದೆನಲ್ಲ. ಕೊನೆಗೆ ‘ನನಗೆ ರಾಜೋಪಚಾರ ಮಾಡಿದ್ದೂ ಅಲ್ಲದೆ ಶಾಲು ಬೇರೆ ಹೊದಿಸಿದ.’ ಅಂತ ಗುಂಡೂ ಹೇಳಿದಾಗ ಲಲಿತ ಗೊಳ್ಳಂತ ಜೋರಾಗಿ ನಕ್ಕುಬಿಟ್ಟಳು!

ಆಶ್ಚರ್ಯಚಕಿತನಾಗಿ ನಿಂತ ಗುಂಡೂಗೆ ಅವಳೇ ಹೇಳಿದಳು. ‘ನಮ್ಮಣ್ಣನ ಮನೇಲಿ ಶಾಲುಗಳು ಧಂಡಿಯಾಗಿ ಬಿದ್ದಿರುತ್ತವೆ. ಎಲ್ಲಿ ಕಚೇರಿ ಕೊಟ್ಟರೂ ಅವನಿಗೆ ಶಾಲು ಹೊದಿಸ್ತಾರಲ್ಲ, ಅದಕ್ಕೆ. ಅದನ್ನು ರವಾನಿಸೋದೇ ದೊಡ್ಡ ಸಮಸ್ಯೆ ಅವನಿಗೆ. ಮೊನ್ನೆ ‘ಕೆಲಸದವಳಿಗೂ ಶಾಲು ಕೊಟ್ಟೆ’ ಅಂತ ಹೇಳ್ತಿದ್ದ.’ ಯಾಕೋ ತಲೆಗೇರಿದ್ದ ನಶೆ ಇಳಿದಂತಾಗಿ ಗುಂಡೂ ‘ಸರಿ ನಾನಿನ್ನು ಬರಲಾ’ ಅಂತ ಲಲಿತಾಗೆ ವಿದಾಯ ಹೇಳಿ ನಡೆದೇಬಿಟ್ಟ.

ಗುಂಡೂ ಅಮೆರಿಕಾಗೆ ವಾಪಾಸು ಹೋಗೋಕೆ ಎರಡು ದಿನ ಬಾಕಿ ಇದೆ ಅನ್ನಬೇಕಾದರೆ ಕಿಟ್ಟಿಯ ಫೋನ್‌ ಬಂತು. ‘ತುಂಬ ಸಂತೋಷ ಆಯ್ತು ಕಣೋ ನಂಗೆ ನಿನ್ನನ್ನ ಪುನಃ ನೋಡಿದ್ದು, ನೀನು ನಮ್ಮನೇಗೆ ಬಂದಾಗ ಜೊತೆಯಾಗಿ ಕಾಲ ಕಳೆದಿದ್ದೂ ಎಲ್ಲ ಮರೆಯೋಕೇ ಆಗಲ್ಲ.’ ಅಂದ.

ಹೊರದೇಶದ ಪರದೇಶಿ ಪ್ರಾಣಿಗೆ ಪುನಃ ಕಣ್ಣು ತುಂಬಿಕೊಂಡು ಬಂತು. ‘ನೀನು ಯಾವಾಗಲಾದರೂ ಅಮೆರಿಕಾಗೆ ಬರಬೇಕು, ಕಿಟ್ಟಿ’ ಅಂದ ಗದ್ಗದ ಕಂಠದಿಂದ. ಅದಕ್ಕಾಗೇ ಕಾಯುತ್ತಿದ್ದವರ ಹಾಗೆ ಕಿಟ್ಟಿ ‘ಬರುವ ಜೂನಿನಲ್ಲಿ ಬರೋಣಾಂತ ಇದ್ದೀನಿ. ಶಿಕಾಗೊದಲ್ಲಿ ನನ್ನದೊಂದು ಕಚೇರಿ ಇಡಿಸಪ್ಪ. ನೀನು ನಿಮ್ಮ ಕನ್ನಡ ಕೂಟದ ಮೂಲಕ ಸ್ಪಾನ್ಸರ್‌ ಮಾಡಿಸೋಕಾಗುತ್ತಾ? ಹಾಗೇ ಬೇರೆ ಕನ್ನಡ ಕೂಟಗಳ ಕಾಂಟಾಕ್ಟು ಮಾಡಿಕೊಟ್ಟರೆ ಒಳ್ಳೆಯದಿತ್ತು. ಬಂದರೆ ಎರಡು ತಿಂಗಳ ಕಾಲನಾದರೂ ಇರಬೇಕಾಗುತ್ತೆ......’ ಅಂತ ಏನೇನೋ ಬಡಬಡಿಸಿದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X