• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಯಗ್ರೀವ ಪುರಾಣಂ ಬಲು ಹಿತಂ.. ಬಲು ಸ್ವಾದಂ!

By Staff
|

ಪುರಾಣ, ಅಡುಗೆ, ಸಂಬಂಧ, ದೇವರು, ಜೀವನ ಪ್ರೀತಿ ಎಲ್ಲವೂ ಹಯಗ್ರೀವನಲ್ಲಿ ಲೀನ!ಹಯಗ್ರೀವ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಪ್ಪಾ...

Hayagreeva Puranam!ನಮಸ್ಕಾರ, ನೀವು ದಟ್ಸ್ ಕನ್ನಡದಲ್ಲಿ ಬರೀತೀರಲ್ವಾ, ಲಾಸ್ಟ್ ವೀಕ್ ನಿಮ್ಮ ರಿಪೋರ್ಟ್ ನೋಡಿದೆ, ವಾಣಿ ಐ ಥಿಂಕ್" ಎಂಬ ಧ್ವನಿ ಕೇಳಿ ತರಕಾರಿ ಕೊಳ್ಳುತ್ತಿದ್ದ ನಾನು ಪ್ರತಿ ನಮಸ್ಕಾರ ಹೇಳುವಷ್ಟ್ರಲ್ಲಿಯೇ ನನ್ಹೆಸರು ಹಯವದನರಾವ್, ಇವ್ಳು ಲಲಿತ ನನ್ನ ಪತ್ನಿ.. ನಾವಿಲ್ಲಿಗೆ ಮಗಳ ಮನೆಗೆ ಬಂದಿದ್ದೇವೆ" ಎಂದರಾತ ಬಡಬಡನೆ.

ಕನ್ನಡದಲ್ಲಿ ಮಾತನಾಡಿದ್ರೆ ಮೂತಿ ತಿರುವೋ ಕಾಲ ಇದು. ಅಂಥದ್ದರಲ್ಲಿ ಸಿಂಗಪುರದಲ್ಲಿ ಕನ್ನಡಿಗರು ತಾವೆಂದು ಪರಿಚಯ ಮಾಡಿಕೊಂಡ ಆ ಹಿರಿಯ ದಂಪತಿಗಳ ಕಂಡು ಸಂತಸವಾಯಿತು. ಪರಸ್ಪರ ಪರಿಚಯ, ಸಂಭಾಷಣೆ ಮುಂದುವರೆದಂತೆ ಸ್ವಲ್ಪ ಹಾಸ್ಯ ಪ್ರವೃತ್ತಿಯ ಆತ ನೋಡಿ, ನನ್ನ ಹೆಸರಿನ ಅರ್ಥ ಎನ್ನುವ ಮೊದಲೇ, ನಾನು ನನ್ನ ಮಾತು ಶುರುಮಾಡಿದೆ.

ಹಯಗ್ರೀವ ಅಂದರೆ ಕುದುರೆ ತಲೆಯ ಮನುಷ್ಯ. ಪರಕಾಲ ಮಠದ ದೇವ್ರು, ಹಯವದನ ಎಂಬುದು ಗಿರೀಶ್ ಕಾರ್ನಾಡರ ಹೆಸರಾಂತ ನಾಟಕ. ವಿದ್ಯೆಗೆ ಪೂಜಿಪ ದೇವರು ಎಷ್ಟೆಲ್ಲಾ ಇದೆ ಹಯವದನನಲ್ಲಿ" ಎಂದೆ.

ಬರೆಯೋವ್ರಿಗೆ ಇಷ್ಟು ಮಾಹಿತಿ ಇದ್ರೆ ಸಾಕು" ಎಂದು ನಗುತ್ತಾ , ಇದೇನ್ರಿ ಇಲ್ಲಿ ಎಲ್ಲಕ್ಕೂ ಶಾರ್ಟ್ ಫಾರ್ಮ್ ಯೂನಿವರ್ಸಿಟಿಗೆ ಯೂ, ಜೂನಿಯರ್ ಕಾಲೇಜಿಗೆ ಜೆ.ಸಿ. ಹಾಗೆ ಇಲ್ನೋಡಿ ನನ್ನ ಹೆಸರನ್ನು ಇಲ್ಲಿನವರು ಶಾರ್ಟ್ ಆಗಿ ಹೇ ಅಥವಾ ಹಯ ಅಂತಾರೋ ಏನೋ ಎಂದು ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡು ನನ್ನ ಟೆಲಿಫೋನ್ ನಂಬರ್ ಪಡೆದು ಅತ್ತ ನಡೆದರು ಆ ಹಿರಿಯ ದಂಪತಿಗಳು.

***

ಇತ್ತ ಮನೆಯತ್ತ ನಡೆದ ನನ್ನ ತಲೆಯಲ್ಲಿ ಮೈಸೂರಿನ ಮಠವೊಂದರಲ್ಲಿ ಕಂಡಿದ್ದ, ಮರೆತೇ ಹೋಗಿದ್ದ ಹಯಗ್ರಿವ ದೇವರು ಮತ್ತೆ ನೆನಪಾದರು.

ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ ಸಟಿಕಾಕೃತಿಮ್ |

ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ ||

ನೆನಪಿಗೆ ಬಂತು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಶ್ಲೋಕ. ಹಾಗೆಯೇ ಬಾಯಲ್ಲಿ ನೀರೂರಿತು ಹಯಗ್ರೀವ ಜಯಂತಿಯಂದು ಅಮ್ಮ ಮಾಡುತ್ತಿದ್ದ ಹೆಸರುಕಾಳಿನ ಸಿಹಿ-ಹಯಗ್ರೀವ.

ವಿಷ್ಣುವಿಗೆ ಕುದುರೆ ಮುಖ ಯಾಕೆ ?:

ವಿಷ್ಣು ಕುದುರೆ ಮುಖದವನಾದ ಮೇಲೆ, ಆ ಅವತಾರಕ್ಕೆ ಕಾರಣ ಇರಲೇಬೇಕಲ್ಲವೇ? ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರ ಹಯಗ್ರೀವ ರೂಪ. ಮುಖ್ಯವಾಗಿ ಹಯಗ್ರೀವ ಅವತಾರವಾಗಿದ್ದು ವೇದೋಪದೇಶಕ್ಕೆ, ಜ್ಞಾನಾರ್ಜನೆಗೆ ಎನ್ನುತ್ತಾರೆ.

ದೇವೀ ಭಾಗವತದಲ್ಲಿ ಹಯಗ್ರೀವ ಎಂಬುವನೊಬ್ಬ ಕಶ್ಯಪ ಪ್ರಜಾಪತಿಯ ಪುತ್ರ. ದುರ್ಗೆಯಿಂದ ತನ್ನ ಹೆಸರೇ ಉಳ್ಳವಾ ಹಾಗೂ ಹಯ-ಮುಖ ಉಳ್ಳವನಿಂದ ತಾನು ಸಾಯಬೇಕೆಂದು ವರಪಡೆದ ಅಸುರ. ಅಸುರನಾದ ಮೇಲೆ ಋಷಿಮುನಿಗಳ ನಾಶ, ಸುರರೊಡನೆ ಕಾದಾಟ, ಇಂದ್ರನಿಗೆ ಗೇಟ್‌ಪಾಸ್ ಇದು ಇದ್ದದ್ದೇ. ಕಡೆಗೆ ಶರಣು, ಶರಣೆಂದು ದೇವತೆಗಳು ಮೊರೆಹೊಕ್ಕರು ಮಹಾವಿಷ್ಣುವಿಗೆ.

ಅಸುರ ಹಯಗ್ರೀವನೊಡನೆ ಸೆಣಸಿದ ವಿಷ್ಣುವಿಗೆ ಆತನನ್ನು ಕೊಲ್ಲಲಾಗಲಿಲ್ಲ. ಸುಸ್ತಾಗಿ ತನ್ನ ಲೋಕಕ್ಕೇ ಬಂದು ಕೈಯಲ್ಲಿದ್ದ ಧನಸ್ಸನ್ನೇ ದಿಂಬನ್ನಾಗಿಸಿ ಯೋಗ ನಿದ್ರೆಗೊಳಗಾದ. ಯುದ್ದದಲ್ಲಿ ಸೋಲಿಸಲಾಗದೆ ಹಿಂತೆಗೆದ ವಿಷ್ಣುವಿನ ರೀತಿ, ಅಸುರ ಹಯಗ್ರೀವನಿಗೆ ಸಾವಿನ ಭೀತಿಯನ್ನು ದೂರಮಾಡಿತ್ತು. ದೇವತೆಗಳ ಲೋಕಕ್ಕೇ ಅಡಿ ಇಟ್ಟ.

ಈ ಅಸುರ ಹಯಗ್ರೀವನ ಕಾಟ ತಾಳಲಾರದೆ ಮತ್ತೆ ಯೋಗನಿದ್ರೆಯಲ್ಲಿದ್ದ ದೇವನನ್ನು ಎಬ್ಬಿಸಲು ಓಡಿ ಬಂದರು ಬ್ರಹ್ಮ, ಇಂದ್ರ, ಮಹೇಶ್ವರರು. ಏನು ಮಾಡಿದರೂ ಏಳಲೊಲ್ಲ ಮುರಾರಿ. ಕಡೆಗೆ ಧನಸ್ಸಿನ ಝೇಂಕಾರ ಮಾಡಲು ಯತ್ನಿಸಿದರು. ಆ ಕ್ಷಣದಲ್ಲಿ ಅಚಾತುರ್ಯ ನಡೆದು ಆ ಧನಸ್ಸಿನ ಕಂಬಿ, ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ಕತ್ತನ್ನು ಕೊಯ್ದಿತು.

ಅಯ್ಯಯ್ಯೋ, ವಿಷ್ಣುವಿನ ಕತ್ತು ಕಟ್, ಎಲ್ಲೆಲ್ಲೂ ಹಾಹಾಕಾರ. ಇದೀಗ ಸಹಾಯಕ್ಕೆ ಬಂದಾದ್ದು ಮಹಾಮಾಯೆ ದೇವಿ ದುರ್ಗೆ. ತಾನು ಅಸುರ ಹಯಗ್ರೀವನಿಗಿತ್ತ ವರವನ್ನು ಪಾಲಿಸಲು ನಡೆದ ಮಾಯಿಯಿದು ಎಂದು ದೇವತೆಗಳಿಗೆ ತಿಳಿಸಿ ಬ್ರಹ್ಮನಿಗೆ ಶ್ವೇತ ಹಯದ ಮುಖವನ್ನು ವಿಷ್ಣುವಿನ ದೇಹಕ್ಕೆ ಅಂಟಿಸಲು ಆಣತಿಯನಿತ್ತಳು. ತದನಂತರ ಯೋಗನಿದ್ರೆಯಿಂದ ಹೊರ ಬಂದ ವಿಷ್ಣು , ಅಸುರ ಹಯಗ್ರೀವನನ್ನು ಸಂಹರಿಸಿ ದೇವರು ಹಯಗ್ರೀವನಾದನಂತೆ.

ಹಯಗ್ರೀವ ಬರೀ ಹಿಂದೂಗಳಿಗೇ ಅಲ್ಲ ಬೌದ್ಧರಿಗೂ ಪ್ರಿಯನು. ಜ್ಞಾನಾರ್ಜನೆಯ ಮಾರ್ಗದಲ್ಲಿ ಬರುವ ತೊಡಕುಗಳನ್ನು ನಿವಾರಣೆ ಮಾಡುವವನು.

ಅಯ್ಯಂಗಾರ್ ಪೂಜಿಪ ಹಯಗ್ರೀವ...

ವೈಷ್ಣವ ಗುರು ಶ್ರೀ ರಾಮಾನುಜರು ಒಮ್ಮೆ ತಮ್ಮ ಬ್ರಹ್ಮಸೂತ್ರ ಭಾಷ್ಯವನ್ನು ಸರಸ್ವತೀದೇವಿಯ ದೇಗುಲದಲ್ಲಿ ದೇವರ ಎದುರು ಮಂಡಿಸಿದರಂತೆ. ಇವರ ಈ ಮಹಾ ಭಾಷ್ಯವನ್ನು ಕೇಳಿ ಸಂಪ್ರೀತಗೊಂಡ ಮಾತೆ ಅದಕ್ಕೆ ಅದಕ್ಕೆ "ಶ್ರೀಭಾಷ್ಯಂ" ಎಂದು ಹೆಸರಿಸಿ, ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ, ಕಾಲಿಗೆ ಗೆಜ್ಜೆಕಟ್ಟಿ, ಎರಡು ಕೈಯಲ್ಲಿ ಶಂಕು, ಚಕ್ರ, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಜಪಮಾಲೆ ಧರಿಸಿ, ಪತ್ನಿ ಲಕುಮಿಯೊಡನೆ ಆಸೀನನಾದ ಹಯಗ್ರೀವ ಮೂರ್ತಿಯನ್ನಿತ್ತಳಂತೆ.

ಒಂದು ಕತೆ :

ಶ್ರೀವೈಷ್ಣವ ಸ್ವಾಮಿ ದೇಶಿಕರ್ ಎಂಬುವರು ತೀರ್ಥಯಾತ್ರೆ ಮುಗಿಸಿ ಕಂಚಿಗೆ ವಾಪಸ್ಸಾಗುತ್ತಿದ್ದರು. ರಾತ್ರಿ ಪಯಣ ಬೇಡವೆಂದು ಮಾರ್ಗ ಮಧ್ಯದಲ್ಲಿ ಶ್ರೀಮಂತ ಧಾನ್ಯ ವ್ಯಾಪಾರಿಯೋರ್ವರ ಮನೆಯಲ್ಲಿ ತಂಗುವ ಅವಕಾಶ ಸಿಕ್ಕಿತ್ತು. ಅದೇಕೋ ಅಂದು ಅವರಿಗೆ ಹಯಗ್ರೀವನಿಗೆ ನೈವೇದ್ಯ ಮಾಡಲು ಹಣ್ಣು/ಹಂಪಲು ಸಿಗಲಿಲ್ಲ. ಬರಿ ನೀರನ್ನೇ ನೈವೇದ್ಯ ಮಾಡಿ ಬೇಸರದಿಂದಲೇ ಮಲಗಿದರು.

ಮಧ್ಯರಾತ್ರಿಯಲ್ಲಿ ದೇಶಿಕರನ್ನು ಎಬ್ಬಿಸಿದ ಶ್ರೀಮಂತ ನಿಮ್ಮ ಬಿಳೀ ಕುದುರೆ ನನ್ನ ಉಗ್ರಾಣದಲ್ಲಿದ್ದ ಕಡಲೆ/ಹೆಸರು/ಹುರುಳಿ" ಕಾಳುಗಳನ್ನು ತಿಂದಿದೆ. ದಯವಿಟ್ಟು ಬಂದು ಅದನ್ನು ಕಟ್ಟಿ ಹಾಕಿ ಎಂದು ಎಬ್ಬಿಸಿದನಂತೆ. ಆಶ್ಚರ್ಯಗೊಂಡು ತಕ್ಷಣ ಉಗ್ರಾಣಕ್ಕೆ ಹೋದ ದೇಶಿಕರು ಕಂಡದ್ದು, ಒಂದು ದಿವ್ಯ ಜ್ಯೋತಿ ಹಾಗೂ ತಿಂದ ಧಾನ್ಯದ ಚೀಲದ ತುಂಬಾ ಚಿನ್ನ. ಅಂದಿನಿಂದ ಹಯಗ್ರೀವನಿಗೆ ಪ್ರಸಾದ ಹೆಸರು : ಕಡಲೆ/ಹುರುಳಿ ಜೊತೆಗೆ ಬೆಲ್ಲ.

ಇನ್ನೊಂದು ಕತೆ :

ಉಡುಪಿಯ ಒಬ್ಬ ಅಕ್ಕಸಾಲಿಗ, ಚಿನ್ನದ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದನಂತೆ. ಏನೇ ಮಾಡಿದ್ರೂ ಗಣೇಶನ ಮುಖ ಆನೆಮೊಗವಾಗದೆ ಕುದುರೆ ಮುಖವಾಗುತ್ತಿತ್ತಂತೆ. ಕಡೆಗೆ ಬೇಸರಗೊಂಡ ಅಕ್ಕಸಾಲಿಗ ಆ ಮೂರ್ತಿಯನ್ನು ಕಸದಬುಟ್ಟಿಗೆ ಬಿಸಾಕಿದನಂತೆ.

ಅದೇ ದಿನ ರಾತ್ರಿ ಉಡುಪಿಯ ವಾದಿರಾಜಮಠವನ್ನು ಸ್ಥಾಪಿಸಿದ ವಾದಿರಾಜರ ಕನಸಿನಲ್ಲಿ , ವಿಷ್ಣು ಪ್ರತ್ಯಕ್ಷನಾಗುತ್ತಾನೆ. ನೋಡು ವಾದಿರಾಜ, ಕುದುರೆಮುಖನಾದ ನನ್ನನ್ನು ಅಕ್ಕಸಾಲಿಗ ಧೂಳಿನಲ್ಲಿ ಬಿಸಾಕಿ ನಿರ್ಲಕ್ಷಿಸಿದ್ದಾನೆ" ಎಂದು ಆತ ಎಸೆದ ಜಾಗ ಹೇಳಿ ನೀನೇ ನನ್ನನ್ನು ರಕ್ಷಿಸಿ ಪೂಜಿಸಬೇಕು ಎಂದು ಮಹಾವಿಷ್ಣು ಆದೇಶಿಸಿದನಂತೆ.

ಭಗವಾನನೇ ಕೇಳಿದ ಮೇಲೆ ಒಲ್ಲೆನೆಂಬರೇ ಸ್ವಾಮಿಗಳು. ಅದರಂತೆ ವಾದಿರಾಜರು ಮೂರ್ತಿಯನ್ನು ರಕ್ಷಿಸಿ ಪೂಜಿಸಲಾರಂಭಿಸಿದರಂತೆ. ಇಷ್ಟೇ ಅಲ್ಲ ಈ ಮೂರುತಿ ಮಠಕ್ಕೆ ತಂದ ಮೇಲೆ ದಿನಾ ಶ್ರೀ ವಾದಿರಾಜರು ಕಡಲೆ, ಬೆಲ್ಲ, ತೆಂಗಿನಕಾಯಿ ಪ್ರಸಾದವನ್ನು ದೊಡ್ಡ ಹರಿವಾಣದಲ್ಲಿ ಬೆರೆಸಿ, ತಮ್ಮ ತಲೆಯ ಮೇಲಿಟ್ಟುಕೊಳ್ಳುತ್ತಿದ್ದರಂತೆ. ಸ್ವಯಂ ಹಯಗ್ರೀವ ದೇವರು ಕುದುರೆಯಾಗಿ ಬಂದು ತಮ್ಮೆರಡೂ ಕಾಲುಗಳನ್ನು ವಾದಿರಾಜರ ಭುಜದ ಮೇಲಿಟ್ಟು ಪ್ರಸಾದವನ್ನು ಸ್ವೀಕರಿಸುತ್ತಿದ್ದರೆಂದು ಪ್ರತೀತಿ.

ಕತೆ ಮೇಲೆ ಕತೆ ಕೇಳಿ ಬೋರಾಯಿತಾ? ಆಗಿದ್ದರೇ, ಹಯಗ್ರೀವ ಎಂಬ ಭಕ್ಷ್ಯ ಮಾಡೋದರ ಬಗ್ಗೆ ಹೇಳ್ತೀನಿ ಕೇಳಿ...

ಹಯಗ್ರೀವದ ರುಚಿ ಬಲ್ಲಿರಾ?

(ಹಯಗ್ರೀವನಿಗೆ ಇಷ್ಟವಾದ ಬೆಲ್ಲ, ಕಡಲೆ/ಹೆಸರುಕಾಳು/ಹುರುಳಿ ಕಾಯಿತುರಿ ನಮ್ಮ ಬಳಿ ಬಂದಾಗ, ಆದದ್ದು ಹಯಗ್ರೀವ ರೆಸಿಪಿ. ಹಯಗ್ರೀವ ಉಡುಪಿ ಕಡೆಯ ಖ್ಯಾತ ಭಕ್ಷ್ಯ. )

ಬೇಕಾದ ಪದಾರ್ಥಗಳು :

1 ಕಪ್ ಕಡ್ಲೆ/ಹೆಸರುಕಾಳು

ಅರ್ಧ ಕಪ್ ಬೆಲ್ಲ

ಎರಡರಿಂದ ಮೂರು ಚಮಚದಷ್ಟು ತೆಂಗಿನ ತುರಿ

ಅರ್ಧ ಚಮಚ ಪುಡಿಮಾಡಿದ ಏಲಕ್ಕಿ

7ರಿಂದ8 ಗೇರುಬೀಜ

7ರಿಂದ8 ಒಣದ್ರಾಕ್ಷಿ

1ರಿಂದ2 ಚಮಚ ತುಪ್ಪ

ಮಾಡುವ ವಿಧಾನ :

ಕಾಳನ್ನು ಚೆನ್ನಾಗಿ ತೊಳೆದುಕೊಂಡು, ಒಂದೆರಡು ಗಂಟೆಗಳ ಕಾಲ ನೆನೆಸಿಡಿ. ನಂತರ ನೀರು ಹಾಕಿ ಕುಕ್ಕರಿನಲ್ಲಿ ಸ್ವಲ್ಪ ಮೆತ್ತಗಾಗುವ ತನಕ ಬೇಯಿಸಿ. ಸ್ವಲ್ಪ ತಣ್ಣಗಾದ ನಂತರ, ಬೆಲ್ಲ ಪಾಕ ಮಾಡಿ. ಅದಕ್ಕೆ ಬೇಯಿಸಿದ ಕಾಳನ್ನು ಬೆರೆಸಿ, ಕಾಯಿ, ತುಪ್ಪ, ದ್ರಾಕ್ಷಿ ಹಾಗೂ ಗೇರುಬೀಜಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ಹಯಗ್ರೀವ ರೆಡಿ.

ಇತಿಃ ಹಯಗ್ರೀವ ವ್ಯಾಖ್ಯಾನಂ ಸಂಪೂರ್ಣಂ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X