• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕಾಗೊ ಉತ್ಸವದ ಮೀಡಿಯಾ ಮಸಾಲಾ : ಯಾರಿಗೂ ಹೇಳ್ಬೇಡೀ!

By Staff
|

ರಸಾಯನ : ಒಂದು ರೀತಿಯಲ್ಲಿ ಆ ನಿಯಮ ಒಳ್ಳೆಯ ಫಲವನ್ನೇ ನೀಡಿತೆನ್ನಿ. ಸಾಹಿತ್ಯಗೋಷ್ಠಿಯಲ್ಲಿ ಪ್ರತಿಯಾಬ್ಬರೂ ಬಹಳ ಚೆನ್ನಾಗಿ ಪ್ರಸ್ತುತಗೊಂಡರು. ಶರತ್‌ ಯಳಂದೂರ್‌ (ಇವರು ಕರ್ನಾಟಕದ ಖ್ಯಾತ ಹಾಸ್ಯಪಟು ವೈ.ಎನ್‌.ಗುಂಡೂರಾವ್‌ ಅವರ ಸುಪುತ್ರ, ಇಲ್ಲಿ ಬ್ಲೂಮಿಂಗ್ಟನ್‌ನಲ್ಲಿ ವೃತ್ತಿಯಲ್ಲಿದ್ದಾರೆ) ಅವರ ‘ಕೌನ್‌ ಬನೆಗಾ ರಾಷ್ಟ್ರಪತಿ’ ಹರಟೆ, ಸುಕುಮಾರ್‌ ರಘುರಾಮ್‌ ವಾಚಿಸಿದ ‘ಮೈಸೂರು ಕನ್ನಡ - ಧಾರ್ವಾಡ್‌ ಕನ್ನಡ ಭಾಷಾ ಸಂಘರ್ಷ’, ಮೈ.ಶ್ರೀ.ನಟರಾಜ್‌ ಓದಿ/ಹಾಡಿದ ‘ಚರಟಪ್ರಿಯ-ಕರಟಪ್ರಿಯ-ಕುಕ್ಕುಟಪ್ರಿಯ’ ರಾಗರಸಧಾರೆ, ವಲ್ಲೀಶ್‌ ಶಾಸ್ತ್ರಿ ಓದಿದ ಅಮೆರಿಕನ್ನಡಿಗ ಮಕ್ಕಳ ನುಡಿಮುತ್ತುಗಳ ಕುರಿತ ಹರಟೆ, ಶ್ರುತಿ ಸತೀಶ್‌ ವಾಚಿಸಿದ ಸ್ವರಚಿತ ಹನಿಗವನಗಳು.. ಇವೆಲ್ಲ ಬಹುವಾಗಿ ಚಪ್ಪಾಳೆ ಗಿಟ್ಟಿಸಿಕೊಂಡವು.

*

ಈಗ ಇಲ್ಲೇ ಇದ್ರಲ್ರಿ : ತ್ರಿವೇಣಿಯವರ ‘ತುಳಸೀವನ’ ಪುಸ್ತಕಬಿಡುಗಡೆಯ ಚಿಕ್ಕ-ಚೊಕ್ಕ ಕಾರ್ಯಕ್ರಮಕ್ಕೆ ವೇದಿಕೆಯ ಮೇಲಿನ ರಂಗಸಜ್ಜಿಕೆ ನಿಜಕ್ಕೂ ಆಹ್ಲಾದಕರವಾಗಿತ್ತು. ತುಳಸಿಗಿಡವನ್ನು ತಂದಿಟ್ಟು ಒಂದು ಚಂದದ ವೃಂದಾವನವನ್ನೇ ನಿರ್ಮಿಸಲಾಗಿತ್ತು. ವೃಂದಾವನವೇನೋ ಇತ್ತು, ಆದರೆ ರಾಘವೇಂದ್ರ ನಾಪತ್ತೆ! ಪುಸ್ತಕ ಬಿಡುಗಡೆ ಮಾಡೋದು ಪ್ರೊ।ಅ.ರಾ.ಮಿತ್ರ ಆದರೂ ಇನ್ನೋರ್ವ ಅತಿಥಿ ಎಚ್‌.ಎಸ್‌.ರಾಘವೇಂದ್ರ ರಾವ್‌ ಸಹ ವೇದಿಕೆಯ ಮೇಲೆ ಉಪಸ್ಥಿತರಿರಬೇಕೆಂದು ತ್ರಿವೇಣಿಯವರ ಇಚ್ಛೆ. ಆಗಷ್ಟೇ ಹೊರಗೆಲ್ಲೋ ಹೋಗಿದ್ದ ರಾಘವೇಂದ್ರರಾವ್‌ ಕೊನೆಗೂ ಪುಸ್ತಕಬಿಡುಗಡೆ ಕಾರ್ಯಕ್ರಮದ ಉತ್ತರಾರ್ಧದಲ್ಲಿ ವೇದಿಕೆಯನ್ನೇರಿದರೆನ್ನಿ.

*

ಮೀಡಿಯ ಮಸಾಲಾ: ‘ನಗೆಗನ್ನಡಂ ಗೆಲ್ಗೆ...’ ಈ ಸಮ್ಮೇಳನದ ಧ್ಯೇಯ ಮತ್ತು ಈ ಸಂದರ್ಭದಲ್ಲಿ ಹೊರತರಲಾದ ಉದ್ಗ್ರಂಥದ ಹೆಸರು ಕೂಡ. ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ ಈ ಗ್ರಂಥದಲ್ಲಿ ಬಹುಪಾಲು ಲೇಖನಗಳು ಅಮೆರಿಕನ್ನಡಿಗರಿಂದ ಬರೆಯಲ್ಪಟ್ಟವು. ಡಾ।ಎಚ್‌.ಕೆ.ನಂಜುಂಡಸ್ವಾಮಿ (ಫ್ಲೊರಿಡಾ) ಮತ್ತು ಕ.ಸಾ.ರಂ ಅಧ್ಯಕ್ಷ ಎಚ್‌.ವೈ.ರಾಜಗೋಪಾಲ್‌ (ಪೆನ್ಸಿಲ್ವೇನಿಯಾ) - ಇವರಿಬ್ಬರು ಗ್ರಂಥದ ಸಂಪಾದಕರು, ಶ್ರಮಪಟ್ಟು ಸಾ-ಧಿಸಿತೋರಿಸಿದವರು. ಈ ಗ್ರಂಥದ ಸಾಂಕೇತಿಕ ಬಿಡುಗಡೆ ಬೆಂಗಳೂರಲ್ಲೂ ಮೇ.19ರ ಬೆಳಿಗ್ಗೆ ನಡೆಯಿತು. ಅದನ್ನು ‘‘ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ’’ ಪ್ರಜಾವಾಣಿಯು ವರದಿ ಮಾಡಿರುವುದನ್ನು, ಅದರಲ್ಲಿರುವ ಅಧ್ವಾನದ ಪರಿಯನ್ನು ನೀವೇ ನೋಡಿ!

*

ಅಂತರ್‌ರಾಷ್ಟ್ರೀಯ ಮಿತ್ರ : ಪ್ರೊ। ಅ.ರಾ.ಮಿತ್ರ, ಹಾಸ್ಯವೇ ಪ್ರಧಾನವಸ್ತುವಾದ ಈ ಸಮ್ಮೇಳನಕ್ಕೆ ಹೇಳಿ ಮಾಡಿಸಿದಂಥ ಮುಖ್ಯ ಅತಿಥಿ. ಹಿರಿ/ಹಳೆ ತಲೆಮಾರಿನ ಹಾಸ್ಯೋಶ್ವತ್ಥ ವೃಕ್ಷವಾದ ಅವರು ಸಂಸ್ಕೃತ-ಕನ್ನಡ-ಹಳೆಗನ್ನಡ-ಇಂಗ್ಲಿಷ್‌ ಹೀಗೆ ಬಗೆಬಗೆ ರೆಂಬೆಕೊಂಬೆಗಳ ರಸ‘ಛಾಯೆ’ಯನ್ನು ಒದಗಿಸಬಲ್ಲರು. ತಮ್ಮ ಸಮಕಾಲೀನ ಪ್ರತಿಷ್ಠಿತರ ಒಡನಾಟದ ರಸಘಳಿಗೆಗಳನ್ನು ವಿವರಿಸಬಲ್ಲರು. ಅವರೊಬ್ಬ ಜ್ಞಾನವೃದ್ಧರೂ ವಯೋವೃದ್ಧರೂ ಆದ್ದರಿಂದ ಹಾಸ್ಯಲೇಪನದ ಯಾವ ಮಾತನ್ನೇ ಅವರಾಡಿದರೂ ಬಲುಸೊಗಸು, ಹೊಟ್ಟೆ ಹುಣ್ಣಾಗುವಷ್ಟು ನಗೆಲೇಸು. ಡಿವಿಜಿಯವರ ಒಂದು ಪ್ರಸಂಗ ವಿವರಿಸುತ್ತ ಅವರೆಂದದ್ದು: ಮೂಲವ್ಯಾ-ಧಿಯಿಂದ ಬಳಲುತ್ತಿದ್ದ ಡಿವಿಜಿಯವರನ್ನು ಒಂದು ಸಮಾರಂಭಕ್ಕೆ ಬರಲು ಯಾರೋ ಒತ್ತಾಯಿಸಿದರಂತೆ. ಆಗೋಲ್ಲಪ್ಪ ಎಂದರೂ ಬಿಡಲಿಲ್ಲ. ಕೊನೆಗೆ ಸಂದೇಶನಾದ್ರೂ ಬರ್ಕೊಡಿ ಎಂದದ್ದಕ್ಕೆ ಡಿವಿಜಿ ಹೀಗೆ ಬರೆದರಂತೆ: ‘‘ಗುಂಡಪ್ಪನಾದರೇನು ಕುಂಡೆ ನೋಯದೆ ಇದ್ದೀತೇ...? ನನಗೆ ಬರಲಾಗುತ್ತಿಲ್ಲ, ದಯವಿಟ್ಟು ಮನ್ನಿಸಿ....’’

*

ಸಿಲ್ಕ್ಸ್‌ ಅಂಡ್‌ ಶಿಫಾನ್ಸ್‌ : ಸಮ್ಮೇಳನ ಸಭಾಂಗಣದ ಪಕ್ಕದಲ್ಲೇ ಕನ್ನಡ ಪುಸ್ತಕ ವ್ಯಾಪಾರ ಮಳಿಗೆಯೂ ಇತ್ತು. ಅಮೆರಿಕನ್ನಡಿಗ ಲೇಖಕರ ವಿವಿಧ ಪುಸ್ತಕಗಳು ರಿಯಾಯಿತಿ ಬೆಲೆಯಲ್ಲಿ (ಲೇಖಕರ ಸ್ವಹಸ್ತಾಕ್ಷರ ಬೋನಸ್‌ನೊಂದಿಗೆ) ಲಭ್ಯವಿದ್ದರೆ ಟೊಟಲ್‌ಕನ್ನಡ.ಕಾಮ್‌ನ ವಿ.ಲಕ್ಷ್ಮೀಕಾಂತ್‌ ಅವರೂ ಅತ್ಯುತ್ತಮ ಕನ್ನಡಪುಸ್ತಕಗಳನ್ನು ಸುಲಭಬೆಲೆಯಲ್ಲಿ ಮಾರಾಟಕ್ಕಿಟ್ಟಿದ್ದರು. ಕನ್ನಡಿಗರು ಪುಸ್ತಕ ಕೊಳ್ಳೋದಿಲ್ಲ ಎನ್ನೋದೆಲ್ಲ ಮಾಮೂಲಿ ಮಾತಾದರೂ ಒಂದಿಷ್ಟು ಪುಸ್ತಕಗಳು ಅಲ್ಲಿ ಮಾರಾಟವಾದದ್ದು ನಿಜ. ಮಜಾ ವಿಷಯ ಅದಲ್ಲ, ಪ್ರಾರ್ಥನೆ-ಭಾವಗೀತೆಗಳ ವೃಂದಗಾನದಲ್ಲಿ ಭಾಗವಹಿಸಲು ಸಮ್ಮೇಳನದ ಮೊದಲದಿನ ಮಾತ್ರ ಚಮಕ್‌ಚಮಕ್‌ ಸೀರೆಗಳಲ್ಲಿ ಪ್ರತ್ಯಕ್ಷರಾಗಿದ್ದ ಕೆಲ ಕನ್ನಡವೀರವನಿತೆಯರು ಪುಸ್ತಕದಂಗಡಿಯ ಪಕ್ಕದಲ್ಲಿ ನಡೆದುಹೋಗುತ್ತಿದ್ದಾಗ ಉವಾಚಿಸಿದ ‘‘ಅಯ್ಯೋ ಈ ಪುಸ್ತಕಗಳನ್ನೆಲ್ಲ ಯಾರ್‌ ಕೊಳ್ತಾರೊ... ಎಲ್ಲ ಗಂಟುಕಟ್ಟಿ ವಾಪಾಸ್‌ ಹೊತ್ಕೊಂಡ್‌ ಹೋಗ್ಬೇಕಷ್ಟೇ...’’ ಎಂಬ ನುಡಿಮುತ್ತುಗಳು ಮಾತ್ರ ಕೇಳೆಬಲ್‌ ಆಗಿದ್ದುವು!

*

ಇಲ್ಲೊಂದು ಲೋಕವುಂಟು : ಭಾನುವಾರ ಬೆಳಗ್ಗಿನ ಅ-ಧಿವೇಶನದಲ್ಲಿ ಎಚ್‌ ಎಸ್‌ ರಾಘವೇಂದ್ರ ರಾವ್‌ ಮಂಡಿಸಿದ ವಿಚಾರಧಾರೆಗಳು - ‘‘ಅಮೆರಿಕದ ಅನಿವಾಸಿ ಕನ್ನಡಿಗರ ಸಾಹಿತ್ಯಸೃಷ್ಟಿ: ಕೆಲವು ಅನಿಸಿಕೆಗಳು’’ ಬಹಳ ಬೋಧಪ್ರದವೂ ಕಣ್ತೆರೆಸುವಂಥವೂ ಆಗಿದ್ದುವು. ‘‘ಈ ದೇಶಕ್ಕೆ ಮೂರ್ನಾಲ್ಕು ವಾರಗಳಿಗಾಗಿ ಬಂದುಹೋಗುವ ಕನ್ನಡ ಲೇಖಕರು ಇಲ್ಲಿಯ ಬಗ್ಗೆ ಪುಸ್ತಕಗಳನ್ನು ಬರೆಯಬಹುದಾದರೆ, ಇಲ್ಲಿಯೇ ಜೀವಿಸುತ್ತಿರುವ ನೀವು ಈ ದೇಶದ ಬಗ್ಗೆ ಇನ್ನೂ ಚೆನ್ನಾಗಿ ಬರೆಯಬಹುದಲ್ಲವೇ? ಬೇಂದ್ರೆ, ಕಾರಂತರ ಬಗ್ಗೆ ಬರೆಯುವವರು ಅಲ್ಲಿಯೂ ಸಿಗುತ್ತಾರೆ. ಆದರೆ ಅಮೆರಿಕದ ಬಗ್ಗೆ ಹಾಗೂ ಇಲ್ಲಿನ ಕನ್ನಡಿಗರ ಬಗ್ಗೆ ಬರೆಯಬಲ್ಲವರು ನೀವು ಮಾತ್ರ. ‘ಅವರು ಸಾಹಿತಿಗಳು, ನಾವು ಅಲ್ಲ’ ಎಂಬ ಭ್ರಮೆಗೆ, ಕೀಳರಿಮೆಗೆ ವಿದಾಯ ಹೇಳಬೇಕು’’ ಎಂದ ಅವರ ಮಾತಲ್ಲಿ ತಥ್ಯವಿದೆ, ಸತ್ಯವೂ ಇದೆ!

*

ನಗೆಗವಳ : ಭಾನುವಾರ ಮಧ್ಯಾಹ್ನದೂಟ ಸಹಪಂಕ್ತಿ ಸಹಭೋಜನ ರುಚಿಕರವಾಗಿತ್ತಷ್ಟೇ ಅಲ್ಲ, ಹಾಗೆ ಎಲ್ಲರೂ ಒಟ್ಟಿಗೇ ಕುಳಿತುಕೊಂಡು ಹರಟುತ್ತ ಊಟಮಾಡುವ ಅನುಭವ ಅಷ್ಟೇ ರೋಚಕವೂ ಆಗಿತ್ತು. ಗಸಗಸೆಪಾಯಸವನ್ನಂತೂ ಎಲ್ಲರೂ ಸವಿದದ್ದೇ ಸವಿದದ್ದು (ಆಮೇಲೆ ಹೇಗೂ ಬೋರ್‌ ಹೊಡೆಸಿ ನಿದ್ದೆ ತರಿಸುವ ಲೆಕ್ಚರ್‌ಗಳಿಲ್ಲ ಎಂಬ ಧೈರ್ಯದಿಂದ)! ನಗೆಹಬ್ಬದ ಊಟ-ತಿಂಡಿ ವ್ಯವಸ್ಥೆಯ ವಿಷಯದಲ್ಲಿ, ಪುಷ್ಕಳ - ಪೊಗದಸ್ತಾದ ಊಟ ಬಡಿಸಿದ್ದರಲ್ಲಿ ಆಯೋಜಕರು ಡಿಸ್ಟಿಂಕ್ಷನ್‌ ಕ್ಲಾಸಲ್ಲಿ ತೇರ್ಗಡೆಯಾಗಿದ್ದಾರೆ.

*

ಊಟದ್ದೊಂದೇ ಹೊಗಳಿಕೆ ಅಂದ್ಕೋಬೇಡಿ. ಕನ್ನಡ ಸಾಹಿತ್ಯ ರಂಗವು ಚಿಕಾಗೊದ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದಲ್ಲಿ ನಡೆಸಿದ ಈ ಸಾಹಿತ್ಯೋತ್ಸವದ ಅರ್ಥಪೂರ್ಣ ಯಶಸ್ಸಿನ ಹಿಂದಿನ ಎಲ್ಲ ಶಕ್ತಿಗಳು (ಮುಖ್ಯವಾಗಿ ಹಗಲಿರುಳು ದುಡಿದ ಸ್ವಯಂಸೇವಕರು) ಮುಕ್ತಪ್ರಶಂಸೆಗೆ ಅರ್ಹರೇ ಆಗಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನೂ ಉತ್ತಮಮಟ್ಟದ ಸಾಹಿತ್ಯಸಮಾವೇಶಗಳನ್ನು ಎದುರುನೋಡೋಣ.

ಚಿಕಾಗೋ ವಸಂತ ಸಾಹಿತ್ಯೋತ್ಸವದ ಚಿತ್ರಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more