ಬೇಂದ್ರೆ ಕಾವ್ಯವಿಲಾಸ ಕವನ ಬರೆದು ಜೈಲಿಗೋದರು.. ಜೈಲಲ್ಲೂ ಕವನ ಬರೆದರು!
ಗರಿ’ ಕವನಸಂಕಲನದಿಂದ ಬೇಂದ್ರೆ ಜೈಲು ಶಿಕ್ಷೆ ಅನುಭವಿಸಿದರು. ಈ ಸಂಕಲನದ ಕೆಲವು ಕವನಗಳಲ್ಲಿ ಬ್ರಿಟಿಷರನ್ನು ಬೇಂದ್ರೆ, ನಾಯಿಗೆ ಹೋಲಿಸಿದ್ದಾರೆ. ಜೈಲಿನಲ್ಲಿದ್ದಾಗ ಕೂಡ ಬೇಂದ್ರೆಯ ಕಾವ್ಯಸ್ಪೂರ್ತಿಗೇನೂ ಧಕ್ಕೆಯಾಗಲಿಲ್ಲ. ಆಗ ಹೊರಬಂದಿದ್ದು ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’. ಬೇಂದ್ರೆ ಕಾವ್ಯ ಮತ್ತು ಸಂದರ್ಭದ ಬಗ್ಗೆ ಒಂದು ನೋಟ.
ಮೇರಿಲ್ಯಾಂಡಿನ ಭೂಮಿಕಾ ವೇದಿಕೆಯಲ್ಲಿ ಭಾನುವಾರ (ಮೇ.13) ‘‘ಬೇಂದ್ರೆ ಕಾವ್ಯದ ಹಕ್ಕಿ ನೋಟ’’ವನ್ನು ಹಂಚಿಕೊಂಡವರು ಧಾರವಾಡದ ದೇಶಪಾಂಡೆ ಸುಬ್ಬರಾವ್.
ಸುಬ್ಬರಾವ್‌ರವರು ‘‘ಫೀನಿಕ್ಸ್ ಹಾರ್ದ ಹಾದಿ’’ ಹಾಗೂ ಇನ್ನಿತರ ಸುಮಾರು 20 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿ, ಉತ್ತಮ ನಟನೆಗೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಒಬ್ಬ ಬರಹಗಾರನ ಸಾಹಿತ್ಯದ ಪ್ರಭಾವ ಓದುಗನ ಅಭಿರುಚಿ, ಕುತೂಹಲ, ಜಿಜ್ಞಾಸೆ, ವಿಶ್ಲೇಷಣೆಗಳ ಮೇಲೆ ಅವಲಂಬಿಸಿರುತ್ತದೆ ಎಂಬ ತಮ್ಮ ಅಭಿಪ್ರಾಯವನ್ನು ಬೇಂದ್ರೆಯವರ ಕವನದ ಸಾಲಿನ ಮೂಲಕ ವ್ಯಕ್ತಪಡಿಸುತ್ತಾ ಮಾತನ್ನು ಆರಂಭಿಸಿದರು ಸುಬ್ಬರಾವ್: ‘‘ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ’’. ಬೇಂದ್ರೆಯವರ ಅನೇಕ ಕವನಗಳಷ್ಟೇ ಅಲ್ಲದೇ, ಅವರ ಬದುಕಿನ ಬಗ್ಗೆಯೂ ಬೆಳಕು ಚೆಲ್ಲಿದರು.
ನವೋದಯ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೊದಲಿನ ಅನೇಕ ಕವನಗಳು ಆಗ ನಡೆಯುತ್ತಿದ್ದ ಸ್ವಾತಂತ್ರ ಚಳುವಳಿಗೆ, ಸುತ್ತಮುತ್ತಲಿನ ಸಾಮಾಜಿಕ ಪರಿಸರಕ್ಕೆ ಸ್ಪಂದಿಸಿ ಬರೆದವು. ಬೇಂದ್ರೆಯವರ ‘‘ಹಕ್ಕಿ ಹಾರುತಿದೆ ನೋಡಿದಿರಾ’’ ಕವನವನ್ನು ಎಲ್ಲರೂ ಕೇಳಿರಬಹುದು. ಅವರು ಅದನ್ನು ಮೊದಲು ಓದಿದ್ದು 1929ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಆಗ ಬ್ರಿಟಿಷರ ಆಡಳಿತ ಭಾರತಲ್ಲಷ್ಟೇ ಅಲ್ಲ, ವಿಶ್ವದ ಅರ್ಧಕ್ಕರ್ಧ ಅವರ ಹಿಡಿತದಲ್ಲಿದ್ದ ಸಂದರ್ಭ.
ರಾಜ್ಯದ ಸಾಮ್ರಾಜ್ಯದ ತೆನೆ ಉಕ್ಕಿ। ಮಂಡಲಗಿಂಡಲಗಳ ಗಡಿ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡಖಂಡಗಳ ‘‘ಸಾರ್ವಭೌಮರ ನೆತ್ತಿಯ ಕುಕ್ಕಿ’’
ಹಕ್ಕಿ ಹಾರುತಿದೆ ನೋಡಿದಿರಾ?
ಎಂದು ಪರೋಕ್ಷವಾಗಿ ಬ್ರಿಟಿಷರನ್ನು ಕೆಣಕಿದ ಕವನ ಸಮ್ಮೇಳನದಲ್ಲಿ ಎಲ್ಲರ ಗಮನ ಸೆಳೆಯಿತು. ಆಗೆಲ್ಲಾ ತಮ್ಮ ವಿರುದ್ಧ ಬಂದೂಕೆತ್ತಿದವರಿರಲಿ, ಪದ್ಯ ಬರೆದವರನ್ನೂ ಜೈಲಿಗೆ ಕಳಿಸುತ್ತಿತ್ತು ಬ್ರಿಟಿಷ್ ಸರಕಾರ. ಆಗಿನ ಜಿಲ್ಲಾನ್ಯಾಯಾಧೀಶರಾಗಿದ್ದ ಲೋಕೂರ್ ನಾರಾಯಣರಾಯರು ಶಾಂತಸ್ವಭಾವದವರಾಗಿದ್ದರಿಂದ ಆಗ ಬೇಂದ್ರೆ ತೊಂದರೆಗೆ ಒಳಗಾಗಲಿಲ್ಲ.
ಮುಂದೆ ಕೆಲವು ವರ್ಷಗಳ ನಂತರ ‘‘ಗರಿ’’ ಎಂಬ ಕವನಸಂಕಲನದಿಂದ ಜೈಲು ಶಿಕ್ಷೆ ಸಹಾ ಅನುಭವಿಸಿದರು ಬೇಂದ್ರೆ. ‘‘ಗರಿ’’ ಸಂಕಲನದ ‘‘ನರಬಲಿ’’ ಎಂಬ ಕವನದಲ್ಲಿ ಬೇಂದ್ರೆ ಬ್ರಿಟಿಷರನ್ನು ನಾಯಿಗೆ ಹೋಲಿಸುತ್ತಾರೆ:
ಬಲಗಾಲಲಿ ಬಿಡುಗರೆಯನು ಮೆಟ್ಟಿನಿಂತಿಹೆ ಎಲೆ ಕಾಳಿ।
ನಿನ್ನೆಡಗಾಲನು ನೆಕ್ಕುತಲಿಹುದು ಶ್ವಾನಸೂಕರಾಳಿ।
ಜೈಲಿನಲ್ಲಿದ್ದಾಗ ಕೂಡ ಬೇಂದ್ರೆಯ ಕಾವ್ಯಸ್ಪೂರ್ತಿಗೇನೂ ಧಕ್ಕೆಯಾಗಲಿಲ್ಲ. ಆಗ ಹೊರಬಂದಿದ್ದು ‘‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’’.
ಅವರ ಮೊಟ್ಟ ಮೊದಲ ಕವನ ‘‘ತುತ್ತೂರಿ’’. 1918ರಲ್ಲಿ ಧಾರವಾಡದಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯುವಕ ಬೇಂದ್ರೆ ಈ ಕವನವನ್ನು ಓದಿದಾಗ, ಅವರ ಪ್ರತಿಭೆಯನ್ನು ಗುರುತಿಸಿದ ಅಧ್ಯಕ್ಷ ನರಸಿಂಹಾಚಾರ್ಯರು ತಮ್ಮ ಭಾಷಣದಲ್ಲಿ ‘‘ಇದು ಹೊಸಕಾವ್ಯದ ಹೊಸಕಾಲವನ್ನು ಸೂಚಿಸುವ ಕವನ’’ ಎಂದರು.
ಇನ್ನೆರಡೇ ವರ್ಷಗಳಲ್ಲಿ ಹೊರಬಂದಿದ್ದು ‘‘ಬೆಳಗು’’ ಕವನ. ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾಹುಯ್ದ ಎಂದು ಪ್ರಾರಂಭವಾಗಿ ‘‘ಗಿಡಗಂಟೆಗಳಾ ಕೊರಳೊಳಗಿಂದ ಹಕ್ಕಿಗಳಾ ಹಾಡು’’ ಎಂದು ಸಾಗುವ ಈ ಕವನ ಈಗಲೂ ಬೆಳಗಿನ ನಡಿಗೆಯಲ್ಲಿ ನೆನಪಾಗುತ್ತದೆ ಎಂದರು ಸುಬ್ಬರಾವ್. ಈ ಕವನ ಬೆಳಗಿನ ಹಾಗೂ ಪ್ರಕೃತಿಯ ಅದ್ಭುತ ವರ್ಣನೆಯನ್ನು, ಬೇಂದ್ರೆಯೇ ಹೇಳಿದಂತೆ ‘‘ಇದು ಬರಿ ಬೆಳಗಲ್ಲೋ ಅಣ್ಣಾ’’, ಇದು ‘‘ಪ್ರಕೃತಿಯ ಜೀವನದ ಗುಟುರು’’ ಎಂದು ಬಣ್ಣಿಸಿದರು ಸುಬ್ಬರಾವ್.
ಸ್ವಾತಂತ್ರ್ಯಾನಂತರ ಬೇಂದ್ರೆ ತಮ್ಮ ಕೌಟುಂಬಿಕ ಜೀವನದ ಘಟನೆಗಳಿಗೆ, ಸುತ್ತಮುತ್ತಲಿನ ಜನಜೀವನದ ಆಗುಹೋಗುಗಳಿಗೆ ಸ್ಪಂದಿಸಿ ರಚಿಸಿರುವುದನ್ನು ಕಾಣಬಹುದು. ‘‘ನೀ ಹೀಂಗ ನೋಡಬ್ಯಾಡ ನನ್ನ’’ ಎಂಬ ಕವಿತೆ ಅವರ ಕೂಸು ಸಾಯುತ್ತಲಿದ್ದ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿಯ ಪ್ರತಿಕ್ರಿಯೆಯನ್ನು ನೋಡಿ ನೋವಿನಿಂದ ಬರೆದದ್ದು.
ಸ್ವತ: ಬಡತನದಲ್ಲಿ ಜೀವಿಸಿದ ಬೇಂದ್ರೆಗ ಬಡವರ ಬಗ್ಗೆ ಬಹಳ ಕಾಳಜಿ, ಅನುಕಂಪ. ಅವರ ಕೆಲವು ಕವಿತೆಗಳಲ್ಲಿ ಈ ಕಾಳಜಿಯನ್ನು ಕಾಣಬಹುದು. ಉದಾಹರಣೆಗೆ,
ರಾಮಸೀತಾವಿಲಾಸದಿಂದ ತುಂಬೇದ ರಾಮಾಯಣ
ಉಳಿದ ಬಂಧುಗಳ ಹೆಂಡಿರ ಗತಿಯೇನೆಂದು ಕೇಳಿತು ಜನ
ರಾಮರ ವಿರಹವು ಸೀತಾ ವಿರಹವು ತುಂಬೇದ ರಾಮಾಯಣ
ಸಣ್ಣವರತ್ತರ ಎಣಿಕೆಗೆ ಬಾರದು ಅಯ್ಯೋ ನಾರಾಯಣ।
‘‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’’ ಎಂಬ ಪದ್ಯದಲ್ಲಿ ಸಹಾ ಸಂಭ್ರಮದ ವರ್ಣನೆಯಲ್ಲಿ ಮುಳುಗಿ ಅತ್ಯಂತ ಮಹತ್ವದ ‘‘ನಮ್ಮನಷ್ಟೆ ಮರೆತಿದೆ’’ ಎಂಬ ಸಾಲನ್ನು ನಾವು ಗಮನಿಸುವುದಿಲ್ಲ, ಈ ಸಾಲು ಬೇಂದ್ರೆ ಬಡವರಿಗೆ ಯುಗಾದಿ ಹೊಸದೇನೂ ತರದು ಎಂದು ಸೂಚಿಸಿ ಬರೆದದ್ದು ಎಂದು ಸುಬ್ಬರಾವ್ ಅಭಿಪ್ರಾಯಪಟ್ಟರು.
ಬೇಂದ್ರೆ ತಮ್ಮ ಮನೆಗೆ ಬರುತ್ತಿದ್ದ ಮೊಸರು ಮಾರುವವರು, ಕಾಯಿಪಲ್ಲೆ ಮಾರುವವರಾದಿಯಾಗಿ, ಭಿಕ್ಷುಕರು, ಜೋಗಪ್ಪರನ್ನೂ ಸಹಾ ವಿಶ್ವಾಸದಿಂದ ಯೋಗಕ್ಷೇಮ ವಿಚಾರಿಸಿ ಮಾತನಾಡಿಸುತ್ತಿದ್ದರು. ಅವರ ‘‘ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯಾಂವ’’ ಹಾಗೂ ಇನ್ನಿತರ ಕವಿತೆಗಳು ಇಂತಹ ಸನ್ನಿವೇಶದಲ್ಲಿ ಹುಟ್ಟಿಬಂದಿವೆ.
ಬೇಂದ್ರೆ ಕೆಲವು ಹಾಸ್ಯ, ವಿನೋದ, ಅಣಕಗಳುಳ್ಳ ಕವನಗಳನ್ನು ಸಹಾ ಬರೆದಿದ್ದಾರೆ. ‘‘ಬೆಕ್ಕು ಹಾರುತಿದೆ ನೋಡಿದಿರಾ?’’ ಇಂತಹ ಒಂದು ಅಣಕ.
ಇನ್ನೂ ಅನೇಕ ಉದಾಹರಣೆಗಳೊಂದಿಗೆ, ಅತ್ಯಂತ ಪ್ರಭಾವಶಾಲಿಯಾಗಿ ಮಾತನಾಡಿದ ಸುಬ್ಬರಾವ್ ಬೇಂದ್ರೆಯವರ ಆಧ್ಯಾತ್ಮಿಕ, ತತ್ವಶಾಸ್ತ್ರ, ಸಂಖ್ಯಾಶಾಸ್ತ್ರಗಳನ್ನು ಆಧರಿಸಿ ಬರೆದ ಕಾವ್ಯಗಳನ್ನು ಪ್ರಸ್ತಾಪಿಸಲಿಲ್ಲ.












Click it and Unblock the Notifications