• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟಣ್ಣ ಪರಾಕು - ‘ಮಧು’ರ ಮೈಸೂರ್‌ಪಾಕು!

By ಶ್ರೀವತ್ಸ ಜೋಶಿ, ವರ್ಜೀನಿಯಾ
|

ಅಮೆರಿಕಾದ ಬೆಳ್ಳಿ ಮೋಡಗಳಿಂದ ಪುಟ್ಟಣ್ಣ ಕಣಗಾಲ್‌ ತೇಲಿ ಬಂದರು. ಅವರ ಬಗೆಗೆ ಎಫ್‌ಎಂ ರೇಡಿಯೋದಲ್ಲಿ ಮೂಡಿಬಂದ ಕಾರ್ಯಕ್ರಮ, ವಿಶ್ವಕನ್ನಡಿಗರ ಮನಕ್ಕೆ ಮುಂದ ತಂದ ಬಗೆ ಇಲ್ಲಿದೆ.

ಒಂದು ಹಂತದಲ್ಲಿ ಇಂಟರ್‌ನೆಟ್‌ ಸರ್ವರ್‌(ಕಾರ್ಯಕ್ರಮದ ಆಡಿಯಾ ಸ್ಟ್ರೀಮ್‌ಅನ್ನು ಪ್ರಸಾರಮಾಡುತ್ತಿದ್ದುದು) ಜಾಮ್‌ ಆಯಿತು! ಪುಟ್ಟಣ್ಣ ಕಣಗಾಲರ ಚಿತ್ರರತ್ನಗಳ ಬಗ್ಗೆ ಕೇಳಿಸಿಕೊಳ್ಳಲು, ಅನಿಸಿಕೆ ಹೇಳಲು ಮತ್ತು ಗೀತೆಗಳನ್ನಾಲಿಸಲು ಅಷ್ಟು ನೂಕುನುಗ್ಗಲು.

ಕ್ಯಾಲಿಫೋರ್ನಿಯಾದ ಸ್ಟಾನ್‌ಫರ್ಡ್‌ ಯುನಿವರ್ಸಿಟಿಯ ಎಫ್‌.ಎಂ ರೇಡಿಯಾ ಸ್ಟೇಷನ್‌ನಿಂದ ಬುಧವಾರ (ಫೆ 21) ಬೆಳಗ್ಗೆ ನೇರಪ್ರಸಾರವಾದ ‘ಪುಟ್ಟಣ್ಣ ಕಣಗಾಲ್‌ ಸ್ಪೆಷಲ್‌’ ಕನ್ನಡ ಕಾರ್ಯಕ್ರಮವನ್ನು ಮಧುಕಾಂತ್‌ ಕೃಷ್ಣಮೂರ್ತಿ ಬಹಳ ಒಪ್ಪವಾಗಿ ನಡೆಸಿಕೊಟ್ಟರು. ಕ್ಯಾಲಿಫೋರ್ನಿಯಾ ಕೊಲ್ಲಿ ಪ್ರದೇಶದ ಕನ್ನಡಿಗರು ತಂತಮ್ಮ ರೇಡಿಯಾಸೆಟ್‌ಗಳಲ್ಲಿ ಎಫ್‌.ಎಂ ಸ್ಟೇಷನ್‌ ಟ್ಯೂನ್‌ ಮಾಡಿ ಆ ಕಾರ್ಯಕ್ರಮವನ್ನು ಕೇಳಿ ಖುಶಿಪಟ್ಟರೆ, ಏಕಕಾಲದಲ್ಲಿ ಅಂತರ್ಜಾಲದ ಮೂಲಕವೂ ಅದು ಲಭ್ಯವಿದ್ದುದರಿಂದ ವಿಶ್ವಾದ್ಯಂತದ ಕನ್ನಡಿಗರು ಕಂಪ್ಯೂಟರ್‌ಗೆ ಕಿವಿಯಾಲಿಸಿ ಕನ್ನಡದ ಮೇರು ನಿರ್ದೇಶಕರನ್ನು ಕುರಿತಾದ ಅಪೂರ್ವ ಕಾರ್ಯಕ್ರಮವನ್ನು ಆಸ್ವಾದಿಸಿದರು.

‘ಬೆಳ್ಳಿಮೋಡ’ ಚಿತ್ರದ ಆರಂಭದಲ್ಲಿ ಪುಟ್ಟಣ್ಣ ಕಣಗಾಲರ ಧ್ವನಿಯಲ್ಲೇ ಇರುವ ಅರ್ಪಣೆ (ಕಾದಂಬರಿಕಾರ್ತಿ ತ್ರಿವೇಣಿಗೆ) ಧ್ವನಿತುಣುಕಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಮಧು ‘ಬೆಳ್ಳಿಮೋಡದ ಅಂಚಿನಿಂದ ಮೂಡಿಬಂದ ಆಶಾಕಿರಣ...’ ಹಾಡನ್ನು ಹಾಕಿದರು; ನಿಜಕ್ಕೂ ಆ ಚೊಚ್ಚಲ ಚಿತ್ರದ ಮೂಲಕ ಕನ್ನಡಚಿತ್ರರಂಗವನ್ನು ಬೆಳಗಲು ಬಂದ ಆಶಾಕಿರಣ ಬೇರಾವುದೂ ಅಲ್ಲ ಸ್ವತಃ ಪುಟ್ಟಣ್ಣ ಕಣಗಾಲರೇ ಎಂದು ಮಧುಕಾಂತ್‌ ಹೇಳಿದ ಮಾತು ನೂರಕ್ಕೆ ನೂರು ನಿಜ.

ಆಮೇಲೆ ಸಾಲುಸಾಲಾಗಿ ಪುಟ್ಟಣ್ಣ ಚಿತ್ರಗಳಿಂದ ಗೀತೆಗಳು, ಪುಟ್ಟಣ್ಣನವರಿಗೆ ಸಂಬಂಧಿಸಿದಂತೆ ಸ್ವಾರಸ್ಯಕರ ಸಂಗತಿಗಳ ವಿವರಣೆ, ಅವರ ನಿರ್ದೇಶನಕೌಶಲದ ಬಣ್ಣನೆ, ನಾಗರಹಾವು ಚಿತ್ರದ ಸಂಭಾಷಣೆ ತುಣುಕುಗಳನ್ನು ಪೋಣಿಸಿದ ಒಂದು ಕೊಲಾಜ್‌... ಪುಟ್ಟಣ್ಣ ಸ್ಮರಣೆಯ ರಸಗವಳ. ಈ ಹಿಂದೆ ಡಾ।ರಾಜ್‌ ಕುರಿತ ಕಾರ್ಯಕ್ರಮ, ಆಮೇಲೆ ಸುವರ್ಣಕರ್ನಾಟಕ ಸಂದರ್ಭದ ಕಾರ್ಯಕ್ರಮ ಮತ್ತೀಗ ಪುಟ್ಟಣ್ಣ ಸ್ಪೆಷಲ್‌ - ಮಧುಕಾಂತ್‌ ಒಂದಕ್ಕಿಂತ ಒಂದು ಒಳ್ಳೆಯ ಪ್ರಸ್ತುತಿಗಳನ್ನು ಕೊಡುತ್ತಿದ್ದಾರೆ; ಎಲ್ಲವನ್ನೂ ಶಿಸ್ತಿನಿಂದ, ಶ್ರಮದಿಂದ, ಸವಿಗನ್ನಡದ ಪ್ರೇಮದಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮ ನೇರಪ್ರಸಾರ ಸ್ವರೂಪದ್ದಾದ್ದರಿಂದ ಮತ್ತು ಫೋನ್‌-ಇನ್‌ ಸೌಕರ್ಯ ಸಹ ಇದ್ದುದರಿಂದ ನಿನ್ನೆ ನಾನು ಫೋನಾಯಿಸಿ ಮಧುಗೆ ಮೆಚ್ಚುಗೆ ಹೇಳಿ(ಹಾಡಿ)ಯೇಬಿಟ್ಟೆ - ‘‘ಸಂಗೀತ... ಸಂತೋಷ... ರಸಮಯ ಸಂತೋಷ ಸುಖಮಯ ಸಂಗೀತ... ಹೊಸಹೊಸ ಭಾವ ತುಂಬಿ ನಸುನಗೆ ಹೊಮ್ಮಿಚಿಮ್ಮಿ ಮೈ ತುಂಬಿದೆ!’’

ಮಧು ಮತ್ತು ಅವರ ತಂಡವು ಈ ಕಾರ್ಯಕ್ರಮವನ್ನು ಸುಂದರವಾಗಿಸಲು ಸಾಕಷ್ಟು ಹೋಮ್‌ವರ್ಕ್‌ ನಡೆಸಿದ್ದರು; ಅದಕ್ಕೆ ತಕ್ಕಂತೆ ಶ್ರೋತೃಗಳೂ ಆಸಕ್ತಿಯಿಂದ ಸ್ಪಂದಿಸಿ ಪುಟ್ಟಣ್ಣನವರ ಮೇಲಿನ ಅಭಿಮಾನವನ್ನು ಮನಸಾರೆ ಬಿಚ್ಚಿಟ್ಟರು. ‘‘ಮೂಡಲಮನೆಯ ಮುತ್ತಿನ ನೀರಿನ ಎರಕಾವ...’’ ಹಾಡಿನ ಚಿತ್ರೀಕರಣಕ್ಕೆ ಸರಿಯಾದ ಲೊಕೆಶನ್‌ ಹುಡುಕುತ್ತ ಪುಟ್ಟಣ್ಣ ನಾಲ್ಕೈದು ದಿನ ಸೈಕಲ್‌ ತುಳಿದ ಪ್ರಸಂಗದ ಬಗ್ಗೆ ಜಯಕುಮಾರ್‌ (ವರ್ಜೀನಿಯಾ) ಹೇಳಿದರೆ, ಇಡೀ ಕರ್ನಾಟಕದ ಟೂರ್‌ ಮಾಡಲಿಕ್ಕಾಗದವರು ಪುಟ್ಟಣ್ಣ ಚಿತ್ರಗಳನ್ನು ನೋಡಿದರೆ ಸಾಕು, ಸಮಗ್ರ ಕರ್ನಾಟಕದ ರಮಣೀಯ ತಾಣಗಳೆಲ್ಲ ಅಲ್ಲಿ ನೋಡಲಿಕ್ಕೆ ಸಿಗುತ್ತವೆ... ಎಂದವರು ನ್ಯೂಜೆರ್ಸಿಯಿಂದ ಶ್ರುತಿ ಸತೀಶ್‌.

ವಿದೇಶದಲ್ಲಿ ಶೂಟಿಂಗ್‌ ಇತ್ಯಾದಿ ಆಡಂಬರಗಳೇನೂ ಇಲ್ಲದೆ ಕರ್ನಾಟಕದೊಳಗಿದ್ದುಕೊಂಡೇ ಅತ್ಯುತ್ತಮ ಚಿತ್ರಗಳನ್ನಿತ್ತ ಪುಟ್ಟಣ್ಣ ಬಗ್ಗೆ ಚಿಕಾಗೊದಿಂದ ತ್ರಿವೇಣಿಯವರಿಗೆ ಹೆಮ್ಮೆಯಾದರೆ ಪುಟ್ಟಣ್ಣ ‘ಕನ್ನಡದ ಸ್ಟಿವನ್‌ ಸ್ಪಿಲ್‌ಬರ್ಗ್‌’ ಎಂದವರು ಕ್ಯಾಲಿಫೊರ್ನಿಯಾದ ರವಿರೆಡ್ಡಿ.

ಶರಪಂಜರ, ಸಾಕ್ಷಾತ್ಕಾರ, ಗೆಜ್ಜೆಪೂಜೆ, ನಾಗರಹಾವು, ರಂಗನಾಯಕಿ, ಎಡಕಲ್ಲುಗುಡ್ಡದಮೇಲೆ, ಅಮೃತಘಳಿಗೆ, ಮಸಣದ ಹೂವು, ಮಾನಸಸರೋವರ... ಪುಟ್ಟಣ್ಣನವರ ಒಂದೊಂದು ಚಿತ್ರದ ಹೆಸರೇ ರೋಮಾಂಚನಗೊಳಿಸುವಂಥದು. ಪ್ರತಿಯಾಂದರಲ್ಲೂ ಕನ್ನಡ ಮಣ್ಣಿನ ಕಂಪು ಸರಿಸಾಟಿಯಿಲ್ಲದ್ದು. ಈಗಿನ ‘ಹೊಡಿ... ಬಡೀ...ಬಿಡಬೇಡ ಅವ್ನಾ’ ಟೈಟಲ್‌ಗಳ ಮುಂದೆಯಂತೂ ಇವೆಲ್ಲ ನಿತ್ಯನೆನಪಿನ ಸುಂದರ ಚಿತ್ರಗಳು. ಅಂತಹ ಪುಟ್ಟಣ್ಣ ಕಣಗಾಲರ ಬಗ್ಗೆಯೇ ಅಮೆರಿಕದ ಆಗಸದಲ್ಲಿ ರೇಡಿಯಾ ಅಲೆಗಳಲ್ಲಿ ಕಲ ಕಲ ಕಲ ಕಲ ... ಮಂಜುಳನಾದವು ಕಿವಿಗಳ ತುಂಬಿತ್ತು...

ಇದನ್ನು ಸಾಧ್ಯವಾಗಿಸಲು ಶ್ರಮಪಟ್ಟವರೆಲ್ಲ ಅಭಿನಂದನಾರ್ಹರು. ‘‘ಮಧು, ಕಾರ್ಯಕ್ರಮ ಕೇಳಿದ ಶ್ರೋತೃಗಳೆಲ್ಲರ ಪರವಾಗಿ ಇನ್ನೊಮ್ಮೆ ಹೇಳುತ್ತಿದ್ದೇನೆ: ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ... ನಮಗೆ ನೀ ನೀಡಿದ ಪ್ರೊಗ್ರಾಂ ಕೇಳಿ... ತೇಲಿ ತೇಲಿ ಹೋದೆ ನಾ...’’

English summary
Puttanna Kanagal renowned movie director showcased on the global map. Thanks to Stanford University FM Radio Station, California. The program highlighted film direction skills, memorable story lines and unforgettable tunes from movies directed by Kanagal. Madhu Krishna Murthy in CA conceived and anchored phonein Radio event on Feb 21, 2007. A report by Srivathsa Joshi in Virginia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X